ಗುಲಾಬಿ ಚಡ್ಡಿ ದೋಸ್ತ್

ಇದು ಏಪ್ರಿಲ್ 2007 ರ ಮಾತು.ತಂಗಿಯ ಮದುವೆಯ ನಂತರ ನನ್ನ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಕನಸು ನನಸಾಗುವ ಸಮಯವದು...
ಪ್ರವೀಣ್ ಚಿತ್ತಾಪೂರ -ಸಂತೋಷ್ ರಾಥೋಡ
ಪ್ರವೀಣ್ ಚಿತ್ತಾಪೂರ -ಸಂತೋಷ್ ರಾಥೋಡ
Updated on

ಇದು ಏಪ್ರಿಲ್ 2007 ರ ಮಾತು.ತಂಗಿಯ ಮದುವೆಯ ನಂತರ ನನ್ನ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಕನಸು ನನಸಾಗುವ ಸಮಯವದು.ಆಗ ತಾನೇ ತಮ್ಮ ಬದುಕಿನ ಬಹು ಮುಖ್ಯವಾದ  ಕರ್ತವ್ಯವೊಂದನ್ನ(ತಂಗಿಯ ಮದುವೆ)ಮಾಡಿ ಮುಗಿಸಿದ್ದ ನನ್ನ ಹೆತ್ತವರಿಗೆ ಸಮಯ ಸಿಕ್ಕಾಗಲೆಲ್ಲಾ ನನ್ನ ಬಗ್ಗೆ ಕೂಡ ಯೋಚಿಸಿ ಅಂತ ಹಿಂಸೆ ಕೊಡ್ತಿದ್ದೆ.ಪಾಪ ಅವರಾದ್ರೂ ಏನು ಮಾಡಿಯಾರು? ಒಮ್ಮೊಮ್ಮೆ ನೋಡೋಣಾ ಇರೋ ಬೆಂಗಳೂರಿಗೆ ಹೋಗೋದು ಅಂದರೆ ತಮಾಷೆನಾ ಅಂತ,ಇನ್ನೊಮ್ಮೆ ಪರಿಸ್ಥಿತಿಯ ಒತ್ತಡದಿಂದ ಸಿಟ್ಟು ಬಂದು ಆದೇನ್ ಮಾಡ್ತೀಯೋ ಮಾಡು ನಾವು ನೋಡ್ತೀವಿ ಅಂತಿದ್ರು.ಬೆಂಗಳೂರಲ್ಲಿ ಉದ್ಯೋಗ ಕೊಡಿಸುವ ಭರವಸೆ ನನ್ನ ಗೆಳೆಯ ಮಸ್ಕಿ ಪವನ್ ಕೊಟ್ಟಿದ್ದ. ಆದರೆ ತೊಂದರೆ ಅಂದ್ರೆ ಇರೋಕೆ ಬೇಕಾದ ಮನೆ ಅಥವಾ ರೂಮದಾಗಿತ್ತು. ಎಷ್ಟೋ ಗೆಳೆಯರಿಗೆ ಫೋನಾಯಿಸಿದ್ದೆ ಪಾಪ ಯಾರು ಇಲ್ಲಾ ಅಂತ ಹೇಳಲಿಲ್ಲಾ ಆದರೆ ಬಾ ಅಂತಾನೂ  ಹೇಳಲಿಲ್ಲಾ,ಅದು ಅವ್ರ ತಪ್ಪಲ್ಲಾ ಬಿಡಿ. ಈ ಬೆಂಗಳೂರೇ ಹಿಂಗೆ,ಇಲ್ಲಿ ಎರಡು ಹೊತ್ತು ಊಟ ಸಿಗಬಹುದು ಆದರೆ ಇರೋಕೆ ರೂಮ್ ಸಿಗೋದು ಮಾತ್ರ ಭಾರಿ ಕಷ್ಟ.ಪ್ರತಿ ಬಾರಿ ಹೆತ್ತವರ ಜತೆ ಜಗಳ ಆಡಿದಾಗ ಬೆಂಗಳೂರಲ್ಲಿ ಎಲ್ಲಿರ್ತೀಯಾ ಅದನ್ನ ಹೇಳು ಎನ್ನುವಲ್ಲಿಗೆ ಆ ಜಗಳ ಮುಕ್ತಾಯವಾಗ್ತಿತ್ತು.ಪಿಜಿ ಗಿಜಿ ನಮ್ಮ  ಕೈಗೆಟುಕುವ ಮಾತಲ್ಲವಾದ್ದರಿಂದ ಅದರ ಬಗೆ ಯೋಚನೆಯೇ ಮಾಡಿರಲಿಲ್ಲ,ಇನ್ನೂ ಬಂಧು ಬಳಗದವರು ಇದ್ರೂ ಕೂಡ ಅವರೇ ಒಂದು ಚಿಕ್ಕ ಮನೇಲಿ ಇರ್ತೀದ್ರು. ನಾನು ಹೋಗಿ ಅಲ್ಲಿರೋದು ಅಸಾಧ್ಯವಾಗಿತ್ತು.ಅಂದುಕೊಂಡಂತೆ ಡಿಪ್ಲೋಮಾ ಪಾಸಾಗಿದ್ದ ನನಗೆ ಇನ್ನೇನು ಹಿಂಗೆ ಆದರೆ ಬೆಂಗಳೂರಿಗೆ ಹೋಗೋ ನನ್ನ ಕನಸು ಕನಸು ಮಾತ್ರ ಅಂತ ಕೈ ಕೈ ಹಿಸುಕೋ ದಿನಗಳಲ್ಲಿ ಆಪತ್ಭಾಂದವನಂತೆ ನೆರವಾಗಿದ್ದು ‘ಗುಲಾಬಿ ಚಡ್ಡಿ ದೊಸ್ತ್’ ಸಂತೋಷ ರಾಥೋಡ್.ಹೌದು ಇವತ್ತಿಗೂ ಅವನ ನೆನಪಾದರೆ ನನಗೆ ಅಲ್ಲಾ ನಮ್ಮ ಮನೆಯವರಿಗೂ ನೆನಪಾಗುವುದು ನಮ್ಮ ಶಾಲೆಯ ಯೂನಿಫಾರ್ಮ್ ಆಗಿದ್ದ ಬಿಳಿ ಅಂಗಿ ಗುಲಾಬಿ ಚಡ್ಡಿ.ಅದರಲ್ಲೂ ಕೆಂಪು ಕೆಂಪಾಗಿದ್ದ ಸಂತೋಷ್ ಆ ಗುಲಾಬಿ ಚಡ್ಡಿಯಲ್ಲಿ ಸಖತ್ ಮುದ್ದು ಮುದ್ದಾಗಿ ಕಾಣಿಸ್ತಾ ಇದ್ದ .

ಕಬ್ಬಿಣದ ಕಡಲೆಯಂತಾಗಿದ್ದ 'ಎಲ್ಲಿರಬೇಕು’ ಎನ್ನುವ ಸಮಸ್ಯೆಯನ್ನ ‘ನನ್ನ ರೂಮಲ್ಲಿ’ ಅಂತ ಕ್ಷಣಮಾತ್ರದಲ್ಲಿ ಬಗೆಹರಿಸಿದ್ದ.ನಾನು ಹಾಗೂ ಸಂತೋಷ್ ಒಂದನೇ ತರಗತಿಯಿಂದ ಗೆಳೆಯರು ಅಂದರೆ ಗೆಳೆತನ ಅನ್ನೋದು ಏನು ಅಂತ ಗೊತ್ತಾಗಿದ್ದ ದಿನದಿಂದ ಗೆಳೆಯರು.ಇವತ್ತು ನಾನು ಜೀವನದ ಒಂದೊಂದು ಒಗಟನ್ನ ಯಶಸ್ವಿಯಾಗಿ ಬಿಡಿಸುತ್ತಿದೇನೆಂದರೆ ಅದರಲ್ಲಿ ಪ್ರಮುಖವಾದ ಶ್ರೇಯಸ್ಸು ಗೆಳೆಯ ಸಂತೋಷ್ ಗೆ ಸೇರುತ್ತೆ.ಬೆಂಗಳೂರಿನ ಬಸವೇಶ್ವರ ನಗರದ ಶಿವನಹಳ್ಳಿಯ ಭೋವಿ ಕಾಲೋನಿಯ ಸಾವಿತ್ರಮ್ಮನವರ ಆ ಮನೆ ನನ್ನ ನಸೀಬು ಬದಲಾಯಿಸಿದ ಮನೆ. ನಾನು ಕಟ್ಟಿದ್ದ ಅದೆಷ್ಟೋ ಕನಸುಗಳನ್ನ ನನಸು ಮಾಡಿದ್ದ ಮನೆ,ನನ್ನ ಜೀವನದ ಅದೆಷ್ಟೋ ತುಮುಲಗಳಿಗೆ,ಸುಖಗಳಿಗೆ ಸಾಕ್ಷಿಯಾದ ಮನೆ.ಬಸುರಿಯಾಗೋದು ಮುಖ್ಯ ಅಲ್ಲ ಬಾಣಂತನ ಎಲ್ಲಿ ಮಾಡೋದು ಯಾರು ಮಾಡೋದು ಮುಖ್ಯ ಅಂದಂಗೆ ಬೆಂಗಳೂರಿಗೆ ಹೋಗೋದು ಮುಖ್ಯ ಅಲ್ಲ ಅಲ್ಲಿರೋದೆಲ್ಲಿ,ಯಾರು ಸಹಾಯ ಮಾಡ್ತಾರೆ ಅನ್ನೋದು ಮುಖ್ಯ. ಅಂಥ ಮುಖ್ಯವಾದ ಸಮಸ್ಯೆಯನ್ನ ನನ್ನ ಮೊದಲ ಗೆಳೆಯರಲ್ಲೊಬ್ಬನಾದ ಸಂತೋಷ್ ಬಗೆಹರಿಸಿದ್ದು ನಾನು ಜೀವನ ಪೂರ್ತಿ ಮರೆಯಲಾಗದಂಥ ಮುಖ್ಯವಾದ ವಿಷಯ.ದೇವರು ನಮಗೆ ಬೇಕಾದವರನ್ನ ನಮ್ಮ ಹೆತ್ತವರನ್ನಾಗಿಯೋ,ಒಡಹುಟ್ಟಿದವರನ್ನಾಗಿಯೋ ಹುಟ್ಟಿಸುತ್ತಾನಂತೆ.ಹಾಗೆಯೇ ನಮ್ಮವರನ್ನ ಬಿಟ್ಟು ನಾವು ಬೇರೆ ಊರುಗಳಿಗೆ ಬಂದಾಗ ಅಥವಾ ನಮ್ಮವರಿಲ್ಲದಿರುವ ಸಮಯದಲ್ಲಿ ನಮಗೆ ಅವರ ನೆನಪಾಗದಿರುವಷ್ಟು ಹತ್ತಿರವಾಗುವ ಇನ್ನೊಂದು ಜೀವವನ್ನ ಹುಟ್ಟಿಸ್ತಾನಂತೆ ಆ ಜೀವವೇ ಗೆಳೆಯ/ಗೆಳತಿ.ಈ ಭೂಮಿ ಮೇಲೆ ತಂದೆ,ತಾಯಿ, ಒಡಹುಟ್ಟಿದವರು ಅಷ್ಟೇ ಯಾಕೆ ಬಂಧು ಬಳಗದವರಿಲ್ಲದಿರುವ ಮನುಷ್ಯನಿರಬಹುದು ಆದರೆ ಗೆಳೆಯ/ಗೆಳತಿಯರಿಲ್ಲದ ಮನುಷ್ಯನಿರುವುದು ಸಾಧ್ಯವಿಲ್ಲ. ಸ್ನೇಹ ದಿನಾಚರಣೆಯ ಈ ದಿನವನ್ನ ನಾನು ನನ್ನ ಬೆಂಗಳೂರಿನ ಬದುಕಿಗೆ ಮುನ್ನುಡಿಯಾದ ಸ್ನೇಹಿತ ಸಂತೋಷ್ ರಾಥೋಡಗೆ ಅರ್ಪಿಸುತ್ತೇನೆ.


- ಪ್ರವೀಣ್ ಚಿತ್ತಾಪೂರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com