ಚಿನ್ನದಂಥಾ ಗೆಳೆತನ

ಗೆಳೆತನದಲ್ಲಿ ನೀನು ತಾನು ಎಂಬುದರ ಬದಲು ನಾವು ಎಂದು ಅಂದುಕೊಂಡಾಗ ಮಾತ್ರ ಆ ಸ್ನೇಹ ಉಳಿಯಲು ಸಾಧ್ಯ...
ನಿರ್ದೇಶಕ ಬಿ. ಸುರೇಶ, ಚಂದ್ರು, ಪ್ರಕಾಶ್ ರೈ, ಕಾಸರಗೋಡು ಚಿನ್ನಾ  (ಕೃಪೆ:  ಬಿ.ಸುರೇಶ ಅವರ ಫೇಸ್ಪುಕ್ ಖಾತೆ)
ನಿರ್ದೇಶಕ ಬಿ. ಸುರೇಶ, ಚಂದ್ರು, ಪ್ರಕಾಶ್ ರೈ, ಕಾಸರಗೋಡು ಚಿನ್ನಾ (ಕೃಪೆ: ಬಿ.ಸುರೇಶ ಅವರ ಫೇಸ್ಪುಕ್ ಖಾತೆ)

Show me your friends and i'll tell you who you are ಎಂಬುದು ಗಾದೆ ಮಾತು. ಮನುಷ್ಯ ಯಶಸ್ಸಿನ ಮೆಟ್ಟಲು ಹತ್ತುತ್ತಿದ್ದಂತೆಯೇ ಅವನ ಗೆಳೆಯರ ಬಳಗದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇಂದು ಗೆಳೆಯರಾಗಿದ್ದವರು ನಾಳೆ ಅದೇ ರೀತಿ ಅದೇ ಸ್ಥಾನದಲ್ಲಿ ಇರಬೇಕೆಂದೇನಿಲ್ಲ. ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿಕೊಂಡು ಹೋಗಲೇ ಬೇಕು ಅದು ಜಗದ ನಿಯಮವೂ ಹೌದು. ಬ್ಯುಸಿ ಇರ್ತೀವಿ, ಫ್ರೆಂಡ್ಸ್‌ಗಳನ್ನು ಭೇಟಿಯಾಗಲು ಸಮಯ ಸಾಕಾಗುವುದಿಲ್ಲ ಎಂದು ಹೇಳುವವರೇ ನಮ್ಮಲ್ಲಿ ಜಾಸ್ತಿ. ಬದುಕಿನ ಜಂಜಾಟದ ನಡುವೆ, ಯಶಸ್ಸಿನ ಓಟದ ನಡುವೆ ಗೆಳೆತನವನ್ನು ನಿಭಾಯಿಸುವುದು ಸುಲಭವೇ? ಈ ಪ್ರಶ್ನೆಯನ್ನಿಟ್ಟುಕೊಂಡು ನಟ, ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ...

ಗೆಳೆತನದಲ್ಲಿ ಮುಖ್ಯವಾಗಿ ನಾವು ಗೆಳೆಯರ ಸ್ವಭಾವವನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು. ಅವರು ಹೇಗಿದ್ದಾರೋ ಹಾಗೆ ಅವರನ್ನು ಸ್ವೀಕರಿಸುವ ಗುಣ ನಮ್ಮಲ್ಲಿದ್ದರೆ ಗೆಳೆತನದ ಬಾಂಧವ್ಯ ಬೆಸೆಯಲು ಸಾಧ್ಯ. ನನಗೆ ಹಲವಾರು ಗೆಳೆಯರಿದ್ದಾರೆ. ಬಿ.ಸುರೇಶ, ಚಂದ್ರು, ಪ್ರಕಾಶ್ ರೈ ನಾವೆಲ್ಲರೂ ಗೆಳೆಯರು. ಪ್ರತಿಯೊಬ್ಬರೂ ಅವರವರ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಇರ್ತಾರೆ. ಎಷ್ಟೇ ಬ್ಯುಸಿ ಇದ್ದರೂ ನಾವು ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಎರಡು ತಿಂಗಳಿಗೊಮ್ಮೆ ಫೋನ್ ಮಾಡಿ ಮಾತಾಡಿ ಸುಖ ದುಃಖ ಹಂಚಿಕೊಳ್ಳುತ್ತೇವೆ.

ಜೀವನದಲ್ಲಿ ಒಬ್ಬೊಬ್ಬರು ಸಾಧನೆಯನ್ನು ಮಾಡಿದ್ದಾರೆ ನಿಜ. ಪ್ರತಿಯೊಬ್ಬರ ಜೀವನದಲ್ಲಿ ದುಡ್ಡು ಮುಖ್ಯವೇ, ಆದರೆ ದುಡ್ಡೇ ಎಲ್ಲ ಅಲ್ಲ. ಗೆಳೆತನದ ನಡುವೆ ಅಸೂಯೆ ಅಹಂ
ಇದ್ಯಾವುದೂ ಇರಕೂಡದು, ಬರಬಾರದು. ಗೆಳೆತನದಲ್ಲಿ ನೀನು ತಾನು ಎಂಬುದರ ಬದಲು 'ನಾವು' ಎಂದು ಅಂದುಕೊಂಡಾಗ ಮಾತ್ರ ಆ ಸ್ನೇಹ ಉಳಿಯಲು ಸಾಧ್ಯ.
ನಾವು ಎಂಬುದರಿಂದಲೇ ಗೆಳೆತನ ಶಾಶ್ವತವಾಗುತ್ತದೆ.

ನೋಡಿ, ನಾವು ಕಾಸರಗೋಡಿನಲ್ಲಿ ರಂಗ ಚಿನ್ನಾರಿ ಎಂಬ ಪ್ರಯೋಗ ಮಾಡಿದೆವು. ಅಲ್ಲಿನ ಮಕ್ಕಳಿಗೆ ರಂಗ ಸಂಸ್ಕೃತಿಯನ್ನು ಕಲಿಸಿಕೊಡುವ ಉದ್ದೇಶ ರಂಗ ಚಿನ್ನಾರಿಯದ್ದು. ಈ ಕಾರ್ಯದಲ್ಲಿ ಜತೆಯಾದವರು ನನ್ನ ಬೆಂಚ್ ಮೇಟ್ ಗಳು. ನಾನು ಜತೆಗೆ ಕಲಿತವರೊಂದಿಗೆ ಸದಾ ಸಂಪರ್ಕದಲ್ಲಿದ್ದೇನೆ. ಅವರು ಈಗಲೂ ನನ್ನ ಸ್ನೇಹಿತರಾಗಿಯೇ ಇದ್ದಾರೆ. ಒಬ್ಬಬ್ಬೊರು ಒಂದೊಂದು ಹುದ್ದೆಯಲ್ಲಿದ್ದರೂ ನಮ್ಮ ಗೆಳತನದಲ್ಲಿ ದುಡ್ಡು ಮಾತಾಡುವುದಿಲ್ಲ, ಕೆಲಸ ಮಾತಾಡುತ್ತದೆ. ಮುಂದಿನ ಪೀಳಿಗೆಗೆ ನಮ್ಮ ರಂಗ ಸಂಸ್ಕೃತಿಯನ್ನು ದಾಟಿಸಬೇಕೆಂಬ
ಉದ್ದೇಶದಿಂದಲೇ ನಾವು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಜನಾಂಗವನ್ನು ಸಾಂಸ್ಕೃತಿಕವಾಗಿ ಗಟ್ಟಿ ಮಾಡುವ ಕೆಲಸವಾದುದರಿಂದ ಎಲ್ಲರೂ ಒಟ್ಟು ಸೇರಿ ಕೆಲಸ ಮಾಡುತ್ತೇವೆ. ಇಲ್ಲಿ ನಮ್ಮ ಇತರ ಕಾರ್ಯಗಳಿಗೆ ಆಸ್ಪದವಿಲ್ಲ. ಪ್ರತಿಯೊಂದು ಗೆಳೆತನವೂ ಉಳಿಯುವುದು ನಂಬಿಕೆಯಿಂದಲೇ. ಆ ನಂಬಿಕೆ ನಮ್ಮಲ್ಲಿರಬೇಕು ಅಷ್ಟೇ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com