
ಬ್ಯುಸಿ ಲೈಫ್, ಅಥವಾ ಒತ್ತಡ ಅನ್ನೋದು ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿದೆಯೇನೋ ಅನ್ನುವ ಜೀವನ ಶೈಲಿಯನ್ನ ನಾವಿಂದು ಬದುಕ್ತಿದೀವಿ. ಎಷ್ಟರ ಮಟ್ಟಿಗೆ ಅಂದ್ರೆ ಮನೆ ಮಂದಿಯನ್ನೇ ನೆಮ್ಮದಿಯಾಗಿ ಮಾತಾಡಿಸಲು ರಜೆಯ ದಿನಗಳನ್ನ ಕಾಯಬೇಕಾಗುತ್ತೆ. ಅಷ್ಟೇ ಏಕೆ ನಮ್ಮೊಂದಿಗೆ ನಾವು ಸಂಭಾಷಿಸಲು, ಅಂತಃರ್ಗತವಾಗಿ ಚಿಂತನೆಗಳನ್ನ ಪ್ರವಾಹಿಸಲು, ಸಿಂಹಾವಲೋಕನ ಮಾಡಿಕೊಳ್ಳಲೂ ನಮಗೆ ಬಿಡುವೇ ಇರುವುದಿಲ್ಲ. ರಜೆಯ ದಿನಗಳಲ್ಲೂ ಮಾಧ್ಯಮಗಳ ಮುಂದೆ, ಇಂಟರ್ನೆಟ್ ಮುಂದೆ ಕುಳಿತು ಪರಸ್ಪರ ಇಂಟರ್ ಕನೆಕ್ಷನ್ ಕಳೆದುಕೊಳ್ಳೋ ಹಂತದಲ್ಲಿದ್ದೀವಿ. ಇನ್ನು ಗೆಳೆಯರನ್ನ ಭೇಟಿ ಮಾಡೋದು ಅಂದ್ರೆ ಅಪ್ಪಿ ತಪ್ಪಿ ಸತತವಾಗಿ 2 ದಿನಗಳ ರಜೆಯಿದ್ರೆ ಮಾತ್ರ ಅನ್ನೋ ಕಾಲ. ಅಥ್ವಾ ಆ ದಿನಗಳನ್ನ ಪ್ರವಾಸದಲ್ಲೋ ಮತ್ತೆಲ್ಲೋ ಕಳೆಯೋ ತವಕ.
ಆದರೂ ಹಾಗೆಂದು ಗೆಳೆಯರನ್ನ ಮರ್ಯೋಕಾಗೋಲ್ಲ. ಜೀವಕ್ಕೆ ಜೀವ ಕೊಡೊ ಸ್ನೇಹಿತರನ್ನಂತೂ ನೋಡ್ದೇ ಇರೋಕಾಗೋಲ್ಲ. ಮೊದಲಿಂದಲೂ ನನ್ನ ಕುಟುಂಬದ ಮಂದಿ ಬಿಟ್ರೆ ನಂತರದ ಬಹು ಮುಖ್ಯ ಪಾತ್ರ ವಹಿಸಿದೋರು ಗೆಳೆಯ/ಗೆಳತಿಯರೆ. ಹೀಗಾಗಿ ಬದಲಾವಣೆಗಾಗಿಯಾದರೂ, ಸ್ನೇಹ ಸಂಬಂಧಗಳನ್ನ ಸಂಭಾಳಿಸೋಕಾದರೂ ಅವರನ್ನ ಭೇಟಿ ಮಾಡೋ ಮೂಲಕ ರಿಫ್ರೆಶ್ ಆಗಿಬಿಡ್ತೀನಿ. ನಂತರದ ಮತ್ತಷ್ಟು ದಿನಗಳು ಆ ಸವಿ ನೆನಪುಗಳಲ್ಲೇ ಕಳೆಯುತ್ವೆ
ನಾನಂತೂ ಈಗ್ಗೆ 12 ವರುಷಗಳಿಂದಲೂ ವಿಜ್ಞಾನ ಪರಿಷತ್ತು , ರಂಗಭೂಮಿ, ಸಾಹಿತ್ಯ ಅನ್ನುತ್ತಲೇ ಎಲ್ಲವನ್ನೂ ಮೈಮೇಲೆ ಎಳೆದುಕೊಳ್ಳೋದ್ರಿಂದಲೂ ಬಿಡುವು ಸಿಗದೇ ಒದ್ದಾಟವೂ , ಮತ್ತು ಆ ಕ್ಷೇತ್ರದ ಬಳಗವೇ ಹೆಚ್ಚಿರುವುದರಿಂದ ಬಿಡಲಾಗದ ತೊಳಲಾಟವೂ ಹೆಚ್ಚಾಗಿ , ಕೊನೆಗೆ ಒತ್ತಡದಿಂದ ಬಿಡಿಸಿಕೊಳ್ಳುವ ತೀವ್ರತೆ ಅತಿಯಾಗಿ, ಆ ನನ್ನ ಎಲ್ಲವೂ ಆಗಿರುವ ಆತ್ಮೀಯ ಬಳಗದೊಂದಿಗೆ ಉತ್ಸಾಹವನ್ನು ಮರು ಸ್ಥಾಪಿಸಿಕೊಳ್ಳಲು ಹೊರಟುಬಿಡುತ್ತೇನೆ.
ಬಹಳಷ್ಟು ಸಂದರ್ಭಗಳಲ್ಲಿ ನಾವುಗಳು ಹರಟೆ ಹೊಡೆಯಲೆಂದೇ ಸೇರುವುದಿದೆ. ಹರಟೆಯೆಂದರೆ ನಮ್ಮ ಸಮಾಜ ಸೇವೆ, ಮುಂದಿನ ಯೋಜನೆಗಳು, ಕೈಗೊಳ್ಳಲಿರುವ ಮುಂದಿನ ಕಾರ್ಯಕ್ರಮಗಳು ಇವುಗಳ ಬಗ್ಗೆಯೇ ವಿಷಯವಿರುತ್ತದೆ. ಮತ್ತು ಅಲ್ಲಿ ಕೆಲವೊಮ್ಮೆ ಪೂರ್ಣರೂಪು ಪಡೆಯುತ್ತವೆ , ಕೆಲವೊಮ್ಮೆ ಆರಂಭದ ಹಂತದಲ್ಲೇ ಉಳಿದುಬಿಡುತ್ತವೆ. ಮತ್ತೆ ಕೆಲವೊಮ್ಮೆ ಏನೇನೂ ವಿಚಾರಗಳಿಲ್ಲದೇ ಕಾಡು ಹರಟೆಯ ಸ್ವರೂಪವನ್ನೂ ಪಡೆಯುತ್ತವೆ.
ಇನ್ನು ಬಹಳಷ್ಟು ಸಮಯದಲ್ಲಿ ನಾವುಗಳು ಹೊರಸಂಚಾರವೂ ಹೊರಡುವುದಿದೆ. ಅದೂ ಕೂಡ ವಿಷಾಯಾಧಾರಿತವೇ ಆಗಿರುತ್ತದೆ. ಕಾಡುಗಳಿರುವ ಪ್ರದೇಶಗಳಲ್ಲಿ ಹೊಸದಾಗಿ ಗಿಡ ನೆಡಲೋ, ಬೀಜ ಬಿತ್ತನೆ ಮಾಡಲೋ, ಪರಿಸರಕ್ಕೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಅಧ್ಯಯನಕ್ಕೋ, ಬೆಟ್ಟಗುಡ್ಡಗಳಲ್ಲಿ ಅಲೆದಾಟಕ್ಕೋ, ಕೆಲವೊಮ್ಮೆ ಬೇರೆ ಊರುಗಳಲ್ಲಿ ಆಯೋಜಿಸಿರೋ ನಾಟಕೋತ್ಸವಗಳಿಗೋ, ಎಲ್ಲರೂ ದಂಡುಗಟ್ಟಿ ಹೊರಡುವುದಿದೆ.
ಹಾಗೆಂದು ಎಲ್ಲಾ ಸಮಯದಲ್ಲೂ ಹೀಗೇ ಇರುತ್ತದೆಂದಲ್ಲ , ಹೀಗೇ ಸುಮ್ಮನೆ ಬಸ್ಸಿನಲ್ಲಿ ಕುಳಿತು ಯಾವ ಗುರಿಯೂ ಇಲ್ಲದೆ ಬಂಡಿ ಕಟ್ಟುವುದಿದೆ, ಪುಣ್ಯಕ್ಷೇತ್ರಗಳು ಹಾಗೂ ಅವುಗಳ ಸುತ್ತಲಿನ ಪ್ರಕೃತಿಯನ್ನ ನೋಡಲೆಂದೋ, ಹೊಳೆಯಲ್ಲಿ ಆಟವಾಡಲೆಂದೋ , ಅಥವಾ ವೈಜ್ಞಾನಿಕವಾಗಿ ವಿಚಾರಗಳನ್ನು ತಿಳಿಯೋ ಪ್ರದೇಶಗಳಿರೋ ಕಡೆ ನಮ್ಮ ಬಂಡಿ ಚಕ್ರ ಸಾಗುವುದಿದೆ. ಮತ್ತು ಅವು ಕೆಲವೊಮ್ಮೆ ಬಸ್ಸಿನಲ್ಲಿ ಕುಳಿತ ಮೇಲೂ ನಿರ್ಧಾರವಾಗುತ್ತವೆ.
ಶಾಪಿಂಗಿಗೆಂದು ನಮ್ಮ ರಜೆಯ ವೇಳೆ ಉಪಯೋಗವಾಗಿರೋದು ಕಡಿಮೆಯೆ. ಕೆಲಸದ ನಡುವೆಯೆ ಅಂಗಡಿ ಹೊಕ್ಕು ಅದನ್ನೊಂದು ಕೆಲಸದ ಭಾಗವನ್ನಾಗಿಯೇ ಮಾಡಿಕೊಂಡು, ಅಥವಾ ಬೇರೆ ಊರುಗಳಲ್ಲಿ ಶಾಪಿಂಗ್ ಮಾಡಬೇಕಾದರೂ ಅಲ್ಲಿಯೂ ನಮ್ಮ ಕೆಲಸದ ಉದ್ದೇಶಗಳನ್ನು ಮುಖ್ಯವಾಗಿಸಿಕೊಂಡು ನಡುನಡುವೆಯೇ ವಸ್ತುಗಳನ್ನೋ ಮತ್ತೇನನ್ನೋ ಕೊಳ್ಳುವ ಅನಿವಾರ್ಯತೆಯನ್ನು ನೀಗಿಸಿಕೊಂಡಿರುತ್ತೇವೆ.
ನಾಡಿನಲ್ಲಿ ಹಲವು ಕಡೆ ನಡೆಯುವ ಉತ್ಸವಗಳು, ಸಮ್ಮೇಳನಗಳು, ಕನ್ನಡ ಪರ ಕಾರ್ಯಕ್ರಮಗಳನ್ನಂತೂ ಒಂದೂ ಬಿಡದೆ ಕೆಲವು ವರ್ಷಗಳ ಕಾಲ ಸುತ್ತಿದ ನಾವು ಇತ್ತೀಚೆಗೆ ನಮ್ಮದೇ ಕಾರಣಗಳಿಗಾಗಿ ಕಡಿಮೆ ಮಾಡಿದ್ದೇವೆ ಮತ್ತು ಆಯ್ದ ಕೆಲವು ಕಾರ್ಯಕ್ರಮಗಳಿಗಷ್ಟೇ ಭೇಟಿ ನೀಡುತ್ತಿದ್ದೇವೆ.
ರಂಗಭೂಮಿ, ವಿಜ್ಞಾನ, ಸಾಹಿತ್ಯ ಈ ವಿಚಾರಗಳ ಕಾರಣಕ್ಕೂ ಆಗಾಗ್ಗೆ ಸೇರುವ ನಮ್ಮ ಪಡೆ ವಾದ ವಿವಾದ ಮಾಡಿಕೊಂಡು ಅಂತ್ಯ ಕಂಡಿದ್ದೇ ಜಾಸ್ತಿ. ಕೆಲವು ವಿಚಾರಗಳ ವಿಭಿನ್ನ ಆಲೋಚನೆಯ ಕಾರಣಕ್ಕೆ , ಜಗಳ ಮಾಡಿಕೊಂಡು ಒಂದು ತಳಮಳವನ್ನಿಟ್ಟುಕೊಂಡೆ ಹೊರಬರುವ ನಾವು ಆ ನಂತರ ದೂರವಾಣಿ ಸಂಭಾಷಣೆ ಮೂಲಕ ಪರಿಹರಿಸಿಕೊಂಡು ನಿರಾಳವಾಗುವುದಿದೆ.
ಇನ್ನೂ ಒಂದು ವಿಚಾರ ಹೇಳಬೇಕೆಂದರೆ ಕೆಲವು ಸಲ ನಮ್ಮ ಆತ್ಮೀಯರೊಬ್ಬರ ಮನೆಯಲ್ಲಿ ಒಂದುಗೂಡುವ ನಾವು ರುಚಿ ರುಚಿಯಾಗಿ ಏನೇನೋ ಮಾಡಿಕೊಂಡು ತಿನ್ನುವ ಅಭಿಲಾಷೆಯಿಂದ ಕೆಲಸ ಶುರು ಮಾಡಿ, ಅದರ ಮೂಲ ರೂಪ ಕಳಚಿ ಮತ್ತೇನೋ ತಯಾರು ಮಾಡಿದ್ದಿದೆ. ಮತ್ತೆ ಕೆಲವು ಯಶಸ್ವಿಯಾಗಿ ಮುಗಿದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಿದೆ. ಮತ್ತೆ ಕೆಲವು ಸಲ ಬೇರೆ ಯಾವುದೋ ಅನ್ವೇಷಣೆಗೆ ಕಾರಣವಾದದ್ದಿದೆ.
ಒಂದೊಂದು ಸಲ ಮನೆಗೆ ಡಿ.ವಿ.ಡಿ. ಕೊಂಡು ತಂದು ಯಾವುದಾದರೂ ಕಲಾತ್ಮಕ ಸಿನೆಮಾ ನೋಡುವುದಿದೆಯಾದರೂ ಆ ಸಮಯ ಬಹಳ ಕಡಿಮೆ. ಥಿಯೇಟರ್ ಹೊಕ್ಕು ವರ್ಷಗಳೇ ಕಳೆದಿವೆ.
ಯಾವುದೇ ಒಂದು ಧ್ಯೇಯೋದ್ದೇಶ ಹೊಂದಿರದ ನಮ್ಮ ಬಿಡುವಿನ ಸಮಯ ಹೀಗೆ ಹಲವು ರೆಂಬೆ ಕೊಂಬೆಗಳನ್ನು ಹರಡಿಕೊಂಡು ಹತ್ತಾರು ಕಡೆ ತಮ್ಮ ಬಿಳಲನ್ನು ಚಾಚಿಕೊಂಡಿದೆ. ಮೇಲ್ಕಾಣಿಸಿದ ಈ ಸಂದರ್ಭಗಳು ಉತ್ಸಾಹದ ಜೊತೆ ಜೊತೆಗೆ ನಾವು ಭೇಟಿ ಕೊಟ್ಟ ಸ್ಥಳಗಳ ಬಗ್ಗೆ ಮರು ಚಿಂತಿಸುವಂತೆಯೋ, ಮತ್ತೆ ಮತ್ತೆ ಭೇಟಿ ನೀಡುವಂತೆಯೋ ಪ್ರೇರೇಪಣೆ ನೀಡುತ್ತವೆ. ನಮ್ಮ ಬಿಡುವನ್ನು ಕೆಲವು ಪ್ರಯೋಜನಕಾರಿ ಕೆಲಸಗಳಿಗೆ ವ್ಯಯಿಸುವಂತೆ ಉತ್ತೇಜಿಸುತ್ತವೆ.
-ಮಮತಾ ಅರಸೀಕೆರೆ
Advertisement