ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ...

ಅದ್ಯಾವ ಅಮೃತ ಘಳಿಗೆಯಲಿ ಈ ಹಾಡು ಹುಟ್ಟಿತೋ ಏನೋ ಗೊತ್ತಿಲ್ಲ, ಸ್ನೇಹಕ್ಕೂ ನೆನಪಿಗೂ ಅದೆಂಥದೋ ಅವಿನಾಭಾವ ಸಂಬಂಧ. ಸ್ನೇಹ ನೆನಪುಗಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅದ್ಯಾವ ಅಮೃತ ಘಳಿಗೆಯಲಿ ಈ ಹಾಡು ಹುಟ್ಟಿತೋ ಏನೋ ಗೊತ್ತಿಲ್ಲ, ಸ್ನೇಹಕ್ಕೂ ನೆನಪಿಗೂ ಅದೆಂಥದೋ ಅವಿನಾಭಾವ ಸಂಬಂಧ. ಸ್ನೇಹ ನೆನಪುಗಳ ಅಕ್ಷಯ ಕಣಜ. ಕಡಲು ಸ್ನೇಹದ ಅನ್ವರ್ಥವಾಗಿರುವುದು ಅದರ ಆಳ ಅಗಲ ಅಗಾಧತೆಗಳ ಸಾಕ್ಷಿಗಾಗಿ. ಪ್ರೀತಿ ನನದಿಯ ಹಾಗೆ ತನ್ನ ತೆಕ್ಕೆಗೆ ಬಿದ್ದವರನ್ನೂ ತನ್ನೊಂದಿಗೆ ಸೆಳೆದೊಯ್ಯುತ್ತದೆ. ಆದರೆ ಕಡಲು ಅಲೆಗಳ ನೆಪದಲ್ಲಿ ತೀರದ ಜೊತೆಗೆ ಸದಾ ಸಂಪರ್ಕದಲ್ಲಿರುತ್ತದೆ. ಸ್ನೇಹವೂ ಹಾಗೆ ಎಲ್ಲೋ, ಎಂದೋ, ಹೇಗೋ ಆರಂಭವಾದರೂ ಜೀವಿತದ ಕೊನೆಯ ಕ್ಷಣದವರೆವಿಗೂ ಅದರ ಸವಿಸವಿ ನೆನಪು ಸಾವಿರ ನೆನಪು. ಕೆಲವೊಮ್ಮೆ ಕೆಲವೊಂದು ಗೆಳೆತನ  ಸಾವಿನ ನಂತರವೂ ಅಜರಾಮರ. ಸ್ನೇಹ ಈ ಜಗತ್ತು ಕಂಡ ಸರ್ವಶ್ರೇಷ್ಠ ಸಂಬಂಧ. ಜಾತಿ, ಭಾಷೆ, ಅಂತಸ್ತು ಮತ್ತು ವಯಸ್ಸುಗಳ ಹಂಗಿಲ್ಲದ ಸ್ನೇಹ ವ್ಯಾಖ್ಯಾನಿಸಲಾಗದ ವಿಸ್ಮಯ. ತನ್ನ ಗೆಳೆಯರ ಸಣ್ಣ ಸಣ್ಣ ಗೆಲುವನ್ನೂ ವಿಜಯೋತ್ಸವದಂತೆ  ಸಂಭ್ರಮಿಸುವ ಸ್ನೇಹ ಗೆಳೆಯರ ಅತೀದೊಡ್ಡ ಸೋಲಿನಲ್ಲಿ ಆಸರೆಯಾಗಿ ಇಡೀ ಪ್ರಪಂಚವನ್ನೇ ಎದುರಿಸ ಬಲ್ಲೆನೆಂಬ ಸ್ಥೈರ್ಯ ತುಂಬುವ ಪ್ರೇರಕ ಶಕ್ತಿ.


ನನ್ನ ಪಾಲಿಗಂತೂ ಸ್ನೇಹ ನಿಜ ಸಂಜೀವಿನಿ. ನನ್ನಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿದ ಜೀವಜಲ. ನಾನೆಂದೋ ಬರೆದ ನನ್ನ ಮೊಟ್ಟಮೊದಲ ನಾಲ್ಕು ಸಾಲುಗಳ ಹನಿಗವನದಿಂದ, ಇತ್ತೀಚಿನ ಮೂರು ಚಲನಚಿತ್ರಗಳ ಸಂಭಾಷಣೆ ಒಂದೆರಡು ಚಿತ್ರಗೀತೆಗಳ ತನಕ ನನ್ನೆಲ್ಲಾ  ತಪ್ಪುಗಳನ್ನು ತಿದ್ದಿ ತೀಡಿ ಕೈಹಿಡಿದು ನಡೆಸಿದ್ದು ಇದೇ ಸ್ನೇಹ ಇದೇ ಸ್ನೇಹಿತರು.ಬಹುಶಃ ನನ್ನೆಲ್ಲ ಗೆಳೆಯ, ಗೆಳತಿಯರ ಸಹಕಾರವಿರದಿದ್ದಿದ್ದರೆ ಇಂದಿನ ನನ್ನ ಸಣ್ಣಪುಟ್ಟ ಸಾಧನೆಗಳೂ ಸಾಧ್ಯವಿರುತ್ತಿರಲಿಲ್ಲವೇನೋ...? ಸ್ನೇಹ ಎಂಥಹ ಅಸಾಧ್ಯಗಳನ್ನೂ ಸಾಧ್ಯವಾಗಿಸಬಲ್ಲ ಏಕೈಕ ದಿವ್ಯಮಂತ್ರ.

ಸ್ನೇಹ ಅಂದ ತಕ್ಷಣ ನನಗೆ ಮಹಾಭಾರತದ ದುರ್ಯೋಧನ...ಅಲ್ಲಲ್ಲ...ಸುಯೋಧನ ಥಟ್ಟನೇ ನೆನಪಾಗುತ್ತಾನೆ. ಆತನ ಮತ್ತು ಕರ್ಣನ ಸ್ನೇಹ ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಯಾವುದೋ, ಯಾರದೋ ಹಠಕೆ ಬಿದ್ದ ಸಾಮ್ರಾಟ ಸೂತಪುತ್ರನ್ನು ಅಂಗರಾಜ್ಯಾಧಿಪತಿಯನ್ನಾಗಿ ಮಾಡಿ ತನ್ನ ಗೆಳೆಯನಿಗೂ ತನ್ನ ಸರಿಸಮನಾದ ಸ್ಥಾನ ಸಿಗಲಿ ಎಂಬ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಾನೆ. ಪಗಡೆಯಲ್ಲಿ ಸೋತ ತನ್ನ ಪತ್ನಿ ಭಾನುಮತಿಯ ಕತ್ತಿನಲ್ಲಿದ್ದ ಮುತ್ತಿನಹಾರವನ್ನು ಕರ್ಣ ಕಿತ್ತಾಗಲೂ ಗೆಳೆಯನನ್ನು ಶಂಕಿಸದ ಸುಯೋಧನ ಬದಲಿಗೆ ಪತ್ನಿಯನ್ನೇ ಹಂಗಿಸುತ್ತಾನೆ. ಮುಂದೆ ಕುರುಕ್ಷೇತ್ರದ ರಣರಂಗದಲ್ಲಿ ಕುಂತಿಯ ಮಾತಿಗೆ ಕಟ್ಟುಬಿದ್ದು ಕರ್ಣ ತನ್ನ ಸೋಲಿನ ಪರೋಕ್ಷ ಕಾರಣವಾದಾಗಲೂ ಸ್ನೇಹವನ್ನು ಮುಕ್ಕಾಗಿಸಿಕೊಳ್ಳದ ಸುಯೋಧನ ಸಾವಿನಲ್ಲೂ ಸ್ನೇಹದ ಶ್ರೇಷ್ಠತೆಯನ್ನು ಮೆರೆಯುತ್ತಾನೆಂದರೆ  ಗೆಳೆತನದ ತಾಕತ್ತು ಅದೆಷ್ಟಿರಬೇಕು ! ಎಲ್ಲ ಗೆಳೆತನಗಳಲ್ಲೂ ಅದೇ ಹೃದಯ ವೈಶಾಲ್ಯತೆ ಮೆರೆಯಲಿ ಎಂಬುದೇ ನನ್ನ ಸದಾಶಯ.

ನೋಡಿ ಕಾಕತಾಳೀಯವೋ ಎನೋ ಈ ಸಂದರ್ಭದಲ್ಲಿ ಯಾವುದೋ ಮ್ಯೂಸಿಕ್ ಚಾನೆಲ್ನಲ್ಲಿ ಶುಭಮಂಗಳದ ಸ್ನೇಹದ ಕಡಲಲ್ಲಿ  ನೆನಪಿನ ದೋಣಿಯಲಿ ಹಾಡು ಪ್ರಸಾರವಾಗುತ್ತಿದೆ. ಶ್ರೀನಾಥ್...ಆರತಿ...ಪುಟ್ಟಣ್ಣನವರ ಜೊತೆಜೊತೆಗೆ ಆರನೆಯ ತರಗತಿಯಲ್ಲಿ ನನ್ನೊಂದಿಗೆ ಓದುತ್ತಿದ್ದ ಬೊಗಸೆ ಕಂಗಳ ಮಗಳು ಶಾಂತಲಾಳಿಂದ ಹಿಡಿದು ತುಂಬುಗೆನ್ನಗಳ ಚಿಪ್ಪಿಯವರೆಗಿನ ನನ್ನೆಲ್ಲಾ ಗೆಳತಿಯರು  ನೆನಪಾಗುತ್ತಿದ್ದಾರೆ. ಅಟ್ಟದ ಮೇಲಿನ ಹಳೆಯ ಪೆಟ್ಟಿಗೆಯನ್ನು ಮತ್ತೆ ತೆರೆಯ ಬೇಕೆನಿಸುತ್ತಿದೆ. ಅದೇ ದಿಗ್ಗಜರು ಚಿತ್ರದ ಕುಚಿಕು ಕುಚಿಕು ಹಾಡಾದರೆ ಅಂಬಿ-ವಿಷ್ಣು ಗೆಳೆತನದ ಮೆಲುಕು ನನ್ನೆಲ್ಲಾ ಗೆಳೆಯರನ್ನು ನೆನಪಿಸುತ್ತದೆ. ಆದರೆ ಅದೇ ಮೈ ಆಟೋಗ್ರಾಫ್ ನಲ್ಲಿ  ಕವಿ ಕಲ್ಯಾಣ್ ರ 'ಮೊದಮೊದಲಳಿಸಿದ ಗೆಳೆಯನಾ ಮರಣ' ಸಾಲು ಹದಿನೆಂಟು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾದ ನನ್ನ ಆತ್ಮವಿಶ್ವಾಸದ ಪ್ರತೀಕದಂತಿದ್ದ ಅಮರ ನೆನಪಾಗುತ್ತಾನೆ.  ಕಣ್ಣುಗಳು ಈಗಲೂ ತುಂಬಿ ಬರುತ್ತವೆ. ಸ್ನೇಹದ ಕಡಲಿನ ನೆನಪಿನ ಅಲೆಗಳು ಹೃದಯದ ತೀರವನ್ನು ತೇವವಾಗಿಸುತ್ತಲೇ ಇವೆ...ಜಗತ್ತಿನ ಎಲ್ಲಾ ಗೆಳೆತನಗಳ ಎದೆಗಡಲಿನ ತಡಿಗೆ ನೆನಪಿನ ಅಲೆಗಳು ನಿರಂತರವಾಗಿ ತುಡಿಯುತ್ತಲೇ ಇರಲಿ.
ಹ್ಯಾಪೀ ಫ್ರೆಂಡ್ ಶಿಪ್ ಡೇ..

-ಅಶೋಕ್ ಮದ್ದೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com