ಸ್ನೇಹ ಎನ್ನುವುದು ಬಂಧವಲ್ಲ, ಭಾವ

ಸುಲಿದಷ್ಟೂ ಕಳಚಿದಂತೆ, ಬೆಳೆದಷ್ಟೂ ಬರಿದಾಗುತ್ತಾ ಹೋಗುತ್ತೇವೆ. ಬಾಲ್ಯದ ಬೆಡಗು, ಭ್ರಮೆಗಳು, ಬೆಳೆದಂತೆ ಕಳೆದುಹೋಗುತ್ತಾ ವಾಸ್ತವಿಕತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

"ಬಾರ್ ಬಾರ್ ಆತೀ ಹೈ ಮುಜ್ಕೋ ಮಧುರ್ ಯಾದ್ ಬಚಪನ್ ತೇರೀ" ಎಂಬ ಸುಭದ್ರಾ ಕುಮಾರಿ ಚೌಹಾನರ ಸೊಗಸಾದ ಪದ್ಯ ನನ್ನ ಬಹು ಮೆಚ್ಚಿನ ಪದ್ಯಗಳಲ್ಲೊಂದು. ಸುಲಿದಷ್ಟೂ ಕಳಚಿದಂತೆ, ಬೆಳೆದಷ್ಟೂ ಬರಿದಾಗುತ್ತಾ ಹೋಗುತ್ತೇವೆ. ಬಾಲ್ಯದ ಬೆಡಗು, ಭ್ರಮೆಗಳು, ಬೆಳೆದಂತೆ ಕಳೆದುಹೋಗುತ್ತಾ ವಾಸ್ತವಿಕತೆಯ ಒಣ ಕಣಕ್ಕಿಳಿದಿರುತ್ತೇವೆ. ಈ ಡ್ರೈಲ್ಯಾಂಡ್ ನಲ್ಲಿ ಒಂದಷ್ಟು ಬಚಪನಾ ಎಷ್ಟು ಹಿತವೆನಿಸುತ್ತೆ ಅಲ್ಲವಾ? ಹಾಗಾಗಿ, ಮಕ್ಕಳೊಂದಿಗೆ ಸೇರಿ ಮಗುವಾಗುವ ಖಯಾಲಿ ಹಳೆಯದು ನನಗೆ. ಹೀಗೊಮ್ಮೆ ಮಕ್ಕಳ ಗುಂಪೊಂದರಲ್ಲಿ ಮೈಮರೆತು ಬೆರೆತಿದ್ದಾಗ, "ಆಂಟೀ ನಿಮ್ಮ ಬೆಸ್ಟ್  ಫ್ರೆಂಡ್ ಯಾರು?" ಅಂತ ಒಂದು ಪುಟ್ಟ ಮಗು ಕಣ್ಣರಳಿಸಿ ಕೇಳಿತ್ತು. ಬಂದ ನಗುವನ್ನು ತಡೆದು, ಅಷ್ಟೇ ಬೆರಗುಗಣ್ಣುಗಳಲ್ಲಿ, "ನೀವುಗಳೇ" ಎಂದೆ. ಅದಕ್ಕೆ ಮತ್ತೆ ಅವಳ ಅಸಹನೆಯ ಮರುಪ್ರಶ್ನೆ, "ಅಯ್ಯೋ ಹಾಗಲ್ಲಾ ಆಂಟೀ, ಬೆಸ್ಟೆಸ್ಟ್ ಫ್ರೆಂಡ್ ಯಾರು?". ಅವಳನ್ನು ಮುದ್ದುಗರೆದು, ಕಾರಣ ಕೇಳಿದಾಗ, ತನ್ನ ಕಿಸೆಯಿಂದ ಒಂದು ರಂಗಿನ ದಾರವನ್ನು ಕೊಟ್ಟು, "ನಾಳೆ, ಇದನ್ನು ಅವರಿಗೆ ಕಟ್ಟಿ. ನಾಳೆ ಫ್ರೆಂಡ್ ಶಿಪ್ ಡೇ" ಎಂದಿದ್ದಳು.
ಅಂದಿನಿಂದ ಪ್ರತಿ ವರ್ಷದ ಈ ದಿನದಂದು ಆ ಪುಟ್ಟ ಹುಡುಗಿ ನೆನಪಾಗುತ್ತಾಳೆ. ಅವಳಷ್ಟೇ ಮುಗ್ಧವಾಗಿ, ಸ್ನಿಗ್ಧವಾಗಿ, ನನ್ನಲ್ಲಿಯೇ ಇದ್ದ ಅವಳಂಥವಳನ್ನು ಪ್ರತಿಬಾರಿ ಹುಡುಕುತ್ತೇನೆ. ಅರ್ಥವೇ ಇಲ್ಲದ ಒಂದು ಉಣ್ಣೆಯ ದಾರದಲ್ಲಿ, ನಮ್ಮೆಲ್ಲಾ ಸ್ನೇಹ, ಪ್ರೀತಿ, ಆದರಗಳೂ ತುಂಬಿಟ್ಟು, ಸ್ನೇಹಿತ/ತೆಯ ಕೈಗೆ ಕಟ್ಟುತ್ತಿದ್ದೇವೆ ಎಂಬ ಭಾವ ಅದೆಷ್ಟು ಮುದ ನೀಡುತ್ತಿತ್ತು. A sense of belongingness and security! ಸ್ನೇಹವನ್ನು ಒಂದು ಬೆರಗಾಗಿಯೇ, ಭ್ರಮೆಯಾಗಿಯೇ ಪರಿಚಯಿಸುವ ಸಮಯವದು. ದಿನಗಳುರುಳಿದಂತೆ ಆ ಭ್ರಮಾಲೋಕದಿಂದ ಹೊರಬಂದ ವ್ಯಕ್ತಿ, ತನ್ನ ಆಸಕ್ತಿ, ಚಿಂತನೆಗಳಿಗೆ ಹೊಂದುವಂಥವರ ಸ್ನೇಹ ಬಯಸುತ್ತಾನೆ. ಸ್ನೇಹ, ಬಂಧಗಳು ಗಟ್ಟಿಗೊಳ್ಳುವುದೇ ಈ ವೇವ್ ಲೆಂತ್ ಮೂಲಕ ಎಂಬುದು ಆ ಸಮಯದ ವ್ಯಾಖ್ಯಾನವಾಗುತ್ತದೆ. ಸುತ್ತೆಲ್ಲಾ ಸ್ನೇಹಿತರು, ಮಾತುಕತೆ, ಚರ್ಚೆ, ಒಡನಾಟಗಳಲ್ಲಿ ಒಂದಾಗಿ ಒಟ್ಟೊಟ್ಟಿಗೆ ಬೆಳೆಯುವ ಸ್ನೇಹದ ಪರಿಯದು. ಇದು ಸ್ನೇಹಲೋಕದ ಭ್ರಮೆಗಳ ಇನ್ನೊಂದು ಹಂತವೆನ್ನಬಹುದು.
ಬದುಕಿನ ಕ್ಯಾಮರಾ ರೀಲು, ಹೆಚ್ಚು ಹೆಚ್ಚು ಎಕ್ಸ್ಪೋಸ್ ಆದಂತೆ, ಬೆಸ್ಟೆಸ್ಟು ಸ್ನೇಹಿತರು, ಸ್ನೇಹಲೋಕ ಎಂಬ ಎಲ್ಲಾ ಉನ್ಮಾದಗಳು ಕರಗಿ, ಸ್ನೇಹ ಎನ್ನುವುದು ಪರಸ್ಪರ ವ್ಯಕ್ತಿಗಳ ನಡುವಿನ ಬಂಧವಲ್ಲ, ಒಂದು ಅಂತಃಕರಣದ ಭಾವ ಎಂಬುದು ತಿಳಿಯುತ್ತಾ ಹೋಗುತ್ತದೆ. ನಾವು ದಿನನಿತ್ಯ ಒಡನಾಡನಾಡುವ ಪ್ರತಿಯೊಬ್ಬರೂ ಆಗ ನಮ್ಮ ಸ್ನೇಹಿತರಾಗುತ್ತಾರೆ. ನಾವು ಸ್ನೇಹಪರವಾಗಿ ಯಾರೊಬ್ಬರೊಡನೆ ಮಾತನಾಡಿದರೂ, ಅವರಿಂದ ಮರಳಿ ಪಡೆಯುವ ಪ್ರೀತಿ, ಸ್ನೇಹ ಭಾವ ನಮಗೆ ಅತ್ಯಂತ ತೃಪ್ತಿ ಮತ್ತು ಸಂತೋಷ ಕೊಡುತ್ತದೆ. ಬಹುಶಃ ವ್ಯಕ್ತಿಯೊಬ್ಬ ಈ ಸಂದರ್ಭದಲ್ಲಿ ನಿಜ ಅರ್ಥದ ಸ್ನೇಹವನ್ನು ಅರಿಯುತ್ತಾನೆ. ರಸ್ತೆಯ ಫುಟ್ಪಾತಿನ ಮೂಲೆಯಲ್ಲಿ ಕೂತು ಹೂಕಟ್ಟುವ ಅಜ್ಜಿ, ಎದುರು ಮನೆಯ ಪುಟ್ಟ, ಬಸ್ಸಿನಲಿ ಟಿಕೇಟು ಕೊಡುವ ಕಂಡಕ್ಟರು, ಒಂದು ಬಿಸ್ಕತ್ ಚೂರನ್ನು ಹಾಕಿದರೆ, ತಿಂದು ನಮಗಾಗಿಯೇ ಬದುಕುವ ನಾಯಿಮರಿ, ಸಂಜೆಗತ್ತಲ ತಿಳಿಗಾಳಿ, ಆಕಾಶದಲ್ಲಿ ಚಿತ್ತಾರ ಮೂಡಿಸುವ ಬಿಳಿಮೋಡ ಎಲ್ಲವೂ, ಎಲ್ಲರೂ ನಮ್ಮ ಸ್ನೇಹಿತರೇ ಆಗಿಬಿಡುತ್ತಾರೆ.
ಸ್ನೇಹಭಾವ ಒಂದು ಅಕ್ಷಯಪಾತ್ರೆಯಂತೆ ಮೊಗೆದು ಕೊಟ್ಟಷ್ಟೂ, ತುಂಬಿಕೊಳ್ಳುತ್ತದೆ. ನಾವು ನಮ್ಮೊಡನಿರುವ ಪ್ರತಿ ಜೀವಿಯನ್ನೂ ಸ್ನೇಹಭಾವದಿಂದ ಕಂಡರೆ, ನಮಗೆ ಅಷ್ಟೇ ಸ್ನೇಹ, ಪ್ರೀತಿ ಮರಳಿ ದೊರೆಯುತ್ತದೆ. ಭೂಮಿಯ ಮೇಲಿನ ಪ್ರತಿ ಜೀವಿಯೂ ಸ್ನೇಹ, ಪ್ರೀತಿಗಾಗಿ ಹಾತೊರೆಯುತ್ತದೆ. ಮನಶ್ಶಾಸ್ತ್ರದ ಒಂದು ಪ್ರಯೋಗದ ಉದಾಹರಣೆ ಇಲ್ಲಿ ಸಾಂದರ್ಭಿಕ: ಎರಡು ಹೂಗಿಡಗಳನ್ನು ಬೇರೆಬೇರೆ ಸ್ಥಳಗಳಲ್ಲಿ ಬಿತ್ತು, ಸಾವಕಾಶವಾಗಿ ನೀರೆರೆದು, ಗೊಬ್ಬರ ಹಾಕಿ ಬೆಳೆಸುತ್ತಿರುತ್ತಾರೆ. ಎರಡೂ ಒಂದೇ ಬಗೆಯ ವಾತಾವರಣದಲ್ಲಿ ಬೆಳೆಯುತ್ತಿರುತ್ತದೆ. ಒಂದೇ ಭಿನ್ನತೆ ಎಂದರೆ, ಒಂದು ಗಿಡಕ್ಕೆ ಪ್ರತಿದಿನ ಪಕ್ಕದಲ್ಲಿ ಕೂತು, ಒಂದಷ್ಟು ಪ್ರೀತಿಯ ಮಾತುಗಳಾಡಿ, ಸ್ನೇಹದಿಂದ ಆರೈಕೆ ಮಾಡುತ್ತಾರೆ. ಮತ್ತೊಂದು ಗಿಡಕ್ಕೆ ಪ್ರತಿದಿನ ಕೂತು ಒಂದಷ್ಟು ಬೈಗುಳಗಳಿಂದ ಹಳಿಯುತ್ತಾರೆ. ಎರಡು ಗಿಡಗಳೂ ಬೆಳೆದ ನಂತರ ಎರಡಕ್ಕೂ ಗಮನಾರ್ಹ ಬದಲಾವಣೆ. ಸ್ನೇಹಾದರಗಳಿಂದ ಬೆಳೆಸಿದ ಗಿಡ ಸೊಂಪಾಗಿ, ಫಲವತ್ತಾಗಿ ಬೆಳೆದಿರುತ್ತದೆ. ಆದರೆ, ಬೈಗುಳಗಳಿಂದ ಥಳಿಸಿದ ಗಿಡ ಕೃಶವಾಗಿ, ಸೊರಗಿರುತ್ತದೆ! ಸ್ನೇಹ, ಪ್ರೇಮಾದರಗಳು, ಹಂಚಿದಾಗಲೂ, ಪಡೆದಾಗಲೂ ಹೀಗೆ ನಮ್ಮ ವ್ಯಕ್ತಿತ್ವವನ್ನೇ ತಿದ್ದುತ್ತದೆ ಎಂಬುದು ಸೋಜಿಗದ ವಿಚಾರ.
ಇದನ್ನೂ ಮೀರಿದ ಸ್ನೇಹ ಒಂದಿದೆ. ಅದನ್ನು ನಾವೆಲ್ಲರೂ ಪಡೆದೇ ತೀರಬೇಕು. ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಆದ್ಯತೆ, ಈ ಸ್ನೇಹವನ್ನು ಪಡೆಯುವುದೇ ಆಗಬೇಕು. ಅದ್ಯಾವ ಸ್ನೇಹ ಎಂದು ಊಹೆಮಾಡಿನೋಡಿ! ತಿಳಿಯಿತೇ? ಅದು ನಮ್ಮ ಅಂತರಾಳದ ಮನಸ್ಸಿನೊಂದಿಗೆ ನಾವು ಬೆಳೆಸಿಕೊಳ್ಳಬೇಕಾದ ಸ್ನೇಹ. ನಮ್ಮ ಮನಸ್ಸು, ಬುದ್ಧಿ, ಮೈಕಟ್ಟು ಎಲ್ಲವೂ ಒಂದೇ ದೇಹದಲ್ಲಿ ಒಟ್ಟುಗೂಡಿದ್ದರೂ, ಎಲ್ಲವೂ ತನ್ನಷ್ಟಕ್ಕೆ ತಾನು ವಿಮುಖಿಯಾಗಿರುತ್ತದೆ. ಈ ಮೂರೂ ಒಂದಕ್ಕೊಂದು ಹೊಂದಿಕೊಳ್ಳುವಂತೆ, ಎಲ್ಲವೂ ಒಂದೇ ಭಾಷೆ ಮಾತನಾಡುವಂತೆ ಪರಸ್ಪರ ಸ್ನೇಹ ಬೆಳೆಸಬೇಕು. ನಮ್ಮೊಳಗಣ ವ್ಯಕ್ತಿಯನ್ನು ಸದಾ ಸ್ನೇಹವಲಯದಲ್ಲಿರಿಸಬೇಕು. ಇನ್ ಅದರ್ ವರ್ಡ್, ಮಾನಸಿಕವಾಗಿ ನಾವು ಆರೋಗ್ಯವಂತರಾಗಬೇಕಾದರೆ, ನಮ್ಮ ಕಾನ್ಶಿಯಸ್ ನಮಗೆ ಸನಿಹವಾಗಬೇಕು. ಸ್ನೇಹಿತನಾಗಬೇಕು. ಇದು ಸಾಧ್ಯವಾದಾಗ, ಮನುಷ್ಯನ ಅತ್ಯಂತ ಉನ್ನತ ಗೆಲುವಾಗುತ್ತದೆ. ಬದುಕು ಸುಖಮಯ, ಅರ್ಥಪೂರ್ಣವಾಗುತ್ತದೆ.
’ಸ್ನೇಹ’ ಎಂಬ ಒಂದು ಪದಕ್ಕೆ ಎಷ್ಟೆಲ್ಲಾ ಅರ್ಥವ್ಯಾಪ್ತಿ ಇದೆ ಅಲ್ಲವೇ! ಎಲ್ಲವೂ ಬದುಕಿನ ಒಂದೊಂದು ಮಜಲುಗಳನ್ನು ಮೀಟಿ ದಾಟಬೇಕಾದ ಸುಂದರ ಹಂತಗಳು. ಸ್ನೇಹವೆಂಬ ಭಾವವು ರಮ್ಯ ಕಲ್ಪನೆಯಿಂದ ಹಿಡಿದು ವಾಸ್ತವ ಬದುಕಿನ ಜಂಜಾಟಗಳುದ್ದಕ್ಕೂ ನಮ್ಮೊಂದಿಗೇ ಇದ್ದು, ತಂಪನೆರೆಯುವ ನೆರಳಿನಂತೆ. ಮೊದಲು ನಾವು ನಮ್ಮ "ಸೆಲ್ಫ್" ಜೊತೆಗೆ ಸ್ನೇಹಿತಾಗೋಣ. ಇದನ್ನೇ "ಸೆಲ್ಫಿ" ಅನ್ನಬಹುದೇನೋ! ಮೊದಲು ಈ ಸೆಲ್ಫಿ ಚಿತ್ರ ಸ್ವಚ್ಚವಾಗಿ ಬಂದರೆ, ಇನ್ನುಳಿದೆಲ್ಲಾ ಗ್ರೂಪ್ಫಿಗಳು ತಾನಾಗಿಯೇ ನಮ್ಮನ್ನಾವರಿಸುತ್ತದೆ.  

-ಸಂಯುಕ್ತಾ ಪುಲಿಗಲ್


  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com