ಕ್ರೀಡಾಜಗತ್ತಿನ ಸ್ನೇಹ ನಮಗೆಲ್ಲರಿಗೂ ಸ್ಪೂರ್ತಿ

ಸ್ನೇಹವೆಂಬ ಜೀವಸೆಲೆ ಇಲ್ಲದೇ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ, ಸ್ನೇಹಿತರೇ ಪ್ರೇರಕ ಶಕ್ತಿ, ಸ್ನೆಹಿತರ ಉತ್ತೇಜನದಿಂದಲೇ ಸಾಧನೆಗಳನ್ನು ಮಾಡಿರುವ ಅನೇಕ ಉದಾಹರಣೆಗಳಿವೆ.
ಸಚಿನ್-ಸೆಹವಾಗ್
ಸಚಿನ್-ಸೆಹವಾಗ್
ಸ್ನೇಹದಿಂದ ಜಗತ್ತನ್ನೇ ಗೆಲ್ಲಬಹುದು, ಸ್ನೇಹವೆಂಬ ಜೀವಸೆಲೆ ಇಲ್ಲದೇ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ, ಸ್ನೇಹಿತರೇ ಪ್ರೇರಕ ಶಕ್ತಿ, ಸ್ನೇಹಿತರ ಉತ್ತೇಜನದಿಂದಲೇ ಸಾಧನೆಗಳನ್ನು ಮಾಡಿರುವ ಅನೇಕ ಉದಾಹರಣೆಗಳಿವೆ. ಇನ್ನು ಸೋಲು ಗೆಲುವುಗಳ ಲೆಕ್ಕಾಚಾರದಲ್ಲೇ ನಡೆಯುವ ಕ್ರೀಡೆಯಲ್ಲಂತೂ ಸ್ನೇಹವೆಂಬುದು ಗೆಲುವಿನ ಹಿಂದಿನ ಪ್ರೇರಕಶಕ್ತಿಯಾಗಿರುತ್ತದೆ. 
ಅದೆಷ್ಟೋ ಪಂದ್ಯಗಳಲ್ಲಿ ಸ್ನೇಹಿತರ ಪ್ರೇರಣೆಯಿಂದಲೇ ಗೆದ್ದವರಿದ್ದಾರೆ. ಅಚ್ಚುಮೆಚ್ಚಿನ ಆಟಗಾರನ ಸ್ನೇಹ ಸಂಪಾದಿಸಲೆಂದೇ ತಾವೂ ತಂಡಕ್ಕೆ ಆಯ್ಕೆಯಾಗಲು ಶತಪ್ರಯತ್ನ ನಡೆಸಿರುತ್ತಾರೆ. ನೆಚ್ಚಿನ ಆಟಗಾರನನ್ನೇ ಉತ್ತಮ ಸ್ನೇಹಿತನನ್ನಾಗಿ ಪಡೆಯುತ್ತಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಯಾರಿಗೆ ಪ್ರೇರಕ ಶಕ್ತಿ ಅಲ್ಲ ಹೇಳಿ? ಅವರನ್ನು ನೋಡಿಯೇ ನಾನೂ ಕ್ರಿಕೆಟರ್ ಆಗಬೇಕೆಂದುಕೊಂಡವರು ಎಷ್ಟು ಜನರಿಲ್ಲ? ಹಾಗೆಯೇ ಅಂದುಕೊಂಡು ಕ್ರಿಕೆಟ್ ಆಡಲು ಪ್ರಾರಂಭಿಸಿ ಭಾರತದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿ ಬೆಳೆದರು ವೀರೇಂದ್ರ ಸೆಹವಾಗ್! ಸಾಮಾನ್ಯವಾಗಿ ಕ್ರಿಕೆಟ್ ವಿಚಾರಕ್ಕೆ ಬಂದರೆ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಅವರ ದೋಸ್ತಿಯೇ ಹೆಚ್ಚು ಗುರುತಿಸಿಕೊಳ್ಳುತ್ತೆ. ಆದರೆ ಅದೆಷ್ಟೋ ಮ್ಯಾಚ್ ಗಳಲ್ಲಿ ಆನ್ ಫೀಲ್ಡ್ ನಲ್ಲಿ ಸಚಿನ್ ಮತ್ತು ಸೆಹವಾಗ್ ಅವರಲ್ಲಿ ಭಾರತ ತಂಡದ ಉತ್ತಮ ಸ್ನೇಹಿತರನ್ನು ಕಂಡಿದ್ದೇವೆ. ಆನ್ ಫೀಲ್ಡ್ ನಲ್ಲಿ ಅವರಿಬ್ಬರ ಜತೆಯಾಟ ಭಾರತಕ್ಕೆ ಗೆಲುವುಗಳನ್ನು ತಂದುಕೊಟ್ಟಿದೆ. ಗುರು-ಶಿಷ್ಯರ ಸಂಬಂಧದಲ್ಲಿ ಸ್ನೇಹಿತರ ಬಾಂಧವ್ಯವೂ ಬೆಸೆದಿದೆ ಎಂಬುದಕ್ಕೆ ವಿರೇಂದ್ರ ಸೆಹವಾಗ್, ಸಚಿನ್ ತೆಂಡೂಲ್ಕರ್ ಉತ್ತಮ ನಿದರ್ಶನ.  ಆನ್ ಫೀಲ್ಡ್ ನಲ್ಲಿ ಸಚಿನ್-ಸೆಹ್ವಾಗ್ ನಡುವಿನ ಸ್ನೇಹ ಹೇಗಿರುತ್ತಿತ್ತು ಎಂಬುದಕ್ಕೆ ಇಲ್ಲೊಂದು ಘಟನೆ ಉದಾಹರಣೆಯಾಗಿದೆ. 
ಅದು 2004, ಮಾರ್ಚ್ 29. ಮುಲ್ತಾನ್‌ನಲ್ಲಿ ಭಾರತ- ಪಾಕ್ ನಡುವೆ ಮೊದಲ ಟೆಸ್ಟ್ ನಡೆಯುತ್ತಿತ್ತು. ಸೆಹವಾಗ್-ಸಚಿನ್ ಜತೆಗೂಡಿ ಆಡುತ್ತಿದ್ದರು. ಆ ಪಂದ್ಯದಲ್ಲಿ ಸೆಹವಾಗ್ ಮೊದಲ ತ್ರಿಶತಕ ಬಾರಿಸಿದ. ಪ್ರತಿಬಾರಿ ಸೆಹವಾಗ್ 90ರ ಗಡಿದಾಟಿದಾಗಲೂ ಹತ್ತಿರಕ್ಕೆ ಬರುತ್ತಿದ್ದ ತೆಂಡೂಲ್ಕರ್, 'If you try to hit a six, I will hit you on the bum ಎಂದು ಗದರಿಸುತ್ತಿದ್ದ. ಅದನ್ನು ಸ್ವತಃ ಸೆಹವಾಗ್ ಈ ರೀತಿ ನೆನಪಿಸಿಕೊಳ್ಳುತ್ತಾರೆ. ಬ್ಯಾಟಿಂಗ್ ವೇಳೆ ಮಾತುಕತೆ ನಡೆಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು ಸಚಿನ್‌ಗೆ ಇಷ್ಟ. ಕೆಲವೊಮ್ಮೆ ಗಂಭೀರವದನನಾಗಿ ಸಲಹೆ, ಸೂಚನೆ, ಎಚ್ಚರಿಕೆಯನ್ನೂ ಕೊಡುತ್ತಿದ್ದರು. ಅಂದು ಇಡೀ ದಿನ ನಾವಿಬ್ಬರೂ ಜತೆಯಾಗಿ ಆಡಿದೆವು.  2003ರಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ 195 ರನ್ ಗಳಿಸಿದ್ದಾಗ ನೀನು ಸಿಕ್ಸ್ ಹೊಡೆಯಲು ಯತ್ನಿಸಿ ಔಟಾದೆ. ಹಾಗಾಗಿ ಅದುವರೆಗೂ ಉತ್ತಮ ಸ್ಥಿತಿಯಲ್ಲಿದ್ದರೂ ಭಾರತ ಒಳ್ಳೆಯ ಸ್ಕೋರ್ ಗಳಿಸದೆ, ಪಂದ್ಯವನ್ನೇ ಸೋಲಬೇಕಾಗಿ ಬಂತು. ಹಾಗೆಂದು ನನ್ನ ತಪ್ಪನ್ನು ಮನವರಿಕೆ ಮಾಡಿಕೊಟ್ಟರು. 'If you try to hit a six this time, I will hit you on the bum ಎಂದು ಗದರಿಸಿಯೂ ಬಿಟ್ಟರು. ನಾನು ಆ ಟೆಸ್ಟ್‌ನಲ್ಲಿ 90ರ ಗಡಿಯಲ್ಲಿ ಸಿಕ್ಸ್ ಹೊಡೆಯಲೇ ಇಲ್ಲ. ಆದರೆ 300 ರನ್ ಹತ್ತಿರಕ್ಕೆ ಬಂದಾಗ ತಡೆದುಕೊಳ್ಳಲಾಗಲಿಲ್ಲ. ಸಚಿನ್ ಬಳಿಗೆ ಹೋಗಿ, ನೀನು ಬೇಕಾದರೆ ಹೊಡೆ. ಆದರೆ ನಾನು ಸಿಕ್ಸ್ ಹೊಡೆಯುವುದು ಹೊಡೆಯುವುದೇ ಎಂದೆ. ಹಾಗೆಯೇ ಸಕ್ಲೇನ್ ಮುಷ್ತಾಕ್ ಬಾಲಿಗೆ ಸಿಕ್ಸ್ ಹೊಡೆದು ಮೊದಲ ಟ್ರಿಪಲ್ ಸೆಂಚುರಿ ಮುಗಿಸಿದೆ” ಸ್ನೇಹಿತ ಗದರಿದರೂ ಅದನ್ನು ಪ್ರೇರಣೆಯಾಗಿ ಪಡೆದು ಸಾಧನೆ ಮಾಡುವುದು ಸಾಧ್ಯ. ಸ್ನೇಹಿತರೊಂದಿಗಿನ ಅವಿಸ್ಮರಣಿಯ ಘಟನೆಗಳು ಅನುಭೂತಿಗಳೇ ಹಾಗೆ ಬದುಕನ್ನು ಹಚ್ಚಹಸಿರಾಗಿರಿಸುತ್ತವೆ. ಮೆಲುಕುಹಾಕಿದಷ್ಟೂ ಆನಂದ ಮೂಡಿಸುವಂಥದ್ದಾಗಿರುತ್ತವೆ. 
ಇನ್ನು ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಸ್ನೇಹದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕ್ರೀಡಾ ಜಗತ್ತಿನ ಸ್ನೇಹಕ್ಕೆ ಅನ್ವರ್ಥದಂತ್ತಿದ್ದರು. ಮುಂಬೈ ಸ್ಪೋರ್ಟ್ಸ್ ಅಸೋಸಿಯೇಶನ್ ನಿಂದಲೂ ಕಾಂಬ್ಳಿ- ಸಚಿನ್ ಪರಮಾಪ್ತ ಮಿತ್ರರು. ಅಂದಿಗೆ ಅವರಿಬ್ಬರು ಕ್ರಿಕೆಟ್ ನಲ್ಲಿ ನಿರ್ಮಿಸಿದ್ದ ದಾಖಲೆ ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಒಮ್ಮೊಮ್ಮೆ ಅವರ ಸ್ನೇಹವನ್ನು ಕಂಡರೆ ಅಚ್ಚರಿಯೂ ಆಗುತ್ತದೆ. ನಿಮಗೆ ಗೊತ್ತಿರಬಹುದು ಸಚಿನ್ ನಿವೃತ್ತಿ ಘೋಶಿಸಿದಾಗ ಅವರ ಸ್ನೇಹಿತರೆಲ್ಲರೂ ಕ್ರೀಡಾಂಗಣದಲ್ಲಿ ನೆರೆದಿದ್ದರು. ಕ್ರಿಕೆಟ್ ಜಗತ್ತಿಗೇ ಅದೊಂದು ಐತಿಹಾಸಿಕ ದಿನ. ಆದರೆ ಸಚಿನ್ ಪರಮಾಪ್ತ ಸ್ನೇಹಿತ ಕಾಂಬ್ಳಿ ಮಾತ್ರ ಮಿಸ್ ಆಗಿದ್ದರು. ವಿದಾಯ ಭಾಷಣದಲ್ಲಿ ತಮ್ಮ ಹೆಸರು ಹೇಳದೇ ಇದ್ದದ್ದಕ್ಕೆ ಸಚಿನ್ ನನ್ನನ್ನು ಮರೆತುಬಿಟ್ಟಿದ್ದಾರೆ ಎಂದೂ ಕಾಂಬ್ಳಿ ಆರೋಪಿಸಿದ್ದುಂಟು, ಬಾಲ್ಯದ ಸ್ನೇಹಿತರಾಗಿದ್ದರೂ ಸಚಿನ್-ಕಾಂಬ್ಳಿ 7 ವರ್ಷ ಪರಸ್ಪರ ಭೇಟಿ ಮಾಡಿರಲಿಲ್ಲ. ಬಾಲ್ಯದಿಂದ ಆಪ್ತಮಿತ್ರರಾಗಿದ್ದರೂ ಸಚಿನ್ ಕಾಂಬ್ಳಿ ಗೆಳೆತನದಲ್ಲಿ ಆಗಾಗ್ಗೆ ಬಿರುಕು ಕಾಣಿಸಿಕೊಂಡಿದ್ದೂ ಇದೆ.  
ಕ್ರಿಕೆಟ್ ನಲ್ಲಿ ಧೋನಿ- ಸುರೇಶ್ ರೈನಾ ಸ್ನೇಹವು ಉಲ್ಲೇಖನೀಯವೇ. ಇವರಿಬ್ಬರದ್ದು ಒಂದು ರೀತಿ ನಿನೆಲ್ಲೋ ನಾನಲ್ಲೇ ಎಂಬ ರೀತಿಯ ಸ್ನೇಹ . ಕೆಲವೊಮ್ಮೆ ಫಾರ್ಮ್ ನಲ್ಲಿಲ್ಲದಿದ್ದರೂ ರೈನಾರನ್ನು ಸ್ನೇಹಿತ ಎಂಬ ಮಾತ್ರಕ್ಕೆ ಮಾತ್ರ ಧೋನಿ ರಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.  
ಕ್ರಿಕೆಟ್ ನಂತೆಯೇ ಫುಟ್ ಬಾಲ್ ಕ್ರೀಡೆಯಲ್ಲೂ ಸಹ ಸ್ನೇಹಿತರಿದ್ದಾರೆ. ಇವರು ಬರೀ ಸ್ನೇಹಿತರಲ್ಲ ಬೆಸ್ಟ್ ಫ್ರೆಂಡ್ಸ್!
ಡೇವಿಡ್ ಅಲ್ಬಾ- ಫ್ರಾಂಕ್ ರಿಬೆರಿ: 2007-2008ರಲ್ಲಿ ಬೆವಾರಿಯನ್ ಕ್ಲಬ್ ಗೆ ಆಟವಾಗುವಾಗ ಇಬ್ಬರ ಪರಿಚಯವಾಗಿತ್ತು, ಆ ನಂತರ ರಿಬೆರಿ ತನ್ನ ಆಪ್ತ ಸ್ನೇಹಿತ ಅಲ್ಬಾ ಗೆ ಆಸ್ಟ್ರಿಯನ್ ಸ್ಪೋರ್ಟ್ಸ್ ಮನ್ ಆಫ್ ದಿ ಇಯರ್( ‘Austrian Sportsman of the Year’ award) ಪ್ರಶಸ್ತಿ ನೀಡಿದ್ದರು. 
ಒಲಿವಿಯರ್ ಗಿರೌಡ್- ಲೌರೆಂಟ್ ಕೊಸ್ಕಿಲ್ನಿ: 2012ರಿಂದ ಇಬ್ಬರೂ ಫುಟ್ ಬಾಲ್ ಕ್ರೀಡಾ ಕ್ಷೇತ್ರದ ಅತ್ಯುತ್ತಮ ಸ್ನೇಹಿತರು.
ಜ್ಲಾಟನ್ ಇಬ್ರಾಹಿಮೊವಿಕ್ ಮತ್ತು ಮ್ಯಾಕ್ಸ್ವೆಲ್: ಇಬ್ರಾಹಿಮೊವಿಕ್ ಮತ್ತು ಮ್ಯಾಕ್ಸ್ವೆಲ್ ಒಂದು ದಶಕದ ಹಿಂದೆ ತಮ್ಮ ಅಜಾಕ್ಸ್ ದಿನಗಳಿಂದ ಸ್ನೇಹಿತರು. 
ಮೌಸಾ ಡೆಂಬೆಲೆ, ಜಾನ್ ವೆರ್ಟೋಂಗೆನ್: ಈ ಆಟಗಾರರಿಗೆ 10 ವರ್ಷಗಳಿರುವಾಗಿಂದಲೂ ಇಬ್ಬರು ಬೆಸ್ಟ್ ಫ್ರೆಂಡ್ಸ್ ನಂತರ ಕ್ರೀಡಾ ಜೀವನದಲ್ಲೂ ಬೆಸ್ಟ್ ಫ್ರೆಂಡ್ಸ್ ಆಗಿಯೇ ಮುಂದುವರೆದಿದ್ದಾರೆ. 
ಲಿಯೋನೆಲ್ ಮೆಸ್ಸಿ ಮತ್ತು ಜೋಸ್ ಮ್ಯಾನುಯೆಲ್ ಪಿಂಟೋ: ಕೆಟಲಾನ್ ಕ್ಲಬ್ ನೊಂದಿಗೆ ಒಪ್ಪಂದಕ್ಕೆ ಸಹಿಹಾಕುವುದಕ್ಕೂ ಮುನ್ನ ತಮ್ಮ ಗೆಳೆಯ ಪಿಂಟೋ ನೊಂದಿಗೂ ಒಂದು ಒಪ್ಪದಂಕ್ಕೆ ಸಹಿ ಹಾಕಬೇಕು ಎಂದು ಪಟ್ಟು ಹಿಡಿದ್ದಿದ್ದರು. ಇದು ಅವರಿಬ್ಬರ ಸ್ನೇಹಕ್ಕೆ ಉತ್ತಮ ನಿದರ್ಶನ.   
ಸೆಸ್ಕ್ ಫೇಬ್ರ್ಗ್ಯಾಸ್ ಮತ್ತು ಗೆರಾರ್ಡ್ ಪಿಕೆ: ಬಾರ್ಸಿಲೋನಾ ಅಕಾಡೆಮಿ ಸೇರಿದ ನಂತರ ಇಬ್ಬರೂ ಆಟಗಾರರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. 
 ಷೆರ್ಗಿಒ ರಾಮೋಸ್ ಅಂಡ್  ಮೆಸುಟ್ ಓಶಿಲ್ : ಎರಡು ಬೇರೆ ಕ್ಲಬ್ ಗಳಿಗೆ ಆಡುತ್ತಿದ್ದರು ತಾವು ತಮ್ಮ ಸ್ನೇಹವನ್ನು ಉಳಿಸಿಕೊಂದಿರುವುದರ ಬಗ್ಗೆ ಈ ಇಬ್ಬರೂ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗೆಳೆತನದ ಬಗ್ಗೆ ಹೆಮ್ಮೆಯಿಂದ ಬರೆಯುತ್ತಿರುತ್ತಾರೆ. 
ಮಾರ್ಕೊ ರ್ಯೂಸ್  ಮತ್ತು ಮಾರಿಯೋ ಗಾಟ್ಜ್: ಜರ್ಮನಿಯ ಈ ಇಬ್ಬರು ಆಟಗಾರು ಮೈದಾನದಲ್ಲಿ ಸಹೋದರರಂತೆ ಇರುತ್ತಿದ್ದರು. ಗಾಟ್ಜ್  ಮಾರ್ಕೊ, ರ್ಯೂಸ್ ಪ್ರತಿನಿಧಿಸುತ್ತಿದ್ದ ತಂಡದ ವಿರೋಧಿ ತಂಡವನ್ನು ಸೇರಿದ ನಂತರವೂ ಇವರ ಸ್ನೇಹ ಹಾಗೆಯೇ ಮುಂದುವರೆದಿದೆ. 
ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಮಾರ್ಸೆಲೊ: ಸಾಮಾನ್ಯವಾಗಿ ಸ್ನೇಹಿತರು ಒಟ್ಟಿಗೆ ಸೇರಿದರೆ ಸಂಭ್ರಮಾಚರಣೆ ನಡೆಯುತ್ತದೆ. ಆದರೆ ಇವರಿಬ್ಬರು ಸೇರಿದರೆ ಪರಸ್ಪರ  ಕುಚೇಷ್ಟೆ ನಡೆಸುವುದರಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ.  
ಅಲೊನ್ಸೊ ಮತ್ತು ಸ್ಟೀವನ್ ಗೆರಾರ್ಡ್: ಈ ಇಬ್ಬರೂ ಆಟಗಾರರು ಫುಟ್ ಬಾಲ್ ಪ್ರೀಮಿಯರ್ ಲೀಗ್ ನ 5 ಆವೃತ್ತಿಗಳಲ್ಲಿ ಒಟ್ಟಿಗೆ ಆಟವಾಡಿದ್ದಾರೆ. ಪ್ರೀಮಿಯರ್ ಲೀಗ್ ನ ಹಿಸ್ಟರಿಯಲ್ಲಿ ಇವರಷ್ಟು ಯಶಸ್ವೀ ಮಿಡ್ ಫೀಲ್ಡ್ ಜೋಡಿ ಮತ್ತೊಂದಿಲ್ಲ. ಈ ದಾಖಲೆ ನಿರ್ಮಾಣವಾಗಲು ಇವರ ಸ್ನೇಹವೇ ಕಾರಣ.  
ಕ್ರೀಡಾ ಜಗತ್ತಿನಲ್ಲಿ ಒಬ್ಬ ಕ್ರೀಡಾಪಟುವಿನ ಯಶಸ್ಸಿಗೆ ಸ್ನೇಹ ಎಂಬುದು ಮಹತ್ವದ ಪಾತ್ರ ವಹಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಈ ಕ್ರೀಡಾಪಟುಗಳ ಜೀವನದ ಯಶಸ್ಸಿನ ಹಾದಿಯಲ್ಲಿ ಫ್ರೆಂಡ್ ಶಿಪ್ ಎಂಬುದು ನಿರ್ಣಾಯಕ ಪಾತ್ರ ವಹಿಸಿದೆ. ಇವರೆಲ್ಲರ ಸ್ನೇಹ ನಮಗೆಲ್ಲರಿಗೂ ಮಾದರಿಯಾಗಲಿ. ಹ್ಯಾಪಿ ಫ್ರೆಂಡ್ ಶಿಪ್ ಡೇ....

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com