ಭಾರತೀಯ ಪುರಾಣಗಳಲ್ಲಿ ಸ್ನೇಹದ ಮಹತ್ವ

ಸ್ನೇಹ ಅಥವಾ ಫ್ರೆಂಡ್ ಶಿಪ್ ಇಂದು ನಿನ್ನೆಯದಲ್ಲ. ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರ, ಆತಿಥ್ಯವಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸ್ನೇಹ ಅಥವಾ ಫ್ರೆಂಡ್ ಶಿಪ್ ಇಂದು ನಿನ್ನೆಯದಲ್ಲ. ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರ, ಆತಿಥ್ಯವಿದೆ. ಪುರಾಣವನ್ನು ಒಮ್ಮೆ ತಿರುವಿದಾಗ ಎರಡು ಬಿಡಿಸಲಾಗದ ಸ್ನೇಹವನ್ನು ಕಾಣಬಹುದು.ಮಹಾಭಾರತದಲ್ಲಿ ಕಂಡುಬರುವ ದುರ್ಯೋಧನ ಮತ್ತು ಕರ್ಣ ಇವರಿಬ್ಬರ ಸ್ನೇಹ. ಇವರಿಬ್ಬರದು ಅಪ್ರತಿಮ ಗೆಳೆತನ. ಇವರ ಸ್ನೇಹದ ಮುಂದೆ ಇಂದಿನ ಯಾವುದೇ ಗೆಳೆತನ ನಿಲ್ಲಲಾರದು.

ನಿಜವಾದ ಸ್ನೇಹ ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲ. ಕೆಲವರು ಗೆಳೆತನ, ಸ್ನೇಹ ಅಂತ ನಾಟಕ ಮಾಡ್ತಾರೆ. ಸ್ನೇಹದ ಹೆಸರಿನಲ್ಲಿ ಸಹಾಯ ಪಡೆದು ಆಮೇಲೆ ಎದೆಗೆ ಚೂರಿ ಹಾಕಿ ಹೋಗ್ತಾರೆ. ಅಂಥವರ ಮಧ್ಯೆ ಮಾದರಿಯಾಗಿ ನಿಲ್ಲುವುದು ಕರ್ಣ-ದುರ್ಯೋಧನ ಕೃಷ್ಣ-ಕುಚೇಲರ ಗೆಳೆತನ. ಸ್ನೇಹಿತರು ಸಾಯಬಹುದು ಆದರೆ ಒಂದೊಳ್ಳೆಯ ಗೆಳೆತನ ಯಾವತ್ತೂ ಸಾಯಲಾರದು. ಕೊನೆಯಿಲ್ಲದ ಸರಪಳಿ ಸ್ನೇಹ.

ಮನಸ್ಸೆಂಬುದು ನೀರಿದ್ದಂತೆ. ಅಲ್ಲಿ ಭಾವನೆಗಳು ಹರಿದಾಡುತ್ತವೆ, ಪ್ರೀತಿ ತುಂಬಿರುತ್ತೆ. ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರುತ್ತವೆ. ಅಂಥ ಭಾವನೆಗಳನ್ನ ಹಂಚಿಕೊಂಡು ಗೆಳೆಯ ಅಥವಾ ಗೆಳತಿಯ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಕಷ್ಟದಲ್ಲಿದ್ದಾಗ ಸಹಾಯ ಮಾಡಿ. ಸೋತಾಗ ಬೆನ್ನು ತಟ್ಟುವವನೇ ನಿಜವಾದ ಸ್ನೇಹಿತ.

ಮಹಾಭಾರತದಲ್ಲಿ ಕರ್ಣ ದುರ್ಯೋಧನ ರ ಸ್ನೇಹ
ಒಮ್ಮೆ ಕರ್ಣ ದುರ್ಯೋಧನನ ಪತ್ನಿ ಭಾನುಮತಿ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಆಕೆಯನ್ನು ಹಿಡಿಯಲು ಹೋಗುತ್ತಾನೆ. ಆಕಸ್ಮಿಕವಾಗಿ ಆಕೆಯ ಮುತ್ತಿನ ಸರ ಕಿತ್ತು ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ. ಆ ವೇಳೆ ಅಲ್ಲಿಗೆ ದುರ್ಯೋಧನ ಬರುತ್ತಾನೆ. ಬಂದವನು ಒಂದು ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ, ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ, ಕರ್ಣ ನನಗೆ ನಿನ್ನಲ್ಲಿ ನಂಬಿಕೆಯಿದೆ ಎಂದು ದುರ್ಯೋಧನನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ದುರ್ಯೋಧನನಿಗೆ ತನ್ನ ಗೆಳೆಯನ್ನಲ್ಲಿ ನಂಬಿಕೆ ವಿಶ್ವಾಸವಿರುತ್ತದೆ.

ದುರ್ಯೋಧನ ಎಂದರೇ ಕೇವಲ ಕುರುಸಾರ್ವಭೌಮ, ಧೃತರಾಷ್ಟ್ರನ ಪುತ್ರ, ಹಠಮಾರಿ, ಕ್ರೂರಿ, ಇದೇನೂ ಆಗಿರಲಿಲ್ಲ ಕರ್ಣನ ಪಾಲಿಗೆ ಆತ ಜೀವದ ಗೆಳೆಯ, ಅಂತರಂಗದ ಉಸಿರು, ಅಣ್ಣನಂಥ ಆತ್ಮ ಬಂಧು, ಇಡೀ ಜಗತ್ತೇ ಕರ್ಣನನ್ನು ಸೂತಪುತ್ರ, ಬೆಸ್ತ ಎಂದು ಹಂಗಿಸಿದ ಕ್ಷಣದಲ್ಲಿ ಅಂಗರಾಜ್ಯದ ಕಿರೀಟ ತೊಡಿಸಿದ ಧೀರ ದುರ್ಯೋಧನ . ಅಂಥ ಗೆಳೆಯನಿಗೆ ಯುದ್ದ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು ಎಂಬ ಆಸೆ ಕರ್ಣನಿಗಿತ್ತು.

ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಾಂಡವರಿಗೆಲ್ಲ ಹಿರಿಯ, ನೀನು ಬಂದು ಪಾಂಡವರ ಜೊತೆ ಸೇರು ಎಂದು ಹೇಳುತ್ತಾನೆ. ಆಗ ಕರ್ಣ ನಾನು ದುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಎನ್ನುತ್ತಾನೆ.ಇದಕ್ಕೆ ಕಾರಣವೇನು ಎಂದು ಕೃಷ್ಣ ಕೇಳಿದಾಗ, ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ತನ್ನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಾಕರಿಸಿದರು. ಆ ಸಮಯದಲ್ಲಿ ನನ್ನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಸ್ಥಾನಮಾನ ಕಲ್ಪಿಸಿದವನು ದುರ್ಯೋಧನ ನಾನು ರಾಜನಿಗೆ ನಿಷ್ಠನಾಗಿದ್ದೇನೆ. ಹೀಗಾಗಿ ನಾನು ಪಾಂಟವರ ಜೊತೆ ಸೇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಕರ್ಣ. ಹೀಗೆ ಕರ್ಣನಿಗೆ ಹತ್ತು – ಹಲವು ಸಂದರ್ಭದಲ್ಲಿ ದುರ್ಯೋಧನ ಬೆಂಬಲವಾಗಿ ನಿಲ್ಲುತ್ತಾನೆ. ಮಹಾಭಾರತ ಯುದ್ದದಲ್ಲಿ ಯಾವ ಆಮೀಷಗಳಿಗೆ ಬಲಿಯಾಗದೇ ದುರ್ಯೋಧನನ ಪರವಾಗಿ ಯುದ್ಧಮಾಡುವುದಾಗಿ ಹೇಳುತ್ತಾನೆ. ಕೊನೆಗೆ ಕರ್ಣ ಅವನಿಗೊಂದು ಮಾತು ಕೊಡುತ್ತಾನೆ. ಯುದ್ದದಲ್ಲಿ ಸೈನಿಕರನ್ನಷ್ಟೇ ಕೊಲ್ಲುತ್ತೇನೆ, ಪಾಂಡವರನ್ನು ಮುಟ್ಟುವುದಿಲ್ಲ ಹೇಳುತ್ತಾನೆ. ನಂತರ ಕೃಷ್ಣ ಕರ್ಣನ ಬಳಿಗೆ ಕುಂತಿಯನ್ನು ಕಳುಹಿಸುತ್ತಾನೆ.

ಕರ್ಣನ ಬಳಿ ಬಂದ ಕುಂತಿ ತನ್ನ ಜೊತೆಗೆ ಬಾ ಎಂದು ಕರೆಯತ್ತಾಳೆ. ಅದಕ್ಕುತ್ತರಿಸಿದ ಕರ್ಣ, ಇಂದೇನೋ ನಾನು ನಿನ್ನ ಮಗ ಎಂದು ನನಗೆ ಗೊತ್ತಾಯಿತು.ಆದರೆ ಇದ್ಯಾವುದೂ ಗೊತ್ತಿಲ್ಲದ ದಿನಗಳಲ್ಲಿ ನನ್ನನ್ನು ಕೌರವ ಸಲಹಿದ್ದಾನೆ. ಸ್ನೇಹಹಸ್ತ ಚಾಚಿದ್ದಾನೆ. ಅವನು ನನ್ನ ಕುಲ ನೋಡಲಿಲ್ಲ. ಅವನ್ನು ನಾನು ಬಿಟ್ಟು ಬರುವುದಿಲ್ಲ ಎನ್ನುತ್ತಾನೆ. ಕುಂತಿ ಕೊನೆಗೆ ಕರ್ಣನಿಗೆ, ಒಮ್ಮೆತೊಟ್ಟ ಬಾಣವನ್ನು ಮರಳಿ ತೊಡದಿರು, ನನ್ನ ಐವರು ಮಕ್ಕಳನ್ನು ಕಾಪಾಡು’ಎಂದು ಕೇಳಿಕೊಳ್ಳುತ್ತಾಳೆ. ಕೊನಗೆ ಕೌರವರ ಪರವಾಗಿ ಕರ್ಣ ಯುದ್ಧ ಮಾಡಿದರೂ ಕುಂತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ. ಈ ವಿಷಯ ದುರ್ಯೋಧನನಿಗೆ ತಿಳಿದರೂ ಕರ್ಣನನ್ನು ಆತ ಅಪಮಾನಿಸುವುದಿಲ್ಲ. ಅವರಿಬ್ಬರ ಸ್ನೇಹ ಮತ್ತಷ್ಟು ಗಾಢವಾಗುತ್ತದೆ. ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಎಂದೆಂದಿಗೂ ಅಮರವಾಗಿದೆ.

ಎಂದೆಂದಿಗೂ ಅಮರ ಕೃಷ್ಣ-ಕುಚೇಲರ ಗೆಳೆತನ
ಕರ್ಣ-ದುರ್ಯೋಧನರ ನಂತರ ನಮಗೆ ಸಿಗುವ ಅಪ್ರತಿಮ ಸ್ನೇಹಿತರು ಕೃಷ್ಣ -ಕುಚೇಲ. ಕುಚೇಲ ಒಬ್ಬ ಬಡವನಾಗಿ ಗೆಳೆಯ ಶ್ರೀಕೃಷ್ಣನ ಮನೆಗೆ ಸಹಾಯ ಕೇಳಲು ಬರುತ್ತಾನೆ. ಕೃಷ್ಣನ ಆದರಾತಿಥ್ಯಗಳಿಗೆ ಬೆರಗಾದ ಕುಚೇಲ ಆತನಲ್ಲಿ ಸಹಾಯ ಕೇಳದೆ ಸುಮ್ಮನಾಗುತ್ತಾನೆ. ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ ಇದ್ದಾಗ, ಕೃಷ್ಣನೇ ಆತನ ಮನವನ್ನು ಅರಿತು ಕುಚೇಲನಿಗೆ ಸಹಾಯ ಮಾಡುತ್ತಾನೆ. ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ಕುಚೇಲ ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿ ಕೊಂಡಿರುತ್ತಾನೆ. ಇದನ್ನು ನೋಡಿದ ಕೃಷ್ಣ, ನನಗಾಗಿ ಏನೋ ತಂದಿರುವ ಹಾಗಿದೆಯಲ್ಲ ಎಂದು ತಾನೇ ಆ ಗಂಟನ್ನು ಬಿಚ್ಚುತ್ತಾನೆ. ಅದರಲ್ಲಿದ್ದ ಅವಲಕ್ಕಿಯನ್ನು ಬಿಚ್ಚಿ ತಾನು ತಿಂದು ರುಕ್ಮಿಣಿಗೂ ಕೊಡುತ್ತಾನೆ. ಎಷ್ಟು ರುಚಿಯಾಗಿದೆ ನನ್ನ ಗೆಳೆಯ ತಂದಿರುವುದೆಂದು ರುಕ್ಮಿಣಿ ಜೊತೆ ಕೃಷ್ಣ ತಿನ್ನುತಾನೆ. ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲನ ಬಡತನವನ್ನು ಹೋಗಲಾಡಿಸಿರುತ್ತಾನೆ.

ಪುರಾಣಗಳಲ್ಲಿನ ಇಂಥಹ ಅಪ್ರತಿಮ ಗೆಳೆತನಗಳು ನಮ್ಮ ಕಣ್ಣಮುಂದೆಯೇ ಇದ್ದರೂ, ಇಂದಿನ ದಿನದ ಫ್ರೆಂಡ್ ಶಿಪ್ ನಲ್ಲಿ ಯಾವುದೇ ನಿಯತ್ತು, ಗೌರವ, ಪ್ರೀತಿ ಇಲ್ಲ. ಎಲ್ಲವೂ ಆಡಂಬರ, ದುಡ್ಡಿದ್ದವರ ಬಳಿ ಮಾತ್ರ ಗೆಳೆಯರಿರುತ್ತಾರೆ. ಅಧಿಕಾರ ಇದ್ದವರು ಇಲ್ಲದವರಿಗೆ ತಮ್ಮಿಂದ ಸಹಾಯ ಹಸ್ತ ನೀಡುತ್ತಿದ್ದರು. ಆದರೆ ಇಂದಿನ ಸ್ನೇಹಿತರು ಅಧಿಕಾರ ಬಂದ ಕೂಡಲೇ ಜೊತೆಯಾಗಿದ್ದವರು ಬೇರಾಗುತ್ತಾರೆ. ತಮ್ಮ ಸ್ವಾರ್ಥ ಹಾಗೂ ಹಿತಾಸಕ್ತಿಗಳಿಗೆ ಮಹತ್ವ ಕೊಡುತ್ತಾರೆಯೇ ಹೊರತು ಸ್ನೇಹಕ್ಕಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com