ಆನ್ ಲೈನ್ ಸ್ನೇಹ ಎಂಬ ಮಾಯಾಜಿಂಕೆ

ಆಕೆ ಆಗತಾನೇ ಹರೆಯಕ್ಕೆ ಕಾಲಿಟ್ಟ ಯುವತಿ. ಆಧುನಿಕ ಜೀವನಶೈಲಿಯನ್ನು ಅಪ್ಪಿಕೊಂಡು ಒಪ್ಪಿಕೊಂಡವಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಕೆ ಆಗತಾನೇ ಹರೆಯಕ್ಕೆ ಕಾಲಿಟ್ಟ ಯುವತಿ. ಆಧುನಿಕ ಜೀವನಶೈಲಿಯನ್ನು ಅಪ್ಪಿಕೊಂಡು ಒಪ್ಪಿಕೊಂಡವಳು. ಕಾಲೇಜಿಗೆ ಹೋಗುತ್ತಿದ್ದಳು. ಸಹಜವಾಗಿ ಆ ವಯಸ್ಸಲ್ಲಿ ಸ್ನೇಹಿತರು, ಸುತ್ತಾಟ,  ವೈಯಕ್ತಿಕ ನೋವು-ನಲಿವುಗಳನ್ನು ಸ್ನೇಹಿತರ ಬಳಿ ಹಂಚಿಕೊಳ್ಳುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು ಇವೆಲ್ಲವೂ ನಡೆಯುತ್ತಿದ್ದವು. ಹೈಸ್ಕೂಲಿನಿಂದ ಕಾಲೇಜಿಗೆ ಹೋಗುವಾಗ ಪರಿಚಯಸ್ಥ ನಾಲ್ಕಾರು ಸಂಖ್ಯೆಯಲ್ಲಿದ್ದ ಅವಳ ಸ್ನೇಹಿತರ ಬಳಗ ನೋಡು ನೋಡುತ್ತಿದ್ದಂತೆಯೇ 80-100ರ ಹತ್ತಿರ ತಲುಪಿತು. ಅದಕ್ಕೆ ವೇದಿಕೆಯಾಗಿದ್ದು ಸಾಮಾಜಿಕ ಜಾಲತಾಣ.

ಅದರಲ್ಲಿ ಆಕೆ ಒಂದಷ್ಟು ಸ್ನೇಹಿತರನ್ನು ಸಂಪಾದಿಸಿದಳು. ಅವರಲ್ಲಿ ಕೆಲವರು ಆಕೆಯ ಮನಸ್ಸಿಗೆ ಹತ್ತಿರವಾಗತೊಡಗಿದರು. ಒಬ್ಬ ಹುಡುಗ  ಆಕೆಯ ಭಾವನೆಗಳಿಗೆ ಆರಂಭದಲ್ಲಿ ಚೆನ್ನಾಗಿ ಸ್ಪಂದಿಸಿ ತೀರಾ ಆಪ್ತನಾದ. ದಿನಕ್ಕೊಂದು ಭಾವಚಿತ್ರಗಳನ್ನು, ಸೆಲ್ಫಿ ಫೋಟೋಗಳು, ಖಾಸಗಿ ವಿಷಯಗಳನ್ನು ಅವಳು ಆತನೊಡನೆ ಹಂಚಿಕೊಳ್ಳತೊಡಗಿದಳು. ಫೇಸ್ ಬುಕ್ ನಲ್ಲಿ ಮಾತ್ರ ಪರಿಚಯವಾಗಿದ್ದ ಹುಡುಗನನ್ನು ಅವಳು ವೈಯಕ್ತಿಕವಾಗಿ ಭೇಟಿಯಾಗಿರಲಿಲ್ಲ. ಆದರೆ ಸ್ನೇಹ ಮಿತಿಮೀರಿತ್ತು. ಆತ ಅವಳ ಸ್ನೇಹವನ್ನು ಕೆಲವು ಸಮಯ ಕಳೆದ ನಂತರ ದುರ್ಬಳಕೆ ಮಾಡಿಕೊಳ್ಳತೊಡಗಿದ. ಅವಳ ಜೀವನಕ್ಕೆ ಮಾರಕವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆಗೆ ಮುಂದಾದ. ಅಷ್ಟು ಹೊತ್ತಿಗೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ತನಗೆ ಬಂದೊದಗಿದ ದುಸ್ಥಿತಿಯನ್ನು ಮನೆಯವರಲ್ಲಿ, ಸ್ನೇಹಿತರ ಬಳಿ ಹೇಳಿಕೊಳ್ಳಲಾಗದೆ ಒದ್ದಾಡುತ್ತಾ ಒಂದು ದಿನ ಆ ಯುವತಿ ಪ್ರಾಣವನ್ನೇ ಬಿಟ್ಟಳು. ಅರಳಬೇಕಿದ್ದ ಹೂವು ಚಿಗುರಿನಲ್ಲೇ ಕಮರಿ ಹೋಯಿತು.

ಈ ಸನ್ನಿವೇಶ ಹೀಗಾದರೆ, ಇನ್ನೊಂದು ವಿಚಾರವನ್ನು ಇತ್ತೀಚೆಗೆ ನಮ್ಮ ಮಾಧ್ಯಮ ಕ್ಷೇತ್ರದ ಹಿರಿಯ ಸಂಪಾದಕಿಯೊಬ್ಬರು ನಮ್ಮ ಗಮನಕ್ಕೆ ತಂದರು. ಹೀಗೆ ಫೇಸ್ ಬುಕ್, ಟ್ವಿಟ್ಟರ್ ವಿಷಯ ಬಂದಾಗ ನಮ್ಮಲ್ಲಿ ''ನೀವು ನಿಮ್ಮ ಮಕ್ಕಳ ಸುಂದರ ಭಾವಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಕ್ಕೆ ಹೋಗ್ಬೇಡಿ, ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳದ್ದು'' ಎಂದರು.ಏಕೆಂದು ಕೇಳಿದಾಗ, ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿರುವವರು ಮಕ್ಕಳ ಭಾವಚಿತ್ರವನ್ನು ಪ್ರಿಂಟ್ ಹಾಕಿಸಿ ಶಾಲೆಗೆ ತಂದು ತೋರಿಸಿ ಮಗುವಿನ ಅಪ್ಪನ ಸ್ನೇಹಿತ ಎಂದು ಹೇಳಿಕೊಂಡು ಟೀಚರ್ ನ್ನು  ಯಾಮಾರಿಸಿ ಮಕ್ಕಳನ್ನು ಕದ್ದುಕೊಂಡು ಹೋಗುತ್ತಾರಂತೆ, ದೊಡ್ಡ, ದೊಡ್ಡ ಸಿಟಿಗಳಲ್ಲಿ ಈ ಮೋಸದ ಜಾಲವಿದೆಯಂತೆ ಎಂದು ವಿವರಿಸಿದರು.

ಸ್ನೇಹಿತರ ದಿನಾಚರಣೆ ಸಂದರ್ಭದಲ್ಲಿ ಈ ಎಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ. ಕೆಲವು ವರ್ಷಗಳ ಹಿಂದೆಯವರೆಗೆ ಯಾವ ವಯೋಮಾನದವರಿಗಾಗಲಿ ಸ್ನೇಹಿತರು ಬೆರಳೆಣಿಕೆ ಸಂಖ್ಯೆಯಲ್ಲಿ ಇರುತ್ತಿದ್ದರು. ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಕೀರ್ತನ, ಸುಶ್ಮಾ, ಲಕ್ಷಿ, ಪೂರ್ವಿಕ ಅಂತ ನಾಲ್ಕೈದು ಸ್ನೇಹಿತೆಯರ ಹೆಸರುಗಳನ್ನು ಮನೆಯಲ್ಲಿ ಹೇಳುತ್ತಿದ್ದರೆ, ಬಾಲಕರು ಶರತ್, ದರ್ಶನ್, ಯಶಸ್ ಹೀಗೆ ಶಾಲಾ ಸ್ನೇಹಿತರು,ಅಕ್ಕಪಕ್ಕದ ಮನೆ ಸ್ನೇಹಿತರ ಜೊತೆ ಸಂಗಡ ಹೊಂದಿರುತ್ತಿದ್ದರು.ಆ ಸ್ನೇಹಿತರು ಅವರ ಪೋಷಕರಿಗೂ ಪರಿಚಯವಿರುತ್ತಿದ್ದರು. ಕಾಲೇಜಿಗೆ ಹೋಗುವ ಯುವಕ-ಯುವತಿಯರಿಗೂ ಅಷ್ಟೆ, ಕ್ಲಾಸ್ ಮೇಟ್ಸ್, ರೂಂ ಮೇಟ್ಸ್, ಹಾಸ್ಟೆಲ್ ಸ್ನೇಹಿತರು, ಬಸ್ಸಿನಲ್ಲಿ ಹೋಗುವಾಗ ಇರುವ ಸ್ನೇಹಿತರು ಹೀಗೆ ಹೇಳುತ್ತಿದ್ದುದನ್ನು ನಾವು ನೋಡಿದ್ದೇವೆ.

ಆದರೆ ಈಗ ಸ್ನೇಹವೆಂಬುದು  ತನ್ನ ವ್ಯಾಪ್ತಿಯನ್ನು ಮೀರಿ ಬೆಳೆದಿದೆ. ಈಗಿನ ಯುವಕ-ಯುವತಿಯರು ''ನನ್ನ ಫೇಸ್ ಬುಕ್ ಫ್ರೆಂಡ್, ಆಲ್ ಲೈನ್ ಚಾಟಿಂಗ್ ಫ್ರೆಂಡ್, ಮೊಬೈಲ್ ಫ್ರೆಂಡ್ ಅಂತ ಒಂದಷ್ಟು ಸ್ನೇಹಿತರನ್ನು ತೋರಿಸುವುದನ್ನು ನೋಡಬಹುದು.ಹೈಸ್ಕೂಲ್ ಗೆ ಹೋಗುವ ಮಕ್ಕಳಲ್ಲಿಯೂ ಮೊಬೈಲು, ಇಂಟರ್ ನೆಟ್ ಸಂಪರ್ಕವಿರುವುದರಿಂದ ಸ್ನೇಹಿತರ ಸಂಪಾದನೆಗೆ ಈಗ ಬರಗಾಲವಿಲ್ಲ.

ಈ ಸಾಮಾಜಿಕ ಜಾಲತಾಣಗಳು ವಿಶಿಷ್ಟ ಅಂತರ್ಜಾಲ ಸೇವೆಯಾಗಿದ್ದು, ಕಳೆದೊಂದು ದಶಕದಿಂದ ನಮ್ಮ ಜೀವನದಲ್ಲಿ ಮುಖ್ಯವಾಗಿ ಯುವಜನರ ಮನಸ್ಸಿನಲ್ಲಿ ಹಾಸುಹೊಕ್ಕು ವಿಶೇಷ ಪ್ರಭಾವ ಬೀರುತ್ತಿವೆ. ತನ್ನ  ಮೂಲಕ ಬಳಕೆದಾರರಲ್ಲಿ ಸಾಮಾಜಿಕ ಜಾಲ ಅಥವಾ ಸಂಬಂಧಗಳನ್ನು ಬೆಸೆದು, ಅವರು ತಮ್ಮ ನಿಜ ಜೀವನದ ಆಗುಹೋಗುಗಳು, ಆಸಕ್ತಿಗಳು, ಚಟುವಟಿಕೆಗಳು, ವಿಶೇಷವೆನಿಸುವ ವಿಚಾರಗಳು, ಹಲವು ಹಿನ್ನೆಲೆಗಳು, ಇತ್ಯಾದಿಗಳನ್ನು ಇತರೆ ಬಳಕೆದಾರರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತವೆ. Facebook, Twitter, LinkedIn, Google+, Instagram ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಸಾಮಾಜಿಕ ಜಾಲತಾಣಗಳು. ಇಂದು ಈ ಎಲ್ಲ ಸಾಮಾಜಿಕ ತಾಣಗಳು ವಯೋಮಿತಿಯ ಎಲ್ಲೆ ಮೀರಿ ಪ್ರತಿಯೊಬ್ಬರ ಬೆರಳ ತುದಿಗಳನ್ನು ಅಲ್ಲಾಡಿಸುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಾಗಬೇಕೆಂದರೆ ಭೇಟಿ, ಮಾತುಕತೆ, ಸಂಬಂಧಗಳ ಬೆಸುಗೆ, ಆಸಕ್ತಿಯ ವಿಚಾರಗಳು ಒಂದೇ ಆಗಬೇಕೆಂದಿಲ್ಲ. ನಿಮಿಷಗಳಲ್ಲಿ ಸ್ನೇಹವಾಗುತ್ತದೆ.ಒಮ್ಮೆ ನೀವು ನಿಮ್ಮ ಫೇಸ್ ಬುಕ್ ಪುಟವನ್ನು ತೆರೆದು ನೋಡಿದರೆ ಅಲ್ಲಿ ಎಷ್ಟು ''Friend request ಇರುತ್ತವೆ, People you may know'' ಅಂತ ಎಷ್ಟು ಮಂದಿಯ ಲೀಸ್ಟ್ ಬರುತ್ತವೆಯಲ್ಲವೇ? ನಿಮಿಷಗಳಲ್ಲಿ ಅವರ ಜೊತೆ ಫ್ರೆಂಡ್ ಆಗಬಹುದು, ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು.

ಆದರೆ ಈ ಸೋಷಿಯಲ್ ಮೀಡಿಯಾ ಸ್ನೇಹಿತರ ಸಂಬಂಧ ಎಷ್ಟರ ಮಟ್ಟಿಗೆ ಬಂಧವಾಗಿರುತ್ತವೆ, ಎಷ್ಟು ವಿಶ್ವಾಸಾರ್ಹ ಎಂಬುದು ಮೂಲಭೂತ ಪ್ರಶ್ನೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಇಂದು ಜಾತಿ, ಲಿಂಗ, ಭಾಷೆ, ಪ್ರದೇಶ ಎಲ್ಲವನ್ನೂ ದಾಟಿ ಬೆಳೆದಿದೆ, ನಮ್ಮವರು ತಮ್ಮವರು ಎಲ್ಲರೂ ಅಲ್ಲಿ ಸಿಗುತ್ತಾರೆಂಬ ಕಾತುರದಲ್ಲಿ, ಅಪರಿಚಿತರ ಸಹವಾಸವೂ ಆಗುವುದು ಸಾಮಾನ್ಯ. ಆದರೆ, ಈ ಅಪರಿಚಿತರ ವಿವರವನ್ನು ತಿಳಿಯದೇ, ವೈಯುಕ್ತಿಕ ವಿಚಾರಗಳನ್ನೆಲ್ಲಾ ಅವರೊಡನೆ ಹಂಚಿಕೊಂಡರೆ ತೊಂದರೆ ಕಟ್ಟಿಟ್ಟ ಬುತ್ತಿ.

ಇನ್ನು ವಯಸ್ಕರೂ ಈ ರೀತಿಯ ದುರಂತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ತಮ್ಮ ಮಧುಚಂದ್ರದಲ್ಲಿ ತೆಗೆದ ಚಿತ್ರಗಳನ್ನೋ, ಮತ್ಯಾವ ಪಾರ್ಟಿಗಳಲ್ಲಿ ತೆಗೆಸಿದ ಚಿತ್ರಗಳನ್ನೋ ಈ ತಾಣಗಳಲ್ಲಿ ಹಾಕುವಾಗ, ಅದು ಯಾರರವರೆಗೆ ಮುಟ್ಟಬಲ್ಲದು ಎಂಬುದು ಕೆಲವೊಮ್ಮೆ ಊಹಿಸಲೂ ಅಸಾಧ್ಯ. ಈ ತಾಣಗಳೇನೋ ಹಂಚಿಕೆಯ ಮಿತಿಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ನೀಡಿರುತ್ತವೆ. ಆದರೆ, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಸುಮ್ಮನೇ ಹಂಚಿಬಿಟ್ಟಲ್ಲಿ, ಆ ಅಚಾತುರ್ಯದಿಂದ ಅನಾಹುತವಾಗಲೂಬಹುದು.

ಇಂದಿನ ಯುಗದಲ್ಲಿ ನಾವು ಸಾಮಾನ್ಯವಾಗಿ ನೋಡುವಂತೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಮ್ಮ ಮನಸ್ಸಿನ ಭಾವನೆಗಳನ್ನು, ಸಂತೋಷ-ದುಖಗಳನ್ನು, ನೋವು-ನಲಿವುಗಳನ್ನು ತಂದೆ-ತಾಯಿಗಳ ಜೊತೆ ಅಥವಾ ಮನೆಯವರೊಂದಿಗೆ ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸ್ನೇಹಿತರ ಜೊತೆ ಮನಸ್ಸು ಬಿಚ್ಚಿ ಹೇಳುತ್ತಾರೆ. ಇಂದು ಹೆಚ್ಚಿನ ಯುವಕ-ಯುವತಿಯರಲ್ಲಿ ಖಾಸಗಿ ಕಂಪ್ಯೂಟರ್, ಲ್ಯಾಪ್ ಟಾಪ್ ಇರುತ್ತವೆ. ಕಲಿಕೆ, ಉದ್ಯೋಗ ಎಂದು ಮನೆಯವರಿಂದ ದೂರವಿರುತ್ತಾರೆ. ಅವರು ಯಾರ ಜೊತೆ ಹೇಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮನೆಯವರಿಗೂ ಗೊತ್ತಿರುವುದಿಲ್ಲ. ಇಲ್ಲಿ ಉತ್ತಮ ಸ್ನೇಹಿತರು ಸಿಕ್ಕಿದರೆ ಅದೃಷ್ಟ, ಇಲ್ಲದಿದ್ದರೆ ಅವರ ವಿಷಯ ಎಲ್ಲಾ ತಿಳಿದುಕೊಂಡು ದುರುಪಯೋಗಪಡಿಸುವುದು ಹೆಚ್ಚು. 

ಸಾಮಾಜಿಕ ಜಾಲತಾಣಗಳಲ್ಲಿ ಬೆಳೆಯುವ ಸ್ನೇಹ ನಿಜ ಜೀವನದ ಸ್ನೇಹಕ್ಕೆ ಹತ್ತಿರವಾಗಿರುವುದು ತೀರಾ ಕಡಿಮೆ ಎನ್ನುತ್ತದೆ ಒಂದು ಅಧ್ಯಯನ. ಯಾರೊಬ್ಬರ ಫೇಸ್ ಬುಕ್ ಪುಟ ತೆರೆದು ನೋಡಿದರೂ ಅಲ್ಲಿ ಕಡಿಮೆಯೆಂದರೂ ಒಂದು 20-25 ಜನ ಸ್ನೇಹಿತರಿರುತ್ತಾರೆ. ಅವರಲ್ಲಿ ಎಷ್ಟು ಮಂದಿ ಜೊತೆ ನಾವು ಸಂಪರ್ಕದಲ್ಲಿರುತ್ತೇವೆ ಹೇಳಿ? ಹೆಚ್ಚಿನವರ ಜೊತೆ ನಮ್ಮ ಫ್ರೆಂಡ್ ಶಿಪ್ ಅವರ ಫೋಟೋಗಳನ್ನು ಲೈಕ್ ಮಾಡೋದು, ಹುಟ್ಟುಹಬ್ಬ ಬಂದರೆ ಒಂದು ಸಾಲಿನಲ್ಲಿ ಶುಭಾಶಯ ಕಳುಹಿಸುವುದು, ಅವರ ಲಿಂಕ್ ಗಳು ಇಷ್ಟವಾದರೆ ಶೇರ್ ಮಾಡುವುದು ಇಷ್ಟಕ್ಕೆ ಮುಗಿಯುತ್ತದೆ. ಇಲ್ಲಿ ಬಾಂಧವ್ಯ ಎಲ್ಲಿ ಬಂತು? ತಂತ್ರಜ್ಞಾನದಲ್ಲಿ ತಾಂತ್ರಿಕ ಸಂಬಂಧದಲ್ಲಿಯೇ ಸ್ನೇಹ ಕೊನೆಗೊಳ್ಳುತ್ತದೆಯೇ ಹೊರತು ಅಲ್ಲಿ ಭಾವನಾತ್ಮಕ ಸಂಬಂಧವಿರುವುದಿಲ್ಲ.

ಸಾಮಾಜಿಕ ಜಾಲತಾಣ ಎಂದರೆ ಪರಸ್ಪರ ಚರ್ಚೆ, ಸಂವಾದ, ವಿಚಾರ ವಿನಿಮಯ, ಮಾಹಿತಿ ಕೊಡುಕೊಳ್ಳುವಿಕೆ, ಜ್ಞಾನಾರ್ಜನೆಗೆ ಅವಕಾಶದೊಂದಿಗೆ ನಮ್ಮನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಂದು ಸೂಕ್ತ ವೇದಿಕೆ. ಆದರೆ ಇದನ್ನು ಯುವಜನತೆ ಕೆಲವು ಸಲ ಬಳಸಿಕೊಳ್ಳುವುದು ಕಾಡುಹರಟೆ, ಅನಗತ್ಯ, ಅಶ್ಲೀಲ ಟೀಕೆಗಳಿಗೆ. ಇಲ್ಲಸಲ್ಲದ ವಿಷಯಗಳಲ್ಲಿ, ಇನ್ನೊಬ್ಬರ ವಿಷಯಕ್ಕೆ ತಲೆಹಾಕುತ್ತಾರೆ.

ಜೀವನದ ನಿಜವಾದ ಸ್ನೇಹಿತರು ಎಂದರೆ ಅಲ್ಲಿ ಇಬ್ಬರಲ್ಲೂ ಸಂಕೋಚ, ಮುಜುಗರ, ಅಹಂ, ವಿಷಯ ಮುಚ್ಚಿಡುವ ಪ್ರಶ್ನೆ ಬರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಒಂದು ಹಂತದವರೆಗೆ ಮಾತ್ರ. ಅಲ್ಲಿ ನಮ್ಮ ಖಾಸಗಿ ವಿಷಯಗಳನ್ನು ಬಯಲು ಮಾಡಲಾಗುವುದಿಲ್ಲ. ನಿಜವಾದ ಸ್ನೇಹ ಒಂದು ಗಳಿಗೆಯಲ್ಲಿ, ಒಂದು ದಿನದಲ್ಲಿ ಹುಟ್ಟಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಸಮಯಗಳೇ ಹಿಡಿಯುತ್ತವೆ.

ಈ ಸಾಮಾಜಿಕ ತಾಣಗಳು ಮಾನವನ ಸಹಜ ಸ್ನೇಹ ಬಾಂಧವ್ಯವನ್ನು ಆಕ್ರಮಿಸಲು ಸಾಧ್ಯವಿಲ್ಲ. ಇವು ಕೇವಲ ತ್ವರಿತ, ಸಾಮಾಜಿಕ ಅನುಕೂಲ ವ್ಯವಸ್ಥೆಗಳು. ಇವುಗಳನ್ನು ನಾವು ಉಚಿತವಾಗಿ ಬಳಸಿಕೊಳ್ಳುವಾಗ ಕೆಲವು ಸಾಮಾಜಿಕ ಜವಾಬ್ದಾರಿಗಳನ್ನು ತಿಳಿದುಕೊಂಡರೆ  ವೈಯಕ್ತಿಕವಾಗಿ ಮತ್ತು ಸಮಾಜಕ್ಕೆ ಅನುಕೂಲ. ತಂತ್ರಜ್ಞಾನವಿರುವುದು ನಮ್ಮ ಅನುಕೂಲಕ್ಕೆ ಹೌದು, ಆದರೆ ಅದನ್ನು ಹಿತಮಿತವಾಗಿ ಬಳಸಿಕೊಳ್ಳಬೇಕೆಂಬ ಅನುಭವಸ್ಥರ ಮಾತು ಸಾರ್ವಕಾಲಿಕ ಸತ್ಯ. 

-ಸುಮನಾ ಉಪಾಧ್ಯಾಯ
ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com