
ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದೇ ಪ್ರಸಿದ್ಧವಾದ ಹುಬ್ಬಳಿ ತಾಲೂಕಿನ ಛಬ್ಬಿ ಗಣೇಶ, ಈಗ ಕೇವಲ ಹುಬ್ಬಳ್ಳಿ- ಧಾರವಾಡ ಸುತ್ತಮುತ್ತಲಿನ ಜನತೆಗೆ ಮಾತ್ರ ಸೀಮಿತನಲ್ಲ. ಗೋವಾ, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಎಲ್ಲೆಡೆ ಛಬ್ಬಿ ಗಣೇಶನಿಗೆ ನಡೆದುಕೊಳ್ಳುವರಿದ್ದಾರೆ. ಮೂರು ದಿನಗಳ ಕಾಲ ಗ್ರಾಮದ ಕುಲಕರ್ಣಿ ಮನೆತನದ ಆರು ಮನೆಯಲ್ಲಿ ಪ್ರತಿಷ್ಠಾಪನೆ ಆಗುವ ಗಣೇಶನ ದರ್ಶನ ಮಾಡಿ, ಆಶೀರ್ವಾದ ಪಡೆಯುತ್ತಾರೆ.
ಛಬ್ಬಿಯ ಕುಲಕರ್ಣಿ ಮನೆತನ ಪ್ರತಿಷ್ಠಾಪಿಸುವ ಗಣೇಶನ ಬಣ್ಣ ಕೆಂಪು. ಎಲ್ಲ ಆರು ಗಣೇಶಗಳ ಬಣ್ಣವೂ ಕೆಂಪೇ. ಇದು ಇಲ್ಲಿನ ವೈಶಿಷ್ಟ್ಯ. ಅಷ್ಟೇ ಅಲ್ಲ, ಎರಡು ದಶಕಗಳಿಂದ ಛಬ್ಬಿ ಗಣೇಶನ ಪ್ರಸಿದ್ಧಿ ಹೆಚ್ಚಿದೆ. ಕುಲಕರ್ಣಿ ಮನೆತನ ಮೊದಲಿನಿಂದಲೂ ಮೂರು ದಿನಗಳ ಗಣೇಶ ಪ್ರತಿಷ್ಠಾಪನೆಯನ್ನು ತಲೆತಲಾಂತರಗಳಿಂದ ಮಾಡಿಕೊಂಡು ಬಂದಿದ್ದರೂ, ಎರಡು ದಶಕದಲ್ಲಿ ಈ ಮನೆತನದ ಗಣೇಶನ ಹಬ್ಬ ಸಾರ್ವತ್ರಿಕವಾಗಿದೆ. ಭಕ್ತರ ಭಾಷೆಯಲ್ಲಿ ಹೇಳುವುದಾದರೆ, ‘ಛಬ್ಬಿ ಗಣೇಶ ಬೇಡಿದ ವರವನ್ನು ಕರುಣಿಸುವ ದೇವರು’.
ಕುಲಕರ್ಣಿ ಮನೆತನದಲ್ಲಿ ಮೊದಲು ನಾಲ್ಕು ಕುಟುಂಬಗಳಲ್ಲಿ ಮೂರು ದಿನ ಕೆಮ್ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕುಟುಂಬಗಳ ವಿಘಟನೆಯ ನಂತರ ಈಗ ಕುಲಕರ್ಣಿ ಮನೆತನದ ಒಟ್ಟು ಆರು ಅಣ್ಣತಮ್ಮಂದಿರು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ಕಾಲಮಾನಕ್ಕೆ ಅನುಗುಣವಾಗಿ ಮನೆಗಳು ಬೇರೆಯಾಗಿರಬಹುದು. ಆದರೆ ಕುಲಕರ್ಣಿ ಮನೆತನದ ಮನಸ್ಸುಗಳು ಒಂದೇ. ಆದ್ದರಿಂದಲೇ ಆರೂ ಕುಟುಂಬಗಳ ಗಣೇಶ ಮೂರ್ತಿಗಳನ್ನು ಗಣೇಶನ ಹಬ್ಬದ ದಿನ ಏಕಕಾಲಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಅವರವರ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತರು ಎಲ್ಲ ಆರೂ ಮನೆಗಳಿಗೆ ಹೋಗಿ ಗಣೇಶ ದರ್ಶನ ಪಡೆದರಷ್ಟೇ ಒಳಿತಾಗುತ್ತದೆ ಎಂಬ ನಂಬುಗೆ ಹೊಂದಿದ್ದಾರೆ.
ವರ್ಷದಿಂದ ವರ್ಷಕ್ಕೆ ಛಬ್ಬಿ ಗಣಪತಿ ಮಹತ್ವ ಹೆಚ್ಚುತ್ತಿದ್ದು, ಗಣೇಶ ಹಬ್ಬದಲ್ಲಿ ಪುಣ್ಯಕ್ಷೇತ್ರವೇ ಆಗಿ ಹೋಗಿದೆ. ಇಲ್ಲಿಗೆ ಬರುವ ಭಕ್ತಾದಿಗಳ ಒಂದು ಅರ್ಥದಲ್ಲಿ ವರೂರು ಬಳಿಯ ಛಬ್ಬಿ ಗಣಪ, ಉತ್ತರ ಕನ್ನಡ ಇಡಗುಂಜಿ ಗಣಪನಷ್ಟೇ ಪ್ರಸಿದ್ಧಿಗೆ ಬಂದಿದ್ದಾನೆ. 1992ರ ನಂತರ ಹಬ್ಬದ ಮೂರು ದಿನಗಳಲ್ಲಿ ಛಬ್ಬಿ ಗ್ರಾಮದಲ್ಲಿ ಜಾತ್ರೆಯೇ ನಡೆಯಲಾರಂಭಿಸಿತು. ಭಕ್ತರ ನಿಯಂತ್ರಣಕ್ಕೆ ಪೊಲೀಸರೂ ಮೂರು ದಿನಗಳ ಕಾಲ ಇಲ್ಲಿ ಕ್ಯಾಂಪ್ ಮಾಡುತ್ತಾರೆ.
Advertisement