ಗಣೇಶ
ಗಣೇಶ

ಗಣೇಶನಿಗೆ ಗರಿಕೆ ಅರ್ಪಿಸುವುದು ಯಾಕೆ?

ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ...
Published on

ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ಚತುರಾವೃತ್ತಿ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಗಣಪತಿಯನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯೂ ಇದೆ. ಓಂ ಔಷಧಿತಂತು ನಮಃ ಎನ್ನುವುದು ವಿಘ್ನೇಶ್ವರನ ಸಹಸ್ರ ನಾಮಗಳಲ್ಲಿ ಒಂದು.

ಗಣೇಶ ಪೂಜೆಗೆ ಗರಿಕೆ  ಅಥವಾ ದೂರ್ವೆ ಯಾಕೆ ಬೇಕು?

 ವ್ಯುತ್ಪತ್ತಿ ಮತ್ತು ಅರ್ಥ: ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.


ಗರಿಕೆಯನ್ನು ಅರ್ಪಿಸುವುದರ ಕಾರಣಗಳು

ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.

ಪೌರಾಣಿಕ ಕಾರಣ: ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.’

ಆಯುರ್ವೇದಕ್ಕನುಸಾರ ಕಾರಣ
: ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ.



ದೂರ್ವೆ ಹೇಗಿರಬೇಕು?: ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ದೂರ್ವೆಯು ಒಂದು ರೀತಿಯ ಹುಲ್ಲಿನಂತೆಯೇ ಇರುತ್ತದೆ. ದೂರ್ವೆಗಳಿಗೆ ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.

 ದೂರ್ವೆಯು ಎಷ್ಟು ಉದ್ದವಾಗಿರಬೇಕು?: ಮೊದಲು ಗಣಪತಿಯ ಮೂರ್ತಿಯು ಸುಮಾರು ಒಂದು ಮೀಟರಿನಷ್ಟು ಎತ್ತರವಾಗಿರುತ್ತಿತ್ತು. ಆದುದರಿಂದ ಸಮಿತ್ತಿನಷ್ಟು ಉದ್ದದ ದೂರ್ವೆಗಳನ್ನು ಅರ್ಪಿಸುತ್ತಿದ್ದರು. ಮೂರ್ತಿಯೇ ಸಮಿತ್ತುಗಳ ಆಕಾರದಷ್ಟು ಇದ್ದರೆ ಚಿಕ್ಕ ಆಕಾರದ ದೂರ್ವೆಗಳನ್ನು ಅರ್ಪಿಸಬೇಕು; ಮತ್ತು ಮೂರ್ತಿಯು ತುಂಬಾ ದೊಡ್ಡದಾಗಿದ್ದರೂ ಸಮಿತ್ತಿನ ಆಕಾರದ ದೂರ್ವೆಗಳನ್ನೇ ಅರ್ಪಿಸಬೇಕು. ಸಮಿತ್ತುಗಳನ್ನು ಒಟ್ಟಿಗೆ ಕಟ್ಟುವಂತೆ ದೂರ್ವೆಗಳನ್ನೂ ಒಟ್ಟಿಗೆ ಕಟ್ಟುತ್ತಾರೆ. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ. ಇವುಗಳಿಂದ ಗಣಪತಿಯ ಪವಿತ್ರಕಗಳು ಹೆಚ್ಚು ಕಾಲ ಮೂರ್ತಿಯಲ್ಲಿ ಉಳಿಯುತ್ತವೆ.

 ದೂರ್ವೆಗಳ ಸಂಖ್ಯೆ ಎಷ್ಟಿರಬೇಕು?: ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ ೩ ಅಥವಾ ೫, ೭, ೨೧ ಇತ್ಯಾದಿ) ಅರ್ಪಿಸುತ್ತಾರೆ. ಬೆಸ ಸಂಖ್ಯೆಗಳಿಂದ ಮೂರ್ತಿಯಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಗಣಪತಿಗೆ ವಿಶೇಷವಾಗಿ ೨೧ ದೂರ್ವೆಗಳನ್ನು ಅರ್ಪಿಸುತ್ತಾರೆ. ೨೧ ಈ ಸಂಖ್ಯೆಯು ಸಂಖ್ಯಾಶಾಸ್ತ್ರಕ್ಕನುಸಾರ ೨ + ೧=೩ ಹೀಗೆ ಆಗಿದೆ. ಶ್ರೀ ಗಣಪತಿಯು ‘೩’ ಈ ಸಂಖ್ಯೆಗೆ ಸಂಬಂಧಿಸಿದ್ದಾನೆ. ‘೩’ ಈ ಸಂಖ್ಯೆಯು ಕರ್ತ, ಧರ್ತದೊಂದಿಗೆ ಹರ್ತವೂ ಆಗಿರುವುದರಿಂದ ಈ ಶಕ್ತಿಯಿಂದ ೩೬೦ ಲಹರಿಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ. ಸಮ ಸಂಖ್ಯೆಗಳಲ್ಲಿ ದೂರ್ವೆಗಳನ್ನು ಅರ್ಪಿಸಿದರೆ ೩೬೦ ಲಹರಿಗಳು ಹೆಚ್ಚಿಗೆ ಆಕರ್ಷಿತವಾಗುತ್ತವೆ ಮತ್ತು ನಂತರ ೧೦೮ ಲಹರಿಗಳೂ ಆಕರ್ಷಿತವಾಗುತ್ತವೆ. (ರಾವಣನು ಪ್ರತಿದಿನ ೩೬೦ + ೧೦೮ = ೪೬೮ ದೂರ್ವೆಗಳನ್ನು ಅರ್ಪಿಸುತ್ತಿದ್ದನು.)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ "ಶ್ರೀ ಗಣಪತಿ")

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com