ಗಣೇಶನಿಗೆ ಏಕೆ ಮೋದಕ ನೈವೇದ್ಯವನ್ನೇ ಮಾಡಬೇಕು...?

ಮೋದಕವೇ ಏಕೆ..? ಗಣೇಶನಿಗೆ ತೆಂಗಿನಕಾಯಿ ಜತೆಗೆ ತಿಂಡಿಗಳನ್ನು ಏಕೆ ನೈವೇದ್ಯ ಮಾಡಬೇಕು ಎಂಬದನ್ನು ತಿಳಿದುಕೊಳ್ಳೋಣ....
ಗಣೇಶನಿಗೆ ಪ್ರಿಯವಾದ ಮೋದಕ
ಗಣೇಶನಿಗೆ ಪ್ರಿಯವಾದ ಮೋದಕ

ಇಡೀ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ ಆನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಗಣೇಶ ಚತುರ್ಥಿಯಂದು ಬಹುತೇಕ ಎಲ್ಲರೂ ತಿಂಡಿಗಳನ್ನು ತಯಾರಿಸಿ ನೈವೇದ್ಯ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ. ಹಣ್ಣು ಕಾಯಿಯನ್ನೂ ನೈವೇದ್ಯ ಮಾಡುವುದು ಪದ್ಧತಿ. ಆದರೆ ಗಣೇಶನಿಗೆ ತೆಂಗಿನಕಾಯಿ ಜತೆಗೆ  ತಿಂಡಿಗಳನ್ನು ಏಕೆ ನೈವೇದ್ಯ ಮಾಡಬೇಕು ಎಂಬದನ್ನು ತಿಳಿದುಕೊಳ್ಳೋಣ.

ಗಣೇಶ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಮೋದಕದ ನೈವೇದ್ಯ ಮಾಡಿ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ  ಗಜಮುಖ ಬೇಡಿದ ವರ ನೀಡುತ್ತಾನೆ. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ಮಾಡಬೇಕು. ಗಣೇಶನಿಗೆ ಪ್ರಿಯವಾದ ಮೋದಕ, ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು. ಪಟ್ಟಿ ಉದ್ದ ಇದೆ. ಒಂದೊಂದರ ರುಚಿಯೂ ವಿಶಿಷ್ಟ; ಅದ್ಭುತ, ಗಣೇಶನಿಗೆ ವೈವಿಧ್ಯಮಯ ನೈವೇದ್ಯ. ಗಣಪನಿಗೆ ಅತಿ ಹೆಚ್ಚು ಮುದ ನೀಡುವುದು ಮೋದಕ.  


ನೈವೇದ್ಯದ ಹಿನ್ನೆಲೆ ಏನು?
ತೆಂಗಿನಕಾಯಿ ನೈವೇದ್ಯ ಮಾಡುವುದಕ್ಕೆ ಪುಟ್ಟದೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಅದು ಅತ್ಯಂತ ರೋಚಕವಾದದ್ದು. ಒಮ್ಮೆ ಶಿವನು ಗಣೇಶನಿಗೆ ತನ್ನ ಶಿರವನ್ನು ಬಲಿಯಾಗಿ ಸಮರ್ಪಿಸಲು ಹೇಳಿದನಂತೆ. ಈ ಮಹಾಬಲಿಯ ಸಂಕೇತವಾಗಿ ಶಿವನು ಮೂರು ರಂಧ್ರಗಳಿರುವ (ಶಿವನ ಮೂರು ಕಣ್ಣುಗಳಂತೆ ಇರುವ) ಒಂದು ತೆಂಗಿನ ಕಾಯಿಯನ್ನು ಸೃಷ್ಟಿಸಿ ಗಣೇಶನ ಎದುರಿನಲ್ಲಿ ಒಡೆದನಂತೆ. ಅಂದಿನಿಂದ ಗಣಾಧಿಪತಿ ಗಣೇಶನೂ ಸೇರಿದಂತೆ ಎಲ್ಲ ದೇವರಿಗೂ ಹಣ್ಣುಕಾಯಿ ನೈವೇದ್ಯ ಮಾಡುವುದು ಚಾಲ್ತಿಗೆ ಬಂತು.

ಮೋದಕವೇ ಏಕೆ..?

ಗಣೇಶನಿಗೆ ಎಳ್ಳುಂಡೆ, ಮೋದಕ, ಕಾಯಿಕಡುಬುಗಳನ್ನು ಕಡ್ಡಾಯವಾಗಿ ಮಾಡಿ ಸಮರ್ಪಣೆ ಮಾಡಲಾಗುತ್ತದೆ. ಗಣೇಶನ ಜನ್ಮದಿನದಂದು ಪಾರ್ವತಿ ಮಗನಿಗೆ ಇವೇ ಭಕ್ಷ್ಯಗಳನ್ನು ಮಾಡಿ ಉಣಬಡಿಸುತ್ತಿದ್ದಳು ಎನ್ನುತ್ತದೆ ಇನ್ನೊಂದು ಪೌರಾಣಿಕ ಮೂಲ. ಅದಕ್ಕಾಗಿ ಗಣೇಶ ಚತುರ್ಥಿಯಂದು ಇವನ್ನೇ ಮನೆಮನೆಗಳಲ್ಲಿ ಮಾಡಿ ನೈವೇದ್ಯಕ್ಕೆ ಇಡುವುದು ಪದ್ಧತಿ. ಚೌತಿಯ ದಿನ ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ಮಾಡದಿದ್ದರೆ ಹಬ್ಬವೇ ಅಪೂರ್ಣ. ಗಣಪತಿಗೆ ಯಾಕೆ ಮೋದಕ ಪ್ರಿಯವಾದದ್ದು ಎನ್ನುವುದನ್ನು `ಪದ್ಮ ಪುರಾಣದಲ್ಲಿ ವರ್ಣಿಸಲಾಗಿದೆ.

ಒಮ್ಮೆ ದೇವಾನುದೇವತೆಗಳು ಶಿವ-ಪಾರ್ವತಿ ಮನೆಗೆ ಭೇಟಿ ನೀಡುತ್ತಾರೆ. ಆಗ ವಿಶಿಷ್ಟ ಪರಿಮಳ ಮತ್ತು ರುಚಿ ಇರುವ ಮೋದಕವನ್ನು ತರುತ್ತಾರೆ. ಇದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿಯ ನಂಬಿಕೆ.
 
ಒಂದೇ ಒಂದು ಇದ್ದ ಈ ಮೋದಕವನ್ನು ಗಣೇಶ ಮತ್ತು ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ. ಕೊನೆಗೆ ಮಕ್ಕಳಿಬ್ಬರನ್ನು ಕರೆದು `ನಿಮ್ಮಿಬ್ಬರಲ್ಲಿ ಯಾರಲ್ಲಿ ನಿಜವಾದ ಶ್ರದ್ಧೆ, ಭಕ್ತಿ ಇದೆಯೆಂದು ಸಾಧಿಸಿ ತೋರಿಸುವಿರೋ ಅವರಿಗೆ ಮೋದಕ ಸಿಗುತ್ತದೆ~ ಎಂದು ಹೇಳುತ್ತಾಳೆ.

ತಕ್ಷಣ ಕಾರ್ತಿಕ ಶ್ರದ್ಧೆ ಮತ್ತು ಭಕ್ತಿಯ ಹುಡುಕಾಟಕ್ಕಾಗಿ ತನ್ನ ವಾಹನ ಏರಿ ಅಧ್ಯಾತ್ಮ ಮತ್ತು ಭಕ್ತಿ ಕ್ಷೇತ್ರಗಳನ್ನು ಹುಡುಕುತ್ತಾ ಹೊರಡುತ್ತಾನೆ. ಆದರೆ ಗಣೇಶ ಮಾತ್ರ ಶಿವ-ಪಾರ್ವತಿಯರ ಹತ್ತಿರವೇ ಇದ್ದುಬಿಡುತ್ತಾನೆ. ತಂದೆ ತಾಯಿಯನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವುದಕ್ಕಿಂತ ಹೆಚ್ಚಿನ ಶ್ರದ್ಧೆ, ಭಕ್ತಿ ಯಾವುದೇ ಪವಿತ್ರ ಸ್ಥಳಗಳನ್ನು ಭೇಟಿ ಮಾಡುವುದರಿಂದ ಸಿಗುವುದಿಲ್ಲ ಎಂದು ಹೇಳುತ್ತಾನೆ. ಈ ಮಾತುಗಳಿಂದ ಪ್ರಭಾವಿತಳಾದ ಪಾರ್ವತಿ ಮೋದಕವನ್ನು ಗಣೇಶನಿಗೇ ನೀಡುತ್ತಾಳೆ. ಅಂದಿನಿಂದ ಗಣೇಶ ಹಬ್ಬಕ್ಕೆ ಮೋದಕ ನೈವೇದ್ಯ ಮಾಡುವುದು ಚಾಲ್ತಿಗೆ ಬಂತು.

ಗಣಪನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:

  • 1 ಕಪ್ ಎಳ್ಳು,
  • 1ಕಪ್  ಹುರಿಗಡಲೆ,
  • 6 ಚಮಚ ಗಸಗಸೆ,
  • 1ಕೊಬ್ಬರಿ,
  • ನಾಲ್ಕು ಅಚ್ಚು ಬೆಲ್ಲ ಅಥವಾ ಒಂದೂವರೆ ಕಪ್ ಸಕ್ಕರೆ,
  •  1 ಕಪ್ ಮೈದಾಹಿಟ್ಟು ಅಥವಾ 1 ಕಪ್ ಚಿರೋಟಿ ರವೆ,
  •  ಕರಿಯಲು ಎಣ್ಣೆ,
  • ಏಲಕ್ಕಿ 4.
ಮಾಡುವ ವಿಧಾನ:
  • ಹುರಿದು ಕುಟ್ಟಿದ ಎಳ್ಳು, ಗಸಗಸೆ ಹಾಗೂ ಕೊಬ್ಬರಿ ತುರಿ, ಏಲಕ್ಕಿಪುಡಿ, ಬೆಲ್ಲದ ಪುಡಿ ಬೆರಸಿಟ್ಟುಕೊಳ್ಳಬೇಕು.
  • ಮೈದಾಹಿಟ್ಟಿಗೆ ಅರ್ಧ ಸ್ಪೂನ್ ಉಪ್ಪು, 2 ಸ್ಪೂನ್ ತುಪ್ಪ ಮತ್ತು ನೀರು ಹಾಕಿ ಗಟ್ಟಿಯಾಗಿ ಕಲೆಸಬೇಕು ನಂತರ ಅವನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಹಪ್ಪಳ ರೀತಿ ಲಟ್ಟಿಸಿಕೊಳ್ಳಬೇಕು.
  • ಅದಕ್ಕೆ ಹೂರಣವನ್ನು ಹಾಕಿ ಅಂಚುಗಳನ್ನು ಗಟ್ಟಿಯಾಗಿ ಒತ್ತಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com