
ವಿಘ್ನ ನಿವಾರಕ ಗಣಪತಿಯನ್ನು ಭಕ್ತರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಹಿಂದೂ ಧರ್ಮಗ್ರಂಥದಲ್ಲಿ ಗಣೇಶನಿಗೆ 108 ಹೆಸರುಗಳಿವೆ. ಅವುಗಳಲ್ಲಿ ತುಂಬಾ ಮುಖ್ಯವಾದ ಹೆಸರುಗಳು ಇಂತಿವೆ.
ವಕ್ರತುಂಡ: ಸಾಮಾನ್ಯವಾಗಿ ವಕ್ರತುಂಡ ಎಂದರೆ ಬಾಗಿದ ಸೊಂಡಿಲು ಎಂದರ್ಥ. ಆದರೆ ಸಂಸ್ಕೃತದಲ್ಲಿ ಬೇರೆಯ ಅರ್ಥ ಇದೆ. ವಕ್ರತುಂಡ ಎಂದರೆ ತಪ್ಪು ದಾರಿಯಲ್ಲಿ ನಡೆಯುವವರನ್ನು ಸರಿಪಡಿಸಿ ಸರಿದಾರಿಯಲ್ಲಿ ನಡೆಯುವಂತೆ ಮಾಡುವವ ಎಂದರ್ಥ.
ಏಕದಂತ: ಒಂದು ಹಲ್ಲು ಇರುವವನು. ಗಣಪತಿಯ ಸೊಂಡಿಲಿನಲ್ಲಿ ಒಂದು ದಂತ ಮುರಿದಿದ್ದು, ಇನ್ನೊಂದು ದಂತ ಮಾತ್ರ ಇರುವುದು. ಸಾಂಕೇತಿಕವಾಗಿ ಜಗತ್ತಿಗೆ ಒಬ್ಬನೇ ಬ್ರಹ್ಮ ಎಂಬುದನ್ನು ಸೂಚಿಸುತ್ತದೆ.
ಕೃಷ್ಣಪಿಂಗಾಕ್ಷ:ಭೂಮಿ ಮತ್ತು ಮೋಡವನ್ನು ಕಣ್ಣುಗಳನ್ನಾಗಿ ಹೊಂದಿರುವವನು. ಕೃಷ್ಣ ಎಂದರೆ ಕಪ್ಪು, ಪಿಂಗ ಎಂದರೆ ಮುಸುಕಾದ ಮತ್ತು ಅಕ್ಷ ಎಂದರೆ ಕಣ್ಣು, ಭೂಮಿಯಿಂದಲೇ ಎಲ್ಲವನ್ನೂ ನೋಡಲು ಶಕ್ತಿಯಿರುವವನು.
ಗಜವಕ್ರ: ಆನೆಯ ಮುಖವನ್ನು ಹೊಂದಿರುವವನು. ಸಾಕಷ್ಟು ಜ್ಞಾನವನ್ನು ಹೊಂದಿರುವವನು ಎಂಬ ಅರ್ಥ ಬರುತ್ತದೆ.
ಲಂಬೋದರ: ದೊಡ್ಡ ಹೊಟ್ಟೆಯನ್ನು ಹೊಂದಿರುವವನು. ಎಲ್ಲವನ್ನೂ ಒಳಗೊಂಡಿರುವವನು ಎಂಬ ಅರ್ಥವಿದೆ.
ವಿಕಟ: ಮೋಕ್ಷ ಪಡೆಯಲು ದಾರಿ ತೋರಿಸುವವನು. ವಿ ಎಂದರೆ ನಿರ್ದಿಷ್ಟವಾದ, ಕೃತು ಅಂದರೆ ಕೆಲಸ ಮತ್ತು ಅಕಟ ಎಂದರೆ ಮೋಕ್ಷ ಎಂದರ್ಥ.
ವಿಘ್ನೇಶ: ಎಲ್ಲಾ ವಿಘ್ನಗಳನ್ನು ನಿವಾರಿಸುವವನು. ಒಳ್ಳೆಯದಕ್ಕೆ ಒಡೆಯ ಎಂದು ಕರೆಯುತ್ತಾರೆ.
ದೂಮ್ರವರ್ಣ: ದೂಮ್ರ ಎಂದರೆ ಹೊಗೆ, ವರ್ಣ ಎಂದರೆ ಬಣ್ಣ. ದುರ್ಗುಣ ಬಿಟ್ಟು ಸುಗುಣವನ್ನು ಆರಿಸುವವನು, ಜಗತ್ತಿಗೆ ಬೆಳಕಿನ ಹೊಗೆಯನ್ನು ಬಿಡುವವನು ಎಂಬ ಅರ್ಥ ಸಿಗುತ್ತದೆ.
ಭಾಲಚಂದ್ರ: ಭಾಲ ಎಂದರೆ ಹಣೆ. ಚಂದ್ರ ಆಕಾಶದಲ್ಲಿರುವ ಚಂದ್ರ, ಹಣೆಯಲ್ಲಿ ಚಂದ್ರನನ್ನು ಹೊಂದಿರುವವನು.
ವಿನಾಯಕ: ನಾಯಕನ ಗುಣ ಹೊಂದಿರುವವನೇ ವಿನಾಯಕ.
ಗಣಪತಿ: ಗಣಗಳಿಗೆ(ದೇವರು) ಅಧಿಪತಿ.
ಗಜಾನನ: ಆನೆಯ ಮುಖ ಹೊಂದಿರುವವನು.
ವ್ರತಾಪತಿ: ವ್ರತ ಮಾಡುವಾಗ ಗಣಪತಿಗೆ ಮೊದಲ ಪ್ರಾಶಸ್ತ್ಯ.ಸ್ತೋತ್ರ, ಮಂತ್ರವನ್ನು ಹೇಳಿಕೊಡುವವ ಎಂದರ್ಥ.
ಮಂಗಳಮೂರ್ತಿ:ಶಾಂತಿ, ನೆಮ್ಮದಿಗೆ ಪೂಜಿಸುವ, ಸರ್ವರಿಗೂ ಒಳ್ಳೆಯದನ್ನುಂಟುಮಾಡುವ ದೇವರು.
ವಿದ್ಯಾಪತಿ:ಗಣಪತಿ ದೇವರನ್ನು 18 ವಿದ್ಯೆಗಳಿಗೆ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ವಿದ್ಯಾಭ್ಯಾಸ ಆರಂಭಕ್ಕೆ ಮುನ್ನ ಸರಸ್ವತಿಗೆ ನಂತರ ಗಣಪತಿಗೆ ಪೂಜಿಸುತ್ತಾರೆ.
Advertisement