ಮೂಷಿಕ ಗಣೇಶನ ವಾಹನವಾದ ಕತೆ

ಗಣೇಶ ಹಬ್ಬ ಬಂದೇ ಬಿಟ್ಟಿತು. ಗಣೇಶ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಖುಷಿ. ಆನೆ ತಲೆಯ, ಡೊಳ್ಳು ಹೊಟ್ಟೆಯ ಗಣೇಶನನ್ನು ಹೊತ್ತು ಸಾಗುವ ಮೂಷಿಕ ಎಂದರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗಣೇಶ ಹಬ್ಬ ಬಂದೇ ಬಿಟ್ಟಿತು. ಗಣೇಶ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಖುಷಿ. ಆನೆ ತಲೆಯ, ಡೊಳ್ಳು ಹೊಟ್ಟೆಯ ಗಣೇಶನನ್ನು ಹೊತ್ತು ಸಾಗುವ ಮೂಷಿಕ ಎಂದರೆ ಎಲ್ಲರಿಗೂ ಕುತೂಹಲ. ಅಷ್ಟು ದೊಡ್ಡ ಗಣಪನನ್ನು ಇಷ್ಟು ಪುಟ್ಟ ಇಲಿಯು ಹೇಗೆ ಕರೆದೊಯ್ಯುತ್ತದೆ, ಮೂಷಿಕ ಹೇಗೆ ಗಣಪತಿ ದೇವರ ವಾಹನವಾಯಿತು ಎಂದೆಲ್ಲ ಮಕ್ಕಳು ದೊಡ್ಡವರಲ್ಲಿ ಪ್ರಶ್ನೆ ಕೇಳುತ್ತಾರೆ. ಅದರ ಹಿಂದೆ ಗಣೇಶಪುರಾಣದಲ್ಲಿ ಒಂದು ಕಥೆ ಇದೆ ಕೇಳಿ.

ಗಣೇಶ ಸವಾರಿ ಮಾಡುವ ಮೂಷಿಕ ಹಿಂದಿನ ಜನ್ಮದಲ್ಲಿ ಕ್ರೌಂಚ ಎಂಬ ಹೆಸರಿನವನಾಗಿದ್ದನಂತೆ. ಒಮ್ಮೆ ಇಂದ್ರನ ಆಸ್ಥಾನದಲ್ಲಿ ಕ್ರೌಂಚನು ತನಗರಿವಿಲ್ಲದೆ ಆಕಸ್ಮಿಕವಾಗಿ ವಾಮದೇವನೆಂಬ ಮುನಿಯ ಪಾದಕ್ಕೆ ತುಳಿದುಬಿಟ್ಟನಂತೆ. ಆದರೆ ಋಷಿ ವಾಮದೇವನು ತನ್ನ ಪಾದವನ್ನು ಕ್ರೌಂಚನು ಉದ್ದೇಶಪೂರ್ವಕವಾಗಿ ತುಳಿದನೆಂದು  ಕೋಪಗೊಂಡು ‘ನೀನು ಮೂಷಕನಾಗಿ ಹೋಗು' ಎಂದು ಶಾಪಕೊಟ್ಟುಬಿಟ್ಟರಂತೆ. ಭೀತಿಗೊಂಡ ಕ್ರೌಂಚನು ಮುನಿಯ ಪಾದಗಳಿಗೆರಗಿ ಕ್ಷಮೆಯಾಚಿಸುತ್ತಾನೆ.

ಆಗ ವಾಮ ದೇವನು ಶಾಂತನಾಗಿ, ನಾನು ಒಮ್ಮೆ ಕೊಟ್ಟ ಶಾಪವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ, ಮುಂದಿನ ಜನ್ಮದಲ್ಲಿ ನೀನು ಗಣೇಶ ದೇವರ ವಾಹನವಾಗು, ಆಗ ನೀನು ಶಾಪದಿಂದ ಮುಕ್ತನಾಗುತ್ತೀಯಾ ಎಂದು ಆಶೀರ್ವಾದ ಮಾಡುತ್ತಾರೆ. ಹೀಗೆ ಕ್ರೌಂಚನು ವಾಮದೇವ ಮುನಿಯ ಶಾಪದಿಂದ ಮೂಷಿಕನಾಗಿ ಮಾರ್ಪಟ್ಟು ಮಹರ್ಷಿ ಪರಾಶರರ ಆಶ್ರಮವನ್ನು ಸೇರಿಕೊಳ್ಳುತ್ತಾನೆ.

ಆದರೆ ಅಲ್ಲಿ ಕ್ರೌಂಚ ಸಾಮಾನ್ಯ ಮೂಷಿಕನಾಗಿರಲಿಲ್ಲ. ಒಂದು ದೊಡ್ಡ ಪರ್ವತಾಕರದಲ್ಲಿದ್ದನು. ಅವನನ್ನು ಕಂಡರೆ ಜನರಿಗೆ ಭಯ ಉಂಟಾಗುತ್ತಿತ್ತು. ಬೃಹದಾಕಾರದಲ್ಲಿದ್ದುದರಿಂದ ಅವನಿಂದ ಎಲ್ಲರಿಗೂ ಬಹಳ ತೊಂದರೆ ಉಂಟಾಗುತ್ತಿತ್ತು. ಇದೇ ಸಮಯದಲ್ಲಿ ಋಷಿ ಪರಾಶರರು ಮತ್ತು ಅವರ ಪತ್ನಿಯ ಆರೈಕೆಯಲ್ಲಿದ್ದ  ಗಣೇಶನು ಇತರರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ತನ್ನ  ಶಸ್ತ್ರಾಸ್ತ್ರಗಳಲ್ಲೊಂದನ್ನು ಅವನ ಮೇಲೆ ಪ್ರಯೋಗ ಮಾಡಿದನು. ಆಗ ಆ ಅಸ್ತ್ರವು ಕ್ರೌಂಚ ಇರುವ ದಿಕ್ಕಿನಲ್ಲಿ ಹಾರಿಕೊಂಡು ಹೋಯಿತು. ಪಾಶವು ಎಷ್ಟು ಹೊಳೆಯುತ್ತಿದ್ದೆಂದರೆ ಇಡೀ ಬ್ರಹ್ಮಾಂಡವು ಅದರ ಬೆಳಕಿನಿಂದ ತುಂಬಿಹೋಯಿತು. ಅಸ್ತ್ರವು ಕ್ರೌಂಚನನ್ನು ಅಟ್ಟಿಸಿಕೊಂಡು ಹೋಗಿ ಅವನ ಕುತ್ತಿಗೆಯ ಸುತ್ತ ಸುತ್ತಿಕೊಂಡು ಗಣೇಶನ ಪಾದಗಳಲ್ಲಿ ತಂದು ಹಾಕಿತು. ಆಗ ಗಣೇಶನು ಕ್ರೌಂಚನ ಬಳಿ, ನೀನು ಇಲಿಯಾದರೂ ದೇವತೆಗಳಿಗೆ, ಬ್ರಾಹ್ಮಣರಿಗೆ ಇನ್ನಿಲ್ಲದ ತೊಂದರೆ ಕೊಟ್ಟಿದ್ದಿ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾನೆ. ಆಗ ಕ್ರೌಂಚನು ಕ್ಷಮೆಯಾಚಿಸುತ್ತಾನೆ.  ಈಗ ನೀನು ಕ್ಷಮೆ ಕೇಳುತ್ತಿರುವುದರಿಂದ ನನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಗಣೇಶನು ಹೇಳುತ್ತಾನೆ.

ಸಾಮಾನ್ಯವಾಗಿ ಮೂಷಿಕನು ಗಣೇಶನ ಪಾದಗಳ ಬಳಿ ಕುಳಿತುಕೊಂಡು ಇರುತ್ತದೆ. ಮುದ್ಗಲ ಪುರಾಣದಲ್ಲಿ ಹೇಳಿರುವಂತೆ ಗಣೇಶನ ಎಂಟು ಅವತಾರಗಳಿದ್ದು, ಅವುಗಳಲ್ಲಿ ಐದು ಅವತಾರಗಳಲ್ಲಿ ಇಲಿಯು ವಾಹನವಾದರೆ, ವಕ್ರತುಂಡ ಗಣೇಶನಿಗೆ ಸಿಂಹ, ವಿಕಟ ಗಣೇಶನಿಗೆ ನವಿಲು ಮತ್ತು ವಿಘ್ನರಾಜ ಗಣಪತಿಗೆ ಹಾವು ವಾಹನ ಎಂದು ನಿರೂಪಿಸಲಾಗಿದೆ.

- ಸುಮನಾ ಉಪಾಧ್ಯಾಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com