ಪ್ರತಿಯಾಗಿ ಕೃಷ್ಣನೂ ಸಹ ಯುದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘನಘೋರ ಯುದ್ಧವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯುದ್ಧ. ಜಾಂಬವಂತನು ರಾಮಭಕ್ತ , ಶ್ರೀಕೃಷ್ಣನು ಸಾಕ್ಷಾತ್ ಭಗವಂತ. ಆದರೆ ಶ್ರೀಕೃಷ್ಣನೂ ರಾಮನೇ, ಎಂದು ಮಾತ್ರ ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯುದ್ಧವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋಕ್ಷವನ್ನು ಪಡೆಯುತ್ತಾನೆ. ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರಿಂದೊಡಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವೃತ್ತಾಂತವನ್ನೆಲ್ಲಾ ಪ್ರಜೆಗಳಿಗೆ ತಿಳಿಸಿದನು. ತನ್ನ ಮೇಲೆ ಬಂದ ಕಳ್ಳತನದ ಆರೋಪದಿಂದ ಮುಕ್ತನಾದನು.