
ಹುಟ್ಟುಹಬ್ಬದ ದಿನ ಗಣೇಶ ಮನೆಮನೆಗೆ ತೆರಳಿ ಎಲ್ಲರು ಕೊಟ್ಟ ಸಿಹಿತಿಂಡಿಗಳನ್ನು ತಿಂದು ಡೊಳ್ಳೊಟ್ಟೆಯನ್ನು ಉಬ್ಬಿಸಿ ತನ್ನ ವಾಹನ ಇಲಿಯ ಮೇಲೆ ಸವಾರಿ ಮಾಡುತ್ತಾ ಬರುತ್ತಿದ್ದಾಗ ದಾರಿಯಲ್ಲಿ ಒಂದು ಹಾವು ಹರಿದುಹೋಗುತ್ತಿತ್ತು. ಆ ಹಾವನ್ನು ಕಂಡು ಬೆದರಿದ ಇಲಿ ಎಡವಿದೆ.
ಇಲಿಯ ಮೇಲೆ ಕುಳಿತಿದ್ದ ಗಣೇಶನ ಕೆಳಗೆ ಬಿದ್ದು, ಹೊಟ್ಟೆಬಿರಿದು, ದಂತ ಮುರಿದಿದೆ.
ಮನೆಮನೆಗೆಳಲ್ಲಿ ತಿನ್ನಲಾಗಿದ್ದ ಇಷ್ಟ ತಿಂಡಿಗಳೆಲ್ಲಾ ಹೊಟ್ಟೆಯಿಂದ ಹೊರಗೆ ಬಂತು. ಮೇಲೆದ್ದ ಗಣೇಶ ಹೊಟ್ಟೆಯಿಂದ ಬಿದ್ದದ್ದನ್ನೆಲ್ಲ ತೆಗೆದು ಪುನಃ ಹೊಟ್ಟೆಗೆ ಸೇರಿಸಿ, ಮತ್ತೆ ಚೆಲ್ಲದಂತೆ ಅದೇ ಹಾವನ್ನು ಹಿಡಿದು ಹೊಟ್ಟೆಗೆ ಕಟ್ಟಿ ಮತ್ತೆ ಸವಾರಿ ಹೊರಟನಂತೆ.
ಈ ಎಲ್ಲಾ ದೃಶ್ಯಗಳನ್ನು ಬಾನಿನಲ್ಲಿದ್ದ ಚಂದ್ರ ನೋಡಿ ನಕ್ಕು, 'ನಿನ್ನ ದೊಡ್ಡ ಹೊಟ್ಟೆ ಏನು, ಬೀಸಣಿಗೆಯಂತಿರುವ ಕಿವಿಗಳೇನು, ಆ ಸೊಂಡಿಲು, ಆ ಚಿಕ್ಕ ಕಣ್ಣುಗಳೇನು!' ಎಂದು ಗಣಪತಿಯ ರೂಪದ ಬಗ್ಗೆ ವ್ಯಂಗ್ಯವಾಡಿದನಂತೆ. ಚಂದ್ರನ ಅಪಹಾಸ್ಯವನ್ನು ಕಂಡು ಸಿಟ್ಟಿಗೆದ್ದ ಗಣೇಶ, ಚಂದ್ರನನ್ನು ಶಪಿಸಿದನಂತೆ. ಇನ್ನು ಮುಂದೆ ನಿನ್ನನ್ನು ಯಾರೂ ಯಾವಾಗಲೂ ನೋಡದಿರಲಿ, ನೋಡಿದರೆ ಅವರ ಮೇಲೆ ಕಳ್ಳತನದ ಅಪವಾದ ಬರಲಿ ಎಂಬ ಕಠಿಣ ಶಾಪ ನೀಡಿದನಂತೆ.
ಆದುದರಿಂದ ಯಾರೂ ಕೂಡ ಚಂದ್ರನನ್ನು ನೋಡದೆ, ಚಂದ್ರನು ತಮ್ಮ ಕಣ್ಣಿಗೆ ಬೀಳದ ಹಾಗೆ ಓಡಾಡುತ್ತಿದ್ದರು. ಅವನಿಗೆ ಎಲ್ಲಿಯೂ ಹೋಗಲು ಆಗುತ್ತಿರಲಿಲ್ಲ. ಒಬ್ಬಂಟಿ ಜೀವನ ಅವನಿಗೆ ಕಷ್ಟವಾಗತೊಡಗಿತು. ಆದಕ್ಕಾಗಿ ಚಂದ್ರನು ತಪಸ್ಸನ್ನು ಆಚರಿಸಿ ಗಣೇಶನನ್ನು ಪ್ರಸನ್ನಗೊಳಿಸಿದನು. ತನಗೆ ಕೊಟ್ಟ ಶಾಪವನ್ನು ಹಿಂಪಡೆಯಲು ಚಂದ್ರನು ಗಣಪತಿಯಲ್ಲಿ ವಿನಂತಿ ಮಾಡಿಕೊಂಡನು.
ನಾನು ಕೊಟ್ಟಿರುವ ಶಾಪವನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಶಾಪವನ್ನು ಹಿಂಪಡೆಯಬಹುದು ಎಂದು ಹೇಳಿ ಗಣೇಶನು, 'ಗಣೇಶ ಚತುರ್ಥಿಯಂದು ಯಾರೂ ನಿನ್ನ ದರ್ಶನವನ್ನು ಪಡೆಯಲಾರರು ಅಂದರೆ, ಭಾದ್ರಪದ ಶುಕ್ಲಚೌತಿಯಂದು ಯಾರೂ ನಿನ್ನನ್ನು ನೋಡಬಾರದು, ಯಾರಾದರೂ ನಿನ್ನ ನೋಡಿದರೆ ಅವರಿಗೆ ಶಾಪ ತಟ್ಟುತ್ತದೆ. ಮಾತ್ರವಲ್ಲ ಇತರ ತಿಂಗಳುಗಳ ಕೃಷ್ಣಪಕ್ಷದ ಚತುರ್ಥಿಯಂದು ನಿನ್ನನ್ನು ನೋಡಿದ ನಂತರವೇ ಎಲ್ಲರೂ ಊಟಮಾಡಲಿ ಅಂದರೆ, ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವುದಿಲ್ಲ' ಎಂದು ಚಂದ್ರನಿಗೆ ನೀಡಿದ ಶಾಪವನ್ನು ಹಿಂಪಡೆದರಂತೆ. ಹಾಗಾಗಿ ಚೌತಿಯ ದಿನದಂದು ಬಾನಿನಲ್ಲಿರುವ ಚಂದ್ರಮನನ್ನು ನೋಡಬಾರದು. ನೋಡಿದರೆ ಅನಾವಶ್ಯಕ ಸುಳ್ಳು ಅಪವಾದ ಬರುತ್ತದೆ ಎಂಬ ನಂಬಿಕೆ ಇದೆ.
- ಮೈನಾಶ್ರೀ.ಸಿ
Advertisement