ಭೇದಿ ಬಾಧೆ

Updated on

'ಡಾಕ್ಟ್ರೆ ಮಗುವಿಗೆ ಭೇದಿ ಶುರುವಾಗಿದೆ. ಬರೀ ನೀರೇ ಹೋಗ್ತಿದೆ. ಅದಕ್ಕೆ ಬೆಳಗ್ಗೆಯಿಂದ ನೀರೂ ಕೊಟ್ಟಿಲ್ಲ. ಭೇದಿ ಮಾತ್ರೆ ಕೊಟ್ಟಿದ್ದೇನೆ. ಆದರೂ ಕಮ್ಮಿಯಾಗ್ತಿಲ್ಲ'- ಎಂದು ಪೋಷಕರು ಗಾಬರಿಯಿಂದ ಆಸ್ಪತ್ರೆಗೆ ಮಗುವಿನೊಂದಿಗೆ ಬರೋದ್ ಕಾಮನ್.
ಭೇದಿಯಿಂದ ಸಾವಿಗೀಡಾಗುವ ಮಕ್ಕಳ ಸಂಖ್ಯೆ ಭಾರತದಂಥ ದೇಶದಲ್ಲಿ ಹೆಚ್ಚಾಗಿರುವುದರಿಂದ ಪೋಷಕರ ಈ ಭಯಕ್ಕೂ ಅರ್ಥವಿದೆ. ಆದರೆ, ಅಷ್ಟೇನೂ ಆತಂಕ ಬೇಡ. ಸೂಕ್ತ ಮಾಹಿತಿಯಿದ್ದರೆ ಬೇಗ ರೋಗವನ್ನು ನಿಯಂತ್ರಣಕ್ಕೆ ತರಬಹುದು. ನೀವಾಗಿಯೇ ಯಾವುದೋ ಮಾತ್ರೆ ತಿನ್ನಿಸಿ ಸ್ವಯಂ ವೈದ್ಯರಾಗಬೇಡಿ.

ಒಂದೆರಡು ಸಾರಿ ಭೇದಿ ಆದರೆ ಅದು ಅಜೀರ್ಣದಿಂದ ಆಗಿರುತ್ತದೆ. ಆಗ ಯಾವುದೇ ಔಷಧಿ ನೀಡುವ ಅಗತ್ಯವೇ ಇಲ್ಲ. ಬಹಳಷ್ಟು ಸಲ ಭೇದಿ ಆದರೆ ಅದಕ್ಕೆ ವೈರಸ್, ಬ್ಯಾಕ್ಟೀರಿಯಾ, ಪ್ಯಾರಸೈಟ್ ಸೋಂಕು ಕಾರಣವಾಗಿರುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ವೈರಸ್‌ನಿಂದ ಬರುವ ಭೇದಿ ಎರಡು ದಿನಗಳಿಂದ ಎರಡು ವಾರಗಳ ತನಕವೂ ಮುಂದುವರಿಯಬಹುದು. ನಂತರ ಚಿಕಿತ್ಸೆ ನೀಡದೆಯೂ ವಾಸಿಯಾಗುತ್ತದೆ. ವೈರಸ್‌ಗಳಿಂದ ಉಂಟಾಗುವ ಲೂಸ್ ಮೋಷನ್‌ಗೆ ಯಾವುದೇ ಆ್ಯಂಟಿ ಬಯೋಟಿಕ್ ನೀಡಿಯೂ ಪ್ರಯೋಜನವಿಲ್ಲ. ಕೆಲವೊಮ್ಮೆ ಹಸಿರು ಬಣ್ಣದ ಭೇದಿಯಾಗುತ್ತದೆ. ಇದಕ್ಕಂತೂ ಗಾಬರಿಯಾಗುವುದೇ ಬೇಡ. ಪಿತ್ತ ಎಂಬ ದ್ರವವು ಪಚನವಾಗದೇ ಈ ರೂಪದಲ್ಲಿ ಹೊರ ಹೋಗುತ್ತದೆ.
ಭೇದಿ ಆರಂಭವಾಯಿತು ಎನ್ನುವಷ್ಟರಲ್ಲಿ ಆಹಾರ ಪದ್ಧತಿಯನ್ನು ಬದಲಿಸಬೇಡಿ. ಹೆಚ್ಚೆಚ್ಚು ದ್ರವಾಹಾರ ನೀಡಿ. ಡೀಹೈಡ್ರೇಷನ್ ಅಂದರೆ ಮೂತ್ರ ವಿಸರ್ಜನೆ ಮಾಡದಿರುವುದು ಅಥವಾ ಸಾಂದ್ರವಾದ ಮೂತ್ರ, ಕಣ್ಣೀರು ಬತ್ತುವುದು ಆಗದಂತೆ ನೋಡಿಕೊಳ್ಳಿ.

ಆರೈಕೆಯ ಹಾದಿಗಳು...

  •     ಕುದಿಸಿ ಆರಿಸಿದ ನೀರನ್ನೇ ಹೆಚ್ಚೆಚ್ಚು ಕುಡಿಸಿ.
  •     ಎದೆಹಾಲು ಸೇವಿಸುವ ಮಕ್ಕಳಿಗೆ ಮೇಲಿಂದ ಮೇಲೆ ಎದೆಹಾಲು ನೀಡಿ. ಹೀರಲು ಮಗು ಅಶಕ್ತವಾಗಿದ್ದರೆ, ಹಾಲನ್ನು ಸಂಗ್ರಹಿಸಿ ನೀಡಿ.
  •     ಪ್ರತಿಸಲ ಭೇದಿಯಾಗಲೂ ಮಗುವಿನ ಗುದಪ್ರದೇಶವನ್ನು ತೊಳೆದು, ಒರೆಸಿ. ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿ ಹಚ್ಚಬೇಕು. ವಿಶೇಷವಾಗಿ ರಾತ್ರಿ ಸಮಯದಲ್ಲಿ.
  •     ಗಂಜಿ, ನಿಂಬೆ ಪಾನಕ, ತಿಳಿ ಮಜ್ಜಿಗೆ ಒಳ್ಳೆಯದು.
  •     ಬಿಸ್ಕತ್ತು, ಬ್ರೆಡ್ಡು, ಬೇಯಿಸಿದ ಆಲೂಗಡ್ಡೆ, ಮೊಸರನ್ನವೂ ಒಳ್ಳೆಯದು.
ಏನೇನೋ ಮಾಡ್ಬೇಡಿ...
  •     ಭೇದಿ ನಿಲ್ಲಿಸಲು ಮಾತ್ರೆ ಕೊಡಬೇಡಿ.
  •     ಹಣ್ಣಿನ ರಸ (ವಿಶೇಷವಾಗಿ ಸೇಬು ದ್ರಾಕ್ಷಿ) ಬೇಡ.
  •     ಕರಿದ ತಿಂಡಿ, ಪಿಜ್ಜಾ, ಬರ್ಗರ್, ಐಸ್‌ಕ್ರೀಂಗಳಂಥ ಪದಾರ್ಥಗಳಿಗೆ ಗುಡ್‌ಬೈ ಹೇಳಿ.
ವೈದ್ಯರನ್ನು ಯಾವಾಗ ಕಾಣ್ಬೇಕು?
  •     ಡೀಹೈಡ್ರೇಷನ್‌ನ ಲಕ್ಷಣಗಳು ಕಂಡುಬಂದರೆ...
  •     ಎಂಟು ತಾಸುಗಳಲ್ಲಿ 8 ಸಲ ಬರೀ ನೀರ್‌ನೀರಾಗಿ ಭೇದಿ ಆಗ್ತಿದ್ರೆ...
  •     3 ದಿನಗಳಿಂದಲೂ ಹೆಚ್ಚು ಕಾಲ ಜ್ವರವಿದ್ರೆ...
  •     ಪದೇ ಪದೇ ವಾಂತಿಯಾಗ್ತಿದ್ರೆ...
ಮನೆಮದ್ದು ಏನು?
- ಡಾ. ರೇವತಿ ದೇಸಾಯಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com