ಲಕ್ವಾಧಿಪಥ್ಯ

ಮೆದುಳು ನಮ್ಮ ನರಮಂಡಲದ ಕೇಂದ್ರ ಕಾರ್ಯಾಗಾರ. ಇದು ದೇಹದ ಎಲ್ಲ ಅಂಗಗಳ ಕೆಲಸಗಳನ್ನು ನಿಯಂತ್ರಿಸುತ್ತದೆ. ಇತರೆ ಅಂಗಗಳಂತೆ ಮೆದುಳಿಗೂ...
ಲಕ್ವಾಧಿಪಥ್ಯ
Updated on

ಮೆದುಳು ನಮ್ಮ ನರಮಂಡಲದ ಕೇಂದ್ರ ಕಾರ್ಯಾಗಾರ. ಇದು ದೇಹದ ಎಲ್ಲ ಅಂಗಗಳ ಕೆಲಸಗಳನ್ನು ನಿಯಂತ್ರಿಸುತ್ತದೆ. ಇತರೆ ಅಂಗಗಳಂತೆ ಮೆದುಳಿಗೂ ರಕ್ತನಾಳಗಳ ಮೂಲಕವೇ ರಕ್ತ ಪೂರೈಕೆಯಾಗುತ್ತದೆ. ಕೆಲವೊಮ್ಮೆ ಈ ರಕ್ತನಾಳಗಳಿಗೆ ದಕ್ಕೆಯಾಗಬಹುದು ಅಥವಾ ಮುಚ್ಚಿಹೋಗಬಹುದು. ಆಗ ಮೆದುಳಿನ ಯಾವುದೋ ಒಂದು ಭಾಗಕ್ಕೆ ರಕ್ತ ಸಂಚಾರ ನಿಲ್ಲುತ್ತದೆ. ಆ ಭಾಗವನ್ನು ನಿಯಂತ್ರಿಸಲ್ಪಡುವ ದೇಹದ ಅಂಗಾಂಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ. ಇದೇ ಪಾರ್ಶ್ವವಾಯು ಅಥವಾ ಲಕ್ವಾ.
ಪಾರ್ಶ್ವವಾಯು ಯಾರಿಗೆ, ಯಾವಾಗ, ಎಲ್ಲಿ ಬೇಕಾದರೂ ಬರಬಹುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಚಿಕ್ಕವರಿಂದ ಅಂದರೆ ತಾಯಿಯ ಗರ್ಭದಲ್ಲಿರುವ ಮಗುವಿನಿಂದ ಹಿಡಿದು 90ರ ವಯೋವೃದ್ಧರನ್ನೂ ಇದು ಕಾಡಬಹುದು. ಒಟ್ಟಿನಲ್ಲಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಂತರ ಇದನ್ನು ವಿಶ್ವದ ಮೂರನೇ ಅತಿ ದೊಡ್ಡ ತೊಂದರೆ ಎಂದು ಪರಿಗಣಿಸಲಾಗುತ್ತದೆ. 2012ರ ವಿಶ್ವಸಂಸ್ಥೆ ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು 11 ಲಕ್ಷ ಜನರು ಪಾರ್ಶ್ವವಾಯುವಿನಿಂದ ಮರಣ ಹೊಂದುತ್ತಾರೆ. ಅದಕ್ಕಿಂತಲೂ ದುಪ್ಪಟ್ಟು ಜನರು ಅಂಗವಿಕಲರ ಪಟ್ಟಿಗೆ ಸೇರುತ್ತಾರೆ.

ರಕ್ತ ಸಂಚಾರ ಬಂದ್
ಮೆದುಳಿಗೆ ರಕ್ತ ಪೂರೈಕೆಯಾಗುವ ರಕ್ತನಾಳ ಮುಚ್ಚಿಕೊಳ್ಳುವುದಕ್ಕೆ ಇಸ್ಕಿಮಿಕ್ ಪಾರ್ಶ್ವವಾಯು ಎನ್ನುವರು. ರಕ್ತನಾಳ ಕಿರಿದಾಗುವುದರಿಂದ ಅಥವಾ ಹೆಪ್ಪುಗಟ್ಟುವುದರಿಂದ ಅಥವಾ ಗಟ್ಟಿಯಾಗುವುದರಿಂದ ಪಾರ್ಶ್ವ ಅಥವಾ ಸಂಪೂರ್ಣ ರಕ್ತ ಪೂರೈಕೆ ನಿಂತಾಗ ಈ ಲಕ್ವ ಹೊಡೆಯುತ್ತದೆ.
ತಲೆ ಅಥವಾ ಕತ್ತಿನ ರಕ್ತನಾಳ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಸಮಸ್ಯೆಗೆ ತ್ರೊಂಬೋಟಿಕ್ ಪಾರ್ಶ್ವವಾಯು ಎಂದೂ, ದೇಹದ ಯಾವುದೇ ಭಾಗದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಉಂಟಾಗುವ ತೊಂದರೆಗೆ ಎಂಬೊಲೆಟಿಕ್ ಪಾರ್ಶ್ವವಾಯು ಎಂದೂ ಕರೆಯುತ್ತಾರೆ.
ಮತ್ತೊಂದು ವಿಧವಾದ ಹೆಮೊರಾಜಿಕ್ ಪಾರ್ಶ್ವವಾಯುವಿನಲ್ಲಿ ರಕ್ತನಾಳ ಸ್ಫೋಟಗೊಳ್ಳುತ್ತದೆ. ಇದರಿಂದ ರಕ್ತನಾಳ ಸೋರಿಕೆಯಾಗಿ ಮೆದುಳಿನ ಒಂದು ಭಾಗದಲ್ಲಿ ರಕ್ತ ಚೆಲ್ಲಿ ಹೋಗುತ್ತದೆ. ಇದರಲ್ಲೂ ಮೆದುಳಿನ ಸುತ್ತಲಿನ ಭಾಗದಲ್ಲಿ ಉಂಟಾಗುವ ಸಬ್‌ಅರಕ್ನಾಯ್ಡ್ ಹೆಮೊರೆಜ್ ಹಾಗೂ ಸಾಮಾನ್ಯ ಸಮಸ್ಯೆ ಉಂಟಾದಾಗ ಮೆದುಳಿನ ನರಮಂಡಲದಲ್ಲಿ ಸಮಸ್ಯೆ ಉಂಟಾಗಿ ಇಂಟ್ರಾಸೆರಿಬ್ರಲ್ ಹೆಮೊರೆಜ್ ಆಗುತ್ತದೆ.

ಲಕ್ವಾ ಏಕೆ ಹೊಡೆಯುತ್ತದೆ?
-    ಹೆಚ್ಚಿದ ರಕ್ತದೊತ್ತಡ.
-    ತಂಬಾಕು, ಆಲ್ಕೋಹಾಲ್, ಧೂಮಪಾನ ಸೇವನೆ.
-    ರಕ್ತನಾಳಗಳು ಗಡುಸಾಗುವಿಕೆ ಅಥವಾ ಕಿರಿದಾಗುವಿಕೆ.
-    ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾದರೆ ದೀರ್ಘಕಾಲದ ನಂತರ ಸಮಸ್ಯೆ ಊಂಟಾಗುತ್ತದೆ.
-    ಹೃದಯ ಸಂಬಂಧಿ ತೊಂದರೆಗಳು.
-    ಕೊಲೆಸ್ಟ್ರಾಲ್ ಹೆಚ್ಚಿರುವ ಅಹಾರ ಸೇವನೆ
-    ಅನುವಂಶೀಯತೆ.
-    ಮಧುಮೇಹ ರೋಗ.
-    ಮೆದುಳಿನ ಅಪಘಾತ ಅಥವಾ ಮೆದುಳು ಸಂಬಂಧಿ ಕಾಯಿಲೆಗಳು

ಲಕ್ಷಣಗಳೇನು?
-    ದೇಹದ ಚಲನವಲನಗಳ ಮೇಲೆ ಮೆದುಳಿನ ನಿಯಂತ್ರಣ ಕ್ಷೀಣಿಸುವುದು ಅಥವಾ ದೇಹದ ಕೆಲವು ಭಾಗಗಳು ಸ್ವಾಧೀನ ಕಳೆದುಕೊಳ್ಳುವುದಂತೆ ಭಾಸವಾಗುವುದು
-    ನಡೆಯಲು ಕಷ್ಟವಾಗುವುದು.
-    ದೇಹದ ಸಮತೋಲನ ತಪ್ಪುತ್ತದೆ.
-    ಕಣ್ಣು ಮಂಜಾಗುತ್ತದೆ.
-    ಮಾತು ತೊದಲುತ್ತದೆ, ಅಹಾರ ನುಂಗಲು ಕಷ್ಟವಾಗುವುದು.
-    ಮೆದುಳಿನ ಸ್ಮರಣೆ ಕಡಿಮೆಯಾಗುವಿಕೆ.
-   ಭಾವನೆಗಳ ಮೇಲೆ ನಿಯಂತ್ರಣ ತಪ್ಪುವುದು.
ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ವೈದ್ಯರನ್ನು ಕಾಣುವುದೊಳಿತು.

ಸಂಬಂಧಿಗಳೇ ಹುಷಾರ್
ಲಕ್ವಕ್ಕೆ ಯಾವುದೇ ಪ್ರಥಮ ಚಿಕಿತ್ಸೆ ಇಲ್ಲ. ಆದ್ದರಿಂದ ತಕ್ಷಣ ಸಂಬಂಧಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು. ಚಿಕಿತ್ಸೆ ವಿಳಂಬವಾದಷ್ಟೂ ಮೆದುಳಿನ ಆಘಾತದ ಪ್ರಮಾಣ ಹೆಚ್ಚಾಗುವುದು. ಒಂದರ್ಧ ಗಂಟೆ ವಿಳಂಬವಾದರೂ ಮೆದುಳಿನ 10-20 ಲಕ್ಷ ನರಕೋಶಗಳು ಸತ್ತು ಹೋಗುತ್ತವೆ ಅಥವಾ ನಿಯಂತ್ರಣ ಕಳೆದುಕೊಳ್ಳುತ್ತವೆ. ಸೂಕ್ತ ಚಿಕಿತ್ಸೆ ದೊರೆತಲ್ಲಿ ಶೇ.80-95ರಷ್ಟು ಮೆದುಳಿನ ಆಘಾತದ ಪ್ರಮಾಣವನ್ನು ಕಡಿಮೆ ಮಾಡಬಹುದು. ಅದಕ್ಕೆ ಕೂಡಲೇ ತಜ್ಞರ ಬಳಿಯೇ ಕರೆದೊಯ್ದರೆ ಪೀಡಿತ ಸಹಜ ಸ್ಥಿತಿಗೆ ಬೇಗ ಮರಳುತ್ತಾನೆ.

ಪುನಶ್ಚೇತನಕ್ಕೆ ಕ್ರಮ
ಸೂಕ್ತ ವೈಜ್ಞಾನಿಕ ವ್ಯಾಯಾಮ ಚಿಕಿತ್ಸಾ ಕ್ರಮಗಳಿಂದ ಪೀಡಿತನನ್ನು ತಜ್ಞರು ಮತ್ತೆ ಮೊದಲಿನ ಸ್ಥಿತಿಗೇ ತರುತ್ತಾರೆ. ಮೆದುಳಿನ ಆಘಾತದ ನಂತರ ಎಷ್ಟು ಶೀಘ್ರವಾಗಿ ಪುನಶ್ಚೇತನವನ್ನು ಪ್ರಾರಂಭಿಸುತ್ತೇವೆಯೋ ಅಷ್ಟು ಪರಿಣಾಮಕಾರಿಯಾಗಿ ಪೀಡಿತ ಸಹಜ ಸ್ಥಿತಿಗೆ ಮರಳಬಹುದು.
ಮಸಾಜ್ ಮಾಡುವುದು, ಪೌಡರ್ ಹಚ್ಚುವುದು, ತೆಂಗಿನ ಎಣ್ಣೆಯನ್ನು ಕುಡಿಸುವುದು, ಪಾರಿವಾಳದ ರಕ್ತವನ್ನು ನೀಡುವುದು... ಇಂಥ ಕ್ರಮಗಳನ್ನು ಅನುಸರಿಸುವುದರಿಂದ ಪೀಡಿತ ಗುಣವಾಗುವುದು ಕಷ್ಟ.
ಲಕ್ವ ಹೊಡೆದವರನ್ನು ಕಟ್ಟಿಹಾಕಿ ಕಾದ ಕಬ್ಬಿಣದಿಂದ ಪಾರ್ಶ್ವವಾಯುವಿನ ಭಾಗಕ್ಕೆ ಸುಡುವಂಥ ಕ್ರೂರ ಪದ್ಧತಿ ಇನ್ನೂ ಹಳ್ಳಿಗಳಲ್ಲಿ ಚಾಲ್ತಿಯಲ್ಲಿದೆ. ಇಂಥ ಪದ್ಧತಿಗಳಿಂದ ಹಾಳಾಗುವ ಅಂಗಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಕಷ್ಟವಾಗುತ್ತದೆ. ಅವನು ಶಾಶ್ವತ ಅಂಗವಿಕಲನಾಗಬಹುದು. ಎಲ್ಲಿಯೋ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಲಕ್ವ ಪೀಡಿತರ ದೇಹ ತಾನಾಗೇ ಸುಧಾರಿಸಿಕೊಳ್ಳುತ್ತದೆ ಅಷ್ಟೆ.

ಸಂಬಂಧಿಗಳಿಗೆ ಅರಿವಿರಲಿ
ಪೀಡಿತ ಆಸ್ಪತ್ರೆಯಿಂದ ಚಿಕಿತ್ಸೆ ತೆಗೆದುಕೊಂಡು ಹೊರಬಂದ ನಂತರ ಆಸ್ಪತ್ರೆಗೂ, ಪೀಡಿತನೂ ನಿರಂತರ ಸಂಪರ್ಕದಲ್ಲಿರುವ ಅಗತ್ಯವಿದೆ. ಪೀಡಿತನ ಸಂಬಂಧಿಗಳು ಪ್ರತಿ ಹಂತದಲ್ಲೂ ಸಂಬಂಧಪಟ್ಟ ವೈದ್ಯರ ಹತ್ತಿರ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ವೈಜ್ಞಾನಿಕ ಚಿಕಿತ್ಸೆಗಳನ್ನು ಕೊಡಿಸಬೇಕು. ಆಗ ಮಾತ್ರ ಪೀಡಿತ ಸಂಪೂರ್ಣ ಗುಣಮುಖನಾಗುವುದು ಖಚಿತ.
ಪೀಡಿತ ಆಸ್ಪತ್ರೆಯಲ್ಲಿರುವಾಗಲೇ ವೈದ್ಯರು ಆತನ ಸಂಬಂಧಿಗಳಿಗೆ ಪಾರ್ಶ್ವವಾಯು ಬಗ್ಗೆ ಸಮಗ್ರ ಮಾಹಿತಿ ಕೊಡುವುದು ಹೆಚ್ಚು ಸೂಕ್ತ.

ಮೌಢ್ಯರಾಗಬೇಡಿ...
-    ಲಕ್ವವು ನೆಗಡಿಯಿಂದ ಬರೋಲ್ಲ. ಈ ರೋಗಕ್ಕೂ ಗಾಳಿಗೂ ಯಾವುದೇ ಸಂಬಂಧವೂ ಇಲ್ಲ. ಥಂಡಿ ಪದಾರ್ಥಗಳನ್ನು ತಿನ್ನಬಾರದು ಎಂಬುದು ಶುದ್ಧ ಮೂಢನಂಬಿಕೆ.
-    ಪಾರ್ಶ್ವವಾಯು ಒಂದು ಕಾಯಿಲೆಯಿಲ್ಲ. ಮೆದುಳಿಗೆ ಬರುವ ರಕ್ತನಾಳದ ತೊಂದರೆ.
-    ಲಕ್ವ ಪೀಡಿತನಿಗೆ ದೇಹ ಸ್ಥಿರವಾಗಲು ಉತ್ತಮ ವಿಟಮಿನ್‌ಯುಕ್ತ ಆಹಾರ ಅಗತ್ಯ.
-   ಪಾರ್ಶ್ವವಾಯು ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಾಡಬಹುದು.
-    ಎಲ್ಲ ಪಾರ್ಶ್ವವಾಯು ಪೀಡಿತರೂ ಒಂದೇ ಅಲ್ಲ. ಪ್ರತಿಯೊಬ್ಬ ಪೀಡಿತನಿಗೂ ಲಕ್ವ ಹೊಡೆಯಲು ಅದರದ್ದೇ ಆದ ಕಾರಣಗಳಿರುತ್ತವೆ.
-    ಮುಖಕ್ಕೆ ಬರುವ ಲಕ್ವ ಹಾಗೂ ಮೆದುಳಿನ ಲಕ್ವ ಒಂದೇ ಅಲ್ಲ. ಮುಖಕ್ಕೆ ಬರುವ ಲಕ್ವವನ್ನು ಫೇಷಿಯಲ್ ಪ್ಯಾಲ್ಸಿ ಎನ್ನುತ್ತಾರೆ. ಇದು ಮುಖಕ್ಕೆ ಸಂಬಂಧಪಟ್ಟ ನರಗಳಲ್ಲಾಗುವ ತೊಂದರೆಯಿಂದ ಬರುತ್ತದೆ. ಇಲ್ಲಿ ಕೇವಲ ಮುಖದ ಮಾಂಸಖಂಡಗಳ ವೀಕ್‌ನೆಸ್ ಇರುತ್ತದೆ.

- ಡಾ. ಚಂದ್ರಶೇಖರ್ ಬೆಳ್ಳೂಡಿ  
(ಮೊ. 87109 64433)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com