
ಮಂಗಳೂರು: ರಾಜ್ಯದ ಆರೋಗ್ಯ ಸಚಿವ ಯು ಟಿ ಖಾದರ್ ಅವರಿಗೆ ಹೊಸ ರೂಪ ಬಂದಿದೆ. ಗುಟ್ಟೇನು ಗೊತ್ತೇ? ಅವರು ಶಾಕಾಹಾರಿಯಾಗಿರುವುದು.
"ನಾನೀಗ ತರಕಾರಿ ಮತ್ತು ಹಣ್ಣುಗಳ ಡಯಟ್ ನಲ್ಲಿದ್ದೇನೆ. ಅಲ್ಲದೆ ಹೆಚ್ಚೆಚ್ಚು ನೀರು ಮತ್ತು ಹಣ್ಣಿನ ರಸ ಕುಡಿಯುತ್ತಿದ್ದೇನೆ" ಎನ್ನುತ್ತಾರೆ ಸಚಿವ. ನಾನು ಬೆಳಗಿನ ಉಪಹಾರವನ್ನು ಸ್ವಲ್ಪ ಹೆಚ್ಚಾಗೆ ತಿನ್ನುತ್ತೇನೆ. ಸರಳ ಮಧ್ಯಾಹ್ನದ ಊಟ ಹಾಗು ಮಿತವಾದ ರಾತ್ರಿ ಊಟ ನನ್ನದು ಎನ್ನುತ್ತಾರೆ ಖಾದರ್.
"ಈ ಡಯಟ್ ಮಾಡಿದ ನಂತರ ಈಗ ೨೦ ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಅದೂ ಒಂದು ವರ್ಷದಲ್ಲಿ. ದರ್ಮಸ್ಥಳದ ನೇಚರ್ ಕ್ಯೂರ್ ಮತ್ತು ಯೋಗಿಕ್ ವಿಜ್ಞಾನ ಆಸ್ಪತ್ರೆಯ ತಜ್ಞರ ಹಿತವಚನವೇ ಇದಕ್ಕೆ ಕಾರಣ" ಎನ್ನುತ್ತಾರೆ ಖಾದರ್.
ತಮ್ಮ ಈ ಹೊಸ ರೂಪದ ಬಗ್ಗೆ ಕೇಳಿದಾಗ "ನಾನು ಎಲ್ಲ ರೀತಿಯ ಮಾಂಸಾಹಾರವನ್ನೂ ತೊರೆದಿದ್ದೇನೆ. ಹಾಗೂ ಬೊಜ್ಜುಂಟು ಮಾಡುವ ಯಾವುದೇ ಆಹಾರವನ್ನೂ ತಿನ್ನುತ್ತಿಲ್ಲ. ಕಾರ್ಬೋಹೈಡ್ರೇಟ್ಸ್, ಪರಿಷ್ಕರಿಸಿದ ಆಹಾರ, ಕೃತಕ ಸಕ್ಕರೆ ಇವುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಇದು ನಾನು ತೆಳ್ಳಗಾಗಿ ಹೆಚ್ಚು ಕ್ರಿಯಾಶೀಲವಾಗಿರಲು ಸಹಕರಿಸಿದೆ" ಎನ್ನುತ್ತಾರೆ.
"ನನ್ನ ತೂಕ ೧೦೦ ಕೆ ಜಿ ಯಿಂದ ೮೦ ಕ್ಕೆ ಇಳಿದಿದೆ" ಎನ್ನುವ ಸಚಿವರು "ಡಯಟಿಂಗ್ ಅಷ್ಟೇ ನನ್ನನು ಸಣ್ಣ ಮಾಡಿಲ್ಲ, ದಿನವೂ ಒಂದು ಘಂಟೆ ಯೋಗ ಮತ್ತು ಪ್ರಾಣಾಯಾಮ ಮಾಡುತ್ತೇನೆ, ಇದು ನನ್ನು ಉತ್ಸಾಹದಿಂದಿರಿಸುತ್ತದೆ" ಎನ್ನುತ್ತಾರೆ ಖಾದರ್.
Advertisement