ಚಳಿಗಾಲದಲ್ಲಿ ಚರ್ಮದ ರಕ್ಷಣೆ

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗೆ ಕೈಕಾಲುಗಳ ಚರ್ಮಗಳು ಬಿರುಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗೆ ಕೈಕಾಲುಗಳ ಚರ್ಮಗಳು ಬಿರುಕು ಬಿಟ್ಟುಕೊಂಡು ಒಡೆದು ಹೋಗಿ ರಕ್ತ ಸೋರುವುದು, ನಡೆಯಲು ನೋವಾಗುವುದು, ತುಟಿ ಒಡೆಯುವುದು,ಮೈ ಕೈ ಬಿಳಿಚಿಕೊಳ್ಳುವುದು ಇತ್ಯಾದಿ ಸಮಸ್ಯೆ ಕಂಡುಬರುತ್ತದೆ. ಚರ್ಮದ ರಕ್ಷಣೆ, ಆರೈಕೆಗಾಗಿ ಇಲ್ಲಿವೆ ಕೆಲವು ಸುಲಭ ಪರಿಹಾರಗಳು.
    ಚಳಿಗಾಲದಲ್ಲಿ ಚರ್ಮ ಒಡೆಯದಂತೆ ಮಾಡಬಹುದಾದ ಸುಲಭ ವಿಧಾನ ತೆಂಗಿನೆಣ್ಣೆಯನ್ನು ಹಚ್ಚುವುದು. ಎಣ್ಣೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿಕೊಂಡರೆ ದೇಹ ತೇವವನ್ನು ಹೀರಿಕೊಂಡು ನುಣುಪಾಗಿರುತ್ತದೆ. ಅಥವಾ  ನೀರಿಗೆ ಒಂದು ಚಮಚ ಎಣ್ಣೆಯನ್ನು ಹಾಕಿಯೂ ಸ್ನಾನ ಮಾಡಿಕೊಂಡರೆ ದೇಹ ದಿನವಿಡೀ ಫ್ರೆಶ್ ಆಗಿರುತ್ತದೆ.
ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣತ್ವಚೆಯಾಗಿದ್ದರೆ ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ ಹಾಲಿನ ಕೆನೆಯೊಂದಿಗೆ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ನುಣುಪಾಗುತ್ತದೆ.
ಮೊಟ್ಟೆಯ ಬಿಳಿಲೋಳೆಯನ್ನು ಮುಖಕ್ಕೆ ಹಚ್ಚಿ ಗಂಟೆ ಬಿಟ್ಟು ತೊಳೆದರೆ ಮುಖಕ್ಕೆ ಫ್ರೆಶ್ ಲುಕ್ ಕೊಡುವುದಲ್ಲದೆ ಚರ್ಮದಲ್ಲಿರುವ ರಂಧ್ರಗಳ ಮೇಲೆಯೂ ಪ್ರಭಾವ ಬೀರುತ್ತದೆ.
ಚಳಿಗಾಲದಲ್ಲಿ ಮುಖ ಬಿರುಕು ಬಿಡುವುದನ್ನು ತಪ್ಪಿಸಲು ಹಾಲಿನ ಕೆನೆಗೆ ಮೊಸರಿನ ಕೆನೆಯನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಆಹ್ಲಾದಕರ ಅನುಭವವಾಗುತ್ತದೆ.
ಚಳಿಗಾಲದಲ್ಲಿ ಹೆಚ್ಚು ಒಣಚರ್ಮವಾಗಿರುವ ಮಂದಿಗೆ ಸೂಕ್ತ ಬೆಣ್ಣೆಹಣ್ಣಿನ ಮಾಸ್ಕ್. ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಪೇಸ್ಟ್ ಮಾಡಿ ಅದಕ್ಕೆ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಬೇಕು. ಇದರಲ್ಲಿ ವಿವಿಧ ವಿಟಮಿನ್, ಪೋಷಣೆ ಸಿಗುತ್ತದೆ.
ಜೇನಿನ ಮಾಸ್ಕ್: ಜೇನು ಹೊಟ್ಟೆಗೂ ಉತ್ತಮ, ಚರ್ಮಕ್ಕೂ ಆರೋಗ್ಯಕರ. ಒಂದೆರಡು ಚಮಚ ಜೇನಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು.
ಪಪ್ಪಾಯಿ ಫೇಸ್ ಪ್ಯಾಕ್: ಪಪ್ಪಾಯಿ ಹಣ್ಣನ್ನು ಹಿಸುಕಿ ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಹಚ್ಚಿದರೆ ಚರ್ಮ ನುಣುಪಾಗಿ ಹೊಳೆಯುತ್ತದೆ.
ಬಾದಾಮಿ ಎಣ್ಣೆ, ಬಿಸಿ ಮಾಡದ ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ, ಕುತ್ತಿಗೆಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆದರೆ ಫ್ರೆಶ್ ಆಗಿರುತ್ತದೆ.
ಕ್ಯಾರೆಟ್-ಜೇನಿನ ಮಾಸ್ಕ್: ಕ್ಯಾರೆಟ್ ತುರಿಗೆ ಜೇನನ್ನು ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆದರೆ ಚರ್ಮ ನುಣುಪಾಗುತ್ತದೆ.
ತೆಂಗಿನ ಹಾಲಿನ ಮಾಸ್ಕ್: ತೆಂಗಿನಕಾಯಿ ತುರಿದು ರುಬ್ಬಿ ರಸ ತೆಗೆಯಿರಿ. ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖಕ್ಕೆ ಹೊಳಪು ಬರುತ್ತದೆ.
ಟೊಮ್ಯಾಟೋ ಮೊಸರಿನ ಪ್ಯಾಕ್: ಟೊಮ್ಯಾಟೋವನ್ನು ಚೆನ್ನಾಗಿ ಪೇಸ್ಟ್ ಮಾಡಿ ಮೊಸರಿನೊಂದಿಗೆ ಮಿಶ್ರಣ ಮಾಡಿ ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ಚಳಿಗಾಲದಲ್ಲಿ ಕಾಲು ಒಡೆಯುವುದು ಸಾಮಾನ್ಯ. ಇದಕ್ಕೆ ಪ್ರತಿನಿತ್ಯ ರಾತ್ರಿ ಎಳ್ಳೆಣ್ಣೆಯನ್ನು(ದೀಪದ ಎಣ್ಣೆ) ಮಲಗುವ ಮುಂಚೆ ಹಚ್ಚುವುದರಿಂದ ಕಾಲು ಒಡೆಯುವುದನ್ನು ತಡೆಯಬಹುದು. ಜೊತೆಗೆ ದೇಹಕ್ಕೂ ಇದು ತಂಪು.
ಗ್ಲಿಸರಿನ್ ಹಾಗೂ ಜೇನನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ರಾತ್ರಿ ಅದನ್ನು ಕಾಲಿನ ಒಡೆದ ಹಿಮ್ಮಡಿಗೆ ಹಚ್ಚಿ ಬೆಳಗ್ಗೆ ತೊಳೆದರೆ ಹಿಮ್ಮಡಿ ನುಣುಪಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com