ಭ್ರೂಣ ಹತ್ಯೆ: ಲ್ಯಾಬ್‌ನಲ್ಲಿ ಟ್ರ್ಯಾಕಿಂಗ್ ಸಿಸ್ಟಮ್ ಕಡ್ಡಾಯ

ಕಠಿಣ ಕಾನೂನು, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ...
ಭ್ರೂಣ ಹತ್ಯೆ: ಲ್ಯಾಬ್‌ನಲ್ಲಿ ಟ್ರ್ಯಾಕಿಂಗ್ ಸಿಸ್ಟಮ್ ಕಡ್ಡಾಯ

ಚಂಡೀಘಡ: ಕಠಿಣ ಕಾನೂನು, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಎಲ್ಲಾ ಅಲ್ಟ್ರಾಸೌಂಡ್ ಸ್ಕ್ಯಾನ್ ಲ್ಯಾಬ್‌ನ ಯಂತ್ರಗಳಲ್ಲಿ ಆ್ಯಕ್ಟಿವ್ ಟ್ರ್ಯಾಕಿಂಗ್ ಸಾಧನವನ್ನು ಇನ್‌ಸ್ಟಾಲ್ ಮಾಡಬೇಕು ಎಂದು ಹರಿಯಾಣದ ಸಾರ್ವಜನಿಕ ಆಡಳಿತ ಮಂಡಳಿ ಆದೇಶ ನೀಡಿದೆ.

ಉತ್ತರ ಭಾರತದ ಹರಿಯಾಣದ ಕೆಲವು ಗ್ರಾಮಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈ ಗೊಂಡಿರುವ ಸಾರ್ವಜನಿಕ ಆಡಳಿತ ಮಂಡಳಿ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡುವ ವೈದ್ಯರು ಯಂತ್ರಗಳಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳುವಂತೆ ಹೇಳಿದೆ. ಈ ನಿಯಮ ಕಡ್ಡಾಯವಾಗಿದ್ದು, ಪಾಲಿಸದ ವೈದ್ಯರ ಕುರಿತು ಕಠಿಣ ಕ್ರಮ ಕೈಗೊಳ್ಳಲು ಮಂಡಳಿ ಮುಂದಾಗಿದೆ. ಈ ಸಾಧನವು ಸ್ಕ್ಯಾನಿಂಗ್ ವೇಳೆ ವೈದ್ಯರು ಯಾವ ತಪಾಸಣೆ ಹಾಗೂ ಯಾವ ರೀತಿಯ ತಪಾಸಣೆ, ಯಾವ ಯಾವ ಸಾಧನಗಳನ್ನು ಪರೀಕ್ಷೆ ವೇಳೆ ಬಳಸಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಮುಖ್ಯ ವೈದ್ಯಾಧಿಕಾರಿಗಳಿಗೆ ಆನ್‌ಲೈನ್ ಮುಖಾಂತರ ರವಾನಿಸಲಿದೆ.

ಈ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿ ಅಜಿತ್ ಬಾಲಾಜಿ ಜೋಶಿ ಅವರು, ಹರಿಯಾಣದ ಜಿಂದ್ ಜಿಲ್ಲೆಯಾದ್ಯಂತ ಈ ಸಾಧನವನ್ನು ಅಳವಡಿಸಲಾಗುತ್ತದೆ. ಈ ಸಾಧನದ ಮೂಲಕ ಸ್ಕ್ಯಾನಿಂಗ್ ರೂಂನಲ್ಲಿನ ಎಲ್ಲಾ ರೆಕಾರ್ಡ್‌ಗಳು ಜಿಪಿಆರ್‌ಎಸ್‌ನ ಮೂಲಕ ಮುಖ್ಯ ವೈದ್ಯಾಧಿಕಾರಿಗಳಿಗೆ ತಲುಪುತ್ತದೆ. ತಪಾಸಣೆ ವೇಳೆ ವೈದ್ಯರು ಯಾವ ಬಗೆಯ ತಪಾಸಣೆ ಮಾಡಿದ್ದಾರೆ ಎಂಬುದು ಮುಖ್ಯ ವೈದ್ಯಾಧಿಕಾರಿಗಳಿಗೆ ಸುಲಭವಾಗಿ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಏನಿದು ಅಲ್ಟ್ರಾಸ್ಕ್ಯಾನಿಂಗ್ ಟ್ರ್ಯಾಕಿಂಗ್ ಸಾಧನ?
ಈ ಸಾಧನವನ್ನು 2011ರಲ್ಲಿ ಭ್ರೂಣ ಹತ್ಯೆಯನ್ನು ನಿಯಂತ್ರಿಸುವ ಸಲುವಾಗೆ ಹರಿಯಾಣದ ಜಜ್ಜಾರ್ ಜಿಲ್ಲೆಯಲ್ಲಿ ಕಂಡು ಹಿಡಿಯಲಾಯಿತು. ಅಲ್ಟ್ರಾಸ್ಕ್ಯಾನಿಂಗ್ ಟ್ರ್ಯಾಕಿಂಗ್ ಸಾಧನವು ಸೆಟ್‌ಅಪ್ ಬಾಕ್ಸ್ ಅಂತಿದ್ದು, ಇದಕ್ಕೆ ಜಿಪಿಆರ್‌ಎಸ್ ಆಧಾರಿತ ಸಿಮ್‌ಕಾರ್ಡ್ ಅನ್ನು ಅಳವಡಿಸಲಾಗಿರುತ್ತದೆ. ಮಹಿಳೆಗೆ ಸ್ಕ್ಯಾನಿಂಗ್ ಮಾಡುವ ವೈದ್ಯರು ಯಾವ ರೀತಿಯಲ್ಲಿ ತಪಾಸಣೆ ಮಾಡುತ್ತಾರೆ, ಯಾವ ಬಗೆಯ ಪರೀಕ್ಷೆಯನ್ನು ಮಾಡುತ್ತಾರೆ ಎಂಬ ಎಲ್ಲಾ ರೀತಿಯ ಮಾಹಿತಿಗಳು ಮುಖ್ಯ ವೈದ್ಯಾಧಿಕಾರಿಗಳಿಗೆ ಜಿಪಿಆರ್‌ಎಸ್‌ನ ಮೂಲಕ ತಲುಪುತ್ತಿರುತ್ತದೆ. ಒಂದು ವೇಳೆ ವೈದ್ಯರು ಭ್ರೂಣ ಪತ್ತೆಹಚ್ಚುವ ಪರೀಕ್ಷೆ ಕೈಗೊಂಡರೆ ಮುಖ್ಯ ವೈದ್ಯಾಧಿಕಾರಿಗಳಿಗೆ ನೇರವಾಗಿ ತಿಳಿಯುತ್ತದೆ.

ಒಟ್ಟಾರೆ ಭ್ರೂಣವನ್ನು ಕಂಡುಕೊಂಡು ಹತ್ಯೆಗೈಯ್ಯಲು ಹಣದ ಆಮಿಷಕ್ಕೆ ಬಲಿಯಾಗಿ ದುಷ್ಟ ಜನರಿಗೆ ಸಹಾಯ ಮಾಡಿ ಪರೋಕ್ಷವಾಗಿ ಕಾರಣರಾಗುತ್ತಿದ್ದ ಕೆಲವು ವೈದ್ಯರಿಗೆ ಇದೊಂದು ಎಚ್ಚರಿಕೆಯ ಗಂಟೆ ಎನ್ನಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com