ಹಗಲು ನಿದ್ರೆ ಮಧ್ಯ ವಯಸ್ಕರ ನೆನಪಿನ ಶಕ್ತಿ ಹೆಚ್ಚಿಸುತ್ತದೆ!

ಇತ್ತೀಚಿನ ದಿನಗಳಲ್ಲಿ ಹಗಲು ನಿದ್ರೆ ಮಾಡುವವರು ಹೆಚ್ಚಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೆಚ್ಚು ಕಾಲ ಹಗಲು ನಿದ್ರೆ ಮಾಡುವುದು ಆರೋಗ್ಯಕ್ಕೆ...
ಹಗಲು ನಿದ್ರೆ ಮಧ್ಯ ವಯಸ್ಕರ ನೆನಪಿನ ಶಕ್ತಿ ಹೆಚ್ಚಿಸುತ್ತದೆ!

ಇತ್ತೀಚಿನ ದಿನಗಳಲ್ಲಿ ಹಗಲು ನಿದ್ರೆ ಮಾಡುವವರು ಹೆಚ್ಚಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೆಚ್ಚು ಕಾಲ ಹಗಲು ನಿದ್ರೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬಂದಿರುವುದುಂಟು. ಆದರೆ, ಯಾವ ವಯಸ್ಸಿನವರು ಹಗಲು ನಿದ್ರೆ ಮಾಡಿದರೆ ಒಳಿತು ಎಂಬುದಂತು ಹೆಚ್ಚಾಗಿ ತಿಳಿದಿರುವುದಿಲ್ಲ.

ಹಗಲು ನಿದ್ರೆ ಮಾಡಿದರೆ ಮಧ್ಯ ವಯಸ್ಕರ ನೆನಪಿನ ಶಕ್ತಿ ಹೆಚ್ಚಾಗುತ್ತದೆಯಂತೆ. ಹಗಲಲ್ಲಿ ನಿದ್ರಿಸುವುದು ನೆನಪಿನ ಶಕ್ತಿ ಹೆಚ್ಚಿಸುವುದಲ್ಲದೇ ಕಲಿಕೆಗೆ ಸಹಾಯ ಮಾಡುತ್ತದೆ.

ಹೌದು, ಹೀಗಂತ ಅಧ್ಯಯನ ಹೇಳುತ್ತದೆ. ಯುವ ಮತ್ತು ಮಧ್ಯವಯಸ್ಕಿನವರನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಸತ್ಯ ಹೊರಬಿದ್ದಿದ್ದೆ.

ಯುವ ಜನತೆಗಿಂತ ಮಧ್ಯವಯಸ್ಕರು ಹಗಲಿನಲ್ಲಿ ನಿದ್ರಿಸಿದರೆ ಅವರ ಜ್ಞಾಪಕ ಶಕ್ತಿ ವೃದ್ಧಿಯಾಗುವುದಲ್ಲದೇ, ಕಲಿಕೆಯ ಆಸಕ್ತಿ ಹುಟ್ಟಿಸುತ್ತದೆ ಎಂದು ಬಾಯ್ಲರ್ ವಿಶ್ವವಿದ್ಯಾಲಯದ ನಿದ್ರೆ ನರವಿಜ್ಞಾನ ಮತ್ತು ಸಂವೇದನೆ ಪ್ರಯೋಗಾಲಯದ ನಿರ್ದೇಶಕ ಮೈಕೆಲ್ ಕೆ ಸ್ಕುಲಿನ್ ತಿಳಿಸಿದ್ದಾರೆ.

ವಯಸ್ಸಾಗುತ್ತಿದ್ದಂತೆ ಮನುಷ್ಯನಿಗೆ ರಾತ್ರಿ ಹೊತ್ತು ನಿದ್ರೆ ಬಾರದೆ ಎಚ್ಚರಿಕೆಯಿಂದ ಇರುತ್ತಾರೆ. ಇದು ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ. ಕೆಲಸದ ಒತ್ತಡದಲ್ಲಿ ನಿದ್ರೆಯನ್ನು ಹೀಗಳೆಯುವವರು ಹೆಚ್ಚಾಗಿದ್ದಾರೆ. ಆದರೆ, ಸರಿಯಾಗಿ ನಿದ್ರಿಸುವುದರಿಂದ ಮಾನಸಿಕ ಆರೋಗ್ಯ, ಹೃದಯ ಆರೋಗ್ಯ ಮತ್ತು ಗಂಭೀರ ಕಾಯಿಲೆಗಳು ಸೇರಿದಂತೆ ಅನೇಕ ರೀತಿಯ ರೋಗ-ರುಜಿನಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಕೆಲಸದ ಒತ್ತಡವಿರುವವರು, ದೌರ್ಬಲ್ಯತೆಯಿಂದ ಬಳಲುತ್ತಿರುವವರು, ಪ್ರಯಾಣ, ಕೋಪ, ಭಯ ಮತ್ತು ಮಾನಸಿಕ ಒತ್ತಡ ಮುಂತಾದವುಗಳಿಂದ ಬಳಲಿ ಆಯಾಸವಾದ ಮಧ್ಯ ವಯಸ್ಕರು ಹಗಲು ನಿದ್ರೆ ಮಾಡಬಹುದು.

1967ರಿಂದಲೂ ನಿದ್ರೆಗೆ ಸಂಬಂಧಿಸಿದಂತೆ ಅಧ್ಯಯನಗಳು ನಡೆಯುತ್ತಿದ್ದು, ನಿದ್ದೆ ಮತ್ತು ಮಾನಸಿಕ ಚಟುವಟಿಕೆ ಕುರಿತು ಸುಮಾರು 200ಕ್ಕೂ ಹೆಚ್ಚು ಅಧ್ಯಯನಗಳನ್ನು ಮಾಡಲಾಗಿದೆ.

ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಮೂರು ಗುಂಪುಗಳನ್ನಾಗಿ ವಿಂಗಡನೆ ಮಾಡಲಾಗಿದೆ. 18-29(ಯುವಕರು) 30-60(ಮಧ್ಯವಯಸ್ಕರು), 60 ಮೇಲ್ಪಟ್ಟವರನ್ನು ವಯೋವೃದ್ಧರು ಎಂಬ ಗುಂಪುಗಳಾಗಿ ವಿಂಗಡಿಸಿ, ಅಧ್ಯಯನ ನಡೆಸಲಾಗಿದೆ.

ಈ ಅಧ್ಯಯನದಲ್ಲಿ ಭಾಗವಹಿಸಿದವರ ಬಳಿ, ಅವರು ಯಾವ ಸಮಯದಲ್ಲಿ ನಿದ್ರಿಸುತ್ತಾರೆ, ಪ್ರತಿ ದಿನ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತಾರೆ, ರಾತ್ರಿ ಮತ್ತು ಹಗಲು ನಿದ್ರಿಸುವ ಸಮಯದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಅವರ ಹೇಳಿಕೆಗಳ ಪ್ರಕಾರ, ಮಧ್ಯ ವಯಸ್ಕರಿಗೆ ರಾತ್ರಿಗಿಂತ ಹಗಲಿನಲ್ಲಿ ಹೆಚ್ಚು ನಿದ್ರೆ ಬರುತ್ತದೆ ಎಂಬುದು ಹೆಚ್ಚಾಗಿ ಕೇಳಿಬಂದಿದೆ. ಹೀಗೆ ಹಗಲು ನಿದ್ರಿಸುವವರಲ್ಲಿ ಮಧ್ಯವಯಸ್ಕರಿಗೆ ನೆನಪಿನ ಶಕ್ತಿ ಮತ್ತು ಕಲಿಕೆಯ ಆಸಕ್ತಿ ಹೆಚ್ಚಾಗಿರುವುದು ಈ ಅಧ್ಯಯನದಿಂದ ತಿಳಿದು ಬಂದಿದೆ.

-ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com