ವೀಕೆಂಡಲ್ಲಿ ತೂಕ ಚೆಕ್ ಮಾಡಿದ್ರಾ...?

ಡಯೆಟ್ ಮಾಡುವವರೇ ಹುಷಾರು...ವಾರದ ದಿನಗಳಿಗಿಂತ ವಾರಾಂತ್ಯದ ದಿನಗಳಲ್ಲೇ ತೂಕ ಹೆಚ್ಚಾಗುತ್ತಂತೆ. ಇದು ನಾನು ಹೇಳ್ತಾ ಇರೋದ್ ಅಲ್ಲ... ಸಂಶೋಧನೆ ಹೇಳ್ತಾ ಇರೋದು...
ವೀಕೆಂಡಲ್ಲಿ ತೂಕ ಚೆಕ್ ಮಾಡಿದ್ರಾ...?

ಡಯೆಟ್ ಮಾಡುವವರೇ ಹುಷಾರು...ವಾರದ ದಿನಗಳಿಗಿಂತ ವಾರಾಂತ್ಯದ ದಿನಗಳಲ್ಲೇ ತೂಕ ಹೆಚ್ಚಾಗುತ್ತಂತೆ. ಇದು ನಾನು ಹೇಳ್ತಾ ಇರೋದ್ ಅಲ್ಲ... ಸಂಶೋಧನೆ ಹೇಳ್ತಾ ಇರೋದು.

ಹೌದು, ವಾರದ ದಿನಗಳಿಗಿಂತ ವಾರಾಂತ್ಯದ ದಿನಗಳಲ್ಲೇ ತೂಕ ಹೆಚ್ಚಾಗುತ್ತಂತೆ. ಇದಕ್ಕೆ ಕಾರಣ ವಾರದ ದಿನಗಳಲ್ಲಿ ಮಕ್ಕಳು, ಆಫೀಸ್, ಕೆಲಸ ಇನ್ನಿತರೆ ಒತ್ತಡಗಳ ಕಡೆಯೇ ಜನ ಹೆಚ್ಚು ಗಮನ ಹರಿಸುವುದು ಹಾಗೂ ಸರಿಯಾದ ಸಮಯಕ್ಕೆ ಊಟ ಮಾಡಿದರೂ ಹೊಟ್ಟೆ ತುಂಬಾ ಊಟ ಮಾಡದೇ ಇರೋದೇ ಇದಕ್ಕೆ ಒಂದು ರೀತಿಯ ಕಾರಣ ಎನ್ನಬಹುದು.

ತೂಕದ ಬಗ್ಗೆ ಗಮನ ಕೊಡದೆ ಕೆಲಸದ ಮೇಲೆಯೇ ಹೆಚ್ಚು ಗಮನ ಕೊಡುತ್ತಾರೆ. ಇದರಿಂದ ಅವರಿಗೇ ತಿಳಿಯದೆ ಅವರ ದೇಹದ ತೂಕ ಕಡಿಮೆಯಾಗಿರುತ್ತದೆ. ಆದರೆ ವಾರಾಂತ್ಯದ  ದಿನಗಳು ಹಾಗಲ್ಲ, ವೀಕೆಂಡ್  ಬಂದೆಂದರೆ ಪಾರ್ಟಿ, ಸುತ್ತೋದು, ತಿನ್ನೋದು, ಅಂತಾರೆ. ಅದರಲ್ಲೂ ವೀಕೆಂಡ್ ಗಳಲ್ಲಿ ಸ್ಪೆಷಲ್  ಇವೆಂಟ್ಸ್ ಬಂತು ಅಂದ್ರೆ ಕಥೆ ಮುಗಿಯಿತು... ಬರ್ತ್ ಡೇ, ಲೇಟ್ ನೈಟ್ ಪಾರ್ಟಿಗಳಲ್ಲಿ ತಿನ್ನೋದ್ರ ಮೇಲೆ ಗಮನವೇ ಇರೋಲ್ಲ. ಎಷ್ಟು ತಿಂತೀವಿ ಅನ್ನೋದು ಅರಿವಿಗೇ ಬರೋದೇ ಇಲ್ಲ. ವೀಕೆಂಡ್ ಸಂತೋಷ ಕೊಡೋದೇನೋ ನಿಜ. ಆದರೆ, ಇದರಿಂದ ಜೇಬಿಗೆ ಕತ್ತರಿ ಬೀಳೋದು ಅಲ್ಲದೆ, ಡಯೆಟ್ ಗೂ ಕತ್ತರಿ ಬೀಳುತ್ತೇ.

ದಪ್ಪ ಇರೋರು ಡಯೆಟ್ ಸಂದರ್ಭದಲ್ಲಿ ವೀಕೆಂಡ್ ಅಂದಾಕ್ಷಣ, ಇವತ್ತು ಒಂದು ದಿನ ತಿಂದು ಬಿಡೋಣ ನಾಳೆಯಿಂದ ಡಯೆಟ್ ಮಾಡೋಣ ಎಂದು ತಿನ್ನೋದೇ ಹೆಚ್ಚು. ಇನ್ನು ತೆಳ್ಳಗಿರುವವರ ವಿಷಯಕ್ಕೆ ಬಂದರೆ ಹೇಗೂ ಸಣ್ಣಗಿದ್ದೇನೆ ಹೆಚ್ಚು ತಿಂದರೂ ಏನಾಗೋದಿಲ್ಲ ಅಂತ ಹಿಂದೂ ಮುಂದು ಯೋಚನೆ ಮಾಡದೆ ಹೆಚ್ಚು ಕೊಬ್ಬಿನಾಂಶ ಇರುವ ತಿಂಡಿಗಳನ್ನೇ ಹೊಟ್ಟೆ ಬಿರುಯುವಂತೆ ತಿಂದುಬಿಡುತ್ತಾರೆ. ಸೆಲೆಬ್ರೆಟಿಗಳು ಸ್ವಲ್ಪ ಮಟ್ಟಿಗಾದರೂ ಆರೋಗ್ಯ, ತೂಕ ಅಂತ ಯೋಚನೆ ಮಾಡ್ತಾರೆ. ಇಂತಹ ಸಮಯಗಳಲ್ಲಿ ಸಾಮಾನ್ಯ ಜನರು ದೇಹದ ತೂಕ, ಆರೋಗ್ಯ ಅಂತ ಯೋಚನೆ ಮಾಡೋದು ಬೆರಳಿಣಿಕೆಯ ಸಂಖ್ಯೆಯಷ್ಟು  ಮಂದಿ ಮಾತ್ರ ಎನ್ನಬಹುದು.

ಇಷ್ಟಕ್ಕೂ ಏನಿದು ಸಂಶೋಧನೆ ಅಂತೀರಾ...
ಫಿನ್ ಲ್ಯಾಂಡ್ ನ ವಿಐಟಿ ತಾಂತ್ರಿಕ ಸಂಶೋಧನಾ ಸಂಸ್ಥೆ ಮತ್ತು ಟಂಪೆರೆ ತಾಂತ್ರಿಕ ವಿಶ್ವವಿದ್ಯಾಲಯ ಎರಡೂ ಕೇಂದ್ರಗಳು ಸೇರಿ ಈ ಸಂಶೋಧನೆ ನಡೆಸಿದ್ದು. ಸಂಶೋಧನೆಯಲ್ಲಿ 25 ರಿಂದ 62 ವಯಸ್ಸಿನೊಳಗಿನ ಸುಮಾರು 80 ಜನರನ್ನ ಈ ಸಂಶೋಧನೆಗೊಳಪಡಿಸಲಾಗಿದೆ. ಈ ಎಂಬತ್ತು ಜನರನ್ನ 3 ವಿಭಾಗಗಳಾಗಿ ವಿಂಗಡಿಸಿ ವಿವಿಧ ರೀತಿಯ ಪರೀಕ್ಷೆಗೊಳಪಡಿಸಲಾಗಿದೆ. 1. ತೂಕ ಇಳಿಕೆ ಮಾಡುವವರು 2. ತೂಕ ಹೆಚ್ಚಿಸಿ ಕೊಳ್ಳುವವರು ಹಾಗೂ 3.ಇರುವ ತೂಕವನ್ನೇ ಸರಿದೂಗಿಸಿಕೊಂಡು ಹೋಗುವವರು ಎಂಬ ಮೂರು ವಿಭಾಗಗಳಲ್ಲಿ ಸಂಶೋಧನೆ ನಡೆಸಲಾಗಿದೆ.

ಸಂಶೋಧನೆಗೊಳಪಟ್ಟ ಮೂರು ಗುಂಪಿನ ಜನರ ಆಹಾರ ಪದ್ಧತಿಯನ್ನು ಪರೀಕ್ಷಿಸಿ ಬೆಳಗಿನ ಉಪಹಾರಕ್ಕೂ ಮೊದಲು ಎಲ್ಲರ ತೂಕವನ್ನು ದಾಖಲು ಮಾಡಿಕೊಳ್ಳುತ್ತಾ ಹೋಗಲಾಯಿತು.ಈ ವೇಳೆ ವಾರದ ದಿನಗಳು ಹಾಗೂ ವಾರಾಂತ್ಯದ ದಿನಗಳಲ್ಲಿ ತೂಕದಲ್ಲಿ ಏರುಪೇರಾಗುವುದನ್ನು ಗಮನಿಸಲಾಯಿತು. ನಂತರ ವಾರದ ದಿನಗಳಲ್ಲಿ ತೂಕ ಕಡಿಮೆಯಾಗುವವರ  ಹಾಗೂ ತೂಕವನ್ನು ಸರಿದೂಗಿಸಿಕೊಂಡು ಹೋಗುವವರ ತೂಕ, ವಾರದ ದಿನಗಳಿಗಿಂತ ವಾರಾಂತ್ಯದ ದಿನಗಳಲ್ಲಿ ಹೆಚ್ಚಾಗಿರುವುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಈ ಸಂಶೋಧನೆಯ ಸಾರಾಂಶ ಕೇಳಿದರೆ ಡಯೆಟ್ ಮಾಡೋರಿಗೆ ವೀಕೆಂಡ್ ಡೇಂಜರ್ ಆಗಿದೆ ಎನ್ನಬಹುದು. ಪಕ್ಕದಲ್ಲಿರುವ ಸ್ನೇಹಿತರಾಗಲಿ ಅಥವಾ ಇತರೆ ಹೊರ ಜನರು ರುಚಿಕರವಾದ ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದಾಗ, ನಾನು ತಿನ್ನಬೇಕು ಅನಿಸುತ್ತದೆ ಆದರೂ ಡಯೆಟ್ ಎಂಬ ಶಬ್ಧ ನಮ್ಮನ್ನು ಕಟ್ಟಿ ಹಾಕುತ್ತೆ. ಮನಸ್ಸು ಸ್ಥಿರ ಹಾಗೂ ಕಠಿಣವಾಗಿದ್ದರೆ ಮಾತ್ರವೇ ಡಯೆಟ್ ಮಾಡೋಕೆ ಸಾಧ್ಯ ಎನ್ನಬಹುದು. ಇಲ್ಲದೇ ಹೋದರೆ ಡಯಟ್ ಕಥೆ ಮುಕ್ತಾಯವಾಗಿ ಬಿಡುತ್ತೆ ಅಷ್ಟೇ..

ಇನ್ನು ಡಯೆಟ್ ಮಾಡುವ ಜನರು ತಿನ್ನಬೇಕು ಆದರೆ ದಪ್ಪ ಮಾತ್ರ ಆಗಬಾರದು ಅನ್ನೋರಿಗೆ ಕೆಲವೊಂದಿಷ್ಟು ವೈದ್ಯರ ಸಲಹೆ ಇಲ್ಲಿದೆ...

  • ಸಮಯಕ್ಕೆ ಸರಿಯಾಗಿ ಹಾಗೂ ಮಿತವಾಗಿ ಆಹಾರ ಸೇವಿಸಿ
  • ಆಹಾರ ಚೆನ್ನಾಗಿ ಜಗಿದು ತಿನ್ನಬೇಕು.
  • ಸರಿಯಾದ ಸಮಯಕ್ಕೆ ನಿದ್ರೆ ಮಾಡಿ.
  • ದಿನದ ಆಹಾರದಲ್ಲಿ ತರಕಾರಿ, ಸೊಪ್ಪು ಎತ್ತೇಚ್ಚವಾಗಿ ತಿನ್ನಿ.
  • ದಪ್ಪ ಆಗುವ ಜನರು ಸಸ್ಯಹಾರ, ಮಾಂಸಾಹಾರ ಸೂಪ್ ಕುಡಿಯಿರಿ.
  • ಪಿಜ್ಜಾ, ಬರ್ಗರ್ ಬಿಟ್ಟು ಹೆಚ್ಚು ಕ್ಯಾಲೋರಿ ಇರುವ ಕಾಳು ಹಣ್ಣುಗಳನ್ನು ಆಹಾರದಲ್ಲಿ ಬಳಸಿ.
  • ಹೋಟೆಲ್ ಆಹಾರ ಬಿಟ್ಟು ಮನೆಯ ಆಹಾರ ತಿನ್ನಲು ಪ್ರಾರಂಭಿಸಿ.
  • ಯೋಗ, ವ್ಯಾಯಾಮ ಮಾಡಬೇಕು.
  • ಅತಿಯಾಗಿ ತರಕಾರಿ, ಸೊಪ್ಪು ಬೇಯಿಸಬೇಡಿ.
  • ಊಟ ಮಾಡುವಾಗ ಇತರರೊಂದಿಗೆ ಮಾತನಾಡಬೇಡಿ. ಕಾರಣ ಇತರರೊಂದಿಗೆ ಮಾತನಾಡುತ್ತಾ ಊಟ ಮಾಡಿದರೆ ನೀವು ಎಷ್ಟು ತಿಂದಿದ್ದೀರಾ ಎಂಬುದು ನಿಮಗೆ ತಿಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ತಿನ್ನುವುದೇ ಹೆಚ್ಚಾಗಿ ಬಿಟ್ಟಿರುತ್ತದೆ.
  • ರಾತ್ರಿ ಊಟವನ್ನು ಮಲಗುವುದಕ್ಕೂ 1 ಅಥವಾ 2 ಗಂಟೆ ಮುಂಚಿತವಾಗಿ ಊಟಮಾಡಿ, ವಾಕಿಂಗ್ ಗೆ ಹೋಗಿ ನಂತರ ಮಲಗಿ.
-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com