ಕ್ಯಾನ್ಸರ್ ಕಾಣಿಸುವ ಮುನ್ನವೇ ಲಕ್ಷಣ ಪತ್ತೆ

ಕ್ಯಾನ್ಸರ್ ಕಾಣಿಸಿಕೊಳ್ಳುವ ಮುನ್ನವೇ ರೋಗ ಲಕ್ಷಣ ಗುರುತಿಸಿ ನಿಯಂತ್ರಿಸುವ ಸಂಬಂಧ ಸಂಶೋಧನೆ...
ಕ್ಯಾನ್ಸರ್ ಕಾಣಿಸುವ ಮುನ್ನವೇ ಲಕ್ಷಣ ಪತ್ತೆ

ಮೈಸೂರು: ಕ್ಯಾನ್ಸರ್ ಕಾಣಿಸಿಕೊಳ್ಳುವ ಮುನ್ನವೇ ರೋಗ ಲಕ್ಷಣ ಗುರುತಿಸಿ ನಿಯಂತ್ರಿಸುವ ಸಂಬಂಧ ಸಂಶೋಧನೆ ನಡೆಸಲು ಭಾರತ, ಜಪಾನ್ ಮತ್ತು ದಕ್ಷಿಣ ಆಫ್ರಿಕಾಗಳ ವಿಜ್ಞಾನಿಗಳು ಮುಂದಾಗಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಜಪಾನ್‍ನ ಹಕ್ಕೈಡೊ ವಿವಿ ಪ್ರೊ. ಶಿನಿಚಿರೊ ನಿಶಿಮುರ ಮತ್ತು ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇತಿಯೋಫಿಯಾದ ವಿಜ್ಞಾನಿಗಳ ಸಹಯೋಗದಲ್ಲಿ ಈ ಸಂಶೋಧನೆ ಆರಂಭವಾಗಿದೆ. ಈ ಸಂಬಂಧ ಕರ್ನಾಟಕದ ಕಿದ್ವಾಯಿ ಮತ್ತು ಮಣಿಪಾಲ್ ಆಸ್ಪತ್ರೆಯಿಂದ 10
ಮಂದಿ ಕ್ಯಾನ್ಸರ್ ರೋಗಿಗಳ ಮಾದರಿ ಸಂಗ್ರಹಿಸಲಾಗಿದೆ.

ಒಟ್ಟು 100 ಮಾದರಿಯ ಅಗತ್ಯವಿದೆ. ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಅತ್ಯಾಧುನಿಕ ಯಂತ್ರೋಪಕರಣದ ಮೂಲಕ ಸಂಶೋಧನೆ ನಡೆಸಲಾಗುತ್ತಿದೆ. ಕ್ಯಾನ್ಸರ್ ರೋಗ
ಪತ್ತೆಯಾದವರು ಮತ್ತು ಸಾಮಾನ್ಯರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಯೋಜನೆಯ ಅವಧಿಯು ಮೂರು ವರ್ಷಗಳಾಗಿದ್ದು, ಅಗತ್ಯವಿದ್ದರೆ ಮತ್ತೊಂದು ಅವಧಿಗೆ ವಿಸ್ತರಿಸಬಹುದು. ಯೋಜನೆಗೆ ಜಪಾನ್ ಸರ್ಕಾರ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ದೇಶಗಳು ಸೇರಿ ಕ್ಯಾನ್ಸರ್ ಸಂಬಂಧಿತ
ಸಂಶೋಧನೆಯಲ್ಲಿ ತೊಡಗಿರುವುದು ಇದೇ ಮೊದಲು ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲ ರೀತಿಯ ಕ್ಯಾನ್ಸರ್‍ಗಳ ಗುಣಲಕ್ಷಣ ಗುರುತಿಸುವ ಮತ್ತು ರೋಗ ನಿಯಂತ್ರಿಸುವ ಸಂಬಂಧದ ಸಂಶೋಧನೆಯ ಜೊತೆಗೆ ಮಧುಮೇಹ, ಮರೆವಿನ ಕಾಯಿಲೆ ಬಗ್ಗೆಯೂ ಸಂಶೋಧನೆ ನಡೆಯಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com