ಮಲೇರಿಯಾ ಮಾರಿಗೆ ಲಸಿಕೆ; ಡಬ್ಲ್ಯೂಎಚ್‍ಒ ಅನುಮತಿ ನಿರೀಕ್ಷೆ

ಜಗತ್ತಿನ ಮೊದಲ ಮಲೇರಿಯಾ ಲಸಿಕೆ ಸಿದ್ಧವಾಗಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಅನುಮತಿ ನೀಡಿದರೆ ಕೆಲವೇ ದಿನಗಳಲ್ಲಿ ಆಫ್ರಿಕಾದ ಮಕ್ಕಳು..
ಸೊಳ್ಳೆ(ಸಂಗ್ರಹ ಚಿತ್ರ)
ಸೊಳ್ಳೆ(ಸಂಗ್ರಹ ಚಿತ್ರ)

ಲಂಡನ್: ಜಗತ್ತಿನ ಮೊದಲ ಮಲೇರಿಯಾ ಲಸಿಕೆ ಸಿದ್ಧವಾಗಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಅನುಮತಿ ನೀಡಿದರೆ ಕೆಲವೇ ದಿನಗಳಲ್ಲಿ ಆಫ್ರಿಕಾದ ಮಕ್ಕಳು ಮಲೇರಿಯಾ ಮುಕ್ತರಾಗುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಹಾಕಲಿದ್ದಾರೆ.  

ಪೂರ್ವ ಆಫ್ರಿಕಾದ ಗ್ಲ್ಯಾಕ್ಸೋಸ್ಮಿತ್ ಕ್ಲೇನ್(ಜಿಎಸ್‍ಕೆ) ಅಭಿವೃದ್ಧಿಪಡಿಸಿರುವ ಈ ಮಹತ್ವದ ಲಸಿಕೆಗೆ ಐರೋಪ್ಯ ಒಕ್ಕೂಟದ ಮೆಡಿಸಿನ್ಸ್ ಏಜೆನ್ಸಿ ಈಗಾಗಲೇ ಅನುಮತಿ ನೀಡಿದ್ದು, ಈ ಸುದ್ದಿ ತಿಳಿಯುತ್ತಲೇ ಆಫ್ರಿಕಾದ ಉದ್ದಗಲಕ್ಕೆ ವಿಜ್ಞಾನಿಗಳು ಹರ್ಷಾಚರಣೆಯಲ್ಲಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಬರೋಬ್ಬರಿ ಮೂವತ್ತು ವರ್ಷಗಳ ಸತತ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಲಾಗಿದ್ದ 'ಮಾಸ್ಕ್ವಿರಿಕ್ಸ್'' ಹೆಸರಿನ ಲಸಿಕೆಗೆ ಶುಕ್ರವಾರ ಐರೋಪ್ಯ ಒಕ್ಕೂಟದ ಮೆಡಿಸಿನ್ಸ್ ಏಜೆನ್ಸಿ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಅನುಮತಿಯಷ್ಟೇ ಬಾಕಿ ಇದ್ದು, ಅನುಮತಿ ದೊರೆತಲ್ಲಿ ಮುಂದಿನ ಕೆಲವೇ ವರ್ಷ ಗಳಲ್ಲಿ ಆಫ್ರಿಕಾದ ಮಕ್ಕಳು ಲಸಿಕೆ ಪಡೆಯಲಿದ್ದಾರೆ.

ಜಗತ್ತಿನ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪ್ರಮುಖ ಅಡ್ಡಿಗಳಲ್ಲಿ ಒಂದಾಗಿರುವ ಮಲೇರಿಯಾ ನಿರ್ಮೂಲನೆಯ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ತಮ್ಮ ಸಾಧನೆ ಬಣ್ಣಿಸಿರುವ ಜಿಎಸ್‍ಕೆ ಉಪಾಧ್ಯಕ್ಷ ಅಲನ್ ಪಂಬಾ, ಸಂಸ್ಥೆ ಲಸಿಕೆ ಅಭಿವೃದ್ಧಿಗಾಗಿ ಮೂವತ್ತು ವರ್ಷಗಳಲ್ಲಿ 356 ಮಿಲಿಯನ್ ಡಾಲರ್ ವ್ಯಯಿಸಿರುವುದಾಗಿ ಹೇಳಿದ್ದಾರೆ. ಮಲೇರಿಯಾ ವೈರಾಣುವನ್ನು ಮಣಿಸುವುದು ಅತ್ಯಂತ ಕ್ಲಿಷ್ಟಕರ ಸಾಹಸವಾಗಿತ್ತು. ಆ ಪ್ರಯತ್ನದಲ್ಲಿ ಮತ್ತೆ- ಮತ್ತೆ  ನಿರಾಶರಾಗಿದ್ದಿದೆ ಎಂದಿರುವ ಅವರು, ಅಂತೂ ಇದೀಗ ಮಹತ್ವದ ಮೈಲಿಗಲ್ಲು ಸಾಧಿಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಲಸಿಕೆಗೆ ಅನುಮತಿ ನೀಡುವ ಕುರಿತು ಪ್ರತಿಕ್ರಿಯಿಸಿರುವ ಡಬ್ಲ್ಯೂಎಚ್‍ಒ, ವರ್ಷಾಂತ್ಯಕ್ಕೆ ವೇಳೆಗೆ ಲಸಿಕೆ ಶಿಫಾರಸು ಮಾಡುವುದಾಗಿ ಹೇಳಿದೆ. ಆಫ್ರಿಕಾದ ಎಂಟು ರಾಷ್ಟ್ರಗಳ ವ್ಯಾಪ್ತಿಯಲ್ಲಿ ಸುಮಾರು 13 ಸಂಶೋಧನಾ ಸಂಸ್ಥೆಗಳು 16 ಸಾವಿರ ಮಕ್ಕಳ ಮೇಲೆ ಲಸಿಕೆಯನ್ನು ಪ್ರಯೋಗಾರ್ಥ ಬಳಸಲಾಗಿದ್ದು, ಆರ್ ಟಿಎಸ್,ಎಸ್ ಬಳಕೆಯ 18 ತಿಂಗಳ ಬಳಿಕ ಅರ್ಧದಷ್ಟು ಮಕ್ಕಳಲ್ಲಿ ಮಲೇರಿಯಾ ಗುಣವಾಗಿದೆ.

ಭಾರತದಲ್ಲಿ ಮಲೇರಿಯಾ: ಭಾರತದಲ್ಲಿ  ಅಥರ್ವೇದ ಕಾಲದಿಂದಲೂ ಮಲೇರಿಯಾ ಮಾರಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಉಲ್ಲೇಖವಿದ್ದು, 1930ರ ಸುಮಾರಿಗೆ ಇಡೀ ದೇಶವನ್ನೇ ಈ ಸಾಂಕ್ರಾಮಿಕ ರೋಗ ಗುಡಿಸಿಹಾಕಿತ್ತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ವಾರ್ಷಿಕ ಸುಮಾರು ಒಂದು ಸಾವಿರ ಮಂದಿ ಮಲೇರಿಯಾಕ್ಕೆ ಬಲಿಯಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ  ಆಫ್ರಿಕಾ ವಿಜ್ಞಾನಿಗಳ ಲಸಿಕೆ ಶೋಧ ದೇಶದಲ್ಲೂ ಹೊಸ ಆಶಾಕಿರಣ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com