ಮಕ್ಕಳ ಬುದ್ದಿ ಚುರುಕುಗೊಳ್ಳಲು ಪ್ರತಿದಿನ ಬಾದಾಮಿ ತಿನ್ನಿಸಿ

ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು...
ಬಾದಾಮಿ ಬೀಜ
ಬಾದಾಮಿ ಬೀಜ

ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು. ನಾವು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ ಮಾಡುವುದರ ಜೊತೆಗೆ ನಾವು ತಿನ್ನುವ ಆಹಾರದಲ್ಲಿಯೂ ಸಮತೋಲನ ಕಾಪಾಡಿಕೊಳ್ಳಬೇಕು.

ಅಧಿಕ ಪ್ರಮಾಣದ ರಸಾಯನಿಕಗಳನ್ನು ಬಳಸಿ ಇಂದು ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಿಂದ ಬೆಳೆಯುವ ಆಹಾರ ಪದಾರ್ಥಗಳ ಸತ್ವ ಕುಂದಿ ಹೋಗಿರುತ್ತದೆ. ನಾವು ಹಾಗೂ ಮಕ್ಕಳು ತಿನ್ನುವ ಆಹಾರ ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್, ವಿಟಮಿನ್ ಹಾಗೂ ಮಿನರಲ್ಸ್ ಗಳನ್ನು ಪೂರೈಸುವುದಿಲ್ಲ. ಹೀಗಾಗಿ  ತಿನ್ನುವ ಆಹಾರದದಲ್ಲಿ ಎಷ್ಟು ಶಕ್ತಿ ಇದೆ. ಯಾವ ಆಹಾರ ತಿಂದರೆ ಎಷ್ಟು ಪೋಷಕಾಂಶಗಳು ಲಭ್ಯ ಎನ್ನುವುದನ್ನುಮನದಟ್ಟು ಮಾಡಿಕೊಳ್ಳಬೇಕಾಗಿದೆ. ಅಂಥ ಅತ್ಯಧಿಕ ಪೋಷಕಾಂಶ ಹಾಗೂ ಹೇರಳವಾಗಿ ವಿಟಮಿನ್ ಸಿಗುವ ಪದಾರ್ಥ ಬಾದಾಮಿ.

ಬಾದಾಮಿ ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸು. ಇದರಲ್ಲಿ ಕಡಿಮೆ ಪ್ರಮಾಣದ ಕೊಲೆಸ್ಟ್ಟಾಲ್ ಇರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನು ತಿನ್ನಬಹುದು. ಇಲ್ಲವೇ ರೋಸ್ಟ್ ಮಾಡಿಯಾದರೂ ತಿನ್ನಬಹುದು. ಹೇಗೆ ತಿಂದರೂ ಬಾದಾಮಿ ರುಚಿಕರ ಹಾಗೂ ಆರೋಗ್ಯಕರ.

ಪ್ರತಿದಿನ ಒಂದು ನಿಗದಿತ ಪ್ರಮಾಣದ ಬಾದಾಮಿ ತಿನ್ನುವುದರಿಂದ ಹೃದಯ ಆರೋಗ್ಯವಾಗಿರುತ್ತದೆ. ಹೃದಯ ರೋಗ ಹಾಗೂ ಮಧುಮೇಹದಿಂದ ದೂರವಿರಬಹುದು. ಬಾದಾಮಿ ಸೇವನೆ ದೇಹದಲ್ಲಿ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಕ್ಕಳಿಗೆ ರಾತ್ರಿ ಬಾದಾಮಿಯನ್ನು ನೆನೆಸಿ ಬೆಳಗ್ಗೆ ತಿನ್ನಲು ಕೊಡಿ. ಇಲ್ಲದಿದ್ದರೆ ಬಾದಾಮಿಯನ್ನು ಪುಡಿ ಮಾಡಿ ಹಾಲಿನ ಜೊತೆಗೆ ಮಿಕ್ಸ್ ಮಾಡಿ ನೀಡುವುದರಿಂದ ಬೆಳೆಯುವ ಮಕ್ಕಳಿಗೆ ಅಗತ್ಯವಾದ ಪೋಷಕಾಂಶ ಬಾದಾಮಿಯಿಂದ ಸಿಗುತ್ತದೆ. ಇದರ ಜೊತೆಗೆ ಮಕ್ಕಳ ಬುದ್ದಿ ಚುರುಕುಗೊಳ್ಳುತ್ತದೆ. ಇನ್ನು ಸರಿಯಾಗಿ ಊಟ, ತಿಂಡಿ ತಿನ್ನದ ಮಕ್ಕಳಿಗೆ ಬಾದಾಮಿ ತುಂಬಾ ಉಪಯುಕ್ತ. ಆಹಾರ ಸೇವಿಸದಿದ್ದಲ್ಲಿ 10 ಬಾದಾಮಿ ತಿನ್ನಿಸಿದರೆ ಆಹಾರದಷ್ಟೆ ಶಕ್ತಿಯನ್ನು ಬಾದಾಮಿ ನೀಡುತ್ತದೆ. ಪ್ರತಿದಿನ ಬಾದಾಮಿ ತಿಂದರೆ ಮಕ್ಕಳ ಬೆಳವಣಿಗೆಯೂ ಚೆನ್ನಾಗಿರುತ್ತದೆ.ಬಾದಾಮಿಯಲ್ಲಿ ವಿಟಮಿನ್ ಇ ಹೆಚ್ಚು ಇರುವುದರಿಂದ ಕಣ್ಣಿಗೆ ಉತ್ತಮ. ಬಾದಾಮಿಯಲ್ಲಿ ಕ್ಯಾಲ್ಸಿಯಂ. ಮೆಗ್ನಿಶಿಯಂ, ಪೊಟಾಶಿಯಂ ಸೇರಿದಂತೆ ಪ್ರೋಟಿನ್ ಹಾಗೂ ಫೈಬರ್ ಅಂಶವಿದೆ.23 ಬಾದಾಮಿಯಲ್ಲಿ ಸುಮಾರು 160 ಪ್ರಮಾಣದ ಕ್ಯಾಲರಿ  ಇರುತ್ತದೆ.

ಪ್ರತಿದಿನ ಇಂತಿಷ್ಟು ಪ್ರಮಾಣದ ಬಾದಾಮಿ ತಿಂದರೆ ಸಣಕಲು ದೇಹದವರು ತೂಕ ಹೆಚ್ಚಿಸಿಕೊಳ್ಳಬಹುದು ಹಾಗೂ ಆರೋಗ್ಯಯುತವಾಗಿರಬಹುದು. ಜೊತೆಗೆ ಸ್ಥೂಲಕಾಯದವರು ಬಾದಾಮಿ ತಿಂದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.


ಬಾದಾಮಿ ಚರ್ಮಕ್ಕೂ ಉತ್ತಮ. ಬಾದಾಮಿ ತಿನ್ನುವುದರಿಂದ ಚರ್ಮದ ಸೌಂದರ್ಯ ವೃದ್ಧಿಯಾಗುತ್ತದೆ ಹಾಗೂ ಆರೋಗ್ಯಯುತವಾಗಿರುತ್ತದೆ. ಒಣ ಚರ್ಮದವರು ಬಾದಾಮಿ ತಿಂದರೆ ಹೆಚ್ಚು ಉಪಯುಕ್ತ. ಅದರಲ್ಲಿರುವ ಎಣ್ಣೆಯ ಅಂಶ ಚರ್ಮ ಶುಷ್ಕವಾಗುವುದನ್ನು ತಡೆಗಟ್ಟುತ್ತದೆ. ಇದರಿಂದ ಒಣ ಚರ್ಮದವರಿಗೆ ಬರಬಹುದಾದ ಚರ್ಮ ಸಂಬಂಧಿ ರೋಗಗಳಿಂದ ದೂರವಿರಬಹುದು. ಇದಲ್ಲದೆ ಬಾದಾಮಿ ತಿನ್ನುವುದರಿಂದ ದೇಹಕ್ಕೆ ಇನ್ನು ಹತ್ತು ಹಲವು ಉಪಯೋಗಗಳಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com