ಪ್ರತಿ ದಿನ ಮೊಸರು ಸೇವನೆಯಿಂದ ಹೃದಯ ಸಂಬಂಧಿ ರೋಗಗಳಿಗೆ ಮುಕ್ತಿ

ಮೊಸರಿನ ಹೆಸರು ಕೇಳದವರಿಲ್ಲ... ಮೊಸರನ್ನು ತಿನ್ನದವರಿಲ್ಲ...ಮೊಸರಿಲ್ಲದ ಊಟ ಊಟವೇ ಅಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊಸರಿನ ಹೆಸರು ಕೇಳದವರಿಲ್ಲ... ಮೊಸರನ್ನು ತಿನ್ನದವರಿಲ್ಲ...ಮೊಸರಿಲ್ಲದ ಊಟ ಊಟವೇ ಅಲ್ಲ...ನಮ್ಮ ದೈನಂದಿನ ಆಹಾರದಲ್ಲಿ ಮೊಸರಿಗೆ ಒಂದು ಸ್ಥಾನ. ಆರೋಗ್ಯ ದೃಷ್ಟಿಯಿಂದ ಮೊಸರು ಬಹಳ ಉಪಯೋಗ. ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧ ರೋಗಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯ ಆರೋಗ್ಯವಾಗಿರುತ್ತದೆ. ಮೊಸರನ್ನು ತಿನ್ನುವುದಕ್ಕೆ ಮಾತ್ರವಲ್ಲ. ಚರ್ಮ ರಕ್ಷಣೆಗೆ, ಕೂದಲಿನ ಆರೈಕೆಗೂ ಬಳಸಬಹುದು.

ಆರೋಗ್ಯ ವೃದ್ಧಿಗೆ ಮೊಸರು
ನಿತ್ಯವೂ ಮೊಸರು ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಮೊಸರಿಗೆ ಅನ್ನ, ಬೆಲ್ಲ ಸೇರಿಸಿ, ಊಟ ಮಾಡುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಸಿಹಿ ಮೊಸರಿಗೆ ಕಾಳು ಮೆಣಸಿನ ಪುಡಿ ಮತ್ತು ಬೆಲ್ಲ ಅನ್ನದೊಂದಿಗೆ ಸೇರಿಸಿ ಸೇವಿಸಿದರೆ ಉರಿ ಮೂತ್ರದಿಂದಾದ ಉರಿ ಶಮನವಾಗುವುದು. ಸಿಹಿ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸಿದರೆ ತೂಕ ವರ್ಧಿಸುತ್ತದೆ.ಮೊಸರು ದೇಹವನ್ನು ತಂಪಾಗಿಸುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆ ಬೆಳವಣಿಗೆ ಹಾಗೂ ಗಟ್ಟಿಯಾಗಿಸುತ್ತದೆ.

ಅರಿಶಿನ ಕೊಂಬನ್ನು ತೇಯ್ದು, ಮೊಸರಿನೊಂದಿಗೆ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಒಂದು ಚಮಚ ಮೆಂತ್ಯೆ ಕಾಳನ್ನು ಮೊಸರಿನಲ್ಲಿ ಸೇರಿಸಿ, ನುಂಗುವುದರಿಂದಲೂ ಪರಿಹಾರವಾಗುತ್ತದೆ. ಮೊಸರಿಗೆ ಅರಸಿನ ಬೆರೆಸಿ ಲೇಪಿಸುವುದರಿಂದ ತುರಿಕೆ, ಇಸುಬು, ನೀರುಗುಳ್ಳೆ ಇತ್ಯಾದಿ ಚರ್ಮ ರೋಗಗಳಲ್ಲಿ ಉತ್ತಮ ಪರಿಣಾಮ ಕಂಡುಬರುವುದು. ಗರ್ಭಿಣಿಯರು ಮೊಸರು ಸೇವಿಸುವುದರಿಂದ ಬಹಳ ಉತ್ತಮ. ಇದರಲ್ಲಿರುವ ಪಾಲಿಕ್ ಆಸಿಡ್ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಚರ್ಮ ಹಾಗೂ ಕೂದಲ ಆರೈಕೆಯಲ್ಲಿ ಮೊಸರಿನ ಪಾತ್ರ
ನಿಂಬೆ ಸಿಪ್ಪೆ, ಕಿತ್ತಳೆ ಸಿಪ್ಪೆ ಒಣಗಿಸಿ, ಪುಡಿಮಾಡಿ ಮೊಸರಿನಲ್ಲಿ ಕಲಸಿ, ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಮುಖದಲ್ಲಿರುವ ಕಪ್ಪು ಕಲೆ ಹೋಗುತ್ತದೆ.ನಿಂಬೆರಸ, ಕಿತ್ತಳೆ ರಸ, ಕ್ಯಾರೆಟ್‌ ರಸ, ಮೊಸರಿನೊಂದಿಗೆ ಸೇರಿಸಿ, ಜತೆಗೆ ಸ್ವಲ್ಪ ಆಲಿವ್ ಎಣ್ಣೆ ಸೇರಿಸಿದ ಮಿಶ್ರಣವನ್ನು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುವುದು. ಎಲ್ಲ ತರದ ಚರ್ಮದವರಿಗೂ ಇದು ಉತ್ತಮ ಪರಿಣಾಮ ನೀಡುತ್ತದೆ.

ಎರಡು ಚಮಚ ಮೊಸರು, ಒಂದು ಚಮಚ ಮೈದಾ, ಕಡ್ಲೆಹಿಟ್ಟು ಒಂದು ಚಮಚ, ಚಿಟಿಕೆ ಅರಸಿನ ಪುಡಿ, ರೋಸ್‌ವಾಟರ್‌ನಲ್ಲಿ ಕಲಸಿ, ಮಿಶ್ರಣ ತಯಾರಿಸಿ, ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ತೊಳೆದರೆ ಚರ್ಮ ಮೃದುವಾಗುತ್ತದೆ.

 ಬಾಳೆಹಣ್ಣು ಮತ್ತು ಪಪ್ಪಾಯಿ ಹಣ್ಣಿನ ಎರಡು ಚಮಚ ತಿರುಳಿಗೆ ಎರಡು ಚಮಚ ಮೊಸರು ಸೇರಿಸಿ, ಈ ಪೇಸ್ಟನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ಮುಖ ಸ್ವಚ್ಛವಾಗಿ ಕಾಂತಿಯುಕ್ತವಾಗುತ್ತದೆ.ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ಚರ್ಮದ ಶುಷ್ಕತೆ ಕಡಿಮೆಯಾಗುತ್ತದೆ..

ಮೊಸರು  ನೈಸರ್ಗಿಕವಾಗಿ ಕೂದಲಿನ ಪೋಷಣೆ ಮಾಡಲು ಸಹಕಾರಿ. ಮೊಸರನ್ನು ಕೂದಲಿನ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಹುಳಿ ಮೊಸರಿಗೆ ಲಿಂಬೆರಸ, ಮುಲ್ತಾನಿ ಮಿಟ್ಟಿ ಸೇರಿಸಿ ತಲೆಗೆ ಲೇಪಿಸಿ, 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುವುದರೊಂದಿಗೆ ಕೂದಲು ಉದುರುವುದೂ ನಿಲ್ಲುತ್ತದೆ. ಮೆಹಂದಿ ಪುಡಿಗೆ ಮೊಸರು ಸೇರಿಸಿ, ತಲೆಗೆ ಹಚ್ಚಿದರೆ, ಕೂದಲು ಉದುರುವುದು ನಿವಾರಣೆಯಾಗುತ್ತದೆ. ನೆಲ್ಲಿಕಾಯಿ ಪುಡಿ, ನಿಂಬೆರಸ, ಮೊಸರಿನೊಂದಿಗೆ ಸೇರಿಸಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು, ಸ್ನಾನ ಮಾಡುವುದರಿಂದ ಕೂದಲು ಕಪ್ಪಾಗುತ್ತದೆ. ಬಿಳಿ ದಾಸವಾಳ ಹೂವನ್ನು ಮೊಸರಿನೊಂದಿಗೆ ಅರೆದು, ತಲೆಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುವುದರೊಂದಿಗೆ ನಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com