ಹಾದಿ ತಪ್ಪಿದ ಹಾರ್ಮೋನ್

ಸ್ತ್ರೀ ಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಹಾರ್ಮೋನ್ ಅಸಮತೋಲನವು ಒಂದು. ಮಹಿಳೆಯಲ್ಲಿ ಅಂಡಾಣು ಉತ್ಪತ್ತಿಯಾಗದೇ, ಹಾರ್ಮೋನಿನ ಸಮತೋಲನವನ್ನು ಕಾಯ್ದುಕೊಳ್ಳಲು...
ಸ್ತ್ರೀ ಯರಲ್ಲಿ ಬಂಜೆತನ ಸಮಸ್ಯೆ
ಸ್ತ್ರೀ ಯರಲ್ಲಿ ಬಂಜೆತನ ಸಮಸ್ಯೆ
Updated on

ಸ್ತ್ರೀ ಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಹಾರ್ಮೋನ್ ಅಸಮತೋಲನವು ಒಂದು. ಮಹಿಳೆಯಲ್ಲಿ ಅಂಡಾಣು ಉತ್ಪತ್ತಿಯಾಗದೇ, ಹಾರ್ಮೋನಿನ ಸಮತೋಲನವನ್ನು ಕಾಯ್ದುಕೊಳ್ಳಲು ಅಸಮರ್ಥಳಾ ದಾಗ, ಅದರಿಂದ ಯಾವುದೇ ಒಂದು ನಿರ್ದಿಷ್ಟ ಹಾರ್ಮೋನಿನ ಮಟ್ಟದಲ್ಲಿ ವಿಪರೀತ ಏರಿಕೆ ಅಥವಾ ಇಳಿಕೆಯುಂಟಾಗ ಬಹುದು.

ಈ ರೀತಿಯಾಗಿ ಉಂಟಾಗುವ ಹಾರ್ಮೋನಿನ ಅಸಮತೋಲನದ ಲಕ್ಷಣಗಳನ್ನು ಸುಲಭವಾಗಿ ಗುರುತಿಸಬಹುದಾಗಿರುವುದರಿಂದ ಆರಂಭದಲ್ಲಿಯೇ ಚಿಕಿತ್ಸೆ ಪ್ರಾರಂಭಿಸುವುದು ಸಾಧ್ಯ. ಅನಿಯಮಿತ ಋತುಚಕ್ರ, ಅತಿಯಾದ ಋತುಸ್ರಾವ ಅಥವಾ ಅತಿಕಡಿಮೆ ಋತುಸ್ರಾವ, ಹೊಟ್ಟೆ ಭಾಗದಲ್ಲಿ ನೋವು, ಕೆಲವು ಅವಧಿಯವರೆಗೆ ಋತುಚಕ್ರ ಸಂಭವಿಸದೇ ಇರುವುದು ಮತ್ತು ದೇಹದ ತೂಕದಲ್ಲಿ ಅತಿಯಾದ ಏರಿಕೆ ಅಥವಾ ಇಳಿಕೆಯಾಗುವುದು ಮುಂತಾದವು ಈ ಸಮಸ್ಯೆಯ ಲಕ್ಷಣಗಳು.

ಗ್ರಂಥಿಗಳಲ್ಲಿನ ಸಮಸ್ಯೆ, ಉದಾಹರಣೆಗೆ ಥೈರಾಯ್ಡ್, ಪಿಟ್ಯುಟರಿ ಮತ್ತು ಹೈಪೊಥಾಲಮಸ್ ಗ್ರಂಥಿಗಳ ಸಮಸ್ಯೆ. ಈ ಗ್ರಂಥಿಗಳು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಉತ್ಪಾದಿಸುವ ಪ್ರಾಥಮಿಕ ಹೊಣೆ ಹೊಂದಿವೆ. ಸಂತಾನ ನಿಯಂತ್ರಕ ಮಾತ್ರೆಗಳನ್ನು ತಿನ್ನುವುದರಿಂದ, ಒತ್ತಡ ಮತ್ತು ಹೈಪೊಥೈರಾಯ್ಡಿಸಂನಂಥ ಖಾಯಿಲೆಗಳಿಂದ ಈ ಗ್ರಂಥಿಗಳಲ್ಲಿ ಸಮಸ್ಯೆಯುಂಟಾಗಬಹುದು. ಈ ಅಸಮತೋಲನದಿಂದಾಗಿ, ಅಂಡಾಣು ಉತ್ಪತ್ತಿಕ್ರಿಯೆ ನಿಂತು ಗರ್ಭಧಾರಣೆಗೆ ತೊಡಕಾಗಬಹುದು.

ಅಂಡಾಣು ಉತ್ಪತ್ತಿ ಕ್ರಿಯೆಯಲ್ಲಿನ ಸಮಸ್ಯೆ, ಉದಾಹರಣೆಗೆ ಗ್ರಂಥಿಯಲ್ಲಿನ ಸಮಸ್ಯೆ ಅಥವಾ ಪ್ರೊಲಾಕ್ಟಿನ್‍ನ ಅತಿಯಾದ ಉತ್ಪಾದನೆಯು ಹಾರ್ಮೋನಿನ ಅಸಮತೋಲನ ಉಂಟು ಮಾಡುತ್ತದೆ. ಪ್ರೊಲಾಕ್ಟಿನ್ ಎದೆಹಾಲಿನ ಉತ್ಪಾದನೆಗೆ ಕಾರಣವಾಗಿರುವ ಹಾರ್ಮೋನು. ಇದು ಅಂಡಾಣು ಬಿಡುಗಡೆಯ ಪ್ರಕ್ರಿಯೆಯಲ್ಲಿ ಏರುಪೇರು ಉಂಟು ಮಾಡಬಹುದು.

ಅಪೂರ್ಣವಾದ ಅಂಡಾಣು ಬಿಡುಗಡೆಯ ಪ್ರಕ್ರಿಯೆಯನ್ನು `ಅನ್‍ಒವ್ಯುಲೇಶನ್' ಎಂದು ಕರೆಯುತ್ತಾರೆ. ಇದು ಆಂಡ್ರೋಜನ್‍ನ ಅತಿಯಾದ ಉತ್ಪತ್ತಿಗೆ ಕಾರಣವಾಗುತ್ತದೆ. ಇದರ ಅತಿಯಾದ (ನಿರ್ದಿಷ್ಟವಾಗಿ ಟೆಸ್ಟೊಸ್ಟೆರಾನ್‍ನ) ಉತ್ಪತ್ತಿಯು ಅಂಡಾಣು ಬಿಡುಗಡೆಯನ್ನು ನಿರ್ಧರಿಸುವ ಮತ್ತು ಸಂಕೇತ ನೀಡುವ ಈಸ್ಟ್ರೋಜನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ.

ಅಂಡಾಣು ಬಿಡುಗಡೆಗೆ ಅಗತ್ಯವಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್‍ನಕುಂಠಿತ ಉತ್ಪಾದನೆಯಿಂದ ಅಂಡಾಣುವಿನ ಗುಣಮಟ್ಟ ಕ್ಷೀಣಿಸಬಹುದು ಅಥವಾ ಅಂಡಾಣು ಫಲಿತವಾಗಲು ವಿಫಲವಾಗಬಹುದು. ಈ ರೀತಿ ಫಲಿತವಾಗಲು ವಿಫಲವಾದ ಅಂಡಾಣುಗಳು ಗುಳ್ಳೆಗಳಾಗಿ ಅಂಡಾಶಯದ ಒಳಭಾಗ ಮತ್ತು ಹೊರಭಾಗದಲ್ಲಿ ಸಾಲುಗಟ್ಟಬಹುದು. (ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ - ಪಿಸಿಒಎಸ್) ಅದಲ್ಲದೇ ಪಿಸಿಒಎಸ್‍ನಿಂದ ಇನ್ಸುಲಿನ್‍ನ ಉತ್ಪಾದನೆಯು ಹೆಚ್ಚಿ ಟೈಪ್-ಜಿಜಿ ಡಯಾಬಿಟಿಸ್ ಉಂಟಾಗಬಹುದು ಮತ್ತು ಅಂಡ್ರೊಜನ್‍ನ ಉತ್ಪಾದನೆಯು ಹೆಚ್ಚಬಹುದು.

ಮಹಿಳೆಯರಲ್ಲಿ ಋತುಬಂಧವು 40 ವಯಸ್ಸಿನ ನಂತರ ಶುರುವಾಗುತ್ತದೆ. ಒಂದು ವೇಳೆ ಇದು ಮುಂಚಿತವಾಗಿ ಶುರುವಾದಲ್ಲಿ ಇದು ಬಂಜೆತನದ ಖಚಿತ ಲಕ್ಷಣವಾಗಿದೆ. 40 ವರ್ಷದಲ್ಲಿಯೂ ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯು ಚೆನ್ನಾಗಿಯೇನಡೆಯುತ್ತದೆ. ಅವಧಿಗೆ ಮುನ್ನ ಅಂಡಾಶಯದ ವಿಫಲತೆಯಿಂದ ಸ್ತ್ರೀ ಬಂಜೆತನವು ಉಂಟಾಗುವ ಪ್ರಮಾಣವು ಕೇವಲ 1% ಇರುತ್ತದೆ.

ಗರ್ಭಕಂಠದಲ್ಲಿ ಇರುವ ಲೋಳೆಯಂಥ ಪದಾರ್ಥವು ಸಾಮಾನ್ಯವಾಗಿ ಇರಬೇಕಾದ ಸಹಜ ಸ್ಥಿತಿಯಲ್ಲಿ ಇಲ್ಲದಿರುವುದನ್ನು ಗರ್ಭಕಂಠದ ಅಸಹಜ ಮ್ಯೂಕಸ್ ಎನ್ನುತ್ತಾರೆ; ಅಂಡಾಣು ಬಿಡುಗಡೆಯ ಸಮಯದಲ್ಲಿ ವೀರ್ಯಾಣುವು ಸುಲಭವಾಗಿ ಗರ್ಭಕಂಠದಲ್ಲಿ ಸಾಗಿ ಅಂಡಾಣು ಫಲಿತಗೊಳ್ಳಲು ಸಹಕಾರಿಯಾಗುವಂತೆ ಮ್ಯೂಕಸ್‍ನ ಸಾಂದ್ರತೆಯು ನಿಯಂತ್ರಿಸಲ್ಪಡುತ್ತದೆ. ಮ್ಯೂಕಸ್‍ನ ಸಾಂದ್ರತೆಯಲ್ಲಿನ ಬದಲಾವಣೆಯು ಸಾಮಾನ್ಯವಾಗಿ ಇರಬೇಕಾದ ಸಾಂದ್ರತೆಗಿಂತ ತೆಳುವಾಗಿದ್ದು, ನೀರು ನೀರಾಗಿದ್ದಲ್ಲಿ, ವೀರ್ಯಾಣುವಿನ ಚಲನೆಗೆ ಅಡ್ಡಿಯುಂಟಾಗಿ ಅಂಡಾಣು ಫಲಿತಗೊಳ್ಳಲು ಸಾಧ್ಯವಾಗದಿರಬಹುದು. ಪುನಃ ಪುನಃ ಸೋಂಕು ತಗುಲುವಿಕೆ ಮತ್ತು ಲೈಂಗಿಕ ರೋಗಗಳಿಂದಾಗಿ ಗರ್ಭಕಂಠದಲ್ಲಿ ಮ್ಯೂಕಸ್‍ನ ಉತ್ಪಾದನೆಯು ಸರಿಯಾಗಿ ಆಗದಿರಬಹುದು.

ವ್ಯಕ್ತಿಯ ವಯಸ್ಸು, ಆರೋಗ್ಯ, ವೈದ್ಯಕೀಯ ಹಿನ್ನೆಲೆ, ಬಂಜೆತನದ ಕಾರಣಗಳು, ಕೆಲವು ಔಷಧ, ಚಿಕಿತ್ಸಾ ವಿಧಾನಗಳು, ಚಿಕಿತ್ಸೆಯನ್ನು  ಸಹಿಸುವ ಶಕ್ತಿ, ಮತ್ತು ಹಾರ್ಮೋನು ಅಸಮತೋಲನದ ಚಿಕಿತ್ಸೆಗೆ ಅನುಸರಿಸಬೇಕಾದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಬಂಜೆತನ ನಿವಾರಣಾ ತಜ್ಞರು ಹಾರ್ಮೋನಿನಿಂದ ಉಂಟಾಗುವ ಬಂಜೆತನದ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ಹಾರ್ಮೋನು ಅಸಮತೋಲನ ಚಿಕಿತ್ಸಾ ವಿಧಾನವು- ಔಷಧಗಳು, ಶಸ್ತ್ರಕ್ರಿಯೆ, ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ, ಇನ್ ವಿಟ್ರೊ ಫರ್ಟಿಲೈಸೇಶನ್, ಇಂಟ್ರಾಸಿಟೊಪ್ಲಾಸ್ಮಿಕ್ ಸ್ಪರ್ಮ್  ಇಂಜೆಕ್ಷನ್, ಗ್ಯಾಮೆಟ್ ಇಂಟ್ರಾಫಾಲೋಪಿಯನ್ ಟ್ರಾನ್ಸ್ ಫರ್, ಡೋನರ್ ಎಗ್ಸ್, ಎಂಬ್ರಿಯೊ ಅಡಾಪ್ಶನ್ ಮುಂತಾದ ವಿಧಾನಗಳನ್ನು ಒಳಗೊಂಡಿರಬಹುದು.

ಹಾರ್ಮೋನು ಮತ್ತು ಬಂಜೆತನ ವಿಷಯದ ಕುರಿತು ಹೆಚ್ಚಿನ ಮಾತಿಗೆ ಸಂಪರ್ಕಿಸಿ.
ಗುಣಶೀಲ ಫರ್ಟಿಲಿಟಿ ಸೆಂಟರ್,
ದೂ. 080-41312600/ 080-26673585.


- ಡಾ.ದೇವಿಕಾ ಗುಣಶೀಲ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com