ಉಷ್ಣಗುಳ್ಳೆ ನಿವಾರಣೆಗೆ ಮನೆ ಮದ್ದು

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಚರ್ಮ ರೋಗವೆಂದರೆ ಉಷ್ಣ ಗುಳ್ಳೆ. ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ...
ಉಷ್ಣ ಗುಳ್ಳೆ(ಸಂಗ್ರಹ ಚಿತ್ರ)
ಉಷ್ಣ ಗುಳ್ಳೆ(ಸಂಗ್ರಹ ಚಿತ್ರ)

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಚರ್ಮ ರೋಗವೆಂದರೆ ಉಷ್ಣ ಗುಳ್ಳೆ. ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ ಕೀವು ತುಂಬಿರುವ ಗುಳ್ಳೆ. ಮೊದಲು ಸಣ್ಣ ಗುಳ್ಳೆಯಂತೆ ಬಂದು ದಿನ ಕಳೆದಂತೆ ಕೀವು ತುಂಬಿ ದೊಡ್ಡದಾಗುತ್ತದೆ. ಇದು ಸೋಂಕಿನಿಂದ ಹರಡುವಂತಹ ರೋಗವಾಗಿದ್ದು, ಇದನ್ನು ಮನೆಯಲ್ಲಿ ಬಳಸುವ ದಿನನಿತ್ಯದ ಆಹಾರದ ಪದಾರ್ಥಗಳ ಮೂಲಕ ನಿವಾರಣೆ ಮಾಡಬಹುದು.

ಶಾಖ ನೀಡುವುದು
ಈ ಗುಳ್ಳೆಯ ಮೇಲೆ ಹಾಗೂ ಸುತ್ತಾ ಮುತ್ತಾ ಬಿಸಿ ನೀರಿನ ಶಾಖ ನೀಡಿದರೆ, ಗಟ್ಟಿಯಾದ ಚರ್ಮ ಮೃದುಗೊಳ್ಳುತ್ತದೆ. ಇದರಿಂದ ಕೀವು ಆಚೆ ಬಂದು ಚರ್ಮ ಒಣಗುತ್ತದೆ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರಸಿ ಶಾಖ ನೀಡಬಹುದು, ಅಥವಾ ಸ್ವಚ್ಛ ಬಟ್ಟೆಯೊಂದನ್ನು ತೆಗೆದುಕೊಂಡು ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ನೆನಸಿ ನಂತರ ಅದನ್ನು ಗುಳ್ಳೆಯ ಮೇಲೆ ಇಡುತ್ತಾ ಬರಬೇಕು. ದಿನಕ್ಕೆ ಆರು ಬಾರಿ ಈ ರೀತಿ ಮಾಡುತ್ತಾ ಬಂದರೆ ಗುಳ್ಳೆ ಕರಗುತ್ತದೆ.

ಹಾಲಿನೊಂದಿಗೆ ಹರಿಶಿನ ಸೇವಿಸಿ

ರಕ್ತ ಶುದ್ಧಗೊಳಿಸುವಂತಹ ಶಕ್ತಿ ಹರಿಶಿನಕ್ಕಿದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಹರಿಶಿನ ಬೆರಸಿ ದಿನಕ್ಕೆ ಮೂರು ಬಾರಿ ಸೇವಿಸಿರಿ.
ಹರಿಶಿನ ಮತ್ತು ಶುಂಠಿ ಪೇಸ್ ತಯಾರಿಸಿಕೊಂಡು, ನೇರವಾಗಿ ಗುಳ್ಳೆಯ ಮೇಲೆ ಹಚ್ಚುಬಹುದು.

ಹರಳೆಣ್ಣೆ

ನಂಜು ನಿರೋಧಕ ಶಕ್ತಿ ಹರಳೆಣ್ಣೆಗೆ ಇದೆ. ಹತ್ತಿಯನ್ನು ಹರಳೆಣ್ಣೆಯಲ್ಲಿ ನೆನಸಿ ಅದನ್ನು ಗುಳ್ಳೆಯ ಮೇಲೆ ಇಡುತ್ತಾ ಬರಬೇಕು. ಇದು ನಂಜನ್ನು ಕಡಿಮೆಗೊಳಿಸುತ್ತಾ ಬರುತ್ತದೆ.

ಹಾಲು
ಪ್ರಾಚೀನ ಕಾಲದಿಂದಲೂ ಹಾಲನ್ನು ಚಿಕಿತ್ಸೆಗಾಗಿ ಬಳಸಿಕೊಂಡು ಬರಲಾಗುತ್ತಿದೆ. ಒಂದು ಕಪ್ ಬಿಸಿ ಹಾಲಿಗೆ ಮೂರು ಚಮಚ ಉಪ್ಪು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಗಟ್ಟಿಮಾಡಿಕೊಳ್ಳಲು ಬ್ರೆಡ್ ಪೌಡರ್ ಹಾಕಿ. ಇದನ್ನು ನೇರವಾಗಿ ಗುಳ್ಳೆಯ ಮೇಲೆ ಹಚ್ಚಿ. ದಿನಕ್ಕೆ 7-8 ಬಾರಿ ಇದೇ ರೀತಿ ಮಾಡುತ್ತಾ ಬರಬೇಕು.

ಈರುಳ್ಳಿ

ಈರುಳ್ಳಿಯಲ್ಲಿ ಸೂಕ್ಷ್ಮಜೀವಿಗಳಿದ್ದು ಇದು ಗುಳ್ಳೆಗಳನ್ನು ಬೇಗ ಮಾಯಮಾಡುತ್ತದೆ. ಈರುಳ್ಳಿಯ ತುಂಡನ್ನು ತೆಗೆದು ಅದನ್ನು ಉಷ್ಣಬೊಕ್ಕೆಯ ಮೇಲೆ ಇಟ್ಟು, ಒಂದು ಬಟ್ಟೆಯಿಂದ ಬಿಗಿಯಾಗಿ ಕಟ್ಟಬೇಕು. ಇದೇ ರೀತಿ ದಿನಕ್ಕೆ 4 ರಿಂದ 5 ಬಾರಿ ಮಾಡುತ್ತಾ ಬಂದರೆ, ಉಷ್ಣ ಬೊಕ್ಕೆ ಒಣಗುತ್ತಾ ಬರುತ್ತದೆ.

ಮೊಟ್ಟೆ
ಬೇಯಿಸಿದ ಮೊಟ್ಟೆಯ ಬಿಳಿ ಭಾಗವನ್ನು ನೆನಸಿ ಅದನ್ನು ಗುಳ್ಳೆಯ ಮೇಲೆ ಇಟ್ಟು ಬಟ್ಟೆಯಿಂದ ಕಟ್ಟಿ.

ಬೇಕನ್

ಬೇಕನ್ ಅಂದರೆ ಉಪ್ಪುಹಚ್ಚಿದ ಹಂದಿಯ ಮಾಂಸ. ಈ ಮಾಂಸವನ್ನು ತೆಗೆದು ಬಟ್ಟೆಯಲ್ಲಿಟ್ಟು ಗುಳ್ಳೆಯ ಸುತ್ತಾ ಕಟ್ಟಬೇಕು. ಇದು ಕೂಡ ಗುಳ್ಳೆಯನ್ನು ಒಣಗುವಂತೆ ಮಾಡುತ್ತದೆ.

ಜೋಳದ ಹಿಟ್ಟು
ಕುದಿಯುವ ಬಿಸಿನೀರಿಗೆ ಜೋಳದ ಹಿಟ್ಟು ಹಾಕಿ ಪೇಸ್ಟ್ ಸಿದ್ಧಪಡಿಸಿಕೊಂಡು ಅದನ್ನು ಗುಳ್ಳೆಯ ಮೇಲೆ ಹಾಕಿ ಬಟ್ಟೆಯಿಂದ ಕಟ್ಟಬೇಕು. ಗುಳ್ಳೆ ಒಣಗುವವರೆಗೆ ಈ ರೀತಿ ಮಾಡುತ್ತಾ ಬರಬೇಕು.

ಜೀರಿಗೆ

ಜೀರಿಗೆಯನ್ನು ಪುಡಿ ಮಾಡಿದ ನಂತರ ನೀರು ಬೆರೆಸಿ ಪೇಸ್ಟ್ ಮಾಡಿಕೊಂಡು ಬೊಕ್ಕೆಯ ಮೇಲೆ ಹಚ್ಚುತ್ತಾ ಬರಬೇಕು.

ಪಾರ್ಸ್ಲಿ ಎಲೆಗಳು
ನೀರಿನಲ್ಲಿ ಪಾರ್ಸ್ಲಿ ಎಲೆಗಳು ಕುದಿಸಬೇಕು. ತೆಳ್ಳಗಿನ ಬಟ್ಟೆಯಲ್ಲಿ ಅದನ್ನು ಸುತ್ತಬೇಕು. ಬ್ಯಾಂಡೇಜ್ ಮಾದರಿ ಮಾಡಿಕೊಂಡು ಅದನ್ನು ಗುಳ್ಳೆಗೆ ಕಟ್ಟಬೇಕು. ಇದು ಯಾವುದೇ ರೀತಿಯ ಸೋಂಕು ಹರಡಲು ಬಿಡದೇ, ಕೀವು ಆಚೆ ಬಂದು, ಬೇಗ ಒಣಗಲು ಸಹಕಾರಿಯಾಗತ್ತದೆ.

ಕಪ್ಪು ಬೀಜ

ಕಪ್ಪು ಬೀಜ ಚರ್ಮ ರೋಗ ನಿವಾರಣೆಗೆ ಸಹಕಾರಿಯಾಗುತ್ತದೆ. ಈ ಕಪ್ಪು ಬೀಜವನ್ನು ಪುಡಿಮಾಡಿಕೊಂಡು ಪೇಸ್ಟ್ ತಯಾರಿಸಿ ಚರ್ಮದ ಮೇಲೆ ಹಚ್ಚುತ್ತಾ ಬಂದರೆ ಗುಳ್ಳೆಗಳು ಮಾಯವಾಗುತ್ತವೆ.

ಬೇವು
ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಹಚ್ಚುತ್ತಾ ಬಂದರೆ ಗುಳ್ಳೆ ಶಮನವಾಗಲು ಸಹಕಾರಿಯಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಹಚ್ಚಬೇಕು. 10-15 ನಿಮಿಷ ಬಿಟ್ಟು ತೆಗೆಯಬೇಕು. ಇದೇ ರೀತಿ ಪೇಸ್ಟ್ ನ್ನು ದಿನಕ್ಕೆ ಹಲವಾರು ಬಾರಿ ಮಾಡಿದರೆ, ಗುಳ್ಳೆ ಶಮನವಾಗುತ್ತದೆ.

ಕಲ್ಲು ಉಪ್ಪು
ಸ್ನಾನ ಮಾಡುವ ಮುನ್ನ ಬಿಸಿ ನೀರಿಗೆ ಕಲ್ಲು ಉಪ್ಪು ಬೆರೆಸಿ ಸ್ನಾನ ಮಾಡಿ. ಇದು ಚರ್ಮದ ಸೋಂಕನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಹಾಗೇ, ಗುಳ್ಳೆಗಳನ್ನು ಕಡಿಮೆ ಮಾಡುತ್ತದೆ.

ತುಳಸಿ ಎಲೆ
ತುಳಸಿ ರಸ ಮತ್ತು ಶುಂಠಿಯನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಇಂಗು ಬೆರೆಸಿ. ಈ ಮಿಶ್ರಣವನ್ನು ಗುಳ್ಳೆಗಳ ಮೇಲೆ ಹಚ್ಚುತ್ತಾ ಬನ್ನಿ. ಇದು ಆ್ಯಂಟಿಬಯೋಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ.

ಮುಂಜಾಗ್ರತೆ ಕ್ರಮಗಳು
ಕೈಯನ್ನು ಹಾಗಾಗ ನೀರಿನಲ್ಲಿ ತೊಳೆದು ಸ್ವಚ್ಛವಾಗಿಟ್ಟುಕೊಂಡಿರಬೇಕು
ಸ್ನಾನ ಮಾಡುವಾಗ ಆ್ಯಂಟಿ ಬಯೋಟಿಕ್ ಸೋಪ್ ಬಳಕೆ ಮಾಡಿ
ಬಳಕೆ ಮಾಡುವ ಟವಲ್, ಬಟ್ಟೆ ಸ್ವಚ್ಛವಾಗಿರಬೇಕು
ಬೊಕ್ಕೆಯನ್ನು ಕೈಯಿಂದ ಹಿಸುಕಬಾರದು. ಕೈಯಿಂದ ಅದನ್ನು ಹಿಸುಕಿ ಕೀವು ತೆಗೆದರೆ, ಅದು ಮತ್ತಷ್ಟು ಹರಡುವ ಸಾಧ್ಯತೆ ಇದೆ.
ಸಿಹಿ ತಿನಿಸು ಸೇವನೆ ಕಡಿಮೆ ಮಾಡಬೇಕು
ಕಾಫಿ ಸೇವನೆ ಬೇಡ
ವಿಟಮಿನ್ A,C ಮತ್ತು E ಒಳಗೊಂಡ ಆಹಾರ ಸೇವಿಸಬೇಕು.


- ಮೈನಾಶ್ರೀ. ಸಿ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com