ಮದ್ರಾಸ್ ಐ: ಸ್ವ ಔಷಧಿ ಮಾಡುವ ಬದಲು ವೈದ್ಯರನ್ನು ಸಂಪರ್ಕಿಸಿ

ಸ್ವ ಔಷಧಿ ಮಾಡುವ ಬದಲು ವೈದ್ಯರನ್ನು ಸಂಪರ್ಕಿಸಿ ನಿಮ್ಮ ಕಣ್ಣು ಕೆಂಪಾಗಿ ನೀರು ಸುರಿಯುತ್ತಿದೆಯೇ? ಕಣ್ಣಲ್ಲಿ ತುರಿಕೆ, ಉರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನಿಮ್ಮ ಕಣ್ಣು ಕೆಂಪಾಗಿ ನೀರು ಸುರಿಯುತ್ತಿದೆಯೇ? ಕಣ್ಣಲ್ಲಿ ತುರಿಕೆ, ಉರಿ ಎನಿಸುತ್ತಿದೆಯೇ ?ಹಾಗಾದರೆ ಒಮ್ಮೆ ನೇತ್ರತಜ್ಞರನ್ನು ಭೇಟಿಯಾಗುವುದು ಒಳಿತು. ಬಿಸಿಲಿನ ದಿನಗಳು ಇನ್ನು ಕಡಿಮೆಯಾಗುತ್ತಾ ಬರಬಹುದು, ಆದರೆ 'ಅಡೆನೊವೈರಸ್' ಹರಡುವುದರಿಂದ ಮದ್ರಾಸ್ ಕಣ್ಣು ಸಾಂಕ್ರಾಮಿಕ ಕಾಯಿಲೆ ಹರಡುವ ಸಮಯ ಇದಾಗಿದೆ.

ಮುಂದಿನ ದಿನಗಳಲ್ಲಿ ಮದ್ರಾಸ್ ಕಣ್ಣು ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ. ಕಾಂಜಂಕ್ಟಿವಿಟಿಸ್ ಎಂಬ ವೈರಾಣು ಸೋಂಕುವಿನಿಂದ ಹರಡುವ ಮದ್ರಾಸ್ ಕಣ್ಣು ರೋಗ ಬಂದರೆ ಮನೆಯಲ್ಲಿ ಸ್ವತಃ ಔಷಧ ಮಾಡುವುದಕ್ಕಿಂತ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಚೆನ್ನೈನಲ್ಲಿ ಈಗಾಗಲೇ ಈ ರೋಗ ಉಲ್ಬಣಿಸಿದ್ದು, ಕಳೆದೆರಡು ವಾರಗಳಿಂದ ದಿನಕ್ಕೆ 5-6 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ ಎನ್ನುತ್ತಾರೆ ಚೆನ್ನೈ ಮೂಲದ ನೇತ್ರತಜ್ಞೆ ಡಾ.ತ್ರಿವೇಣಿ ವೆಂಕಟೇಶ್.

ಕಣ್ಣಿನ ಕೋರ್ನಿಯಾ ಸೋಂಕಿಗೆ ತುತ್ತಾಗುತ್ತದೆ. ಕಣ್ಣಿನ ದೃಷ್ಟಿಯಲ್ಲಿ ಸ್ವಲ್ಪ ಕಡಿಮೆಯಾಗಬಹುದು ಮತ್ತು ರೋಗಿಗಳು ಬೆಳಕಿಗೆ ಸೂಕ್ಷ್ಮರಾಗುತ್ತಾರೆ. ಕಣ್ಣಿನಲ್ಲಿ ಬಹಳ ಸಮಯದವರೆಗೆ ನೀರು ಸುರಿಯುತ್ತಿದ್ದರೆ ಹಾಗೂ ತುರಿಕೆಯ, ಅಸಹಜತೆ ಕಂಡುಬರುತ್ತಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಒಳಿತು. ಕಣ್ಣಿನಿಂದ ಬಿಳಿ ದಪ್ಪ ದ್ರವ ಹೊರಬರುತ್ತಿದ್ದು, ಕಣ್ಣು ಉಬ್ಬಿಕೊಳ್ಳುತ್ತದೆ, ಕಣ್ಣು ತೆರೆಯಲು ಕಷ್ಟವಾಗುತ್ತದೆ.ಹಾಗೆಂದು ಮದ್ರಾಸ್ ಐ ಬಂದವರು ಕಣ್ಣುಜ್ಜಿಕೊಂಡು ಇರಬಾರದು. ರೋಗಿಗಳು ಸುರಕ್ಷತೆಗಾಗಿ ಕಾಂಟಾಕ್ಟ್ ಲೆನ್ಸ್ ನ್ನು ಬಳಸುವುದೊಳಿತು.

ಮದ್ರಾಸ್ ಕಣ್ಣು ಒಂದು ಸೋಂಕು ರೋಗವಾಗಿರುವುದರಿಂದ ರೋಗಿಗಳ ಕಣ್ಣಿನ ಹತ್ತಿರ ಆರೋಗ್ಯವಂತರ ಕಣ್ಣನ್ನು ತಂದರೆ ಹರಡುತ್ತದೆ ಎಂಬುದು ಸುಳ್ಳು ಎನ್ನುತ್ತಾರೆ ವೈದ್ಯರು. ಕಣ್ಣಿನಿಂದ ಸುರಿಯುವ ನೀರು ಅಥವಾ ಬಿಳಿ ದ್ರವ ಅಪಾಯಕಾರಿ. ಸೋಂಕು ಹೊಂದಿರುವವರು ಪ್ರತ್ಯೇಕ ಹಾಸಿಗೆ, ತಲೆದಿಂಬು ಬಳಸುವುದು ಉತ್ತಮ. ಕನ್ನಡಕವನ್ನು ಧರಿಸಬೇಕು. ಜನಸಂದಣಿಯಿರುವ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸುವುದು ಒಳಿತು.

ಮಕ್ಕಳಲ್ಲಿ ಮದ್ರಾಸ್ ಐ ಸೋಂಕು ತಗುಲಿದರೆ ಅವರು ಗುಣಮುಖರಾಗುವವರೆಗೆ ಶಾಲೆಗೆ ಕಳುಹಿಸದಿರುವುದು ಉತ್ತಮ. ಇದೊಂದು ವೈರಲ್ ಸೋಂಕು ಆಗಿದ್ದು, ಸಾಮಾನ್ಯವಾಗಿ ಜನರು ನಂಬಿರುವಂತೆ ದೇಹದ ಉಷ್ಣತೆ ಹೆಚ್ಚಳದಿಂದ ಬರುವ ರೋಗವಲ್ಲ ಎನ್ನುತ್ತಾರೆ ವೈದ್ಯೆ ತ್ರಿವೇಣಿ ವೆಂಕಟೇಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com