
ಬೆಂಗಳೂರು: ಶಾಲೆ, ಕಾಲೇಜು ಮಕ್ಕಳಿಗೆ ಈಗ ಪರೀಕ್ಷಾ ಸಮಯ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಜ್ಞಾಪಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಮಾರಾಟ ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿದೆ. ಹಲವು ಆಯುರ್ವೇದ ವೈದ್ಯರು ಹೇಳುವ ಪ್ರಕಾರ, ಪೋಷಕರು ಬಂದು ತಮ್ಮ ಮಕ್ಕಳ ನೆನಪು ಶಕ್ತಿ ಹೆಚ್ಚಿಸುವ ಮಾತ್ರೆ ಕೊಡಿ ಎಂದು ಕೇಳುತ್ತಾರಂತೆ.
ಖ್ಯಾತ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ, ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸುವ ಔಷಧ ಕೊಡಿಸುವುದನ್ನು ನೋಡುತ್ತೇನೆ. ಆದರೆ ನಾನು ಅವರಿಗೆ ಅಂತಹ ಮಾತ್ರೆ ತೆಗೆದುಕೊಳ್ಳಬೇಡಿ ಎಂದು ಹೇಳುತ್ತೇನೆ, ಏಕೆಂದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ.
ನೆನಪು ಶಕ್ತಿಯ ಮಾತ್ರೆಗಳು ಮೂರ್ಛೆರೋಗದಂತಹ ನರ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರ ಉಪಯೋಗವಾಗಬಹುದೇ ಹೊರತು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವ ಮಕ್ಕಳಿಗೆ ಏನೂ ಉಪಯೋಗವಾಗುವುದಿಲ್ಲ ಎನ್ನುತ್ತಾರೆ ಗಿರಿಧರ ಕಜೆ.
ನೆನಪಿನ ಸಮಸ್ಯೆಯಲ್ಲಿ ಎರಡು ವಿಧವಿದೆ. ಒಂದು ಏಕಾಗ್ರತೆ ಕೊರತೆ ಮತ್ತು ಇನ್ನೊಂದು ಆರೋಗ್ಯ ಸಮಸ್ಯೆಯಿಂದಾಗಿ. ಎರಡನೇ ವರ್ಗದವರಿಗೆ ಮಾತ್ರೆಗಳ ಉಪಯೋಗವಾಗಬಹುದು ಎನ್ನುತ್ತಾರೆ ಅವರು.
ವೈದ್ಯರ ಸಲಹೆ ಪಡೆಯದೆ ತಮ್ಮಷ್ಟಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಎನ್ನುತ್ತಾರೆ ನಗರದ ಮತ್ತೊಬ್ಬ ವೈದ್ಯರು. ಆಯುರ್ವೇದ ಮಾತ್ರೆಗಳಲ್ಲಿ ಅಡ್ಡ ಪರಿಣಾಮ ಏನೂ ಇಲ್ಲದಿದ್ದರೂ ಅವುಗಳನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಮುಖ್ಯ ಎನ್ನುತ್ತಾರೆ ಅವರು.
ಶ್ರೀ ಶ್ರೀ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಗಣೇಶ್ ಪುತ್ತೂರು, ಯಾವ ಮದ್ದಿನಿಂದಲೂ ಪವಾಡ ಮಾಡಲು ಸಾಧ್ಯವಿಲ್ಲ. ತುಂಬಾ ಸಮಯದವರೆಗೆ ಮದ್ದು ತೆಗೆದುಕೊಂಡರೆ ಪ್ರಯೋಜನವಾಗಬಹುದು. ಮಕ್ಕಳಿಗೆ ಅಂತಹ ಔಷಧಿಗಳನ್ನು ನೀಡುವ ಬದಲು ಮಕ್ಕಳ ಜೀವನಶೈಲಿಯನ್ನು ಪೋಷಕರು ಬದಲಾಯಿಸಬೇಕು. ಮಕ್ಕಳಿಗೆ ಉತ್ತಮ ಆಹಾರ, ಪ್ರಶಾಂತ ಪರಿಸರ, ಆರೋಗ್ಯಭರಿತ ಆಹಾರ ನೀಡಬೇಕು. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎನ್ನುತ್ತಾರೆ.
ಆಯುರ್ವೇದ ಔಷಧ ಮಳಿಗೆಯ ಮಾಲೀಕರೊಬ್ಬರು, ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಔಷಧಗಳನ್ನು ಕೇಳಿಕೊಂಡು ನಮ್ಮ ಅಂಗಡಿಗೆ ಹಲವರು ಬರುತ್ತಾರೆ. ಅವರಿಗೆ ಯಾವ ಮದ್ದು ಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಕ್ಕಳ ನೆನಪು ಶಕ್ತಿ ಹೆಚ್ಚಿಸುವ ಯಾವುದಾದರೂ ಔಷಧಿ ಇದೆಯೇ ಎಂದು ಕೇಳುತ್ತಾರೆ. ಆದರೆ ನಾನು ಕೊಡುವುದಿಲ್ಲ ಎನ್ನುತ್ತಾರೆ ಅವರು.
ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಟಿಪ್ಸ್ : ಪರೀಕ್ಷೆಗೆ ಸಜ್ಜಾಗುವ ಮಕ್ಕಳಿಗೆ ವೈದ್ಯರು ಕೆಲವೊಂದು ಆರೋಗ್ಯ ಸಂಬಂಧಿ ಸಲಹೆಗಳನ್ನು ನೀಡುತ್ತಾರೆ.
Advertisement