ಬೇಸಿಗೆಯಲ್ಲಿ ಮದ್ಯ, ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಆರೋಗ್ಯಕ್ಕೆ ಒಳ್ಳೆಯದು

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಪರೀತ ಸೆಖೆ, ಬಿಸಿಲು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಪರೀತ ಸೆಖೆ, ಬಿಸಿಲು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಮುಂದಿನ ಎರಡು ತಿಂಗಳು ಅಧಿಕ ತಾಪಮಾನವನ್ನು ತಡೆಯುವಂತೆ ಸಲಹೆ ನೀಡಿದೆ.
ಈ ಸಂಬಂಧ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು ಅದರಲ್ಲಿ ಬೇಸಿಗೆಯಲ್ಲಿ ಜನರು ಏನು ಆಹಾರಗಳನ್ನು ಸೇವಿಸಬಹುದು ಎಂದು ಹೇಳಿದ್ದಾರೆ. ಸುತ್ತೋಲೆಯ ಪ್ರತಿಯನ್ನು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ, ಸರ್ಜನ್ ಗಳಿಗೆ ಮತ್ತು ತಾಲ್ಲೂಕು ಆಸ್ಪತ್ರೆಗಳ ಆಡಳಿತ ವೈದ್ಯರಿಗೆ ಕಳುಹಿಸಲಾಗಿದೆ. 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ನಟರಾಜ್, ಉಷ್ಣಾಂಶ ಹೆಚ್ಚಿರುವಾಗ ನಾವು ಏನು ಸೇವಿಸುತ್ತಿದ್ದೇವೆ ಎಂದು ಗಮನಹರಿಸದಿದ್ದರೆ ಅಜೀರ್ಣ, ನಿರ್ಜಲೀಕರಣ, ಆಸಿಡಿಟಿ ಹಾಗೂ ಇತರ ತೊಂದರೆಯುಂಟಾಗಬಹುದು. ಪ್ರಸ್ತುತ ಇರುವ ಬಿಸಿಲಿಗೆ ಸಾರ್ವಜನಿಕರಲ್ಲಿ ಆರೋಗ್ಯದ ಜಾಗೃತಿಯನ್ನು ಮೂಡಿಸಲು ಅಧಿಕೃತ ಸುತ್ತೋಲೆಯನ್ನು ಹೊರಡಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಇದನ್ನು ಎಲ್ಲಾ ಜಿಲ್ಲೆಗಳಿಗೂ ಕಳುಹಿಸಿದ್ದೇವೆ ಎಂದರು.
ಆಲ್ಕೋಹಾಲ್ ಸೇವಿಸಿ ನಿರ್ಜಲೀಕರಣವುಂಟಾಗುವ ಕೇಸುಗಳನ್ನು ನಾವು ಈ ತಿಂಗಳು ಹೆಚ್ಚು ಗಮನಿಸಿದ್ದೇವೆ. ಬೇಸಿಗೆಯಲ್ಲಿ ಮದ್ಯ, ಮಾಂಸ ಸೇವನೆಯನ್ನು ಆರೋಗ್ಯ ದೃಷ್ಟಿಯಿಂದ ಆದಷ್ಟು ಕಡಿಮೆ ಮಾಡುವುದು ಒಳಿತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಮಕ್ಕಳು, ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಬೇಸಿಗೆಯಲ್ಲಿ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳು ಸಾಮಾನ್ಯವಾಗಿ ಬಿಸಿಲಿಗೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳು, ಐಸ್ ಕ್ರೀಂ ಇತ್ಯಾದಿಗಳನ್ನು ಇಷ್ಟಪಡುತ್ತಾರೆ. ಆದರೆ ಇಂತಹ ತಂಪು ಪಾನೀಯಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಅದರ ಬದಲಿಗೆ ಪೋಷಕರು ನೈಸರ್ಗಿಕ ಪಾನೀಯಗಳನ್ನು ಮಕ್ಕಳಿಗೆ ಕುಡಿಸಬೇಕು ಎನ್ನುತ್ತಾರೆ ಮಕ್ಕಳ ತಜ್ಞೆ ಡಾ.ಸುಮಿತ್ರಾ.
ಅಧಿಕ ಸಿಹಿ ತಿನಿಸುಗಳು, ಮಸಾಲೆ ಪದಾರ್ಥಗಳು, ಕಾರ್ಬೊನೇಟ್ಸ್, ಸೋಡಾ ಮಿಶ್ರಣ ಮಾಡಿ ತಯಾರಿಸಿದ ಪಾನೀಯಗಳನ್ನು ಕುಡಿಸುತ್ತಾರೆ. ಅದರ ಬದಲು ಹಣ್ಣಿನ ಜ್ಯೂಸ್, ಸಕ್ಕರೆ ಮತ್ತು ಉಪ್ಪು ಹಾಕಿ ತಯಾರಿಸಿದ ನೀರು, ಎಳನೀರು ಆರೋಗ್ಯಕ್ಕೆ ಉತ್ತಮ ಎಂದು ಆರೋಗ್ಯ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇನ್ನೊಬ್ಬ ವೈದ್ಯ ಡಾ.ಲಕ್ಷ್ಮಿ ಕುಲಕರ್ಣಿ, ಹೆಚ್ಚು ನೀರು ಕುಡಿದು ಹಣ್ಣು ಮತ್ತು ತರಕಾರಿ ಸೇವಿಸಿ. ಮಸಾಲೆ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿದರೆ ಒಳಿತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com