ನವಜಾತ ಶಿಶುಗಳಿಗೆ ತಾಯಿ ಎದೆಹಾಲು ಉತ್ತಮ ಏಕೆ, ಇಲ್ಲಿದೆ ಕಾರಣ

ನವಜಾತ ಶಿಶುವಿಗೆ ತಾಯಿಯ ಎದೆಹಾಲು ಮೊದಲ ಪೋಷಣೆಯ ಮೂಲ ಎಂದು ಹೇಳಲಾಗುತ್ತದೆ. ಮಗು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವಜಾತ ಶಿಶುವಿಗೆ ತಾಯಿಯ ಎದೆಹಾಲು ಪೋಷಣೆಯ ಮೂಲ ಎಂದು ಹೇಳಲಾಗುತ್ತದೆ. ಮಗು ಹುಟ್ಟಿ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಅದು ಜೀವನಪರ್ಯಂತ ಮನುಷ್ಯ ಆರೋಗ್ಯವಾಗಿರಲು ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳುತ್ತದೆ. ಮಗುವಿಗೆ 6 ತಿಂಗಳ ನಂತರ ಎದೆಹಾಲು ಜೊತೆಗೆ ಪೂರಕ ಆಹಾರ ನೀಡಿ ಎದೆಹಾಲನ್ನು ಮಗುವಿಗೆ 2 ವರ್ಷ ಕಳೆಯುವವರೆಗೂ ನೀಡಬಹುದು ಎಂದು ಹೇಳುತ್ತಾರೆ.
ಇಂದಿನ ಕಾಲದ ತಾಯಂದಿರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಇದು ಖಂಡಿತವಾಗಿಯೂ ಮಗುವಿಗೆ ಎದೆಹಾಲು ಕುಡಿಸಲು ಅಡ್ಡಿಯನ್ನುಂಟುಮಾಡುತ್ತದೆ. ಹಿಂದಿನ ಕಾಲದಂತೆ ಇಂದಿನ ತಾಯಂದಿರಿಗೆ ಸರಿಯಾಗಿ ಆರು ತಿಂಗಳು ಕೂಡ ಎದೆಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಬಹುತೇಕ ತಾಯಂದಿರು ಉದ್ಯೋಗಕ್ಕೆ ಹೋಗುತ್ತಾರೆ.
ಮಗುವಿಗೆ ಕಾಲಕಾಲಕ್ಕೆ ಸರಿಯಾಗಿ ಎದೆಹಾಲು ಸಿಗದಿದ್ದರೆ ಕೊಲಿಕ್, ಅಜೀರ್ಣ ಮೊದಲಾದ ಸಮಸ್ಯೆಗಳು ಉದ್ಭವವಾಗುತ್ತವೆ. ಎದೆಹಾಲಿಗೆ ಬದಲಾಗಿ ಬೇರೆ ಹಾಲು ಕೊಟ್ಟರೆ ಮಗುವಿಗೆ ಜೀರ್ಣವಾಗುವುದು ನಿಧಾನ. ಅಲ್ಲದೆ ಇತರ ಆಹಾರಗಳಲ್ಲಿ ಸಾಕಷ್ಟು ವಿಟಮಿನ್, ಪ್ರೊಟೀನ್ ಮತ್ತು ಕೊಬ್ಬು ಸಾಕಷ್ಟು ಎದೆಹಾಲಿನಂತೆ ಸಿಗುವುದಿಲ್ಲ. ಹೀಗಾಗಿ, ಮಗುವಿನಲ್ಲಿ ಕಾಯಿಲೆ ವಿರುದ್ಧ ಹೋರಾಡುವ ಶಕ್ತಿ ಕುಂಠಿತವಾಗುತ್ತದೆ.ಮಗುವಿಗೆ ಆಗಾಗ ಸೋಂಕು, ಖಾಯಿಲೆ ಬಂದು ಆಸ್ಪತ್ರೆಗೆ ಅಲೆಯುತ್ತಿರಬೇಕಾಗುತ್ತದೆ.
ಎದೆಹಾಲಿನಿಂದ ಮಗುವಿಗೆ ಆಗುವ ಅನುಕೂಲಗಳು: ಎದೆಹಾಲು ಉಣಿಸುವ ಮುನ್ನ ತಾಯಿ ತಾಳ್ಮೆಯಿಂದಿರಬೇಕು, ಒತ್ತಡಮುಕ್ತವಾಗಿರಬೇಕು. ತಾಯಿಯ ಮಾನಸಿಕ ಸ್ಥಿತಿ ಎದೆಹಾಲು ಮಗುವಿಗೆ ಸರಾಗವಾಗಿ ಸಿಗಲು ಕಾರಣವಾಗುತ್ತದೆ. ನವಜಾತ ಶಿಶುವಿಗೆ ಪ್ರತಿ ಎರಡು, ಮೂರು ಗಂಟೆಗೊಮ್ಮೆ ಎದೆಹಾಲು ಉಣಿಸುತ್ತಿರಬೇಕು ಅಥವಾ ಮಗು ಅತ್ತಾಗಲೆಲ್ಲ ನೀಡಬೇಕು.
-ತಾಯಿಯ ಎದೆಹಾಲು ಮಿಕ್ಕ ಎಲ್ಲಾ ಆಹಾರಗಳಿಗಿಂತಲೂ ಸರ್ವಶ್ರೇಷ್ಟ. ಅದರಲ್ಲಿ ವಿಟಮಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ವಿಟಮಿನ್, ಪ್ರೊಟೀನ್, ಕೊಬ್ಬಿನ ಅಂಶಗಳು ಎದೆಹಾಲಿನಲ್ಲಿರುತ್ತದೆ.
- ಮಗು ಜನಿಸಿದ ತಕ್ಷಣ ತಾಯಿಯ ಎದೆಯಲ್ಲಿರುವ ಹಾಲಿನಲ್ಲಿ ಇಮ್ಯುನೋಗ್ಲೋಬಿನ್ ಐಜಿಎಯಿದ್ದು ಸಾಂಕ್ರಾಮಿಕ ಜೀವಿಗಳ ವಿರುದ್ಧ ರಕ್ಷಣಾತ್ಮಕ ಪದರವನ್ನು ಅದು ಒದಗಿಸುತ್ತದೆ. ಆ ಮೂಲಕ ಶಿಶುಗಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟಬಹುದು. ತಾಯಿಯ ಎದೆಹಾಲು ಮಕ್ಕಳಿಗೆ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನೀಡುತ್ತದೆ.
-ಎದೆಹಾಲು ಕುಡಿಯುತ್ತಿರುವ ಮಕ್ಕಳು ಬೇರೆ ಮಕ್ಕಳಿಗಿಂತ ಹೆಚ್ಚು ತೂಕವನ್ನು ಹೊಂದಿರುತ್ತವೆ.
-ಮಗುವಿನ ಬುದ್ಧಿಶಕ್ತಿ ಮೇಲೆ ಕೂಡ ತಾಯಿಯ ಎದೆಹಾಲು ಪರಿಣಾಮ ಬೀರುತ್ತದೆ. ಎದೆಹಾಲು ಕುಡಿದು ಬೆಳೆದ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಬುದ್ದಿಶಾಲಿಗಳಾಗಿರುತ್ತಾರೆ.
-ತಾಯಿ, ಮಗುವಿನ ಮಧ್ಯೆ ಬಾಂಧವ್ಯ ಹೆಚ್ಚಾಗಲು ಕೂಡ ಎದೆಹಾಲು ಕುಡಿಸುವುದು ಮುಖ್ಯವಾಗಿರುತ್ತದೆ. ತಾಯಿ ಮಗುವಿನ ಸ್ಪರ್ಶ, ಎದೆಯೊಳಗೆ ಬಚ್ಚಿ ಕೂರುವುದು, ನೋಟ ಮಗುವಿಗೆ ರಕ್ಷಣೆಯ ಭಾವನೆ ನೀಡುತ್ತದೆ. ಈ ಅನುಭವ ಬೇರೆಲ್ಲೂ ಸಿಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com