ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ರಕ್ತದ ಗುಂಪಿಗೆ ಅನುಗುಣವಾದ ಆಹಾರ ಸೇವಿಸಿ!

ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ರಕ್ತದ ಗುಂಪು ಆನುವಂಶಿಕ ಅಂಶವಾಗಿರುತ್ತದೆ ಎಂದು ವೈದ್ಯರು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ರಕ್ತದ ಗುಂಪು ಆನುವಂಶಿಕ ಅಂಶವಾಗಿರುತ್ತದೆ ಎಂದು ವೈದ್ಯರು ಹೇಳುವುದನ್ನು ನಾವು ಕೇಳುತ್ತೇವೆ. ಮನುಷ್ಯನ ರಕ್ತದಲ್ಲಿ ಮುಖ್ಯವಾಗಿ ನಾಲ್ಕು ಗುಂಪುಗಳಿವೆ. ಅವು ಎ, ಬಿ, ಒ ಮತ್ತು ಎಬಿ. ಡಯಟ್ ಮಾಡುವವರು ತಮ್ಮ ರಕ್ತದ ಗುಂಪು ಪ್ರಕಾರ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. 
ಸ್ಥೂಲಕಾಯದವರು ಸಣ್ಣಗಾಗಲು ಪ್ರಯತ್ನಿಸುತ್ತಿದ್ದರೆ ಕೆಲವರು ತೂಕವನ್ನು ಸುಲಭವಾಗಿ ಕಳೆದುಕೊಂಡರೆ ಇನ್ನು ಕೆಲವರು ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ. ಇನ್ನು ಕೆಲವರು ಪದೇ ಪದೇ ಖಾಯಿಲೆಯಿಂದ ಬಳಲುತ್ತಿದ್ದರೆ ಮತ್ತೆ ಕೆಲವರು ಆರೋಗ್ಯವಂತರಾಗಿ ಇರುತ್ತಾರೆ. ರಕ್ತದ ಗುಂಪು ಪ್ರಕಾರ, ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ದೇಹದ ಉಷ್ಣತೆ ಬದಲಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ವ್ಯಕ್ತಿಯ ರಕ್ತದ ಗುಂಪು ಮತ್ತು ಪೋಷಕಾಂಶಗಳು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ ಎನ್ನುತ್ತಾರೆ ಆಹಾರ ತಜ್ಞೆ ದೀಪಿಕಾ ದುವಾ ಅರೊರ.
ರಕ್ತದ ಗುಂಪಿನ ಡಯಟ್(Blood Type’ Diet): ನಿರ್ದಿಷ್ಟ ಆಹಾರ ಸೇವಿಸುವುದು, ಅದು ಸುಲಭವಾಗಿ  ಜೀರ್ಣವಾಗಲು ಬಿಡುವುದು, ಶಕ್ತಿಯ ಮಟ್ಟ ಹೆಚ್ಚಿಸುವುದು, ರೋಗಗಳ ತಡೆಗಟ್ಟುವಿಕೆ ಮತ್ತು ಅನಾರೋಗ್ಯ ಇವುಗಳೆಲ್ಲವೂ ಒಂದಕ್ಕೊಂದು ಸಂಬಂಧವನ್ನು ಹೊಂದಿರುತ್ತದೆ. ಇವು ತೂಕ ಕಳೆದುಕೊಳ್ಳಲು ಸಹಕಾರಿ ಮಾಡುವುದಲ್ಲದೆ, ದೇಹಕ್ಕೆ ಪೌಷ್ಟಿಕಾಂಶವನ್ನು ಕೂಡ ನೀಡುತ್ತದೆ.
ದೇಹಕ್ಕೆ ಯಾವ ರೀತಿಯ ಪೌಷ್ಟಿಕಾಂಶ ಎಷ್ಟು ಪ್ರಮಾಣದಲ್ಲಿ ಬೇಕೆಂಬುದನ್ನು ಕೂಡ ರಕ್ತದ ಗುಂಪು ನಿರ್ಧರಿಸುತ್ತದೆ. ವ್ಯಕ್ತಿಯಲ್ಲಿ ಡಯಾಬಿಟಿಸ್, ಕಿಡ್ನಿ ಸಮಸ್ಯೆ, ಜಿಐಟಿ, ಸ್ಥೂಲತೆ, ಅಧಿಕ ರಕ್ತದೊತ್ತಡವನ್ನು ರಕ್ತದ ಗುಂಪಿನ ಡಯಟ್ ನಿರ್ಧರಿಸುತ್ತದೆ.
ಆರ್ ಎಚ್ ಫ್ಯಾಕ್ಟರ್: ರೀಸಸ್ ಫ್ಯಾಕ್ಟರ್ ಎಂದರೆ ಕೆಂಪು ರಕ್ತ ಕೋಶದ ಮೇಲ್ಭಾಗದಲ್ಲಿ ಸಿಗುವ ಪ್ರೊಟೀನ್ ನ ಒಂದು ವಿಧಾನ. ರೀಸಸ್ ಫ್ಯಾಕ್ಟರ್ ಇದ್ದವರು ಆರ್ ಎಚ್ ಪಾಸಿಟಿವ್ ಮತ್ತು ಯಾರಲ್ಲಿ ರೀಸಸ್ ಫ್ಯಾಕ್ಟರ್ ಇರುವುದಿಲ್ಲವೋ ಅವರು ಆರ್ ಎಚ್ ನೆಗೆಟಿವ್ ಹೊಂದಿರುತ್ತಾರೆ. 
ನಿಮ್ಮ ರಕ್ತದ ಮಾದರಿಗೆ ತಕ್ಕ ಆಹಾರ: ನಿಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ನಿಮ್ಮ ಶರೀರಕ್ಕೆ ಸೇರುವ ಚೆನ್ನಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳಲು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಇಲ್ಲದಿದ್ದರೆ ರಕ್ತದ ಗುಂಪು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ.
ಒ ರಕ್ತದ ಮಾದರಿ: ಒ ಗುಂಪಿನ ರಕ್ತ ಹೊಂದಿರುವವರು ಮಾಂಸ, ಮೀನು, ಮೊಟ್ಟೆ, ಕ್ಯಾಲೆ, ಲೆಟಿಸ್, ಬ್ರೊಕೊಲಿ, ಈರುಳ್ಳಿ, ಕುಂಬಳಕಾಯಿ, ಸೌತೆಕಾಯಿ, ಹೀರೆಕಾಯಿ, ಕೆಂಪು ಮೆಣಸಿನ ಕಾಯಿ, ಒಕ್ರಾ, ಬೆಳ್ಳುಳ್ಳಿ, ಶುಂಠಿ, ಚೆರ್ರಿಗಳು, ಅಂಜೂರದ ಹಣ್ಣುಗಳನ್ನು ತಿನ್ನಬಹುದು. ಪ್ರಾಣಿಜನ್ಯ ಆಹಾರಗಳು ಈ ಗುಂಪಿನ ರಕ್ತ ಹೊಂದಿರುವವರಿಗೆ ಉತ್ತಮ. 
ಎ ಗುಂಪಿನ ರಕ್ತ: ಅನ್ನ, ಓಟ್ಸ್, ಪಾಸ್ತಾ, ಕುಂಬಳಕಾಯಿ, ಬೀಜಗಳು, ಪೀನಟ್ಸ್, ಅಪ್ರಿಕೊಟ್ಸ್, ಫಿಗ್ಸ್, ನಿಂಬೆಹಣ್ಣು, ರೈಸಿನ್ಸ್, ಅಮರಂತ್, ಬಕ್ ವೀಟ್ ಮೊದಲಾದವು ಉತ್ತಮ. ಗೋಧಿಭರಿತ ಸಸ್ಯಹಾರ ಉತ್ತಮ. ಇವರಿಗೆ ಪ್ರಾಣಿಜನ್ಯ ಆಹಾರ ಅಷ್ಟು ದೇಹಕ್ಕೆ ಸೇರುವುದಿಲ್ಲ.
ಬಿ ಗುಂಪಿನ ರಕ್ತ: ಹಸಿರು ತರಕಾರಿಗಳು, ಮೊಟ್ಟೆ, ಕಡಿಮೆ ಕೊಬ್ಬಿನ ಪದಾರ್ಥಗಳು ಉತ್ತಮ, ಓಟ್ಸ್, ಹಾಲು, ಹಾಲಿನ ಉತ್ಪನ್ನಗಳು ಕೂಡ ಬಿ ಗುಂಪಿನ ರಕ್ತ ಹೊಂದಿರುವವರಿಗೆ ಒಳ್ಳೆಯದು. 
ಎಬಿ ಗುಂಪಿನ ರಕ್ತ: ಸಮುದ್ರ ಆಹಾರಗಳು, ಮೊಸರು, ಮೇಕೆ ಹಾಲು, ಮೊಟ್ಟೆ, ವಾಲ್ ನಟ್ಸ್, ಧಾನ್ಯಗಳು, ಓಟ್ಸ್, ಸ್ಪೆಲ್ಡ್, ಮೊಳಕೆಯೊಡೆದ ಗೋಧಿ, ಕೋಸುಗಡ್ಡೆ, ಹೂಕೋಸು, ಬೀಟ್ಗೆಡ್ಡೆಗಳು, ಸೌತೆಕಾಯಿ, ಪ್ಲಮ್ಸ್, ಹಣ್ಣುಗಳು ಈ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೇವನೆಗೆ ಉತ್ತಮ.ಅನ್ನ-ದಾಲ್, ರೋಟಿ-ದಾಲ್, ದಲಿಯಾ, ಕಿಚಡಿ, ಕೆಂಪು ಅನ್ನ ಕೂಡ ಒಳ್ಳೆಯದು.
ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಾರದ ಆಹಾರಗಳು: ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಆಹಾರ ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಅಲ್ಲದೆ ಅನೇಕ ಖಾಯಿಲೆಗಳನ್ನು ಕೂಡ ತಡೆಗಟ್ಟಬಹುದು. ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಾರದ ಆಹಾರಗಳು ಇಂತಿವೆ.
ಒ ಗುಂಪಿನ ರಕ್ತ: ಪಾಲಕ್, ಎಲೆಕೋಸು, ಕಾರ್ನ್, ಹೂಕೋಸು, ಬಿಳಿಬದನೆ, ಅಣಬೆಗಳು, ಕಿತ್ತಳೆ, ಕಿವಿ, ಸ್ಟ್ರಾಬೆರಿ, ಬ್ಲಾಕ್ಬೆರ್ರಿ, ತೆಂಗಿನಕಾಯಿ, ಹಸಿರು ಬಟಾಣಿ, ಕಡಲೆಕಾಯಿ ಬೆಣ್ಣೆ. ಹೆಚ್ಚಿನ ಗೋಧಿ ಪಿಷ್ಟಗಳು ಉತ್ತಮವಲ್ಲ.
ಎ  ಗುಂಪಿನ ರಕ್ತ: ಬಾಳೆ, ತೆಂಗಿನಕಾಯಿ, ಪಪ್ಪಾಯಿ, ಗೋಡಂಬಿ, ಪಿಸ್ತಾ, ಬಿಯರ್. ಪ್ರಾಣಿಗಳ ಆಹಾರ ಚಿಕನ್, ಮೀನು, ಮೊಟ್ಟೆ / ಓಟ್ಸ್ ಮುಂತಾದ ಆಹಾರಗಳು ಉತ್ತಮವಲ್ಲ.
ಬಿ ಗುಂಪಿನ ರಕ್ತ: ಈ ಗುಂಪಿನ ರಕ್ತ ಹೊಂದಿರುವವರ ದೇಹಕ್ಕೆ ಕಾರ್ನ್, ಹುರುಳಿ, ಟೊಮ್ಯಾಟೊ, ಕಡಲೆಕಾಯಿ, ಎಳ್ಳಿನ ಬೀಜಗಳು. ಪ್ರಾಣಿಗಳ ಆಹಾರವಾದ ಚಿಕನ್, ಮೀನು, ಮೊಟ್ಟೆ ಓಟ್ಸ್ ಹೊಂದುವುದಿಲ್ಲ.
ಎಬಿ ಗುಂಪಿನ ರಕ್ತ: ಕೆಫೀನ್, ಆಲ್ಕೋಹಾಲ್,  ಹಾಲು, ಹುರುಳಿ, ಕಾರ್ನ್, ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಕಪ್ಪು ಚಹಾ ಇತ್ಯಾದಿಗಳು ಒಗ್ಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com