ಮಗುವಿನ ಬೆಳವಣಿಗೆ, ಬದುಕು, ಆರೋಗ್ಯದಲ್ಲಿ ತಾಯಿಯ ಎದೆಹಾಲಿನ ಮಹತ್ವ

ಮಗುವಿನ ಆರೋಗ್ಯದ ಭದ್ರ ಬುನಾದಿ ತಾಯಿಯ ಎದೆಹಾಲು. ಮಗು ಉತ್ತಮವಾಗಿ ಬೆಳೆದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಮಗುವಿನ ಆರೋಗ್ಯದ ಭದ್ರ ಬುನಾದಿ ತಾಯಿಯ ಎದೆಹಾಲು. ಮಗು ಉತ್ತಮವಾಗಿ ಬೆಳೆದು ಆರೋಗ್ಯವಂತವಾಗಿ ಬದುಕುಳಿಯಲು ಎದೆಹಾಲು ಉಣಿಸುವುದು ಮುಖ್ಯ.

5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಡಿಮೆ ಪೌಷ್ಟಿಕಾಂಶ, ಅತಿಸಾರ ಮತ್ತು ನ್ಯುಮೋನಿಯಾದಂತಹ ರೋಗಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ತಾಯಿಯ ಎದೆಹಾಲು ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವುದು ಬಹಳ ಮುಖ್ಯ ಕಾರಣವಾಗಿರುತ್ತದೆ. ಇವುಗಳನ್ನು ತಡೆಯಲು ಹಸುಳೆ ಮಗುವಿಗೆ ಎದೆಹಾಲುಣಿಸುವುದು ಮುಖ್ಯವಾಗುತ್ತದೆ.

ಹೆರಿಗೆಯಾದ ನಂತರ ತಾಯಿ ಅತಿಯಾದ ತೂಕ ಹೊಂದುವುದನ್ನು, ಬೊಜ್ಜು ಬೆಳೆಯುವುದನ್ನು ಎದೆಹಾಲುಣಿಸುವುದರಿಂದ ತಡೆಗಟ್ಟಬಹುದು. ಎದೆಹಾಲುಣಿಸುವುದರಿಂದ ಮಗು ಮತ್ತು ತಾಯಿ ಇಬ್ಬರ ಆರೋಗ್ಯ ಕೂಡ ಉತ್ತಮವಾಗುತ್ತದೆ. 6ರಿಂದ 23 ತಿಂಗಳವರೆಗಿನ ಮಗುವಿನ ದೇಹಕ್ಕೆ ಶಕ್ತಿ ಮತ್ತು ಪೌಷ್ಟಿಕಾಂಶ ಪೂರೈಸುವಲ್ಲಿ ಎದೆಹಾಲು ಮುಖ್ಯವಾಗುತ್ತದೆ.

6ರಿಂದ 12 ತಿಂಗಳವರೆಗಿನ ಮಗುವಿನ ಆರೋಗ್ಯಕ್ಕೆ ಪ್ರಮುಖ ಶಕ್ತಿಯ ಮೂಲವೇ ತಾಯಿಯ ಎದೆಹಾಲು ಮತ್ತು 12ರಿಂದ 24ನೇ ತಿಂಗಳಲ್ಲಿ ಶಕ್ತಿಯ ಮೂರನೇ ಒಂದರಷ್ಟು ಭಾಗ ಎದೆಹಾಲಿನಿಂದ ಸಿಗುತ್ತದೆ.

ಶಿಶುವಿನ ಸಾವಿನ ಪ್ರಮಾಣವನ್ನು ಕೂಡ ಎದೆಹಾಲುಣಿಸುವುದರಿಂದ ಕಡಿಮೆ ಮಾಡಬಹುದು. ಶಿಶುವಿದ್ದಾಗ ಚೆನ್ನಾಗಿ ಎದೆಹಾಲು ಸಿಕ್ಕಿದ ಮಕ್ಕಳು ಮುಂದೆ ಆರೋಗ್ಯವಂತರಾಗಿರುತ್ತಾರೆ. ಶಿಶು ಜನಿಸಿದ ಒಂದು ಗಂಟೆಯೊಳಗೆ ಸಿಗುವ ಎದೆಹಾಲಿನಲ್ಲಿ ಪೌಷ್ಟಿಕಾಂಶ ಹೇರಳವಾಗಿರುತ್ತದೆ. ಹೀಗಾಗಿ ಮಗು ಜನಿಸಿದ ಒಂದು ಗಂಟೆಯೊಳಗೆ ಕಡ್ಡಾಯವಾಗಿ ಮತ್ತು ಮೊದಲ 6 ತಿಂಗಳು ಕೇವಲ ತಾಯಿಯ ಎದೆಹಾಲುಣಿಸಬೇಕು, 6 ತಿಂಗಳು ಕಳೆದ ನಂತರ ಮಗುವಿಗೆ ಎದೆಹಾಲಿನ ಜೊತೆ ಪೂರಕ ಆಹಾರ ನೀಡಬೇಕೆಂದು ಮತ್ತು ಮಗುವಿಗೆ 2 ವರ್ಷಗಳವರೆಗೆ ತಾಯಿಯ ಎದೆಹಾಲು ಉಣಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸುತ್ತದೆ.

ಮಹಿಳೆಯರಿಗೆ ಮಗು ಜನಿಸಿದ ಕೂಡಲೇ ಎದೆಹಾಲುಣಿಸಲು ಇನ್ನಷ್ಟು ಪೂರಕ ವಾತಾವರಣವನ್ನು ಕುಟುಂಬ ಸದಸ್ಯರು ನಿರ್ಮಿಸಿಕೊಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com