ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣವೇನು, ತಪ್ಪಿಸಲು ಏನು ಮಾಡಬಹುದು? 

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡ ನಾಡು ಶೋಕಸಾಗರದಲ್ಲಿ ಮುಳುಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡ ನಾಡು ಶೋಕಸಾಗರದಲ್ಲಿ ಮುಳುಗಿದೆ. 

ತೀವ್ರ ಹೃದಯಾಘಾತದಿಂದ ನಿನ್ನೆ ಬೆಳಗ್ಗೆ ನಿಧನ ಹೊಂದಿದ ಪುನೀತ್ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿಯಿಂದ ಇಡಲಾಗಿದೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಜಿಮ್ ನಲ್ಲಿ ವರ್ಕೌಟ್ ಬಗ್ಗೆ ಮತ್ತಷ್ಟು ಚರ್ಚೆಯಾಗುತ್ತಿದೆ. 

ಯುವಜನತೆಯಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣಗಳೇನು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಮಾತನಾಡಿಸಿದಾಗ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ ಮಂಜುನಾಥ್ ಸಿಎನ್ ಹೇಳುವುದು ಹೀಗೆ: ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಹೆಪ್ಪುಗಟ್ಟುವಿಕೆಯನ್ನು ಸೂಚಿಸುತ್ತದೆ, ಇದು ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಪ್ಲೇಕ್‌ಗಳ ರಚನೆಯಿಂದಾಗಿ ರಕ್ತದ ಹರಿವು ಇದ್ದಕ್ಕಿದ್ದಂತೆ ನಿರ್ಬಂಧಿಸಲ್ಪಟ್ಟಾಗ, ಕೊಲೆಸ್ಟ್ರಾಲ್ ಸೇರಿದಂತೆ ಕೊಬ್ಬಿನ ನಿಕ್ಷೇಪಗಳಿಂದ ಪರಿಧಮನಿಯ ಅಪಧಮನಿಗಳು ಕಿರಿದಾಗಬಹುದು, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.

ಕಳೆದ ಕೆಲವು ವರ್ಷಗಳಲ್ಲಿ, ಹೃದ್ರೋಗಗಳು ಈಗ ಯುವಜನರಲ್ಲಿ ಹೆಚ್ಚಾಗಿವೆ. ಹೃದಯಾಘಾತದಿಂದ ಬಳಲುತ್ತಿರುವವರಲ್ಲಿ 25 ಪ್ರತಿಶತದಷ್ಟು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇಡೀ ದೇಶದಲ್ಲಿ ಹೆಚ್ಚಾಗುತ್ತಿದೆ. ಇದರಲ್ಲಿ, ಶೇಕಡಾ 30 ರಷ್ಟು ಮಧ್ಯವಯಸ್ಕರು ಕಂಡುಬರುತ್ತಿದ್ದಾರೆ. ಧೂಮಪಾನ, ಅಧಿಕ ಬಿಪಿ, ಮಧುಮೇಹ ಮುಂತಾದ ಅಭ್ಯಾಸವಿಲ್ಲದ ಯುವಕರಲ್ಲಿ ಕೂಡ ಹೃದಯಾಘಾತವಾಗುತ್ತಿದೆ.

ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಅಭಿಜಿತ್ ಕುಲಕರ್ಣಿ, ಇಂತಹ ಘಟನೆಗಳಿಗೆ ಯಾವುದೇ ನಿಖರವಾದ ಕಾರಣಗಳಿಲ್ಲದಿದ್ದರೂ, ಜೀವನಶೈಲಿ,ಆಹಾರ ಕ್ರಮ, ವ್ಯಾಯಾಮ ಕ್ರಮ ಮತ್ತು ಜೀವನದ ಒತ್ತಡದ ಮಟ್ಟಗಳು ಕಾರಣವಾಗುತ್ತದೆ. ಅನೇಕ ಜನರಲ್ಲಿ ಅಡೆತಡೆಗಳು ಕ್ರಮೇಣ ಬೆಳವಣಿಗೆಯಾಗುತ್ತವೆ.

ಎದೆಯ ಅಸ್ವಸ್ಥತೆ, ಹಿಂದಿನ ಹೃದ್ರೋಗ ಸಮಸ್ಯೆಗಳು ಹೀಗೆ ಹತ್ತಾರು ಅನಾರೋಗ್ಯ ಸೂಚನೆಗಳನ್ನು ಹೃದಯಾಘಾತಕ್ಕೆ ಮೊದಲು ನೀಡುತ್ತಿರುತ್ತಾರೆ. ಪುನೀತ್ ರಾಜ್ ಕುಮಾರ್, ಸಿದ್ಧಾರ್ಥ್ ಶುಕ್ಲ ಮತ್ತು ಚಿರಂಜೀವಿ ಸರ್ಜಾರಂತಹ ಕೆಲವೊಬ್ಬರಲ್ಲಿ ಯಾವುದೇ ಸೂಚನೆ ನೀಡದೆ ಹೃದಯಾಘಾತವಾಗಿರುತ್ತದೆ. 

ಜಿಮ್‌ನಲ್ಲಿ ತೀವ್ರವಾದ ವರ್ಕೌಟ್‌ಗಳು, ಪ್ರೋಟೀನ್ ಶೇಕ್‌ಗಳು ಮತ್ತು ಇತರ ಅಂಶಗಳು ಹೃದಯಾಘಾತವನ್ನು ಪ್ರಚೋದಿಸಬಹುದು ಎಂದು ಅವರು ಹೇಳುತ್ತಾರೆ.

ತೂಕವನ್ನು ಎತ್ತುವಂತಹ ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸುವುದು ಒಳ್ಳೆಯದು ಅದರ ಬದಲಿಗೆ ವಾಕಿಂಗ್ ಮತ್ತು ಸೈಕ್ಲಿಂಗ್‌ನಂತಹ ಐಸೊಟೋನಿಕ್ ವ್ಯಾಯಾಮಗಳನ್ನು ಮಾಡುವುದು ಉತ್ತಮವಾಗಿರುತ್ತದೆ. ಸ್ನಾಯುಗಳಿಗೆ ಒತ್ತಡ ಹಾಕುವ ವ್ಯಾಯಾಮಗಳಿಂದ ದೂರವಿರುವುದು ಒಳಿತು ಎನ್ನುತ್ತಾರೆ ಡಾ ಮಂಜುನಾಥ್.

ಕುಟುಂಬಸ್ಥರಲ್ಲಿ ಹೃದ್ರೋಗ ಸಂಬಂಧಿ ರೋಗಗಳಿದ್ದರೆ ಅದು ಕೂಡ ಕುಟುಂಬದಲ್ಲಿ ಮತ್ತೊಬ್ಬರಿಗೆ ಹೃದಯಾಘಾತಕ್ಕೆ ಕಾರಣವಾಗಬಹುದು. ಪುನೀತ್ ರಾಜ್ ಕುಮಾರ್ ಅವರ ವಿಚಾರದಲ್ಲಿ ಅವರ ಸೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಸಹ ಹೃದ್ರೋಗ ಸಮಸ್ಯೆ ಹೊಂದಿರುವವರಾಗಿದ್ದಾರೆ. ಒತ್ತಡ ಮತ್ತು ಜೀವನಶೈಲಿಯು ಕೂಡ ಕಾರಣವಾಗುತ್ತದೆ. 

ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ: 

  • ನಿಯಮಿತ ಹೃದಯ ತಪಾಸಣೆ.
  • ಕುಟುಂಬದಲ್ಲಿ ಬೇರೆ ಸದಸ್ಯರಿಗೆ ಹೃದಯ ಕಾಯಿಲೆಯ ಸಮಸ್ಯೆಯಿದ್ದರೆ ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ.
  • ಜೀವನಶೈಲಿಯನ್ನು ಬದಲಾಯಿಸಿ.
  • ಹೆಚ್ಚುವರಿ ಸಕ್ಕರೆ ಸೇವನೆ ಮತ್ತು ಕೊಬ್ಬಿನ ಸೇವನೆಯನ್ನು ನಿಯಂತ್ರಿಸಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು. ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸಿ ಹೆಚ್ಚು ಐಸೊಟೋನಿಕ್ ವ್ಯಾಯಾಮಗಳನ್ನು ಮಾಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com