ವಿಶ್ವ ಮಾನಸಿಕ ಆರೋಗ್ಯ ದಿನ: ಸ್ವಯಂಚಿಂತನೆಯ ಮೂಲಕ ಮಾನಸಿಕ ಆರೋಗ್ಯ ಸುಧಾರಣೆ ಬಗ್ಗೆ ತಿಳಿಯಬೇಕಾದ ಅಂಶಗಳು

"ನನಗೆ ನಿದ್ದೆ ಬರುವುದಿಲ್ಲ. ಅದೇ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ" ಈ ಸಮಸ್ಯೆ ಅನೇಕರನ್ನು ಕಾಡುವಂತಹ ಸಮಸ್ಯೆ. ಇತ್ತೀಚೆಗಿನ ದಿನಗಳಲ್ಲಿ ಅನೇಕರಿಗೆ ನಿದ್ದೆ ಬರುವುದಿಲ್ಲ.
ಸ್ವಯಂಚಿಂತನೆಯ ಮೂಲಕ ಮಾನಸಿಕ ಆರೋಗ್ಯ (ಸಾಂಕೇತಿಕ ಚಿತ್ರ)
ಸ್ವಯಂಚಿಂತನೆಯ ಮೂಲಕ ಮಾನಸಿಕ ಆರೋಗ್ಯ (ಸಾಂಕೇತಿಕ ಚಿತ್ರ)

"ನನಗೆ ನಿದ್ದೆ ಬರುವುದಿಲ್ಲ. ಅದೇ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ" ಈ ಸಮಸ್ಯೆ ಅನೇಕರನ್ನು ಕಾಡುವಂತಹ ಸಮಸ್ಯೆ. ಇತ್ತೀಚೆಗಿನ ದಿನಗಳಲ್ಲಿ ಅನೇಕರಿಗೆ ನಿದ್ದೆ ಬರುವುದಿಲ್ಲ. ಪುರಂದರದಾಸರು ಹೇಳಿದ ಹಾಗೆ ಹಲವರಿಗೆ "ಅನುಗಾಲವು ಚಿಂತೆ". ಏನಾದರೂ ಒಂದು ಸಮಸ್ಯೆಯನ್ನು ಹೊತ್ತುಕೊಂಡೇ ಬದುಕುತ್ತಾರೆ. ಹಾಗಾದಾಗ ವಿಶ್ರಾಂತಿ ತೆಗೆದುಕೊಳ್ಳುವ ಸಮಯಕ್ಕೆ ನಮಗೆ ಅವಿಶ್ರಾಂತವಾಗಿ ಯೋಚನಾ ಲಹರಿಗಳು ಹರಿಯತೊಡಗುತ್ತವೆ. ನಿದ್ದೆ ಯಾವಾಗ ಸರಿಯಾಗಿ ಆಗಿರುವುದಿಲ್ಲವೋ ಆವಾಗ, ಅದು ನಮ್ಮ ದೈನಂದಿನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಇದ್ದಾಗ ಕೋಪ, ಸಿಡುಕುತನ, ಕೆರಳುವಿಕೆ, ಹತಾಶೆ ಮುಂತಾದ ಅನೇಕ ರೀತಿಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅದರ ಜೊತೆಗೆ ಮತ್ತೆ ನಿದ್ದೆ ಬರದಿದ್ದಾಗ ಅದು ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ನಮ್ಮನ್ನು ತಳ್ಳುತ್ತದೆ. ಹಾಗಾಗಿ ಇದು ಒಂದು ರೀತಿಯ ಚಕ್ರವಿದ್ದಂತೆ. ನಿದ್ದೆ ಇಲ್ಲದವನಿಗೆ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಮಾನಸಿಕ ಆರೋಗ್ಯದಲ್ಲಿ ಏರುಪೇರಾದವನಿಗೆ ನಿದ್ದೆ ಬರುವುದಿಲ್ಲ. ಹಾಗಾದಾಗ ಜೀವನದಲ್ಲಿ ಹಲವಾರು ವಿಷಯಗಳು ಏರುಪೇರಾಗುತ್ತವೆ. ಆದ್ದರಿಂದ ಮಾನಸಿಕ ಆರೋಗ್ಯದ ಕುರಿತು ಬಹಳ ತೀಕ್ಷ್ಣವಾಗಿ ಚಿಂತನೆ ನಡೆಸುವ ಅಗತ್ಯವಿದೆ. 

"ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಅಂತ ಒಂದು ಮಾತಿದೆ. ಇದರರ್ಥ ಜಗತ್ತು ನಿಮಗೆ ಸಂತೋಷ ಅಥವಾ ದುಃಖವನ್ನುಂಟು ಮಾಡುವುದಿಲ್ಲ, ಪ್ರಪಂಚದ ಬಗ್ಗೆ ನಿಮ್ಮ ಗ್ರಹಿಕೆಯೇ ಅದನ್ನು ಉಂಟುಮಾಡುತ್ತದೆ. ಅಂದರೆ ನಮ್ಮ ಜೀವನದಲ್ಲಿ ಏನೇ ಆಗುವುದಿದ್ದರೂ ಅದು ನಮ್ಮ ಮನಸ್ಸಿನಿಂದಾಗಿ ಎಂಬುವುದು ಸ್ಪಷ್ಟ. ಇದಕ್ಕೊಂದು ಸರಳ ಉದಾಹರಣೆ ನೋಡುವುದಾದರೆ, ಒಂದು ಶೈಲಿಯ ಸಂಗೀತವನ್ನು ಕೇಳಿದಾಗ, ಒಬ್ಬ ವ್ಯಕ್ತಿಗೆ ಸಂತೋಷವಾಗಬಹುದು, ಇನ್ನೊಬ್ಬನಿಗೆ ಹಿಡಿಸದೇ ಇರಬಹುದು. ಸಂಗೀತ ಒಂದೇ ಆದರೆ ಅವುಗಳನ್ನು ಅಸ್ವಾದಿಸುವ ಭಾವಗಳು ಬೇರೆ. ಇನ್ನೂ ಒಂದು ರೀತಿ ನೋಡುವುದಾದರೆ, ಜೀವನದಲ್ಲಿ ನಮಗೆ ಬೇಕಾದದ್ದೆಲ್ಲಾ ಸಿಕ್ಕಿದಾಗಲೂ ಅನೇಕರು ಅಸಂತುಷ್ಟರಾಗಿರಬಹುದು. ಏನೂ ಸಿಗದಿದ್ದಾಗಲೂ ಇದ್ದುದರಲ್ಲಿ ಸಂತುಷ್ಟರಾಗಿರಬಹುದು. ಸಂತೋಷವಾಗಿರುವುದು ನಮ್ಮ ಆಯ್ಕೆ. ಆದರೆ ಆ ಆಯ್ಕೆಯನ್ನು ಮಾಡಬೇಕಾದರೆ, ಮನಸ್ಸಿನ ಆರೋಗ್ಯ ಚೆನ್ನಾಗಿರಬೇಕು. ಇಲ್ಲದಿದ್ದಾಗ ಉತ್ಸುಕತೆಯಿಂದ ಇರುವುದಕ್ಕೆ ಅದೇ ಒಂದು ದೊಡ್ಡ ತಡೆಯಾಗುತ್ತದೆ. 

ನಮ್ಮ ಜೀವನದಲ್ಲಿ ಗುರಿ ಸಾಧನೆಗೆ ನಾವು ಹೊರ ಜಗತ್ತಿನಿಂದ ಎಷ್ಟು ಕಲಿಯುತ್ತೇವೋ, ಅಷ್ಟೇ ಅಂತಃಪ್ರಜ್ಞೆಯ (ಇಂಟ್ಯುಷನ್) ಮೂಲಕವೂ ಕಲಿಯುವುದಿದೆ. ಆದರೆ ಈಗಿನ ವೇಗದ ಬದುಕಿನಲ್ಲಿ ನಾವು ನಮಗೋಸ್ಕರ ಸಾಕಷ್ಟು ಸಮಯವನ್ನು ಕೊಡುವುದೇ ಇಲ್ಲ. ನಮ್ಮೊಳಗಾಗುತ್ತಿರುವ ತುಮುಲಗಳನ್ನು, ಏರುಪೇರುಗಳನ್ನು ಗಮನಿಸುವುದೇ ಇಲ್ಲ. ಅದು ತಾರಕಕ್ಕೇರಿದ ಮೇಲೆ, ಇನ್ನು ತಾಳಿಕೊಳ್ಳುವುದು ಸಾಧ್ಯವೇ ಇಲ್ಲ ಎಂದಾದ ಮೇಲೆ ಸಮಸ್ಯೆಯ ಅರಿವಾಗುತ್ತದೆ. ಆದರೆ ಅಷ್ಟು ಹೊತ್ತಿಗೆ ತಡವಾಗಿರುತ್ತದೆ. 

ಮಾನಸಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದಕ್ಕೆ ಅನೇಕ ಗಂಟೆಗಳನ್ನು ವಿನಿಯೋಗಿಸುವ ಅಗತ್ಯವಿಲ್ಲ. ನಿತ್ಯವೂ ನಮ್ಮ ಯೋಚನೆಗಳು, ಭಾವನೆಗಳು ಹಾಗೂ ವರ್ತನೆಗಳು ಹೇಗಿವೆ, ಅವುಗಳ ಮೂಲ ಎಲ್ಲಿದೆ ಮತ್ತು ಏನನ್ನು ಸರಿಪಡಿಸಿಕೊಳ್ಳಬೇಕು ಎಂಬ ಆತ್ಮಾವಲೋಕನ ಮಾಡಬೇಕು. ಆವಾಗ ನಮ್ಮೊಳಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅವುಗಳು ಆರಂಭದಲ್ಲೇ ಗುರುತಿಸಲ್ಪಡುತ್ತವೆ. ತನ್ಮೂಲಕ ಅವುಗಳ ತಿದ್ದುಪಡಿಯೂ ಸುಲಭ ಸಾಧ್ಯವಾಗುತ್ತದೆ. ಹಾಗಾಗಿ ವಿಶ್ವ ಮಾನಸಿಕ ಆರೋಗ್ಯ ದಿನವಾದ ಇಂದಿನಿಂದ ಎಲ್ಲರೂ ತಮಗೋಸ್ಕರ ಇಡೀ ದಿನದಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸ್ವಯಂಚಿಂತನೆಗೆ ಮೀಸಲಿಟ್ಟರೆ, ಮತ್ತು ಅವಲೋಕನದ ಸಂದರ್ಭದಲ್ಲಿ ತಮ್ಮಲ್ಲಿರುವ ಸಮಸ್ಯೆಗಳನ್ನು ಮುಖಾಮುಖಿ ಮಾಡಿದ್ದೇ ಆದರೆ, ಪ್ರತಿದಿನವೂ ನಾವು ಹಿಂದಿನ ದಿನಕ್ಕಿಂತ ಹೆಚ್ಚು ಉತ್ತಮರಾಗಬಹುದು. ಎಲ್ಲರಿಗೂ ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು


ಅಕ್ಷರ ದಾಮ್ಲೆ
ಸೆಲೆಬ್ರಿಟಿ ಸೈಕಾಲಜಿಸ್ಟ್ 
ಸಂಸ್ಥಾಪಕ, ಮನೋಸಂವಾದ
aksharadamle@manosamvaada.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com