ಧೂಮಪಾನ ಮತ್ತು ವಾಯುಮಾಲಿನ್ಯದ ಪರಿಣಾಮವಾಗಿ ಶ್ವಾಸಕೋಶದ ಕಾಯಿಲೆಗಳು ಮತ್ತು ಕ್ಯಾನ್ಸರ್ ಕಂಡುಬರುತ್ತದೆ ಎಂದು ಹೇಳಲಾದರೂ ಕಡಿಮೆ ಮತ್ತು ಕಳಪೆ ಗಾಳಿ ಇರುವ ಸ್ಥಳಗಳಲ್ಲಿ ಸುಡುವ ಗಂಧದ ಕಡ್ಡಿ, ಏರ್ ಫ್ರೆಶ್ನರ್, ಪಾರಿವಾಳಗಳು, ಇಲಿಗಳು, ನಾಯಿಗಳು ಹಾಗೂ ಬೆಕ್ಕುಗಳಂತಹ ಸಾಕುಪ್ರಾಣಿಗಳಿಂದಲೂ ಶ್ವಾಸಕೋಶದ ಕಾಯಿಲೆ ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಕಡೆಗಣಿಸಲ್ಪಡುವ ಈ ಸಣ್ಣ ಅಂಶಗಳು ಉಸಿರಾಟದ ಆರೋಗ್ಯವನ್ನು ಹದಗೆಡಿಸುವ ಹಾನಿಕಾರಕ ಕಣಗಳನ್ನು ಬಿಡುಗಡೆ ಮಾಡುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಸೆಪ್ಟೆಂಬರ್ 25 ರಂದು ವಿಶ್ವ ಶ್ವಾಸಕೋಶ ದಿನವನ್ನು ಆಚರಿಸಲಾಗುತ್ತದೆ. 'ಕ್ಲೋಸ್ ದಿ ಕೇರ್ ಗ್ಯಾಪ್: ಪ್ರತಿಯೊಬ್ಬರೂ ಕ್ಯಾನ್ಸರ್ ಕೇರ್‌ಗೆ ಪ್ರವೇಶಕ್ಕೆ ಅರ್ಹರು' ಎಂಬ 2024 ರ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.
ಸ್ಥೂಲಕಾಯಕ್ಕೆ ಪ್ರಮುಖ ಕೊಡುಗೆ ನೀಡುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯು ಉಸಿರಾಟದ ಸಮಸ್ಯೆಗಳಿಗೆ ಮೂಲ ಕಾರಣಗಳಾಗಿವೆ ಎಂದು ವೈದ್ಯರು ಉಲ್ಲೇಖಿಸಿದ್ದಾರೆ, ಏಕೆಂದರೆ ಅಧಿಕ ತೂಕವು ಶ್ವಾಸಕೋಶದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಡಯಾಫ್ರಾಮ್‌ನ ಮೇಲೆ ಹೆಚ್ಚು ಒತ್ತಡ ಬೀರುತ್ತದೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ರಾಸಾಯನಿಕಗಳ ಬಳಕೆ, ಕಡಿಮೆ ಗಾಳಿಯಿರುವ ಮನೆಯ ಒಳಾಂಗಣ ಕೆಲಸದ ಸ್ಥಳದಲ್ಲಿ ಹಾನಿಕಾರಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದು ಮತ್ತು ಆನುವಂಶಿಕ ಪ್ರವೃತ್ತಿಯು ಕೂಡ ಪ್ರಮುಖ ಕಾರಣಗಳಾಗಿವೆ. ಗಣಿಗಾರಿಕೆ, ನಿರ್ಮಾಣ ಮತ್ತು ಉತ್ಪಾದನೆಯಂತಹ ಕೆಲಸಗಳು ಶ್ವಾಸಕೋಶದ ಆರೋಗ್ಯಕ್ಕೆ ಹಾನಿ ಮಾಡುವ ಹಾನಿಕಾರಕ ಪದಾರ್ಥಗಳಿಗೆ ಕಾರ್ಮಿಕರನ್ನು ಒಡ್ಡುತ್ತವೆ ಎಂದು ಆಸ್ಟರ್ CMI ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿಯ ಪ್ರಮುಖ ಸಲಹೆಗಾರರಾದ ಡಾ ಸುನಿಲ್ ಕುಮಾರ್ ಕೆ ತಿಳಿಸಿದ್ದಾರೆ.
ಹದಿಹರೆಯದವರು ವ್ಯಾಪಿಂಗ್ (ಹೊಗೆ ಮೂಲಕ ಒಂದು ರೀತಿಯ ಡ್ರಗ್ ಸೇವನೆ) ಶ್ವಾಸಕೋಶದ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಡಾ ಕುಮಾರ್ ಉಲ್ಲೇಖಿಸಿದ್ದಾರೆ. "ಜಡ ಜೀವನಶೈಲಿ ಮತ್ತು ಸಂಸ್ಕರಿಸಿದ ಆಹಾರಗಳು, ಉಪ್ಪು ಮತ್ತು ಕೊಬ್ಬು ಸಮೃದ್ಧವಾಗಿರುವ ಅನಾರೋಗ್ಯಕರ ಆಹಾರವು ಶ್ವಾಸಕೋಶದ ಕಾರ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ" ಎಂದು ಅವರು ಹೇಳಿದರು.
ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಕನ್ಸಲ್ಟೆಂಟ್, ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಡಾ ಮಂಜುನಾಥ್ ಪಿಎಚ್ ಮಾತನಾಡಿ, ವಾಯು ಮಾಲಿನ್ಯಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು ಮತ್ತು ರಾಸಾಯನಿಕ ಹೊಗೆಯಂತಹ ಔದ್ಯೋಗಿಕ ಅಪಾಯಗಳು ಈ ರೋಗಗಳಿಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು. ಈ ಮಾಲಿನ್ಯಕಾರಕಗಳು ಶ್ವಾಸಕೋಶದ ಕಿರಿಕಿರಿಯನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD), ಆಸ್ತಮಾ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳಂತಹ ಪರಿಸ್ಥಿತಿಗಳು ಉಂಟಾಗಬಹುದು. ಜೆನೆಟಿಕ್ಸ್ ಕೂಡ ಶ್ವಾಸಕೋಶದ ಕಾಯಿಲೆಗಳಿಗೆ ಒಳಗಾಗುವಿಕೆಯ ಮೇಲೆ ಪ್ರಭಾವ ಬೀರಬಹುದು.
ಧೂಮಪಾನವನ್ನು ತ್ಯಜಿಸುವುದು, ಅಪಾಯಕಾರಿ ಕೆಲಸದ ವಾತಾವರಣದಲ್ಲಿ ರಕ್ಷಣಾ ಸಾಧನಗಳನ್ನು ಬಳಸುವುದು ಮತ್ತು ಶ್ವಾಸಕೋಶದ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದರಿಂದ ಶ್ವಾಸಕೋಶದ ಕಾಯಿಲೆ ಮತ್ತು ಕ್ಯಾನ್ಸರ್ ಕಡಿಮೆ ಮಾಡಬಹುದಾಗಿದೆ ಎಂದು ಡಾ ಮಂಜುನಾಥ್ ಹೇಳಿದರು. ನಿರಂತರ ಕೆಮ್ಮು, ಉಸಿರಾಟದ ತೊಂದರೆ, ಎದೆನೋವು, ಹಠಾತ್ ತೂಕ ನಷ್ಟ, ಅತಿಯಾದ ಆಯಾಸ ಮತ್ತು ಆಗಾಗ್ಗೆ ಅನಾರೋಗ್ಯದಂತಹ ರೋಗಲಕ್ಷಣಗಳಿಗೆ ಗಮನ ಕೊಡುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ.
Advertisement