
ನವದೆಹಲಿ: ಭಾರತೀಯರು ಗುಪ್ತ ಆರೋಗ್ಯ ಸಮಸ್ಯೆಯ ಸಂಕಷ್ಟದಲ್ಲಿ ಸಿಲುಕಿಹಾಕಿಕೊಂಡಿದ್ದಾರೆಯೇ? ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಪ್ರತಿ ಐದು ಭಾರತೀಯರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಜನರ ಜೀವನಶೈಲಿ, ಆಹಾರ ಪದ್ಧತಿ ಮತ್ತು ನೀತಿ ನಿರೂಪಣೆಯಲ್ಲಿನ ನ್ಯೂನತೆಗಳಿಂದಾಗಿ ಆರೋಗ್ಯ ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಡುತ್ತಿವೆ ಎಂಬ ಆತಂಕಕಾರಿ ಅಂಕಿಅಂಶಗಳನ್ನು ಅಧ್ಯಯನವು ತೋರಿಸಿದೆ.
ಭಾರತೀಯ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿ (ICRIER) ಮತ್ತು ANVKA ಫೌಂಡೇಶನ್ ನಡೆಸಿದ ಸಂಶೋಧನೆ ಪ್ರಕಾರ, ದೇಶದ ನೀತಿ ನಿರೂಪಕರು, ಆರೋಗ್ಯ ವೃತ್ತಿಪರರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಷಯ ಬಹಿರಂಗವಾಗಿದೆ.
ಭಾರತ ದೇಶದ ಪೂರ್ವ ಪ್ರದೇಶದಲ್ಲಿ ವಿಟಮಿನ್ ಡಿ ಕೊರತೆಯು ಹೆಚ್ಚಾಗಿದೆ. ಹದಿಹರೆಯದವರು, ಶಿಶುಗಳು, ವೃದ್ಧರು ಮತ್ತು ಎಲ್ಲಾ ವಯೋಮಾನದ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಹೆಚ್ಚು ಬಳಲುತ್ತಿದ್ದಾರೆ. ನಗರ ಪ್ರದೇಶದ ಜನರ ಜೀವನಶೈಲಿ ಮತ್ತು ಸೂರ್ಯನ ಬೆಳಕಿಗೆ ಸೀಮಿತ ಒಡ್ಡಿಕೊಳ್ಳುವಿಕೆಯಿಂದಾಗಿ, ಗ್ರಾಮೀಣ ಪ್ರದೇಶದವರಿಗಿಂತ ಕಾಯಿಲೆಗಳಿಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ.
ವಿಟಮಿನ್ ಡಿ ಕೊರತೆಯು ರಿಕೆಟ್ಸ್ ಮತ್ತು ಆಸ್ಟಿಯೋಮಲೇಶಿಯಾದಂತಹ ಅಸ್ಥಿಪಂಜರದ ಅಸ್ವಸ್ಥತೆಗಳನ್ನು ಮೀರಿ ಬೆಳೆಯುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಸ್ನಾಯು ದೌರ್ಬಲ್ಯ, ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳು, ಟೈಪ್ 2 ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
ವಿಟಮಿನ್ ಡಿ ಕೊರತೆಯು ಲಕ್ಷಾಂತರ ಜನರನ್ನು ಬಾಧಿಸುವ ಮೌನ ಸಾಂಕ್ರಾಮಿಕ ರೋಗವಾಗಿದೆ, ಆದರೆ ಹೆಚ್ಚಾಗಿ ಜನರು ಇದನ್ನು ಕಡೆಗಣಿಸುತ್ತಾರೆ. ಇದರ ಪರಿಣಾಮಗಳು ದುರ್ಬಲ ಮೂಳೆಗಳನ್ನು ಮೀರಿ ವಿಸ್ತರಿಸುತ್ತವೆ. ಆರೋಗ್ಯ ವ್ಯವಸ್ಥೆಯನ್ನು ಒತ್ತಡಕ್ಕೆ ಒಳಪಡಿಸುತ್ತದೆ. ನಮ್ಮ ರಾಷ್ಟ್ರೀಯ ಆರೋಗ್ಯ ಗುರಿಗಳನ್ನು ದುರ್ಬಲಗೊಳಿಸುತ್ತದೆ ಎಂದು ಆಕಾಶ್ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಯನದ ಸಹ-ಲೇಖಕ ಡಾ. ಆಶಿಶ್ ಚೌಧರಿ ಹೇಳುತ್ತಾರೆ.
ಬಿಕ್ಕಟ್ಟನ್ನು ಪರಿಹರಿಸಲು ಹಲವಾರು ವ್ಯವಸ್ಥಿತ ಅಡೆತಡೆಗಳನ್ನು ವರದಿಯು ಗುರುತಿಸುತ್ತದೆ. ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಹೆಚ್ಚಿನ ಪರೀಕ್ಷಾ ವೆಚ್ಚಗಳು ಮತ್ತು ಆರೋಗ್ಯ ಪೂರಕಗಳ ಮೇಲಿನ ಶೇಕಡಾ 18ರಷ್ಟು ಜಿಎಸ್‌ಟಿಯು ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಅನೇಕರಿಗೆ ಭರಿಸಲಾಗದಂತೆ ಮಾಡುತ್ತದೆ.
Advertisement