

ಹೆಚ್‌ಪಿವಿ (ಹ್ಯೂಮನ್ ಪ್ಯಾಪಿಲ್ಲೊಮಾ ವೈರಸ್) ಹೆಸರನ್ನು ಸಾಕಷ್ಟು ಜನ ಕೇಳಿದ್ದರೂ ಈ ರೋಗ ತಡೆಗೆ ಯಾವ ಲಸಿಕೆ, ಯಾಕೆ ತೆಗೆದುಕೊಳ್ಲಬೇಕು, ಏನಿದರ ಉಪಯೋಗ ಎಂಬ ಮಾಹಿತಿ ಹಲವರಲ್ಲಿ ಇಲ್ಲ. ಈ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆ ಸರ್ಜಿಕಲ್ ಆಂಕೊಲಾಜಿಸ್ಟ್, ಡಾ. ಕಾರ್ತಿಕ್ ಕೆ.ಎಸ್ ಹೇಳುತ್ತಾರೆ. ಹೆಚ್‌ಪಿವಿ ಎಂದರೆ ನಮ್ಮ ಸುತ್ತಲೂ ಇರುವ ಹಾಗೇ ಕೆಲವೊಮ್ಮೆ ನಮ್ಮ ದೇಹದಲ್ಲೇ ವಾಸಿಸುವ ವೈರಸ್ ನ ಗುಂಪು. ನಮ್ಮ ದೇಹದಲ್ಲಿ ಈ ವೈರಸ್ ವಿರುದ್ಧ ಹೋರಾಡುವ ಉತ್ತಮ ರೋಗನಿರೋಧಕ ಶಕ್ತಿ ಇರುತ್ತದೆ, ಹಾಗೇ ಸಾಕಷ್ಟು ಪ್ರಕರಣಗಳಲ್ಲಿ ರೋಗನಿರೋಧಕ ಪ್ರತಿಕ್ರಿಯೆಯಿಂದ ಈ ವೈರಸ್ ದೇಹದಿಂದ ಹೊರಹೋಗುತ್ತದೆ. ಆದರೆ ಕೆಲವೊಮ್ಮೆ ಈ ವೈರಸ್‌ಗಳು ದೇಹದಲ್ಲೇ ಉಳಿದು ರೋಗನಿರೋಧಕ ಶಕ್ತಿಯ ವಿರುದ್ಧ ಹೋರಾಡುತ್ತವೆ.
ಕೆಲವೊಮ್ಮೆ ಈ ವೈರಸ್‌ಗಳು ಕಡಿಮೆ ಆಕ್ರಮಣಶಾಲಿಯಾಗಿರುತ್ತವೆ ಅಂತಹ ಸಂದರ್ಭದಲ್ಲಿ ಚರ್ಮದ ಸಮಸ್ಯೆ, ನರಹುಲಿಯಂತಹ (ವಾರ್ಟ್ಸ್) ಉಂಟುಮಾಡುತ್ತವೆ. ಈ ನರಹುಲಿಗಳಂತಹ ಸಮಸ್ಯೆ ಬಾಯಿ, ಗುದದ್ವಾರ, ಖಾಸಗಿ ಅಂಗಗಳಲ್ಲೂ ಕಾಣಿಸಿಕೊಳ್ಳಬಹುದು. ಆಕ್ರಮಣಶಾಲಿ ಹೆಚ್‌ಪಿವಿ ವೈರಸ್‌ಗಳು ಮುಂದುವರೆದು ಗರ್ಭಕಂಠ, ಗುದದ್ವಾರ, ಗಂಟಲು, ಯೋನಿ ಮತ್ತು ಶಿಶ್ನದ ಕ್ಯಾನ್ಸರ್‍ಗೆ ಕಾರಣವಾಗುತ್ತವೆ.
ಈ ವೈರಸ್‌ಗಳು ಲೈಂಗಿಕವಾಗಿ ಹರಡಬಹುದು ಅಥವಾ ಚರ್ಮದಿಂದ ಚರ್ಮಕ್ಕೂ ಹರಡಬಹುದು, ಹಾಗೇ ಖಾಸಗಿ ಅಂಗದಲ್ಲಿ ನರಹುಲಿಗಳಿದ್ದರೆ(ವಾರ್ಟ್ಸ್) ಮಗುವಿನ ಜನನದ ಸಮಯದಲ್ಲಿ ತಾಯಿಯಿಂದ ಮಗುವಿಗೂ ಹರಡಬಹುದು. ಈ ವೈರಸ್ ಗುಂಪಿನಲ್ಲಿ ವಿವಿಧ ಬಗೆಗಳಿದ್ದು ಅವುಗಳನ್ನ ಗುರುತಿಸಿ ನಂಬರ್‍ಗಳನ್ನು ನೀಡಲಾಗಿದೆ. ಹೆಚ್‌ಪಿವಿ 16 ಮತ್ತು 18 ಸುಮಾರು ಶೇ. 70 ರಷ್ಟು ಗರ್ಭಕಂಠದ ಕ್ಯಾನ್ಸರ್‍ಗೆ ಕಾರಣವಾಗುತ್ತವೆ. 31,,33,45,52 ಹಾಗೂ 58 ಹೆಸರಿನ ಹೆಚ್‌ಪಿವಿ ವೈರಸ್‌ಗಳು ಕ್ಯಾನ್ಸರ್ ಹಾಗೂ ಚರ್ಮದ ನರಹುಲಿಗಳಿಗೆ(ವಾರ್ಟ್ಸ) ಕಾರಣವಾಗುತ್ತವೆ. ಹಾಗೇ ಹೆಚ್‌ಪಿವಿ 6 ಮತ್ತು 11 ಸಾಮಾನ್ಯವಾಗಿದ್ದು ನರಹುಲಿಗಳ ರಚನೆಗೆ ಕಾರಣ.
ಹೆಚ್‌ಪಿವಿ ವೈರಸ್‌ಗೆ ಕಾರಣ ಪತ್ತೆಯಾದಾಗ ಅದನ್ನು ತಡೆಯುವುದು ಹಾಗೂ ರಕ್ಷಣೆ ಪಡೆಯುವುದು ಬಹಳ ಮುಖ್ಯ. ಯಾವುದಾದರೂ ವೈರಸ್‌ನಿಂದ ರೋಗ ಪತ್ತೆಯಾದಾಗ ಲಸಿಕೆಗಳ ಬಳಕೆಗೆ ಮುಂದಾಗುತ್ತೇವೆ. ಹಾಗೇ ಈ ಹೆಚ್‌ಪಿವಿ ವೈರಸ್ ತಡೆಯಲು ಲಸಿಕೆ ಲಭ್ಯವಿದೆ. ಹೆಚ್‌ಪಿವಿ 16 ಮತ್ತು 18 ತಡೆಯಲು ವಿಶೇಷವಾಗಿ ಬಿವೆಲೆಂಟ್ ವ್ಯಾಕ್ಸಿನ್ (Bivalent vaccines) ಲಭ್ಯವಿದೆ. ಹೆಚ್‌ಪಿವಿ 6,11,16 ಮತ್ತು 18 ಗೆ ಕ್ವಾಡ್ರಿವಾಲೆಂಟ್ ಲಸಿಕೆ ( quadrivalent vaccines) ಲಭ್ಯವಿದೆ, ಹಾಗೇ ಹೆಚ್‌ಪಿವಿ 31,33,45,52 ಮತ್ತು ಜೊತೆಗೆ 6,11,16 ಮತ್ತು 18 ತಡೆಯಲು ನ್ಯಾನೊವಾಲೆಂಟ್ ಲಸಿಕೆ (nonavalent vaccines) ಲಭ್ಯವಿದೆ.
ಹೆಚ್‌ಪಿವಿ ವ್ಯಾಕ್ಸಿನೇಶನ್‌ಗಳು ಮಹಿಳೆ ಮತ್ತು ಪುರುಷ ಇಬ್ಬರಿಗೂ ಪರಿಣಾಮಕಾರಿ. ಇದು ವಿವಿಧ ಕ್ಯಾನ್ಸರ್‍ಗಳಿಂದ ರಕ್ಷಣೆ ನೀಡುತ್ತದೆ. ಈ ಲಸಿಕೆಯನ್ನು ಹೆಚ್‌ಪಿವಿ ಹರಡುವ ಸಾಧ್ಯತೆ ಹೆಚ್ಚಾಗಿರುವ ಹದಿಹರೆಯದ ಆರಂಭದಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. 11- 12ನೇ ವಯಸ್ಸಿನಲ್ಲಿಯೇ ಈ ಲಸಿಕೆ ಪಡೆಯುವು ಸಲಹೆ ನೀಡಲಾಗುತ್ತದೆ , 9ನೇ ವಯಸ್ಸಿನಲ್ಲಿಯೂ ಈ ಲಸಿಕೆ ಪಡೆಯಬಹುದು. ಸಣ್ಣ ವಯಸ್ಸಿನಲ್ಲಿಯೇ ಆದರೆ 2 ಡೋಸ್ ಲಸಿಕೆ ಪಡೆಯಬೇಕಾಗುತ್ತದೆ. ತಡವಾಗಿ ತೆಗೆದುಕೊಳ್ಳುವುದಾದರೆ 3 ಡೋಸ್ ನೀಡಲಾಗುತ್ತದೆ. ವೈದ್ಯರ ಜೊತೆ ಚರ್ಚಿಸಿ ವ್ಯಾಕ್ಸಿನ್‌ನ ಮಾಹಿತಿ ಹಾಗೂ ಯಾವ ವಯಸ್ಸಿನಲ್ಲಿ ತೆಗೆದುಕೊಂಡರೆ ಉತ್ತಮ, ಎಷ್ಟು ಡೋಸ್ ಎಂಬ ಬಗ್ಗೆ ಮುಕ್ತವಾಗಿ ಚರ್ಚಿಸಬಹುದಾಗಿದೆ.
Advertisement