ದೆಹಲಿಯಲ್ಲಿ 'ಸಿರಿಗನ್ನಡಂ ಗೆಲ್ಗೆ' ನೃತ್ಯರೂಪಕ

Updated on

ದೆಹಲಿ: ಕರ್ನಾಟಕದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದವರು ಭಾರತದ ಅಂತರಾಷ್ಟ್ರೀಯ ವ್ಯಾಪಾರ ಮೇಳ 2013, ಪ್ರಗತಿ ಮೈದಾನದ 'ಲಾಲ್ ಚೌಕ್‌' ಥಿಯೇಟರ್‌ನಲ್ಲಿ ಕರ್ನಾಟಕ ಹಿರಿಮೆ ಗರಿಮೆಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಶ್ರೀ ವಿವೇಕಾನಂದ ಕಲಾಕೇಂದ್ರದ ತಂಡದವರಿಂದ 'ಸಿರಿಗನ್ನಡಂ ಗೆಲ್ಗೆ' ಎಂಬ ವಿಶೇಷ ನೃತ್ಯರೂಪಕವನ್ನು ಆಯೋಜಿಸಿದ್ದರು.
ಶ್ವೇತ ಹರ್ಷ ಮತ್ತು ತಂಡದವರು ಗಣೇಶ ಸ್ತುತಿ ನೃತ್ಯದಿಂದ ಪ್ರಾರಂಭಿಸಿ ದಶಾವತಾರ, ಸಿರಿಗನ್ನಡಂ ಗೆಲ್ಗೆ, ಮಹಿಷಾಸುರ ಮರ್ಧಿನಿ, ಗೊಂಬೆ ನೃತ್ಯ, ನಿಸರ್ಗ ನೃತ್ಯ, ಜಾನಪದ ನೃತ್ಯ, ಪುರಂದರದಾಸರ ದೇವರನಾಮ ಮುಂತಾದ ವೈವಿಧ್ಯಮಯ ನೃತ್ಯ ಪ್ರದರ್ಶನವನ್ನು ನೀಡಿದರು. 150ನೇ ವರ್ಷದ ವಿವೇಕಾನಂದರ ಜನ್ಮದಿನೋತ್ಸವದ ನೆನಪಿಗಾಗಿ 3 ವರ್ಷದ ಪೋರ ಮಾಸ್ಟರ್ ದೈವಿಕ್ ಮಾಡಿದ ವಿವೇಕಾನಂದರ ಚಿಕಾಗೋ ಉಪನ್ಯಾಸದ ತುಣುಕುಗಳು ನೆರೆದ ಸಭಿಕರ ಮೈನವಿರೇಳಿಸಿತು.
ಕರ್ನಾಟಕದ ವೀರ ರಾಣಿ ಕಿತ್ತೂರು ಚೆನ್ನಮ್ಮನ ಧೈರ್ಯ ಸಾಹಸ ಹಾಗೂ ಆತ್ಮಾಭಿಮಾನಗಳನ್ನು ಪ್ರತಿನಿಧಿಸಿದ ದೃಶ್ಯರೂಪಕ 'ಕಿತ್ತೂರು ಚೆನ್ನಮ್ಮ' ವೀರೋಚಿತವಾಗಿತ್ತು. ನವರಸಗಳ ಅಭಿನಯದಿಂದ ಕೂಡಿದ 'ಮಹಿಷಾಸುರ ಮರ್ಧಿನಿ' ನೃತ್ಯರೂಪಕ ಮೈಸೂರಿನ ಪೌರಾಣಿಕ ಹಿನ್ನೆಲೆಯನ್ನು ಅದ್ಭುತವಾಗಿ ಪ್ರದರ್ಶಿಸಿತು. ಕರ್ನಾಟಕ ಜಾನಪದ ನೃತ್ಯಗಳು ನೆರೆದ ಪ್ರೇಕ್ಷಕರಲ್ಲಿ ಉತ್ತೇಜನ ಮೂಡಿಸಿತು. ಅವರು ಕುಳಿತಲ್ಲೇ ನೃತ್ಯ ಮಾಡಿದ್ದು ಆಕರ್ಷಣೆ ಆಗಿತ್ತು. ಕಾರ್ಯಕ್ರಮದ ಕೊನೆ ಅಂಗವಾಗಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನು ಅಭಿವ್ಯಕ್ತಪಡಿಸುವ 'ವಂದೇಮಾತರಂ' ನೃತ್ಯ ಹಾಗೂ ಭಾರತ ಮಾತೆಯ ತನುಜಾತೆ ಕರ್ನಾಟಕದ ಮಾತೆಗೆ ವಂದಿಸಿದ ನೃತ್ಯ ಇಡೀ ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿತ್ತು.
ಸುಮಾರು 90 ನಿಮಿಷಗಳ ಅವಧಿಯಲ್ಲಿ ವೈವಿಧ್ಯಮಯ ನೃತ್ಯಗಳಿಂದ ಕರ್ನಾಟಕವೇ ದೆಹಲಿಯಲ್ಲಿ ಇದೆಯೇನೋ ಎಂಬ ಭಾವನೆ ಮೂಡಿಬಂದಿತ್ತು. ನುರಿತ ನೃತ್ಯಗಾರ್ತಿ ಶ್ವೇತ ಹರ್ಷರವರು ವಿವಿಧ ನೃತ್ಯಗಳಲ್ಲಿ ನೀಡಿದ ಅಭಿನಯ ಮನೋಜ್ಞವಾಗಿತ್ತು. ಇವರ ಸಮರ್ಥ ನೃತ್ಯ ಸಂಯೋಜನೆಯಲ್ಲಿ ಹಾಗೂ ಕೆ.ವಿ. ನಾಗರಾಜ್‌ರವರ ದಕ್ಷ ನಿರ್ದೇಶನದಲ್ಲಿ ಭಾಗವಹಿಸಿದ 25 ಕಲಾವಿದರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಟರಾಜ್‌ರವರ ಸಮಯೋಚಿತ ನೆಳಲು ಬೆಳಕುಗಳ ರಂಗವಿನ್ಯಾಸ, ಆಕರ್ಷಕ ವೇಷ ಭೂಷಣಗಳು, ಸುಶ್ರಾವ್ಯ ಸಂಗೀತಗಳೆಲ್ಲವುದರ ಸಂಮಿಶ್ರಣದಿಂದ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿ ಬಂದು ದೆಹಲಿಯ ಜನತೆಯಿಂದಲೂ 'ಸಿರಿಗನ್ನಡಂ ಗೆಲ್ಗೆ' ಎಂಬ ಜಯಘೋಷ ಮಾಡಿಸುವ ನಿಟ್ಟಿನಲ್ಲಿ ಶ್ರೀ ವಿವೇಕಾನಂದ ಕಲಾಕೇಂದ್ರದವರ ಪ್ರಯತ್ನ ಸ್ತುತ್ಯಾರ್ಹವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com