ಮುಂಬೈ: ಇಲ್ಲಿನ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್ ವತಿಯಿಂದ ಜರುಗಿದ 'ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ ಪ್ರದಾನ 2013' ಈ ಸಮಾರಂಭದಂದು ಹಿರಿಯ ಸಾಹಿತಿ ಎ.ಪಿ. ಮಾಲತಿ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ಶ್ರೀಮತಿ ಮಾಲತಿಯವರು ತಮ್ಮ ಬದುಕು ಬರಹದ ವಿಲಕ್ಷಣ ಅನುಭವಗಳನ್ನು ಹಂಚಿಕೊಂಡರು. ತಾಯಿಯ ಮನೆ ಮುಂಬೈ, ಗಂಡನ ಮನೆ ಪುತ್ತೂರು ಹೀಗೆ ಹಳ್ಳಿ ಪಟ್ಟಣಗಳ ಎರಡೂ ಜೀವನದ ಅಪಾರ ಅನುಭವ ತನ್ನ ಸಾಹಿತ್ಯ ಕೃಷಿಗೆ ಸಹಕಾರಿ ಆಯಿತು ಎಂದರು. ಈ ಸಂದರ್ಭದಲ್ಲಿ ಚಂದ್ರಶೇಖರ ಪಾಲೆತ್ತಾಡಿ, ಡಾ. ಜಿ.ಡಿ. ಜೋಶಿ, ಎಂ.ವಿ. ಶರ್ಮ, ಮೋಹನ್ ಹೆಗಡೆ ಸಾಗರ, ಶಿಮುಂಜೆ ಪರಾರಿ, ಶಾಂತಾ ಶಾಸ್ತ್ರಿ, ಟ್ರಸ್ಟ್ನ ಅಧ್ಯಕ್ಷ ಎನ್.ಆರ್. ಹೆಗಡೆ, ಉಪಾಧ್ಯಕ್ಷ ದತ್ತಗುರು, ಹವ್ಯಕ ಸಂದೇಶದ ಸಂಪಾದಕಿ ಅಮಿತಾ ಭಾಗವತ್, ಶಿವಕುಮಾರ್ ಭಾಗವತ್, ನಾರಾಯಣ ಅಕದಾಸ, ತನುಜಾ ಹೆಗಡೆ, ಶಶಿಕಲಾ ಹೆಗಡೆ ಉಪಸ್ಥಿತರಿದ್ದರು. ನಂತರ 'ಮುಂಡಿಗೆ, ಉಗಾಭೋಗ' ಪ್ರಾತ್ಯಕ್ಷಿಕೆಯನ್ನು ಶ್ಯಾಮಲಾ ಪ್ರಕಾಶ ಮಂಡಿಸಿ ದಾಸರ ಪದಗಳ ಮಾಧುರ್ಯ ನೀಡಿದರು. ನಂತರ ಸುಬ್ರಾಯ ಭಟ್ಟರಿಂದ ವಿರಚಿತ, ದಿಗ್ದರ್ಶನದ 'ಸಾಂಖ್ಯರ ಸಂಸಾರ ನಾಟಕವು ನಗರ ಜೀವನದ ಕಟು ವಾಸ್ತವಿಕತೆಯನ್ನು ತೆರೆದಿಟ್ಟು ಸ್ಟ್ರಕ್ಚರಲ್ ಡ್ರಾಮಾ ಪದ್ಧತಿಯ ಮೂಲಕ ವೈಶಿಷ್ಟ್ಯಪೂರ್ಣ ನಿರೂಪಣೆಯೊಂದಿಗೆ ಹೊಸ ಅನುಭವವನ್ನು ನೀಡಿತು. ತನ್ನ ಸ್ವಂತಿಕೆಯನ್ನೇ ಒಂದು ಸಂಪುಟದಲ್ಲಿ ಇಟ್ಟು 'ಏನೋ' ಆಗಲು ತಾನು ಮೊದಲು 'ಯಾರೂ ಅಲ್ಲ' ಆಗಬೇಕು ಎಂಬ ರಾಮಪ್ಪ ಪಟ್ಟಣದಲ್ಲಿ ಹೆಣಗಾಡಿ ಒಬ್ಬ ರೊಬೋಟ್ ಮಾದರಿಯಲ್ಲಿ ಬದಲಾಗಿ ಹಳ್ಳಿಗೆ ಮರಳಿದ ರಾಮಪ್ಪ ಜೀವನವನ್ನು ಹೊರಲಾರದೆ, ಹೂಳಲಾರದೆ ಕೊನೆಗೂ ಬಿಟ್ಟು ಹೋದ ತನ್ನತನವನ್ನು ಪಡೆಯುತ್ತಾನೆ. ಅಪ್ರತಿಮ ಅಭಿನಯದಿಂದ ಸುಬ್ರಾಯಭಟ್ಟರು ನಾಟಕಕ್ಕೆ ಜೀವನ ತರುತ್ತಾರೆ. ದರ್ಶನ ಕಾಮ್ಟೆ, ಲಕ್ಷ್ಮೀಭಟ್ಟ, ಎಚ್.ಆರ್. ಉಮೇಶ, ಶ್ರೇಯಸ್ ಸಿಂಹಾದ್ರಿ, ಬಿ.ಟಿ. ಚಂದ್ರಣ್ಣ, ಅಭಿನಯ, ಗುಂಪು ಪಾತ್ರಗಳ ಸಮತೋಲನ ಓಡಾಟ, ನರ್ತನ ಹಿತಮಿತವಾಗಿತ್ತು. ಈ ನಾಟಕವನ್ನು ಬೆಂಗಳೂರಿನ ವಿಜಯರಂಗದ ಕಲಾವಿದರು ಪ್ರಸ್ತುತ ಪಡಿಸಿದರು.