ಕಾಸರಗೋಡು: ಸಾಹಿತಿ, ಶಿಕ್ಷಕ, ಸಂಘಟಕ, ಎಂ.ವಿ. ಭಟ್ ಮಧುರಂ ಗಾನ ಅವರ ಬರಹಗಳನ್ನು ಸಂಗ್ರಹಿಸಿ ಸಂಪುಟಗಳಾಗಿ ಹೊರತರಲು ಈಚೆಗೆ ಕನ್ನಡ ಭವನದ ಗ್ರಂಥಾಲಯದಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪತ್ರಿಕೆಗಳಲ್ಲಿ ಹಾಗೂ ವಿವಿಧ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾದ ನೂರಾರು ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದು ಓದುಗರಿಗೆ ಲಭಿಸುವಂತೆ ಮಾಡುವುದೇ ಅವರಿಗೆ ಸಲ್ಲಿಸುವ ಗೌರವವೆಂದು ಎಲ್ಲರೂ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಅಭಿಪ್ರಾಯಪಟ್ಟರು. ಕೃತಿ ಸಂಪುಟ ಪ್ರಕಟಣೆಗೆ ಎಂ.ವಿ. ಭಟ್ ಅವರ ಆತ್ಮೀಯರು, ಅಭಿಮಾನಿಗಳು ಆರ್ಥಿಕ ಸಹಾಯ ನೀಡುವುದಾಗಿ ಸಭೆಯಲ್ಲಿ ಭರವಸೆ ನೀಡಿದರು. ಶ್ರದ್ಧಾಂಜಲಿ ಸಭೆಯನ್ನು ಹಿರಿಯ ಭಾಷಾಂತರಕಾರ, ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಎಂ.ವಿ. ಭಟ್ ಅವರ ನಿಕಟವರ್ತಿ ಎಂ. ನರಸಿಂಹಭಟ್ ಉದ್ಘಾಟಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಎ. ಶ್ರೀನಾಥ್, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಸ್ಪಂದನ ಸಾಹಿತ್ಯಿಕ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಅಗ್ಗಿತ್ತಾಯ, ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ರಮೇಶ್, ಕೆ.ವಿ. ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರತ್ನಾಕರ ಮೂಲೆಮನೆ, ಹಿರಿಯ ರಂಗಕರ್ಮಿ ರಘು ಮೀಪುಗುರಿ, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರಕಾಶನದ ಸಂಚಾಲಕ
ಕೆ. ವಿಷ್ಣು ಶ್ಯಾನುಭೋಗ್, ಜೋಗೀಂದ್ರನಾಥ್ ಅವರು ನುಡಿನಮನ ಸಲ್ಲಿಸಿದರು. ಗುರುಪ್ರಸಾದ್ ಕೋಟೆಕಣಿ, ಗಡಿನಾಡ ಕಲಾವಿದರ ಸಂಸ್ಥೆಯ ಕಾರ್ಯದರ್ಶಿ ದಿವಾಕರ ಪಿ. ಅಶೋಕ ನಗರ ಮತ್ತಿತರು ಉಪಸ್ಥಿತರಿದ್ದರು.
ನಿರ್ದೇಶಕ ಕೆ. ವಾಮನರಾವ್ ಬೇಕಲ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ನಿರೂಪಿಸಿದರು. ಕೋಶಾಧಿಕಾರಿ ಕೆ.ಪಿ. ಸಂಧ್ಯಾರಾಣಿ ವಂದಿಸಿದರು.