ಕಯ್ಯಾರರದು ಭೂಮಕಾವ್ಯ

Updated on

ಕಾಸರಗೋಡು: ಕಯ್ಯಾರರ ವ್ಯಕ್ತಿತ್ವಕ್ಕೆ ಕೃಷಿ, ಸಾಹಿತ್ಯ, ಅಧ್ಯಾಪನ ಮತ್ತು ಹೋರಾಟ ಎಂಬ ನಾಲ್ಕು ಮುಖಗಳಿರುವಂತೆ ಅವರ ಕಾವ್ಯಕ್ಕೂ ನವೋದಯದ ರಾಷ್ಟ್ರೀಯತೆ, ದಲಿತ- ಬಂಡಾಯದ ಸಮಾಜಮುಖಿ ಚಿಂತನೆ, ಅನುವಾದದ ವ್ಯಾಪ್ತಿ ಮತ್ತು ಮಕ್ಕಳ ಕವನಗಳ ಕಲ್ಪನಾ ಲಾಸ್ಯತೆ ಎಂಬ ನಾಲ್ಕು ಆಯಾಮಗಳಿವೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಗಡಿನಾಡ ಘಟಕ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ವ್ಯಾಪಾರಿ ಭವನದಲ್ಲಿ ಇತ್ತೀಚೆಗೆ ಜರುಗಿದ ಕಯ್ಯಾರ ಕಿಂಞಣ್ಣ ರೈ ಶತಸಂಭ್ರಮ ಕಾರ್ಯಕ್ರಮದಲ್ಲಿ ಕಯ್ಯಾರರ ಕಾವ್ಯದ ಕುರಿತು ಅವರು ಉಪನ್ಯಾಸ ನೀಡಿದರು.
ಜೋರು ಧ್ವನಿಯ ಭೂಮಕಾವ್ಯ: ನವೋದಯ ಶೈಲಿಯಲ್ಲಿ ಬರೆದ ಕಯ್ಯಾರರ ಕವಿತೆಗಳು ಸ್ವಾತಂತ್ರ್ಯಾಪೇಕ್ಷೆ ಮತ್ತು ರಾಷ್ಟ್ರೀಯತೆಯ ಧೋರಣೆಯಿಂದ ಬೀಸು ಮಾತುಗಳ ಜೋರು ಧ್ವನಿಯ ಭೂಮಕಾವ್ಯವಾಗಿದೆ ಎಂದು ವಿಶ್ಲೇಷಿಸಿದರು.
ಪ್ರಭಾವಗಳನ್ನು ಮೀರಿ ಸ್ವಂತಿಕೆ ಮೆರೆದಿರುವುದು ಕಯ್ಯಾರರ ಹೆಚ್ಚುಗಾರಿಕೆ. ಬಹುಶಃ ಅವರ ಕೃಷಿ, ಓದು ಮತ್ತು ವ್ಯಾಪಕ ಪ್ರವಾಸ ಹಾಗೂ ಜೀವನಾನುಭವಗಳಿಂದ ಪ್ರಭಾವಗಳನ್ನು ಮೀರಿ ನಿಲ್ಲಲು ಅವರಿಗೆ ಸಾಧ್ಯವಾಗಿದೆ ಎಂದರು. 'ಕಯ್ಯಾರರ ಬದುಕು- ಬರಹ' ಕುರಿತು ಲೇಖಕಿ ಚಂದ್ರಕಲಾ ನಂದಾವರ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ, ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ, ಸಾಹಿತ್ಯ ಪರಿಷತ್‌ನ ಗಡಿನಾಡು ಘಟಕ ಅಧ್ಯಕ್ಷ ಎಸ್.ವಿ. ಭಟ್, ಉದ್ಘಾಟಕ ಡಾ. ರಮಾನಂದ ಬನಾರಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com