ಮುಂಬಯಿ: ಮುಂಬಯಿ ಕನ್ನಡಿಗರಿಗೆ ಮಹಾರಾಷ್ಟ್ರ 'ಭೂಗೋಳ'ವಾದರೆ ಕರ್ನಾಟಕ 'ಚರಿತ್ರೆ'. ಕರ್ನಾಟಕದ ಹೊರಗಿದ್ದವರಿಗೆ ಕನ್ನಡದ ಅಸ್ಮಿತೆ ಜಾಸ್ತಿ. ಇದು ದೇಹದ ಒಳಗಿನ ಆತ್ಮ ಇದ್ದಂತೆ. ಆಕಾರ ಇಲ್ಲದಿದ್ದರೂ ಇದಕ್ಕೆ ಶಕ್ತಿ ಇದೆ. ನಮಗೆ ಭೂಗೋಳ ಪ್ರಜ್ಞೆಗಿಂತ ಚರಿತ್ರೆ ಪ್ರಜ್ಞೆ ಮುಖ್ಯವಾಗಬೇಕು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು. ಇತ್ತೀಚೆ ಮುಂಬಯಿ ಕರ್ನಾಟಕ ಸಂಘದ 80ರ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಈ ಕಟ್ಟಡದ ಒಳಗೆ ಕನ್ನಡ ಸಂವೇದನೆಯನ್ನು ಇಷ್ಟು ಕಾಲ ಉಳಿಸಿಕೊಂಡು ಚರಿತ್ರೆ ಪ್ರಜ್ಞೆಗೆ ಆದ್ಯತೆ ನೀಡಿದ್ದೀರಿ. ಸಮಾಜದಲ್ಲಿಯ ತಾಯ್ತನ ಸಂವೇದನೆ ಕಣ್ಮರೆಯಾಗುತ್ತ ಇದೆ. ಈ ತಾಯ್ತನವು ಸಾಂಸ್ಕೃತಿಕ ಸಂವೇದನೆಯಿಂದ ಬರುತ್ತದೆ. ಇಂತಹ ಸಂವೇದನೆಯನ್ನು ಕರ್ನಾಟಕ ಸಂಘ ಮುಂಬಯಿ ಬೆಳೆಸುತ್ತಿರುವುದು ಅಭಿಮಾನ ಪಡುವ ಸಂಗತಿ ಎಂದು ಅವರು ಹೇಳಿದರು.
ಗೌರವ ಅತಿಥಿ ಬಂಟರ ಸಂಘದ ಅಧ್ಯಕ್ಷ (ಮುಂಬಯಿ) ಸಿ.ಎ.ಶಂಕರ ಶೆಟ್ಟಿ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಬುರ್ಡೆ ವಹಿಸಿದ್ದರು. ಗೌ.ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶ್ರೀನಿವಾಸ ಜೋಕಟ್ಟೆ ಪರಿಚಯಿಸಿದರು. ಡಾ.ಭರತ್ ಕುಮಾರ್ ಪೊಲಿಪು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Advertisement