
ಅಕ್ಟೋಬರ್ ತಿಂಗಳು ೧೮ ಮತ್ತು ೧೯ ರಂದು ಕನ್ನಡ ಬಳಗ ಯು.ಕೆ ಇಂಗ್ಲೆಂಡಿನ ಚೆಸ್ಟರ್ಫೀಲ್ಡ್ ನಲ್ಲಿ ವೈಂಡಿಂಗ್ ವ್ಹೀಲ್ ಸಭಾಂಗಣದಲ್ಲಿ ಬಹಳ ಸಂಭ್ರಮ ಹಾಗು ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಿತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದಿಂದ ಡಾ. ಹೆಚ್.ಎಸ್.ವೆಂಕಟೇಶ್ ಮೂರ್ತಿ, ವೈ.ಕೆ.ಮುದ್ದುಕೃಷ್ಣ, ಗಾಯಕರಾದ ಶಂಕರ್ ಶಾನಭಾಗ್ ,ಸುಪ್ರಿಯ ರಘುನಂದನ್ (ಆಚಾರ್ಯ), ಪ್ರವೀಣ್.ಡಿ.ರಾವ್ ರವರ ’ಚಕ್ರಫೋನಿಕ್ಸ” ತಂಡ ಹಾಗು ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಮತ್ತು ಸಮಾಜ ಸೇವಕರಾದ ಶಿವರಾಂ, ಲಂಡನ್ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಆಗಮಿಸಿ ಎರಡು ದಿನದ ಕಾರ್ಯಕ್ರಮಕ್ಕೆ ರಂಗು ತಂದಿತು. ಸುಮಾರು ೪೫೦ಕ್ಕೂ ಹೆಚ್ಚು ಬಳಗದ ಸದಸ್ಯರು ನೆರೆದಿದ್ದರು.
ಮಹಾಲಕ್ಷ್ಮಿಯ ಪೂಜೆಯೊಂದಿಗೆ ಪ್ರಾರಂಬಿಸಿ ,ಮುಖ್ಯ ಅತಿಥಿಗಳನ್ನು ವೇದಿಕೆಯ ಮೇಲೆ ಆಸೀನರಾದ ನಂತರ ಸುಪ್ರಿಯ ರವರಿಂದ ಶ್ರೀ ಗಣೇಶ ಪ್ರಾರ್ಥನೆಯೊಂದಿಗೆ ದೀಪ ಹಚ್ಚಿ ಉದ್ಘಾಟಿಸಲಾಯಿತು. ಸ್ಥಳೀಯ ಆಡಳಿತ ಸಮಿತಿಯ ಪರವಾಗಿ ಡಾ. ಜಿ.ಎಸ್.ಶಿವಪ್ರಸಾದ್ ರವರು ಮಾತನಾಡಿದ ನಂತರ ಡಾ. ನೀರಜ್ ಪಾಟೀಲ್, ವೈ.ಕೆ.ಮುದ್ದುಕೃಷ್ಣ, ಡಾ. ಪುತ್ತುರಾಯ ಹಾಗು ಬಳಗದ ಅಧ್ಯಕ್ಷರಾದ ಡಾ. ಜಯರಾಂ ಅವರಿಂದ ಭಾಷಣ. ತದನಂತರ ಡಾ. ಕೇಶವ ಕುಲ್ಕರ್ಣಿ ಇವರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ವಿಚಾರ ವೇದಿಕೆ (ಕ.ಸಾ.ಸ.ವಿ.ವೇ) ಪರಿಚಯ ಹಾಗು ಮುಖ್ಯ ಅತಿಥಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರಿಂದ ಕ.ಸಾ.ಸ.ವಿ.ವೇ ಯ ಉದ್ಘಾಟನೆ. "ಕನ್ನಡ ಭಾಷೆಗೆ ಅವಕಾಶಗಳು ಹಾಗು ಆತಂಕಗಳು" ವಿಷಯದ ಬಗ್ಗೆ ವಿಶ್ಲೇಷಣೆ ಡಾ. ಸುದರ್ಶನ ಗುರುರಾಜ್ ಅವರಿಂದ. ನಂತರ ಸ್ಥಳೀಯ ಹಾಗು ವೇಲ್ಸ್ ತಂಡದವರಿಂದ ಕನ್ನಡ ನಾಡ ಗೀತೆಗಳ ಸಾಮೂಹಿಕ ಗಾಯನ. ಮುಖ್ಯ ಅತಿಥಿಗಳ ಸ್ವಾರಸ್ಯಕರ ಭಾಷಣ.
ಮಧ್ಯಾಹ್ನದ ಹಿತಭೋಜನದ ನಂತರ ಆರಂಭಗೊಂಡ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರತಿಭೆಗಳಿಂದ ಕರ್ನಾಟಕ ದರ್ಶನ, ಕಿನ್ನರಿಗಳ ಪೌರಾಣಿಕ ದೇವತೆಗಳ ಹಾಗು ಐತಿಹಾಸಿಕ ವ್ಯಕ್ತಿಗಳ ಸಮಕಾಲೀನ ವಸ್ತ್ರ-ವೇಷ ಪ್ರದರ್ಶನ, ವೇಲ್ಸ್ ತಂಡದಿಂದ "ದಶಾವತಾರ" ನೃತ್ಯ ನಾಟಕ, ”ಹಾಸ್ಯ ಮತ್ತು ವಿವೇಕ” ಡಾ. ಪುತ್ತುರಾಯರಿಂದ ಹಾಸ್ಯ, ಡಾ.ಸುಮನ ನಾರಾಯಣ ಮತ್ತು ತಂಡದಿಂದ ಕಾವ್ಯ ನಾಟ್ಯ ಸಂಗಮ, ಡಾ.ಮಧುಸೂದನ್ ಅವರಿಂದ ವೀಣಾ ವಾದ್ಯಗೋಷ್ಠಿ ಇವು ಪ್ರಮುಖ ಆಕರ್ಷಣೆ. ಇದೇ ಸಮಯಕ್ಕೆ ಯುವ ಪೀಳಿಗೆಗೆ ಬೇರೆ ಕೊಠಡಿಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಸಾಯಂಕಾಲ ಆರಂಭಗೊಂಡಿದ್ದು ಹೆಚ್.ಎಸ್.ವೆಂಕಟೇಶ್ ಮೂರ್ತಿಯವರ ಸ್ವಾರಸ್ಯಕರ ನಿರೂಪಣೆಯಲ್ಲಿ "ಕಾವ್ಯ ಸ್ವರ ಸಂಗಮ." ಜೊತೆಗೆ ಸುಪ್ರಿಯ, ಶಂಕರ ಶಾನಭಾಗ್ ಹಾಗು ವೈ.ಕೆ.ಮುದ್ದುಕೃಷ್ಣ ರವರ ಸುಮಧುರ ಕಂಠದಲ್ಲಿ ಗಾಯನ ಎಲ್ಲರ ಮನರಂಜಿಸಿತು. ರಾತ್ರಿಯ ಭೋಜನದ ನಂತರವೂ ಇವರ ಗಾಯಾನ ಮುಂದುವರೆದು ಕೋಲಾಟದ ಜೊತೆಗೆ ಮನರಂಜನೆ ಇಮ್ಮಡಿ ಗೊಳಿಸಿ ಮೊದಲನೆಯ ದಿನದ ಕಾರ್ಯಕ್ರಮಗಳ ಅಂತ್ಯವಾಯಿತು.
ಎರಡನೆಯ ದಿನ ಪ್ರಜ್ಯೋತಿ ಮಧುಸೂದನ್ ಅವರಿಂದ ನಾಟ್ಯ-ಏರೋಬಿಕ್ಸ್ ಇಂದ ಆರಂಭವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುನಃ ಸ್ಥಳೀಯ ಪ್ರತಿಭೆಗಳಿಂದ ನೃತ್ಯ,ವಾದ್ಯ ,ನಾಟಕ ,ಚಲನಚಿತ್ರ ಗೀತೆಗಳು ಹಾಗು ಸುಪ್ರಿಯ-ಶಂಕರ್ ಶಾನಭಾಗ್ ಅವರ ಗಾಯನ ಮೂಡಿಬಂದವು. ನಂತರ "ಸುನಾದ"(ಸಮರ್ಥನ ಸಂಸ್ಥೆ,ಬೆಂಗಳೂರು) ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಹಾಗು ಸಮಾಜ ಸೇವಕ ಶ್ರೀ.ಶಿವರಾಂ ನಿರೂಪಣೆಯ ದೃಷ್ಟಿಹೀನ ಕಲಾವಿದರಿಂದ ನೃತ್ಯ,ವಾದ್ಯ ಗಾಯನ ಹಾಗು ಅನುಕರಣೆ ಮೂಡಿ ಬಂದಿತು. ಹಾಗೆಯೇ ಸಮಕಾಲಿಕವಾಗಿ ಬೇರೆ ಕೊಠಡಿಯಲ್ಲಿ ಕವಿ ಗೋಷ್ಠಿ ನಡೆಸಲಾಯಿತು. ಭೋಜನದ ನಂತರ ಶ್ರೀ ಪ್ರವೀಣ್ ಡಿ ರಾವ್ ನೇತೃತ್ವದ "ಚಕ್ರಫೋನಿಕ್ಸ್" ತಂಡದಿಂದ ವಾದ್ಯ ಗೋಷ್ಠಿ ಎಲ್ಲರನ್ನು ಕುಣಿಸಿ, ನಲಿಸಿ ಪಿಯಾನೋ ಮೇಲೆ ರಾಷ್ರಗೀತೆ ನುಡಿಸಿ ಎರಡು ದಿವಸದ ದೀಪಾವಳಿಯ ಸಂಭ್ರಮ ಮುಕ್ತಾಯಗೊಂಡಿತು.
Advertisement