ಚಿಕಾಗೋ ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ಕನ್ನಡ ದೀಪೋತ್ಸವ'

ಚಿಕಾಗೋ ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ಕನ್ನಡ  ದೀಪೋತ್ಸವ'

"ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ, ಜೋಗುಳದ ಹರಕೆಯಿದು ಮರೆಯದಿರು ಚಿನ್ನ, ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ" ಇದು ಕವಿ ನುಡಿ. ಈ ಹರಕೆಯನ್ನು ಮರೆಯದೆ ಚಿಕಾಗೋ ಕನ್ನಡಿಗರು ನವೆಂಬರ್ ೧, ೨೦೧೪ ರಂದು ಬಹಳ ಸಂಭ್ರಮದಿಂದ ಈ ಬಾರಿಯ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಒಟ್ಟಾಗಿ "ಕನ್ನಡ ದೀಪೋತ್ಸವ" ಕಾರ್ಯಕ್ರಮವನ್ನಾಗಿ ಆಚರಿಸಿದರು. ಕಾರ್ಯಕ್ರಮ ಲೆಮೊಂಟ್ ನಗರದ ರಾಮ ದೇವಸ್ಥಾನದ ಸಮರತಿ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರಣ್ಯ ಕನ್ನಡ ಕೂಟಕ್ಕೆ ಈಗ ೪೦ರ ಹರೆಯ. ಕಳೆದ ನಲವತ್ತೊಂದು ವರ್ಷಗಳಿಂದ ಅವಿರತವಾಗಿ ವಿದ್ಯಾರಣ್ಯ ಕನ್ನಡ ಕೂಟ  (ವಿ.ಕೆ.ಕೆ),  ಚಿಕಾಗೋ  ವಲಯದ ಕನ್ನಡಿಗರು ಒಟ್ಟಾಗಿ ಕಲೆತು-ಬೆರೆತು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿದೆ.

"ಕನ್ನಡ ದೀಪೋತ್ಸವ" ಕಾರ್ಯಕ್ರಮಕ್ಕಾಗಿ ವೇದಿಕೆಯನ್ನು ವಿಶೇಷವಾಗಿ  ದೀಪ, ತೂಗುದೀಪ ಹಾಗೂ ನಾಡ ಹಬ್ಬವನ್ನು ಪ್ರತಿನಿಧಿಸುವ ಹಳದಿ, ಕೆಂಪು ಬಣ್ಣಗಳಿಂದ ಅಲಂಕರಿಸಲಾಗಿತ್ತು.

ಈ ಬಾರಿಯ ವಿಶೇಷ - ಪ್ರಾರ್ಥನೆಗೆ ಪೂಜಾ ನೃತ್ಯ. ಈ ನೃತ್ಯವನ್ನು ಸಂಯೋಜಿಸಿದವರು - ಪೂಜಾ ರಾವ್ ಅಮಿತ್. ನಂತರ ಸಿರಿಕನ್ನಡ ಶಾಲೆಯ ಮಕ್ಕಳಿಂದ ಅಮೇರಿಕ ಹಾಗೂ ಭಾರತದ ರಾಷ್ಟ್ರೀಯ ಗೀತೆಗಳ ಗಾಯನ. ಆಮೇಲೆ, ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಯನ್ನು ಹಾಡಲು ಬಂದ ತಂಡದವರು, ರಾಜ್ಯೋತ್ಸವವನ್ನು ನೆನಪಿಸುವ ಸಮ ವಸ್ತ್ರದ ಬಣ್ಣದ ಉಡುಪುಗಳನ್ನು ಧರಿಸಿ ಬಂದದ್ದು ಮನಮೋಹಕವಾಗಿತ್ತು. ನಂತರ ವಿ.ಕೆ.ಕೆ. ಪ್ರಸಕ್ತ ವರ್ಷದ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ಅವರು ತಮ್ಮ ಭಾಷಣದೊಂದಿಗೆ ನೆರೆದಿದ್ದ ಕೂಟದ ಸದಸ್ಯರನ್ನು ಸ್ವಾಗತಿಸಿದರು.

ಮತ್ತೆ ಮೂಡಿ ಬಂತು - ಮೊದಲ ವಿಶೇಷ ಕಾರ್ಯಕ್ರಮ, ಭರತನಾಟ್ಯ ಕೂಚಿಪುಡಿ ಶೈಲಿಯಲ್ಲಿ ನೃತ್ಯಗುಚ್ಛ. ನಡೆಸಿಕೊಟ್ಟವರು - ಚಿಕಾಗೋ ವಲಯದ ನಾಲ್ವರು ನಾಟ್ಯ ಶಿಕ್ಷಕಿಯರು ಹಾಗೂ ಅವರ ಶಿಷ್ಯೆಯರು. ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿ ಬಂತು. ಈ ತಂಡ ಮೊದಲು ಆದಿ ಶಂಕರ ವಿರಚಿತ “ಗಣೇಶ ಪಂಚರತ್ನ” ಸ್ತೋತ್ರಕ್ಕೆ ನರ್ತಿಸಿ ನಂತರ “ತಿಲ್ಲಾನ” ಪ್ರಸ್ತುತ ಪಡಿಸಿದರು.

ಇದಾದ ನಂತರ ಕನ್ನಡ ಕೂಟದ ದ್ವೈವಾರ್ಷಿಕ ಸಾಹಿತ್ಯ ಸಂಚಿಕೆ “ಸಂಗಮ”, ದೀಪಾವಳಿ ಆವೃತ್ತಿಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಈ ಬಾರಿಯ ದೀಪಾವಳಿ ಕಾರ್ಯಕ್ರಮದಲ್ಲಿ ಸದಸ್ಯರಿಗೆ ತೂಗು ಗೂಡುದೀಪ ತಯಾರಿಸುವ ಸ್ಪರ್ಧೆಯನ್ನು, ಮಕ್ಕಳಿಗಾಗಿ ಲೆಗೋ ಬಳಸಿ ಕನ್ನಡ ಬಾವುಟ ರಚಿಸುವ, ರಂಗೋಲಿ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬಹಳಮಂದಿ ಭಾಗವಹಿಸಿದ ಈ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಂತರ, ಜೀವಾವಧಿಯಲ್ಲಿ ಕನ್ನಡ ಹಾಗೂ ಕನ್ನಡ ಕೂಟಕ್ಕೆ ಸಲ್ಲಿಸಿದ ಸೇವೆಗಾಗಿ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಯನ್ನು ಶ್ರೀಯುತ ಮೋಕ್ಷಗುಂಡಂ ಜಯರಾಮ್ ಅವರಿಗೆ ಕೊಡುವುದಾಗಿ ಪ್ರಕಟಿಸಲಾಯಿತು. ಮುಖ್ಯ ಅತಿಥಿಗಳಾದ ಕರ್ನಲ್ ನಟರಾಜ್ ವಿ. ಕೋಟೆ ಅವರ ಭಾಷಣ ಚಿಕ್ಕದಾಗಿ, ಚೊಕ್ಕವಾಗಿ, ಹಾಸ್ಯಮಯ ವಾಗಿತ್ತು.

ಬಳಿಕ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ದಿನದ ಅತ್ಯಂತ ವಿಶೇಷ ಕಾರ್ಯಕ್ರಮ, “ಸೀತಾಪಹಾರ” ಯಕ್ಷಗಾನ ಪ್ರದರ್ಶನ, ಟೊರೊಂಟೋದಿಂದ ಆಗಮಿಸಿದ “ಯಕ್ಷಮಿತ್ರ” ತಂಡದವರಿಂದ. ಸಾಹಿತ್ಯ, ಗಾಯನ, ವಾದನ, ರಂಗ ನಿರ್ಮಾಣ, ವೇಷಭೂಷಣ, ಅರ್ಥಗಾರಿಕೆ, ಅಭಿನಯ, ನರ್ತನ -  ಇವೆಲ್ಲವೂ ಕೂಡಿರುವ ಪರಿಪೂರ್ಣ ಕಲಾ ಪ್ರಕಾರ ಯಕ್ಷಗಾನ. ಈ ಎಲ್ಲಾ ವಿಭಾಗಗಳಲ್ಲೂ ಮಿಂಚಿ ಮಿನುಗಿತು ‘ಯಕ್ಷಮಿತ್ರ’ ದವರ ಈ ಪ್ರದರ್ಶನ. ಶೂರ್ಪಣಕಿಯ ಹಾಸ್ಯಮಿಶ್ರಿತ ವೈಯಾರ, ರಾಮ-ಲಕ್ಷ್ಮಣರ ಗಂಭೀರ, ವೀರ, ರಾಕ್ಷಸ ರಾವಣನ ಬಣ್ಣದ ವೇಷ, ಮಾಯಾ ಶೂರ್ಪಣಕಿ, ಸೀತೆ, ಜಟಾಯು, ಮಾಯಾ ಜಿಂಕೆ, ಸನ್ಯಾಸಿ ಹೀಗೆ ಪ್ರತಿಯೊಂದು ಪಾತ್ರಗಳೂ ಜೀವ ತಳೆದು ನಿಂತವು. ಪ್ರೇಕ್ಷಕರು ಎರೆಡುರಡು ಬಾರಿ ನಿಂತು ಗೌರವ, ಮೆಚ್ಚುಗೆ ವ್ಯಕ್ತಪಡಿಸಿದ್ದು ಪ್ರದರ್ಶನದ ಗುಣಮಟ್ಟ ಮತ್ತು ಕಲಾ ವೈಶಿಷ್ಟ್ಯಯಕ್ಕೆ ಸಾಕ್ಷಿ.

ಕಾರ್ಯಕ್ರಮದಲ್ಲಿ ಕೊನೆಯದಾಗಿ ಕೂಟದ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ಅವರು ವಂದನಾರ್ಪಣೆಯನ್ನು ಮಾಡಿದರು. ಇಡೀ ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯ ಮುರಲೀಧರ ಕಜೆ ಹಾಗೂ ನೀತ ಧನಂಜಯ ಅವರು ಸಮರ್ಥವಾಗಿ ನಿರೂಪಿಸಿದರು. ಎಲ್ಲಾ ಕನ್ನಡ ಕೂಟದ ಸದಸ್ಯರಿಗೂ ಈ ವರ್ಷದ ಕಾರ್ಯಕಾರಿ ಸಮಿತಿಯ ಪರವಾಗಿ ನೆನಪಿನ ಕಾಣಿಕೆಯನ್ನು ಕೂಡ ಈ ಸಂದರ್ಭದಲ್ಲಿ ವಿತರಿಸಲಾಯಿತು.

ವರದಿ: ಅನಿಲ್ ದೇಶಪಾಂಡೆ ಮತ್ತು ಶ್ರೀನಿವಾಸ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com