
ದುಬೈ: ಮುಸ್ಲಿಂ, ಅಹಿಂದ ವರ್ಗದ ನಿರ್ಲ್ಯಕ್ಷ ಮತ್ತು ರಾಜಕೀಯ ಪಕ್ಷಗಳ ಸಂವಿಧಾನ ವಿರೋಧಿ ನೀತಿಯೇ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಎಂಬ ರಾಜಕೀಯ ಪಕ್ಷದ ಹುಟ್ಟಿಗೆ ಕಾರಣವಾಗಿದೆ ಎಂದು ಎಸ್ ಡಿ ಪಿ ಐ ರಾಷ್ಟ್ರೀಯ ಸಲಹೆಗಾರ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.
ಬುರ್ದುಬೈಯ ಮುಸಲ್ಲ ಟವರ್ ನಲ್ಲಿ ನಡೆದ ಎಸ್ ಡಿ ಪಿ ಐ ಅನಿವಾಸಿ ಭಾರತೀಯ ಯುಎಇ ವಿಭಾಗವಾದ ಇಂಡಿಯನ್ ಕಲ್ಚರಲ್ ಸೊಸೈಟಿ ಸದಸ್ಯತ್ವ ಅಭಿಯಾನ ಉಧ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದ ತುಂಬೆ, “ಭಾರತದಲ್ಲಿ ಪ್ರಚಲಿತವಿರುವ ಜಾತಿ ರಾಜಕೀಯ,ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಮತ್ತು ವಂಶ ಪಾರಂಪರ್ಯ ಆಡಳಿತ ಇವುಗಳಿಗೆ ಕಡಿವಾಣ ಹಾಕಲು ಪರ್ಯಾಯ ರಾಜಕೀಯ ಪಕ್ಷದ ಅವಶ್ಯಕತೆಯನ್ನು ಎತ್ತಿ ತೋರಿಸುತ್ತಿದೆ” ಎಂದು ಹೇಳಿದರು.
"ಮುಸ್ಲಿಮರು ಭಾರತದಲ್ಲಿ ೧೫% ರಷ್ಟು ಇದ್ದರೂ ಅವರಿಗೆ ಸರಕಾರಿ ರಂಗದಲ್ಲಿ,ಉದ್ಯೋಗದಲ್ಲಿ,ರಾಜಕೀಯ ರಂಗಗಳಲ್ಲಿ ಮತ್ತು ಶೈಕ್ಷಣಿಕ ಕ್ಷೇತ್ರ ಗಳಲ್ಲಿ ದೊರಕ ಬೇಕಾದಂತಹ ಸೂಕ್ತ ಪ್ರಾತಿನಿಧ್ಯ, ನ್ಯಾಯೋಚಿತ ಮೀಸಲಾತಿ,ದೊರೆಯುತ್ತಿಲ್ಲ ಮತ್ತು ಭಾರತದಲ್ಲಿ ಮುಸ್ಲಿಮರು ನಿರಂತರವಾಗಿ ದೌರ್ಜನ್ಯಕ್ಕೆ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು.ಮುಸ್ಲಿಮರನ್ನು ಉಗ್ರಗಾಮಿಗಳೆಂದು,ಮೂಲಭೂತವಾದಿಗಳೆಂದು ಸದಾ ಸಂಶಯದ ದೃಷ್ಟಿಯಿಂದ ನೋಡುತ್ತಿರುವಂತಹ ಈ ಒಂದು ಸನ್ನಿವೇಷದಲ್ಲಿ ಮುಸ್ಲಿಮರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತ ಪಡಿಸಿದರು”.
ವಂಶ ಪಾರಂಪರ್ಯ ರಾಜಕಾರಣದಿಂದ ಮತ್ತು ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳನ್ನು ಮೀಸಲಾತಿ ಕ್ಷೇತ್ರಗಳಾಗಿ ವಿಂಗಡಿಸಿದರಿಂದ ಮುಸ್ಲಿಮರು ಜನ ಪ್ರತಿನಿದಿಗಳಾಗಿ ಆರಿಸಿ ಬರಲು ಅವಕಾಶವಿಲ್ಲದಂತಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಎಸ್ ಡಿ ಪಿ ಐ ಇದು ಅಧಿಕಾರದ ದಾಹ ಅಥವಾ ರಾಜಕೀಯ ಸ್ವ ಹಿತಾಸಕ್ತಿಯನ್ನು ಇಟ್ಟುಕೊಂಡು ರಚನೆಯಾದ ಪಕ್ಷವಲ್ಲ. ಮುಸ್ಲಿಮರ,ದಲಿತರ,ಹಿಂದುಳಿದ ವರ್ಗದವರಿಗೆ ಸಮಾನ ಹಕ್ಕು,ಸಮಾನ ಸ್ವಾತಂತ್ರ್ಯ,ಸಮಾನವಾದ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಮತ್ತು ಕೆಲವೊಂದು ಪಟ್ಟ ಭದ್ರ ಹಿತಾಸಕ್ತಿಗಳ ಕೈಯಲ್ಲಿರುವ ಆಡಳಿತವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರಕುವಂತೆ ಮಾಡುವುದೇ ಇದರ ಗುರಿ ಎಂದು ಹೇಳಿದರು.
ಸಮಾರಂಭದ ಅದ್ಯಕ್ಷ ಸ್ಥಾನ ವಹಿಸಿದ ಇಂಡಿಯನ್ ಕಲ್ಚರಲ್ ಸೊಸೈಟಿಯ ಕರ್ನಾಟಕ ವಿಭಾಗದ ಅದ್ಯಕ್ಷರಾದ ನಾಸಿರ್ ಕಾರಜೆಯವರು ಯು ಎ ಇ ಯಲ್ಲಿ ಸಂಘಟನೆಯು ಮಾಡುತ್ತಿರುವ ಸಮಾಜ ಮುಖಿ ಕಾರ್ಯಕ್ರಮದ ಕಿರು ಪರಿಚಯವನ್ನು ನೀಡಿದರು.ಇಂಡಿಯನ್ ಕಲ್ಚರಲ್ ಸೊಸೈಟಿ ಅನಿವಾಸಿ ಭಾರತೀಯರ ಸೇವೆಗೆ ಸದಾ ಸಿದ್ದವಿದ್ದು ರಕ್ತದಾನ,ಉದ್ಯೋಗ ದೊರಕಿಸಿ ಕೊಡುವುದು,ಮೃತದೇಹಗಳನ್ನು ಭಾರತಕ್ಕೆ ರವಾನಿಸುವುದು,ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಜನಾಬ್ ಅಕ್ಬರ್ ಅಲಿ ಸುರತ್ಕಲ್ ಮತ್ತು ಜನಾಬ್ ಇಬ್ರಾಹಿಂ ಅಡ್ದೂರ್ ರವರಿಗೆ ಪಕ್ಷದ ಅರ್ಜಿಯನ್ನು ಇಲ್ಯಾಸ್ ತುಂಬೆ ಯವರು ನೀಡುವುದರ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಸಮಾರಂಭಕ್ಕೆ ಅಥಿತಿಗಳಾಗಿ ಇಂಡಿಯನ್ ಕಲ್ಚರಲ್ ಸೊಸೈಟಿಯ ಯುಎಇ ಪ್ರಧಾನ ಕಾರ್ಯದರ್ಶಿ ಜನಾಬ್ ಮುನವ್ವರ್ ತಮಿಳುನಾಡು,ಕಾರ್ಯದರ್ಶಿ ನೌಶಾದ್ ಕೇರಳ ಆಗಮಿಸಿದ್ದರು.ಫರಾಜ್ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರೆ .ಇಂಡಿಯನ್ ಕಲ್ಚರಲ್ ಸೊಸೈಟಿ ದೇರ ವಲಯಾದ್ಯಕ್ಷ ಶಕೀರ್ ಹಕ಼್ ನೆಲ್ಯಾಡಿ ಯವರು ಧನ್ಯವಾದ ಸಮರ್ಪಿಸಿದರು.
Advertisement