
ಕನ್ನಡ ಸಾಹಿತ್ಯದ ಒಂದು ಮುಖ್ಯ ಆಯಾಮ "ದಾಸ ಸಾಹಿತ್ಯ". ಕನ್ನಡ ಭಾಷೆಗೆ ಮತ್ತು ಸಾಹಿತ್ಯಕ್ಕೆ ನಮ್ಮ ದಾಸ ಸಂತರು ತಮ್ಮ ದಾಸರ ಪದಗಳ ಮೂಲಕ ಕನ್ನಡ ಭಾಷೆಗೆ ಒಂದು ಮೆರುಗನ್ನೇ ಅಲ್ಲದೆ, ಇಡಿ ಮಾನವ ಕುಲಕ್ಕೇ ಭಕ್ತಿ ಮತ್ತು ಅಧ್ಯಾತ್ಮದ ಮಹತ್ವವನ್ನು ತಿಳಿಸಿ ಕೊಟ್ಟಿದ್ದಾರೆ. ಇಂಥಹ ಅಪೂರ್ವ ಪಂಥಕ್ಕೆ, ಅದರಲ್ಲೂ ಪುರಂದರ ದಾಸರಿಗೆ ಗೌರವಾರ್ಥವಾಗಿ ಚಿಕಾಗೋ ಮಹಾನಗರ ವಲಯದ ವಿದ್ಯಾರಣ್ಯ ಕನ್ನಡ ಕೂಟ ಪ್ರತಿ ವರ್ಷ ದಾಸರ ದಿನಾಚರಣೆಯನ್ನು ಆಚರಿಸುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ. ೨೦೧೪ನೇ ವರ್ಷದ ದಾಸರ ದಿನಾಚರಣೆಯನ್ನು ಅಕ್ಟೋಬರ್ ೧೮ ಮತ್ತು ೧೯ನೇ ತಾರೀಖಿನಂದು ಆಚರಿಸಲಾಯಿತು.
ಅಕ್ಟೋಬರ್ ೧೮ನೇ ತಾರೀಖು ಶನಿವಾರದ ಕಾರ್ಯಕ್ರಮಗಳು ಇಲಿನಾಯ್ ರಾಜ್ಯದ ಅರೋರ ನಗರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ವೇಲುಚಾಮಿ ಸಭಾಂಗಣದಲ್ಲಿ ನಡೆಯಿತು. ಶನಿವಾರ ಮುಂಜಾನೆ ೮.೩೦ಕ್ಕೆ ವಿದ್ಯಾರಣ್ಯ ಕನ್ನಡ ಕೂಟ ದಾಸ ಸಮಿತಿಯ ಸದಸ್ಯರಾದ ಡಾ. ಸುಮಾ ರಾಜಾಶಂಕರ್, ಶ್ರೀಮತಿ ಚಿತ್ರಾ ರಾವ್, ಶ್ರೀಮತಿ ರಾಧಾ ರಾವ್, ಶ್ರೀಮತಿ ಪ್ರತಿಭಾ ಕೋಟೆ ಮತ್ತು ಶ್ರೀಮತಿ ಅನಿತಾ ಮೂರ್ತಿ ಅವರಿಂದ ಲಲಿತಾ ಸಹಸ್ರನಾಮ ಮತ್ತು ಕೇಶವನಾಮ ಪಠಣದೊಂದಿಗೆ ಆರಂಭವಾಯಿತು. ಆ ನಂತರ ಸಂಜೆಯವರಿಗೆ ಆರು ಸ್ಥಳೀಯ ಸಂಗೀತ ಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಿರಿಯರು ಮತ್ತು ಹಿರಿಯರು ದಾಸರ ಪದ, ಕೀರ್ತನೆಗಳ ಗಾಯನದಿಂದ ನೆರೆದಿದ್ದವರ ಮನ ಸೂರೆಗೊಂಡರು. ಕೇವಲ ೪-೫ ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ಸುಮಾರು ೬೫-೭೦ ವರ್ಷ ವಯಸ್ಸಿನ ಹಿರಿಯರೂ ಕೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಹಳ ವಿಶೇಷವಾಗಿತ್ತು. ಶ್ರೀ ವಿದ್ಯಾಗಣೇಶ್ ಅವರ ವಿದ್ಯಾರ್ಥಿಗಳ ಸಮೂಹಗಾನದಲ್ಲಿ ಸಂಪ್ರದಾಯ ಬದ್ದವಾಗಿ ಪ್ರಸ್ತುತವಾದ "ಹರಿ ನಾರಾಯಣ, ಹರಿ ನಾರಾಯಣ ಎನು ಮನವೆ" ಮತ್ತು "ಯಾರೇ ರಂಗನ ಯಾರೇ ಕೃಷ್ಣನ..." ಹಾಡುಗಳು, ಆಶಾರಾವ್ ಅವರ ವಿದ್ಯಾರ್ಥಿಗಳು ಹಾಡಿದ "ಕಾಗದ ಬಂದಿದೆ ನಮ್ಮ ಪದುಮ ನಾಭನದು", ಪುಟ್ಟ ಬಾಲಕ ಸೋಹಂ ಕಜೆ ಹಾಡಿದ "ಕಂಡೆ ನಾ ಗೋವಿಂದನ..." ವಿಶೇಷವಾಗಿ ಪ್ರೇಕ್ಷಕರ ಮನಸೆಳೆದವು.
ಹಾಡುಗಾರಿಕೆಯೇ ಅಲ್ಲದೆ ದಾಸರ ಕೃತಿಗಳಿಗೆ ಕೆಲವು ನೃತ್ಯಗಳನ್ನೂ ಸಹ ಏರ್ಪಡಿಸಲಾಗಿತ್ತು. ಆಶಾ ಆಚಾರ್ಯ ಸಂಗೀತ-ನೃತ್ಯ ಕಲಾ ಶಾಲೆಯ ಕ್ರಿಸ್ಟಿ ಬ್ಲೋಕ್ಟನ್ ಅವರು ಕನಕದಾಸರ "ಯಾದವರಾಯ ಬೃಂದಾವನದೊಳು..." ಹಾಡಿಗೆ ಮಾಡಿದ ನೃತ್ಯ ವಿಶೇಷವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಾರತೀಯ ಸಂಜಾತರೇ ಅಲ್ಲದ ಕ್ರಿಸ್ಟಿ ಅವರು ಭಾರತೀಯ ನೃತ್ಯ ಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡು ದಾಸರ ಕೃತಿಗಳಿಗೆ ನೃತ್ಯ ಮಾಡಿರುವುದು ನಿಜವಾಗಿಯೂ ಅಭಿನಂದನಾರ್ಹ.
ಸಂಜೆ ೫.೩೦ಕ್ಕೆ ವಿದೂಶಿ ಶ್ರೀಮತಿ ರಾಧಾ ದೇಸಾಯಿ ಅವರಿಂದ ಸಂಗೀತ ಕಚೇರಿಯನ್ನು ಏರ್ಪಡಿಸಿಲಾಗಿತ್ತು. ಧಾರವಾಡದಿಂದ ನಿವಾಸಿಗಳಾದ ರಾಧಾ ದೇಸಾಯಿ ಅವರು ಹಿಂದೂಸ್ಥಾನಿ ಶೈಲಿಯಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಪುರಂದರ ದಾಸರ ಕೀರ್ತನೆಗಳನ್ನು ಹಾಡಿ ಎಲ್ಲರ ಮನರಂಜಿಸಿದರು. ವಿದೂಶಿ ರಾಧಾ ದೇಸಾಯಿ ಅವರು ಪ್ರತಿ ಹಾಡಿಗೆ ಭಾವರ್ಥವನ್ನು ಹೇಳಿ, ನಂತರ ಹಾಡನ್ನು ಹೇಳಿದ್ದು ನೆರೆದಿದ್ದವರಿಗೆ ದಾಸರ ಹಾಡುಗಳನ್ನು ಅರ್ಥ ಪೂರ್ಣವಾಗಿ ರಸಾನುಭವ ಸವಿಯುವ ಅವಕಾಶ ಮೂಡಿಸಿತು. ಹಾಡುಗಾರಿಕೆ ಕಾರ್ಯಕ್ರಮ "ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋ", "ತೆಲಿಸೋ ಇಲ್ಲಾ ಮುಳುಗಿಸೋ", "ಒಂದು ಬಾರಿ ಸ್ಮರಣೆ ಸಾಲದೆ..." ಮುಂತಾದ ೧೦ ದಾಸ ಕೃತಿಗಳನ್ನೊಳಗೊಂಡಿತ್ತು. ಆ ನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ ವಿದೂಶಿ ರಾಧಾ ದೇಸಾಯಿ ಅವರು ವಿ.ಸಿ. ಐರ್ಸಿಂಗ್ ಅವರ ಪ್ರಸಿದ್ದ ಕೃತಿ "ಸುಲಭವಾಗಿ ಕಾಣದಂಥ ಸೃಷ್ಟಿಕರ್ತದೇವನ ತಾಯಿ ನಿನ್ನ ರೂಪದಲ್ಲಿ ಸಹಜವಾಗಿ ಕಂಡೆ.." ಮತ್ತು ಕಬೀರ್ ದಾಸರ "ಜನ್ಮ್ ಜನ್ಮ್ ಕೊ ಮಿಠಾಸಕ್ ಮಾರೋ.." ಸಹ ಅದ್ಭುತವಾಗಿ ಹಾಡಿದರು. ಈ ಕಚೇರಿಗೆ ಪಕ್ಕವಾದ್ಯವನ್ನು ಸ್ಥಳೀಯ ಕಲಾವಿದರಾದ ಶ್ರೀಧನಂಜಯ ಕುಂಟೆ (ತಬಲಾ), ಶ್ರೀಮುರಳಿಧರ ಕಜೆ (ಹಾರ್ಮೊನಿಯಮ್) ಮತ್ತು ಶ್ರೀಮತಿ ಅನುಪಮ ಮಂಗಳವೇಡೆ (ತಾಳ) ಒದಗಿಸಿದರು.
ಅಕ್ಟೋಬರ್ ೧೯ನೇ ತಾರೀಖು ಭಾನುವಾರದಂದು, ಡಾ|| ವಿದ್ಯಾಭೂಷಣ ಅವರಿಂದ ದಾಸ ಕೀರ್ತನೆಗಳ ಗಾಯನ ಕಚೇರಿಯನ್ನು ಏರ್ಪಡಿಸಲಾಗಿತ್ತು. ಲೆಮಾಂಟ್ ನಗರದ ಶ್ರೀರಾಮ ದೇವಾಸ್ಥಾನದ ಸಮರತಿ ಸಭಾಂಗಣದಲ್ಲಿ ಸಂಜೆ ಸುಮಾರು ೪.೩೦ಕ್ಕೆ ಕಾರ್ಯಕ್ರಮ ಆರಂಭವಾಯಿತು. ಶ್ರೀ ವಿದ್ಯಾಭೂಷಣ ಅವರು, ಅಲ್ಲಿ ನೆರೆದಿದ್ದ ಸುಮಾರು ಐದು ನೂರು ಜನರನ್ನು ಎರಡೂವರೆ ಗಂಟೆಗಳ ಕಾಲ ತಮ್ಮ ಸುಮಧುರ ಕಂಠದಿಂದ, ದಾಸರ ಪದಗಳನ್ನು ಕರ್ಣಾಟಕ ಶೈಲಿಯಲ್ಲಿ ಹಾಡಿ ಮನ ರಂಜಿಸಿದರು. "ವರವ ಕೊಡು ಎನಗೆ ವಾಗ್ದೇವಿ" ಹಾಡಿನಿಂದ ಪ್ರಾರಂಭವಾದ ಕಾರ್ಯಕ್ರಮ, "ನಾರಾಯಣ ನಿನ್ನ ನಾಮದ ಸ್ಮರಣೆಯ..", "ಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತ್ತಲ್ಲಿದ್ದೆ...", "ಮಧುಕರ ವೃತ್ತಿ ಎನ್ನದು ಬಲು ಚೆನ್ನ..", "ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ..." ಮುಂತಾದ ಹಾಡುಗಳನ್ನೊಳಗೊಂಡಿದ್ದು ಅರ್ಥಪೂರ್ಣವಾಗಿ ಮುಕ್ತಾಯವದದ್ದು "ಭಾಗ್ಯಾದ ಲಕ್ಷ್ಮೀ ಬಾರಮ್ಮ..." ಹಾಡಿನೊಂದಿಗೆ. ಈ ಕಚೇರಿಗೆ ಪಕ್ಕ ವಾದ್ಯವನ್ನು ಒದಗಿಸಿದವರು ಮಿಷಿಗನ್ ನಿವಾಸಿ ಶ್ರೀ ಪ್ರಶಾಂತ್ ಗುರುರಾಜ (ವಯಲಿನ್), ಇಲಿನಾಯ್ ರಾಜ್ಯದ ನೇಪರ್ವಿಲ್ ನಿವಾಸಿ ಶ್ರೀ ರಾಜೇಶ್ ಸೇಲಂ (ಮೃದಂಗ) ಮತ್ತು ಮಿನಿಯಾಪೋಲೀಸ್ ನಿವಾಸಿ ಶ್ರೀ ಬಾಲಜಿ ಚಂದ್ರನ್ (ಘಟ).
ಎರಡು ದಿನಗಳಲ್ಲಿ ದಾಸರ ಪದಗಳನ್ನು ಹಿಂದೂಸ್ತಾನಿ ಮತ್ತು ಕರ್ಣಾಟಕ ಎರಡೂ ಶೈಲಿಗಳಲ್ಲಿ ಇಬ್ಬರು ಮಹಾನ್ ಹಾಡುಗಾರರಿಂದ ಕೇಳುವ ಭಾಗ್ಯ ಚಿಕಾಗೋ ಕನ್ನಡಿಗರದ್ದಾಗಿತ್ತು. ಎರಡೂ ಸಂಗೀತ ಕಚೇರಿಗಳನ್ನು ದಾಸ ಸಮಿತಿಯ ಅಧ್ಯಕ್ಷಿಣಿ ಡಾ. ಸುಮ ರಾಜಾಶಂಕರ್ ಮತ್ತು ಶ್ರೀಮತಿ ಚಿತ್ರಾ ರಾವ್ ಅವರು ಬಹಳ ಅರ್ಥ ಪೂರ್ಣವಾಗಿ ಪ್ರಸ್ತುತ ಪಡಿಸಿದರು.
ವರದಿ: ಮಂಜುನಾಥ ಕುಣಿಗಲ್ - ಕಾರ್ಯದರ್ಶಿ, ವಿದ್ಯಾರಣ್ಯ ಕನ್ನಡ ಕೂಟ
Advertisement