ಆಳಾಗಬಲ್ಲವನೇ ಒಳ್ಳೆ ಅರಸಾಗುವ

ಆಳಾಗಬಲ್ಲವನೇ ಒಳ್ಳೆ ಅರಸಾಗುವ ಎಂದಿದ್ದ ಅಣ್ಣಾವ್ರ ಮಾತು ಇಂದು ಅಕ್ಷರಶಃ ಸತ್ಯವಾಗಿದೆ.
ಅರಸು ಅಂತಾರೆ
ಅರಸು ಅಂತಾರೆ

ಆಳಾಗಬಲ್ಲವನೇ ಒಳ್ಳೆ ಅರಸಾಗುವ ಎಂದಿದ್ದ ಅಣ್ಣಾವ್ರ ಮಾತು ಇಂದು ಅಕ್ಷರಶಃ ಸತ್ಯವಾಗಿದೆ.
ಮೂರು ದಿನಗಳ ಹಸಿವು ತಾಳಲಾರದೆ ಒಂದಾನೊಂದು ದಿನ ಬಸ್ಸಿನಲ್ಲಿ ಮಹಿಳೆಯೊಬ್ಬರ 50 ರುಪಾಯಿ ಕದ್ದಿದ್ದ, ಊಟ ತಿಂಡಿಗಾಗಿ ಎಲ್ಎಲ್ ಬಿ ಸ್ನೇಹಿತರನ್ನು ಹುಡುಕುತ್ತ ಕೋರ್ಟ್ ನ ಮೆಟ್ಟಿಲೇರುತ್ತಿದ್ದ, ಊರಿಗೆ ಹೋದಾಗ ಸ್ನೇಹಿತರು ಮತ್ತು ಸಂಬಂಧಿಕರ ವಕ್ರನೋಟಗಳಿಂದ ಚೂರುಚೂರಾಗುತ್ತಿದ್ದ, ಹೀಯಾಳಿಸುವ ಮಾತುಗಳನ್ನು ಕೇಳಿದರೂ ಕೇಳದಂತಿರುತ್ತಿದ್ದ...
12 ವರ್ಷ ಚಿತ್ರರಂಗದಲ್ಲಿ ಆಳಾಗಿ ದುಡಿದು ಹಾಳಾಗಿ ಹೋಗಬಹುದಾಗಿದ್ದ ಅರಸು ಅಂತಾರೆ, ಲವ್ ಇನ್ ಮಂಡ್ಯ ಚಿತ್ರದಿಂದ ಅರಸರಾಗಿದ್ದಾರೆ.
ಕನ್ನಡದಲ್ಲಿ ಸ್ವಂತ ಪ್ರತಿಭೆ ಇರುವ ನಿರ್ದೇಶಕರು ಕಡಿಮೆ ಎಂದು ಬೇರೆ ಭಾಷೆಗಳ ನಿರ್ದೇಶಕರನ್ನೇ ಅರಸಿಕೊಂಡಿದ್ದ ಕನ್ನಡದ ಪ್ರೇಕ್ಷಕನಿಗೆ ಅರಸು ಅಂತಾರೆ ಅಂತ ಒಬ್ಬ ಫ್ರೆಷ್ ನಿರ್ದೇಶಕ ಇದ್ದಾರೆ ಅಂತ ಗೊತ್ತಾಗಿದೆ. ಮಂಡ್ಯದ ಸಿಹಿಯನ್ನು ಲವ್ ಇನ್ ಮಂಡ್ಯದಲ್ಲಿ ತುಂಬಿದ ನಿರ್ದೇಶಕ ಅರಸು ಅಂತಾರೆ, ಏನಂತಾರೆ ಅಂತ ಇಲ್ಲಿದೆ. ಓದಿ.

ನಿಮಗೆ ಬಂದ ರಿಯಾಕ್ಷನ್ಸ್ ಹೇಗಿದೆ?
ಅರಸು ಅಂತಾರೆ: ಸೂಪರ್.

ಯಾವುದಾದರೂ ನೆನಪಿಡಲೇಬೇಕಿರುವಂತ ಪ್ರತಿಕ್ರಿಯೆ?
ಅರಸು: ನಿರ್ಮಾಪಕ ಉದಯ್ ಮೆಹ್ತಾ ಮತ್ತು ನನ್ನ ಅಮ್ಮ ವ್ಯಕ್ತಪಡಿಸಿದ ಖುಷಿ.

ಹೊಸ ನಿರ್ದೇಶಕನನ್ನು ಜನ ಮೆಚ್ಚಿದ್ದಾರೆ ಅನ್ಸುತ್ತಾ?
ಅರಸು: ಖಂಡಿತವಾಗಿ.

ಜನಕ್ಕೆ ಏನು ಇಷ್ಟವಾಗಿರಬಹುದು...ಅಂತ ನಿಮ್ಮ ಅಭಿಪ್ರಾಯ
ಅರಸು: ಸರಳತೆ ಮತ್ತು ತಾಜಾ ದೃಶ್ಯಗಳು.

ಕಲೆಕ್ಷನ್ಸ್ ಹೇಗಿದೆ?
ಅರಸು:ತುಂಬಾ ಚೆನ್ನಾಗಿದೆ, ಉತ್ತರ ಕರ್ನಾಟಕದಲ್ಲಿ ಕೂಡಾ.

ಪ್ರೊಡ್ಯೂಸರ್ ಖುಷಿಯಾಗಿರೋದು ಒಳ್ಳೆಯ ಸುದ್ದಿ, ಮುಂದಿನ ಫಿಲಂ ಅವರ ಜೊತೆಗೇನಾ..ಅಥವಾ ಬೇರೆ ಯಾವ ಯೋಜನೆ ಇದೆ?
ಅರಸು: ಸದ್ಯಕ್ಕೆ ಸ್ಟೋರಿ ಮೇಲೆ ಕೆಲ್ಸ ಮಾಡ್ತಿದೀನಿ, ನೋಡೋಣ.

ಲವ್ ಇನ್ ಮಂಡ್ಯ- ಎಷ್ಟು ಮಂದಿ ನಟವರ್ಗ...ಎಷ್ಟು ದಿನ ಚಿತ್ರೀಕರಣ ಮಾಡಿದ್ರಿ, ಎಷ್ಟು ಬಜೆಟ್ ಆಯ್ತು, ಎಷ್ಟು ದಿನ ಓಡಲಿದೆ?
ಅರಸು: 15 ಪಾತ್ರ, 46 ದಿನ, 2.5 ಕೋಟಿ, 50 ದಿನ ಖಚಿತ...ಮುಂದೆ ಜನ ತಗೊಂಡ್ ಹಾಗೆ.

ಚಿತ್ರರಂಗದಲ್ಲಿ ಎಷ್ಟು ವರ್ಷ ಸೈಕಲ್ ತುಳಿದಿದ್ದೀರಿ?
ಅರಸು: 12 ವರ್ಷಗಳ ಪರಿಶ್ರಮ.

ಇಂದು ಇಡೀ ಕರ್ನಾಟಕದ ಗಮನ ಸೆಳೆದಿರೋ ನಿರ್ದೇಶಕರು ನೀವು, ಈ ಮುನ್ನ ಆದ ಒಂದೆರಡು ಅವಮಾನದ ಕ್ಷಣಗಳನ್ನು ನೆನೆಯಬಹುದಾ...ಅಥವಾ ಹಸಿವಿನ ಕ್ಷಣಗಳನ್ನು...
ಅರಸು: ಒಂದು ದಿನ ಮೂರು ದಿನಗಳ ಹಸಿವು ತಾಳಲಾರದೆ ಬಸ್ಸಿನಲ್ಲಿ ಬೂಬಮ್ಮ ಹತ್ರ 50 ರುಪಾಯ್ ಕದ್ದಿದ್ದು, ಊಟ ತಿಂಡಿಗಾಗಿ ಎಲ್ಎಲ್ ಬಿ ಸ್ನೇಹಿತರನ್ನು ಹುಡುಕೊಂಡು ಕೋರ್ಟ್ ಗಳ ಹತ್ರ ಹೋಗ್ತಿದ್ದದ್ದು, ಊರಿಗೆ ಹೋದಾಗ ಸ್ನೇಹಿತರು ಮತ್ತು ಸಂಬಂಧಿಕರ ವಕ್ರವಾದ ಹೀಯಾಳಿಸುವಿಕೆಯ ಮಾತುಗಳು.

ಚಿತ್ರರಂಗಕ್ಕೆ ಹೇಗೆ ಪ್ರವೇಶ ಪಡೆದ್ರಿ...ಎಲ್ಲಿಂದ ಶುರು ಮಾಡಿದ್ರಿ. ಸಿನೆಮಾದ ಸೆಳೆತಕ್ಕೆ ಕಾರಣವೇನು...ಅಂದಹಾಗೆ, ನೀವು ಓದಿದ್ದೇನು ಎಲ್ಲಿ...
ಅರಸು: ಬಿ.ಎ. ಎಲ್ ಎಲ್ ಬಿ ಓದಿದ್ದು. ಬಿ.ಎ.ಓದಿದ್ದು ಹೆಚ್ ಕೆ ವೀರಣ್ಣಗೌಡ ಕಾಲೇಜು, ಎಲ್ ಎಲ್ ಬಿ ಓದಿದ್ದು ಮಂಡ್ಯದ ಪಿ ಇ ಎಸ್ ನಲ್ಲಿ.
ಸಿನೆಮಾದ ಸೆಳೆತಕ್ಕೆ ಕಾರಣ- ನಾನು ಸಮಾಜದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ. ಸಿನೆಮಾ ನಾನು ಚಿಕ್ಕ ವಯಸ್ಸಿನಿಂದಲೂ ತುಂಬಾ ಪ್ರೀತಿಸುತ್ತಾ ಬಂದದ್ದು. ಉಪೇಂದ್ರ ಅವರು ಬೆಳೆದು ಬಂದ ಬಗೆ ನನಗೆ ಸ್ಪೂರ್ತಿ.
ಯಾವ ಹಿನ್ನೆಲೆ ಮುನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದು ಮೊದಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸತ್ಯವಾನ್ ಸಾವಿತ್ರಿ ಚಿತ್ರಕ್ಕೆ. ನಂತರ ಮಾದೇಶ, ಕೆಂಚ, ಪ್ರೀತ್ಸೇ ಪ್ರೀತ್ಸೇ, ರಾಮ್, ಸಿದ್ಲಿಂಗು, ನೀರ್ದೋಸೆಗಳಲ್ಲಿ ದುಡಿಮೆ. ಸುರೇಶ್ ಗೋಸ್ವಾಮಿಯವರ ಮುಖಾಂತರ ಮಾದೇಶ್ ಅವರ ಪರಿಚಯ, ಪ್ರೀತ್ಸೇ ಪ್ರೀತ್ಸೇಯಲ್ಲಿ ನನ್ನ ಮತ್ತು ಅನೂಪ್ ಸೀಳಿನ್ ರ ಪರಿಚಯ, ಮಾತು, ಸ್ನೇಹ - ನಂದೇ ಈ ಲೋಕ ಹಾಡು ಮೊದಲು ಬರೆದದ್ದು. ಹೆಸರು ತಂದದ್ದು - ಸಿದ್ಲಿಂಗು ಚಿತ್ರದ - ಎಲ್ಲೆಲ್ಲೊ ಓಡುವ ಮನಸೇ ಹಾಡು.

12 ವರ್ಷದ ಈ ವನವಾಸದಲ್ಲಿ ಈಗ ಮೊಟ್ಟಮೊದಲ ಬಾರಿಗೆ ಜನಕ್ಕೆ ತೆರೆದುಕೊಳ್ಳುತ್ತಿದ್ದೀರಿ...ಮನೆಯಲ್ಲಿ ಪ್ರತಿಕ್ರಿಯೆ ಹೇಗಿದೆ, ಅಮ್ಮ ಏನಂತಾರೆ...

ಅರಸು: ಅಮ್ಮ ಮನೆಗೆ ಬೆಳಕಾದೆ ಅಂತಾರೆ. ನಿಜವಾದ ಬೆಳಕು ಅವರೇ. ಇವತ್ತಿಗೂ ಬಳೆ ತೊಟ್ಟು ನಮ್ಮನ್ನೆಲ್ಲಾ ಸಾಕಿದವರು. ಇಂದಿಗೂ ದುಡಿಯುತ್ತಿದ್ದಾರೆ.
ನನ್ನ ಪರಮಾಪ್ತ ಗೆಳೆಯ ಈಶ ಇಲ್ಲ ಅನ್ನೋದೊಂದೇ ನನಗೆ ಕೊರಗು. ಅದೊಂದು ಬಿಟ್ಟು ನಾನು ಎಣಿಸಿದ್ದೆಲ್ಲವನ್ನೂ ಭಗವಂತ ನನಗೆ ಕರುಣಿಸಿದ್ದಾನೆ. ಇಂಡಸ್ಟ್ರಿಯಲ್ಲಿ ಅನ್ನ ಸಂಪಾದನೆ ಮಾಡುತ್ತಿರುವ ಪುಣ್ಯವಂತರಲ್ಲಿ ನಾನೂ ಒಬ್ಬ ಅನ್ನೋದೇ ಹೆಮ್ಮೆ.

ಅಮ್ಮನವರ ಹೆಸರೇನು...ನೀವೆಷ್ಟು ಮಂದಿ ಮಕ್ಕಳು...
ಅರಸು: ಚೆನ್ನಮ್ಮಣ್ಣಿ. ನಮ್ಮಣ್ಣ ನಾನು ಇಬ್ಬರೂ ಎಲ್ ಎಲ್ ಬಿ, ಈಗ ಇಬ್ಬರೂ ಅಡ್ವೋಕೇಟ್ ಅಲ್ಲ.

ಚಿತ್ರರಂಗ ನಂಬಿ ಬದುಕುವುದು ಕಷ್ಟ ಅಲ್ಲವೇ...
ಅರಸು: ತುಂಬಾನೇ ಕಷ್ಟ. ಆದರೆ ಅದೇ ನನಗೆ ಪರಮ ಇಷ್ಟ.

ನಿಮ್ಮ ಈ ಗೆಲುವನ್ನು ಯಾರಿಗೆ ಅರ್ಪಿಸುತ್ತೀರಿ...
ನನ್ನಮ್ಮ ಮತ್ತು ನನ್ನ ಗೆಳೆಯ ಈಶ. ಮತ್ತು ನನ್ನ ಕೈ ಬಿಡದ ಪರಿಶ್ರಮಕ್ಕೆ.

ನಿಮ್ಮ ಶಕ್ತಿ ಏನು ಹಾಗೆಯೇ ದೌರ್ಬಲ್ಯವೇನು
ಅರಸು: ನನ್ನ ಮೇಲೆ ನನಗಿರುವ ನಂಬಿಕೆ ನನ್ನ ಶಕ್ತಿ. ಸುಲಭವಾಗಿ ಬೇರೆಯವರನ್ನು ನಂಬುವುದು ಮತ್ತು ಸಂಕೋಚ ನನ್ನ ದೌರ್ಬಲ್ಯ.

ನೀವು ಗುರು ಎಂದು ಯಾರನ್ನಾದರೂ ಕನ್ಸಿಡರ್ ಮಾಡ್ತೀರಾ...ಇದ್ರೆ, ಯಾರು...
ಅರಸು: ಕನ್ನಡದ ಪ್ರತಿ ಅಕ್ಷರಗಳು, ಪದಗಳು ನನ್ನ ಗುರು. ಜೊತೆಗೆ ತಾಯಿ ಶಾರದಾಂಬೆ.

ನೀವು ಮೆಚ್ಚುವ ಲೇಖಕರು...ಮೆಚ್ಚುವ ಪುಸ್ತಕ ..
ಅರಸು: ಪೂರ್ಣಚಂದ್ರ ತೇಜಸ್ವಿಯವರ ಬರಹ ಯಾವತ್ತೂ ತುಂಬಾನೇ ಇಷ್ಟ. ಕರ್ವಾಲೋ ನನ್ನ ಆಲ್ ಟೈಮ್ ಫೇವರಿಟ್.

ಕೆಲವೊಮ್ಮೆ ಸಿನೆಮಾಗಳು ಆಟೋಬಯಾಗ್ರಫಿಕಲ್ ಇರುತ್ವೆ...ಈ ಚಿತ್ರದಲ್ಲಿ ಎಲ್ಲಾದರೂ ನಿಮ್ಮ ಜೀವನದ ಛಾಯೆ ಇದೆಯಾ?
ಅರಸು: ಖಂಡಿತವಾಗಿ. ಪ್ರತಿ ಮಾತುಗಳೂ ನಾನು ಆಡಿದ್ದವೇ. ಶಿಳ್ಳೆ ಪಾತ್ರದ ಲವಲವಿಕೆ ಮತ್ತು ಮಾತುಗಳು ನನ್ನವೇ.

ಹೊಸತಾಗಿ ಸಿನೆಮಾ ರಂಗಕ್ಕೆ ಬರುವವರಿಗೆ ನೀವು ಹೇಳಬಯಸುವ ಕಿವಿಮಾತು...
ಅರಸು: ನಿಮ್ಮಲ್ಲಿರುವ ಪ್ರತಿಭೆಯ ಬಗ್ಗೆ ನಿಮಗೆ ಚೆನ್ನಾಗಿ ಅರಿವಿರಬೇಕು. ಮತ್ತು ಪರಿಶ್ರಮವನ್ನು ನಂಬಬೇಕು. ಒಳ್ಳೆಯತನ ಎಂದಿಗೂ ನಿಮ್ಮ ಕೈ ಬಿಡದು.

ಅರಸು ವಿಗೆ ಅರಸು ಪುನೀತ್ ರಿಂದ ಆಫರ್ ಬಂದ್ರೆ...ಕಥೆ ಏನಿರುತ್ತೆ
ಅರಸು: ನಾನು ಸಿನೆಮಾಗೆ ಎಂಟ್ರಿ ಕೊಟ್ಟಿದ್ದೇ ಅವರಿಗೊಂದು ಕಥೆ ಮಾಡಿಕೊಂಡು. ಬುದ್ಧ ಅಂತ ಟೈಟಲ್ ಸಾಂಗ್ ಸಮೇತ. ಅವರಿಂದ ಕರೆ ಬಂದ್ರೆ ತಡವಾದರೂ ಒಂದೊಳ್ಳೆ ಕಥೆ ಅವರಿಗಾಗಿ ಮಾಡುವೆ.

ಈ ಪಿಚ್ಚರ್ ಗೋತಾ ಹೊಡೆದಿದ್ರೆ ನಿಮ್ ಕತೆ ಏನಾಗ್ ಬಿಡ್ತಿತ್ತು...
ಅರಸು: ಮತ್ತೆ ಸಿಡಿದೆದ್ದು ಬಂದೇ ಬರ್ತಿದ್ದೆ ತಾಯಾಣೆ. ಆದ್ರೆ ಅದರ ಬಗ್ಗೆ ನಂಗೆ ಯೋಚ್ನೆ ಇರ್ಲಿಲ್ಲ.

ನಾಯಕ ನೀನಾಸಂ ಸತೀಶ್ ಬಗ್ಗೆ ಹೇಳಿ
ಅರಸು: ಒಳ್ಳೆಯ ನ್ಯಾಚುರಲ್ ನಾಟೀ ಪ್ರತಿಭೆ.

ನಾಯಕಿ ಸಿಂಧು ಲೋಕನಾಥ್ ಬಗ್ಗೆ
ಅರಸು:  ಕನ್ನಡದ ಅಪರೂಪದ ದೇಸೀ ಚೆಲುವಿ ಮತ್ತು ನಟಿ. ಸೋ ಸಿಂಪಲ್ ಅಂಡ್ ಕ್ಯೂಟ್.

ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಬಗ್ಗೆ
ಅರಸು: ಅನೂಪ್ ಚಿತ್ರರಂಗದಲ್ಲಿ ಎಂದೆಂದಿಗೂ ನನ್ನವನು. ಅವನ್ ಬಿಟ್ ನಾನಿಲ್ಲ, ನನ್ನ ಬಿಟ್ ಅವ್ನಿಲ್ಲ.

ಛಾಯಾಗ್ರಾಹಕ ಸುಜ್ಞಾನ್ ಬಗ್ಗೆ...
ಅರಸು: ತುಂಬಾ ಆಳವಾಗಿ ತಮ್ಮ ಕೆಲಸದ ಬಗ್ಗೆ ಅಧ್ಯಯನ ಮಾಡುವ ನಿರಂತರ ಚಿತ್ರನೇತ್ರ - ಸುಜ್ಞಾನ್.

ಪ್ರೊಡ್ಯೂಸರ್ ಬಗ್ಗೆ ಹೇಳಿ...
ಅರಸು: ತುಂಬಾ ಸಜ್ಜನ ಸ್ವಭಾವ. ಸಿನೆಮಾ ಪ್ರೀತ್ಸೋ ನಿರ್ಮಾಪಕ ಅವರು. ಹೊಸಬ ಅನ್ನೋದನ್ನು ಬದಿಗಿಟ್ಟು ಪ್ರತಿಭೆ ನಂಬಿ ಕೋಟಿ ಹೂಡಿದವರು. ಅಂತವರು ಚಿತ್ರರಂಗಕ್ಕೆ ಬೇಕು, ಅವರನ್ನು ಪರಿಚಯಿಸಿದ ಕ್ಯಾಷಿಯರ್ ರಮೇಶ್ ಅವರನ್ನು ಮರೆಯಲಾಗದು.

ಈ ಸಿನೆಮಾ ಹೊರದೇಶಕ್ಕೆ ಕೊಂಡೊಯ್ಯುವ ಪ್ರಯತ್ನ ಇದೆಯಾ
ಅರಸು: ಖಂಡಿತವಾಗಿ. ಈಗಾಗಲೇ ಕೇಳ್ತಿದ್ದಾರೆ. ನಿರ್ಮಾಪಕರು ಅದರ ಕೆಲಸದಲ್ಲಿ ನಿರತರಾಗಿದ್ದಾರೆ.

ಲಿಂಗಾ ನೋಡಿದ್ರಾ...
ಅರಸು: ಇಲ್ಲ. ನಿರ್ದೇಶಕ ಲಿಂಗದೇವರು ಅವರು ಒಂದು ರಾಷ್ಟ್ರಪ್ರಶಸ್ತಿ ಬರುವಂಥ ಚಿತ್ರ ಮಾಡ್ತಿದಾರೆ. ಅದರ ಕೆಲಸದಲ್ಲಿ ನಾನು ಅನೂಪ್ ಬಿಜಿಯಾಗಿದ್ದೀವಿ.

ಲಿಂಗಾ ಚಿತ್ರದಿಂದ ಮಂಡ್ಯಕ್ಕೆ ಏನಾದ್ರೂ ಪೆಟ್ಟು ಬಿದ್ದಿದೆಯಾ.
ಅರಸು: ಖಂಡಿತವಾಗಿ ಈ ದಿನ ಪೆಟ್ಟಿದೆ. ಆದರೆ ನಿರಂತರವಲ್ಲ.

-ಡಾವೆಂಕಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com