ಪದಗಳು ಕಡಿಮೆಯಾದಾಗಲೇ ಸಿನಿಮಾ

ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ, ದೆಹಲಿ ಚಿತ್ರೋತ್ಸವ...
ಮಂಸೋರೆ
ಮಂಸೋರೆ
Updated on

ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ, ದೆಹಲಿ  ಚಲನಚಿತ್ರೋತ್ಸವಕ್ಕೆ ಆಯ್ಕೆಗೊಂಡ 'ಹರಿವು' ಚಲನ ಚಿತ್ರದ ನಿರ್ದೇಶಕ ಮಂಜುನಾಥ್ ಎಸ್ (ಮಂಸೋರೆ) ಅವರು ಮನಸಾರೆ ಮಾತನಾಡಿದಾಗ...

ನೀವು ದೃಶ್ಯ ಕಲೆಯಿಂದ ಬಂದವರು. ಈ ಸಿನಿಮಾ ಪಯಣ ಹೇಗಿತ್ತು?

ಸಿನಿಮಾ ಆಕಸ್ಮಿಕ. ನಿರ್ದೇಶಕನಾಗಬೇಕೆಂಬ ಕನಸು ಇರಲಿಲ್ಲ. ಜೀವನೋಪಾಯಕ್ಕಾಗಿ 2004ರಲ್ಲಿ ಸಿನಿಮಾ ಲೋಕಕ್ಕೆ ಬಂದೆ. ಚಿತ್ರಕಲಾ ಪರಿಷತ್ತಿನಲ್ಲಿ ಪಿಜಿ ಮಾಡಿದ ಮೇಲೆ ಆರ್ಟ್ ಡೈರೆಕ್ಟರ್ ಆಗಿ, ಪೇಂಟಿಂಗ್, ಪಬ್ಲಿಕೇಷನ್, ಬ್ಲಾಗ್, ಸಿನಿಮಾ ವಿಮರ್ಶೆಗಳನ್ನು ಬರೆಯುತ್ತಿದ್ದೆ. ಸಿನಿಮಾ ಮೇಕಿಂಗ್ ಬಗ್ಗೆ ಆಸಕ್ತಿ ಹುಟ್ಟಿದ್ದು ಹೆಚ್.ಎ. ಅನಿಲ್ ಕುಮಾರ್ ಅವರಿಂದ. ಸಿನಿಮಾ ಭಾಷೆ ಯನ್ನು ಅರ್ಥ ಮಾಡಿಕೊಳ್ಳಲು ಗೈಡ್ ಮಾಡಿದ್ದು ಅವರೇ. ಕಾಲೇಜಿನಲ್ಲಿರುವಾಗ ನಾಟಕಕ್ಕೆ ಸ್ಕ್ರಿಪ್ಟ್ ಬರೀತಾ ಇದ್ದೆ. ಆಮೇಲೆ ರಂಗಭೂಮಿಯಲ್ಲಿ ಕೆಲಸ ಮಾಡಿದೆ, ಶಾರ್ಟ್ ಫಿಲ್ಮ್ ಗಳಿಗೂ ಸ್ಕ್ರಿಪ್ಟ್ ಬರೆದಿದ್ದೆ. ಕಾಂಚಾಣ ಚಿತ್ರದಲ್ಲಿ ಆರ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೀನಿ.

ಹರಿವು ಚಿತ್ರ ಮಾಡಬೇಕೆಂದು ಅನಿಸಿದ್ದು?
ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಆಶಾ ಬೆನಕಪ್ಪ ಅವರ ಲೇಖನವೇ ಇದಕ್ಕೆ ಸ್ಪೂರ್ತಿ. ನಾನು ಅಪ್ಪನನ್ನು ಕಳೆದುಕೊಂಡಿದ್ದೆ. ಆ ಲೇಖನ ಓದ್ತಾ ಓದ್ತಾ ನನ್ನ ಜೀವನ ಮತ್ತು ಆ ಕತೆ ಲಿಂಕ್ ಆಗಿ ಬಿಡ್ತು. ನನ್ನ ಅಪ್ಪ ನನಗೆ ಎಲ್ಲವೂ ಆಗಿದ್ದರು. ಅವರ ಅಗಲಿಕೆಯ ನಂತರ ನನ್ನಲ್ಲಿ ಶೂನ್ಯ ಭಾವ ಆವರಿಸಿತ್ತು. ಈ ಹೊತ್ತಲ್ಲಿ ಅವರಿಗೆ ಏನಾದರೂ ಡೆಡಿಕೇಟ್ ಮಾಡಬೇಕೆಂದೆನಿಸಿತ್ತು. ಪ್ರಸ್ತುತ ಕತೆಯ ಸ್ಕ್ರಿಪ್ಟ್ ರೆಡಿ ಮಾಡಿದೆ, ಅದೇ ಹರಿವು ಚಿತ್ರ.


ಸಿನಿಮಾ ಸಂಪ್ರದಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಮರ್ಷಿಯಲ್ ಸಿನಿಮಾ ಅಥವಾ ಕಲಾತ್ಮಕ ಸಿನಿಮಾ ಎಂದು ಪ್ರತ್ಯೇಕಿಸುವುದು ಕಷ್ಟ. ಸಿನಿಮಾ ಅಂದ್ರೆ ಸಿನಿಮಾ ಅಷ್ಟೇ. ಕಮರ್ಷಿಯಲ್ ಸಿನಿಮಾದಲ್ಲೂ ಆರ್ಟ್ ಇದ್ದೇ ಇರುತ್ತದೆ.
ಭಾರತೀಯ ಸಿನಿಮಾಗಳಲ್ಲಿ ಭಾವನೆಗಳನ್ನು ಹೈಪ್ ಮಾಡೋಕೆ ಮ್ಯೂಸಿಕ್ ಬಳಸ್ತಾರೆ. ಯಾವುದನ್ನೂ ಒತ್ತಿ ಹೇಳಬಾರದು. ನೋಡು ನೋಡುತ್ತಿದ್ದಂತೆಯೇ ಎಲ್ಲವೂ ಫೀಲ್ ಆಗಬೇಕು. ನನ್ನ ಸಿನಿಮಾದಲ್ಲಿ ಯಾವುದೇ ಭಾವನೆಯನ್ನು ಅದಷ್ಟು ಒತ್ತಿ ಒತ್ತಿ ಹೇಳೋದನ್ನು ಅವಾಯ್ಡ್ ಮಾಡಿದೆ. ಸಿನಿಮಾ ನೋಡುವಾಗ ಪ್ರತಿಯೊಂದು ದೃಶ್ಯವೂ  ನಮ್ಮ ಕಣ್ಣ ಮುಂದೆ ನಡೀತಿದೆ ಅನ್ನೋ ಫೀಲ್ ಪ್ರೇಕ್ಷಕರಿಗೆ ಬರಬೇಕು.

ನೈಜ ಘಟನೆ ಆಧಾರಿತ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿದ್ದಿರಾ? ಈ ಕತೆ ಯಾಕೆ ತಟ್ಟಿತು?
ನೈಜ ಘಟನೆ ಆಧಾರಿತ ಸಿನಿಮಾ ಮಾಡ್ಬೇಕು ಅಂತ ಇರಲಿಲ್ಲ. ಅಪ್ಪನ ಜತೆಗಿನ ಇಮೋಷನಲ್ ಅಟಾಚ್‌ಮೆಂಟ್ ಈ ಕತೆಯನ್ನೇ ಚಿತ್ರಕ್ಕೆ ಬಳಸಲು ಪ್ರೇರಣೆ ಆಯ್ತು. ಕತೆ ರಿಯಾಲಿಟಿಗೆ ಹತ್ತಿರವಿದೆ ಎಂಬ ಕಾರಣದಿಂದಲೇ ಈ ಕತೆಯನ್ನು ಆಯ್ಕೆ ಮಾಡಿದೆ. ತಂದೆ ಮಗನ ಸಂಬಂಧದ ಬಗೆಗಿನ ಕತೆಯಾದುದರಿಂದ ನನ್ನ ಜೀವನಕ್ಕೆ ಇದು ಹತ್ತಿರವಾಯಿತು. ಸಿನಿಮಾದ ಮೂಲಕ ನನ್ನನ್ನು ನಾನೇ ಪ್ರಶ್ನಿಸುತ್ತಾ ಹೋದೆ.

ಆರಂಭದಲ್ಲಿ ಅತೀ ಕಡಿಮೆ ಬಜೆಟ್‌ನ ಚಿತ್ರ ಮಾಡಿದ್ದೀರಿ ಯಾಕೆ?
ಮೊದಲಿಗೆ ನಿರ್ಮಾಪಕರು ಯಾರೂ ಮುಂದೆ ಬರಲಿಲ್ಲ. ಕಮ್ಮಿ ಬಜೆಟ್ ನ ಚಿತ್ರ ಇದು. ಅನಾವಶ್ಯಕವಾಗಿ ಖರ್ಚು ಮಾಡಿಲ್ಲ. ರಿಯಾಲಿಟಿಗೆ ಹತ್ತಿರವಿರುವ ಚಿತ್ರವಾಗಿರುವುದರಿಂದ ಇದರಲ್ಲಿ ರಿಚ್‌ನೆಸ್ ತೋರಿಸಬೇಕಾದ ಅಗತ್ಯವೂ ಇರಲಿಲ್ಲ.

ಸಿನಿಮಾದಲ್ಲಿ ಇರುವುದು ಒಂದೇ ಒಂದು ಹಾಡು. ಆ ಹಾಡು ಅಳವಡಿಸಲು ಕಾರಣವೇನು?
ಚಿತ್ರದಲ್ಲಿ ಒಟ್ಟಾರೆ ಅಂಶವನ್ನು ಹೇಳಲು ಈ ಹಾಡು ಬೇಕು ಅಂತ ಅನಿಸಿತು. ಜೀವನ ತತ್ವ- ವ್ಯಕ್ತಿ ಜೀವನ - ಆತನ ಪಯಣ ಎಲ್ಲವನ್ನು ಮೆಟಾಫೋರಿಕ್ ಆಗಿ ಹೇಳಬೇಕು ಎಂದು ಅನಿಸ್ತು. ಅದಕ್ಕೆ ಈ ಹಾಡನ್ನು ಬಳಸಿದೆವು.

ತೆಲುಗು ಸಿನಿಮಾ ಪ್ರಭಾವಕ್ಕೊಳಗಾದವರು ನೀವು. ಯಾಕೆ ಕಲಾತ್ಮಕ ಚಿತ್ರ ಮಾಡಲು ಹೊರಟಿರಿ?
ನಾನು ಕನ್ನಡ ಸಿನಿಮಾ ನೋಡಿದ್ದೇ ಕಡಿಮೆ. ಬೆಂಗಳೂರು ಫಿಲ್ಮ್ ಸೊಸೈಟಿಗೆ ಸದಸ್ಯನಾದ ಮೇಲೆ ಸಿನಿಮಾ ನೋಡುವ ಆಸಕ್ತಿಯೂ ಹೆಚ್ಚಿತು. ಬೆಂಗಳೂರು ಬಂದ ಮೇಲೆ ಕಲಿಕೆಯ ಮೂಲಗಳು ಜಾಸ್ತಿ ಆದವು. ಸುಮಾರು ನಿರ್ದೇಶಕರ, ಬೇರೆ ಬೇರೆ ಭಾಷೆಗಳ ಸಿನಿಮಾಗಳನ್ನು ನೋಡಿದೆ. ಇರಾನಿ, ಫ್ರೆಂಚ್ ಹೀಗೆ ಜಾಗತಿಕ ಸಿನಿಮಾಗಳನ್ನು ನೋಡಿ ನನ್ನ ಕಲಿಕೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡೆ. ಇಂಥಾ ಸಿನಿಮಾಗಳಲ್ಲಿ ಹಾಸ್ಯ ಇದ್ದರೂ ವಿಡಂಬನೆ ಇರುತ್ತೆ. ಈ ರೀತಿಯ ಸಿನಿಮಾಗಳು ನನ್ನನ್ನು ಕಾಡಿವೆ. ಕಾಡುವಂತಹ ಸಿನಿಮಾ ಮಾಡಬೇಕೆಂದಿತ್ತು, ಹರಿವು ಸಿನಿಮಾ ಮೂಲಕ ಇದು ಸಾಧ್ಯವಾಗಿದೆ.

ಸಿನಿಮಾದಲ್ಲಿ ಮನಕಲಕುವಂತ ಕಲೆ ಇವತ್ತಿಗೆ ಪ್ರಶಸ್ತವಾಗಿದೆಯೇ?
ಸುಖ ದುಃಖ, ಹುಟ್ಟು ಸಾವು ಎಲ್ಲ ಕಾಲಕ್ಕೂ ಬೇಕಾಗುತ್ತದೆ. ಹರಿವು ಚಿತ್ರದಲ್ಲಿ ಮಗನ ಪ್ರಾಣ ಉಳಿಸುವ ತಂದೆಯ ಪಯಣ ಇನ್ನೊಬ್ಬರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದೇ ಸಿನಿಮಾದ ಸಂದೇಶ. ನಿಜ ಜೀವನಕ್ಕೆ ಹತ್ತಿರವಾಗಿರುವ ಕಥೆ ಇದಾಗಿರುವುದರಿಂದ ಜನರ ಮನಸ್ಸಿಗೆ ಇದು ತಟ್ಟುತ್ತದೆ.

ನಿಮ್ಮ ಆರಂಭ ಕಲಾತ್ಮಕ ಚಿತ್ರದ ಮೂಲಕ, ಇನ್ನು ಮುಂದೆಯೂ ಕಲಾತ್ಮಕ ಚಿತ್ರಗಳನ್ನೇ ಮಾಡಬೇಕೆಂದು ಅಂದುಕೊಂಡಿದ್ದೀರಾ?
ಇಂಥದಕ್ಕೇ ಬ್ರಾಂಡ್ ಆಗಿಲ್ಲ, ಬ್ರಾಂಡ್ ಆಗುವುದೂ ಇಲ್ಲ. ಪ್ರತೀ ದಿನ ಜೀವನದಲ್ಲಿ ಹೋರಾಟ ಇದ್ದೇ ಇರುತ್ತದೆ. ಸಿನಿಮಾ ಮಾಡಬೇಕಾದರೆ ಆ ಕತೆ ಕಾಡಬೇಕು. ಅದನ್ನು ಯಾವ ರೀತಿಯಲ್ಲಿ ಹೇಳಬೇಕೋ ಆ ರೀತಿಯಲ್ಲಿ ಹೇಳಬೇಕು.

ನಿಮ್ಮ ಸಿನಿಮಾದಲ್ಲಿ ನೀವು ಸೌಂಡ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದಂತೆ ಕಾಣುತ್ತದೆ. ಕಾರಣ?
ವಲ್ಡ್ ರ್ ಸಿನಿಮಾಗಳಲ್ಲಿ ಸೌಂಡ್ ಮಹತ್ತರ ಪಾತ್ರ ವಹಿಸುತ್ತದೆ. ಸೌಂಡ್ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಸೌಂಡ್ ಸನ್ನಿವೇಶವನ್ನು ಕಟ್ಟಿಕೊಡುತ್ತದೆ. ಇದು ಹಿನ್ನೆಲೆಗೆ ಪೂರಕ ಆಗಿರಬೇಕು. ಹಳ್ಳಿ ಮತ್ತು ನಗರದ ನಡುವಿನ ವ್ಯತ್ಯಾಸ , ನಗರ ಹೇಗೆ ಹಳ್ಳಿಯವರಿಗೆ ಹೋಪ್ ತಂದು ಕೊಡುತ್ತದೆ ಈ ಎಲ್ಲ ವಿಷಯಗಳನ್ನು ಹೇಳಲು ನಾನಿಲ್ಲಿ ಸೌಂಡ್ ಬಳಸಿದ್ದೇನೆ.

ಹರಿವು ಚಿತ್ರದಲ್ಲಿ ನಿಮ್ಮ ಅಲೆಮಾರಿ ಜೀವನ ಪ್ರತಿಬಿಂಬಿತವಾಗಿದೆ. ಅಲ್ವಾ?
ಅಲೆಯೋದು ಇಷ್ಟ. ನನಗೆ ನಗರ ಅನ್ನೋದು ಅನಿವಾರ್ಯವೇ ಹೊರತು ಆಯ್ಕೆ ಅಲ್ಲ . ಸುತ್ತಾಟದಿಂದ ನನಗೆ ಜೀವನಾನುಭವ ಸಿಕ್ಕಿದೆ. ಯಾತ್ರೆಯ ನಡುವೆ ಕಥೆ ಬರಿದಿದ್ದೆ. ಜೀವನ ಅನ್ನೋದೆ ಪಯಣ ಅಲ್ವಾ?  ನನ್ನ ಜೀವನದಲ್ಲಿನ ಘಟನೆಗಳು ಕೂಡಾ ಈ ಸಿನಿಮಾ ಮಾಡಲು ಕಾರಣ.


ಪದಗಳ ಬಳಕೆ ಕಡಿಮೆ ಯಾಕೆ?
ಸಂಭಾಷಣೆಯಲ್ಲಿ ರಿಯಾಲಿಟಿ ಇರಬೇಕು. ನೀವೊಂದು ಸಿನಿಮಾವನ್ನು ನೋಡ್ತಾ ನೋಡ್ತಾ ಆ ಪಾತ್ರವಾಗಿ ಬಿಡಬೇಕು. ಸಂಭಾಷಣೆಯನ್ನು ಅರ್ಥ ಮಾಡಿಕೊಂಡು ಸಹಜವಾಗಿ ಮಾತಾಡ್ಬೇಕು, ಎಲ್ಲಿಯೂ ನಾಟಕೀಯವಾಗಿ ಇರಬಾರದು ಎಂಬುದು ನನ್ನ ಉದ್ದೇಶವಾಗಿದ್ದರಿಂದ ಸಿನಿಮಾದಲ್ಲಿ ಪದಗಳ ಬಳಕೆಯನ್ನೂ ಕಡಿಮೆ ಮಾಡಿದೆ.

ನಿಮ್ಮ ಹವ್ಯಾಸಗಳು ಚಿತ್ರ ನಿರ್ದೇಶನಕ್ಕೆ ಹೇಗೆ ಸಹಕಾರಿಯಾಯ್ತು?
ಓದುವ ಅಭ್ಯಾಸ ಇದೆ. ಬರವಣಿಗೆ ಇಷ್ಟ ವಿಷಯ . ವಿಮರ್ಶೆ ಬರೀತೀನಿ. ಚಿತ್ರಕತೆ ಬರೆಯೋಕೆ ಸಾಹಿತ್ಯ, ಓದು ತುಂಬಾನೇ ಸಹಕಾರಿ ಆಯ್ತು. ನಗರೀಕರಣ, ಕೆಲಸದ ಒತ್ತಡ,  ವಲಸೆ ಬಗ್ಗೆ , ಕೆಲಸದ ನಡುವೆ ನನ್ನ ವೈಯಕ್ತಿಕ ಜೀವನ ಎಲ್ಲವೂ ಸಿನಿಮಾ ಮಾಡುವಾಗ ಒಂದಕ್ಕೊಂದು ಕೊಂಡಿಯಾಗಿ ಮಾರ್ಪಟ್ಟಿತು. ಚಿತ್ರದ ಯಶಸ್ವಿಗೆ ನಮ್ಮ ಚಿತ್ರತಂಡದ ಪ್ರತಿಯೊಬ್ಬ ಕಲಾವಿದ, ಸಹಾಯಕ ಕಲಾವಿದರ ಸಹಕಾರವೇ ಕಾರಣ.


ಪರಿಚಯ : ಮಂಜುನಾಥ್ ಎಸ್
ಕಾವ್ಯನಾಮ: ಮಂಸೋರೆ
ಊರು: ಕೋಲಾರ
ವಿದ್ಯಾಭ್ಯಾಸ: ಚಿತ್ರಕಲಾ ಪರಿಷತ್ತಿನಲ್ಲಿ ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ
ನಿರ್ದೇಶಿಸಿದ ಚಿತ್ರ: ಹರಿವು


-ರಶ್ಮಿ ಕಾಸರಗೋಡು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com